Site icon Vistara News

Prerane Column : ಹೆಣ್ಣನ್ನು ದೈಹಿಕವಾಗಿ ಮಣಿಸಬಹುದು, ಮೆದುಳಿನ ತಾಕತ್ತನ್ನು ತಡೆಯಲಾಗದು!

Women power

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)

ಮಹಿಳೆಯರು ಶೋಷಣೆ (Harassment to Woman) ಹಾಗು ಅನೇಕ ತೊಂದರೆಗಳಿಗೆ ಒಳಗಾಗಿರುವ ಕಾರಣವೇನೆಂದರೆ, ಜನರು ಕೇವಲ ದೈಹಿಕ ಅನುಭವಗಳಿಗೇ ತಮ್ಮನ್ನು ಒಡ್ಡಿಕೊಂಡಿರುವುದು. ನಿಮ್ಮ ಅನುಭವದಲ್ಲಿ ನೀವು ಕೇವಲ ‘ಒಂದು ಶರೀರ’ ಎಂದಾದರೆ, ಸಹಜವಾಗಿ ಪುರುಷ ಗುಣಕ್ಕೆ ಮೇಲುಗೈಯಾಗುತ್ತದೆ.

ಒಬ್ಬ ಮಹಿಳೆಗೆ ಮಾಡಲು ಅಸಾಧ್ಯವಾದ ಕೆಲ ವಿಷಯಗಳನ್ನು ಮಾಡಲು ಪುರುಷರು ದೈಹಿಕವಾಗಿ ಸಮರ್ಥರಾಗಿದ್ದಾರೆ. ಸಮಾಜದಲ್ಲಿ ಸಂಘರ್ಷವಿದ್ದಾಗ, ಸ್ವಾಭಾವಿಕವಾಗಿ ಪುರುಷರು ಆ ಸಮಾಜವನ್ನು ಆಳುತ್ತಾರೆ, ಏಕೆಂದರೆ, ಆಳುವುದಕ್ಕೆ ಬೇಕಿರುವುದು ಕೇವಲ ದೈಹಿಕ ಶಕ್ತಿಯಷ್ಟೆ. ಇಂದಿಗೂ ಸಹ, ರಸ್ತೆಯಲ್ಲಿ ಜಗಳ ಅಥವಾ ಕಾದಾಟವಿದ್ದರೆ, ಅದರ ನಿಯಂತ್ರಣವು ಪುರುಷನ ಕೈಯಲ್ಲಿರುತ್ತದೆ ಎಂಬುದು ಸ್ಪಷ್ಟ. ಸಮಾಜಗಳು ಚೆನ್ನಾಗಿ ನೆಲೆಗೊಂಡು, ಸಾಂಸ್ಕೃತಿಕವಾಗಿ ತೊಡಗಿದ್ದಾಗ, ಸರಿಯಾದ ಸಮತೋಲನವಿದ್ದಾಗ ಮಾತ್ರ, ಮಹಿಳೆಗೆ ಸಮಾನ ಪಾತ್ರವಿರುತ್ತದೆ.

ಪುರುಷ ಅಥವಾ ಮಹಿಳೆ ಎಂಬ ಗುರುತನ್ನು ಹೊತ್ತಿರುವುದು ಲೈಂಗಿಕ ಗುರುತಿಸುವಿಕೆಯಾಗಿದೆ (Sexual Identity), ಅದು ನಿಮ್ಮನ್ನು ನೀವು ಸೀಮಿತ ದೈಹಿಕ ಭಾಗಗಳಿಂದ ಗುರುತಿಸಿಕೊಂಡಂತೆ; ಅಷ್ಟೇ ಅದರರ್ಥ. ದೇಹದ ಭಾಗಗಳಿಂದ ನಿಮ್ಮನ್ನು ನೀವು ಗುರುತಿಸಿಕೊಳ್ಳಬೇಕು ಎಂದಿದ್ದರೆ, ಕಡೇಪಕ್ಷ ಮೆದುಳನ್ನಾದರೂ ಆರಿಸಿಕೊಳ್ಳಿ. ಒಂದಿಷ್ಟು ಸಮಾನತೆ, ಪ್ರಜ್ಞೆ ಮತ್ತು ವಿವೇಕ ನಿಜವಾಗಿಯೂ ಮಾನವತೆಯಲ್ಲಿ ಕಾಣಿಸಿಕೊಳ್ಳಬೇಕು ಎಂದಿದ್ದರೆ, ಜನರು ಕೇವಲ ದೇಹದ ಆಕಾರ ಮತ್ತು ಗಾತ್ರದೊಂದಿಗೆ ಗುರುತಿಸಲ್ಪಡುವುದನ್ನು ಮೀರಿ ನೋಡಬೇಕು. ಇದಾಗಬೇಕಿದ್ದರೆ, ಜನರ ಜೀವನದಲ್ಲಿ ಆಧ್ಯಾತ್ಮಿಕ ಆಯಾಮವು ಪ್ರವೇಶಿಸಬೇಕು. ಯಾವಾಗ ಜನರಿಗೆ ತಾವು ತಮ್ಮ ದೇಹಕ್ಕಿಂತಲೂ ಹೆಚ್ಚು ಎನ್ನುವುದು ಅನುಭವಕ್ಕೆ ಬರುತ್ತದೆಯೋ, ಆಗ ಈ ದೇಹವನ್ನು ಪುರುಷ ಅಥವಾ ಮಹಿಳೆ ಎಂದು ನೋಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದು ಜೀವವನ್ನು ಜೀವವಿರುವ ಹಾಗೆಯೇ ನೋಡುವುದು. ಆಗ ಮಾತ್ರ ವಿವೇಕವಿರುತ್ತದೆ.

Women mind power

ಪ್ರಪಂಚದಾದ್ಯಂತ ಮಹಿಳೆಯರ ಈ ಶೋಷಣೆಯು ನಿಲ್ಲಬೇಕಿದ್ದಲ್ಲಿ, ಕೆಲಸ ಆಗಬೇಕಿರುವುದು ಸಮಾಜದೊಂದಿಗಲ್ಲ. ಸ್ವತಃ ಮಹಿಳೆಯರೊಳಗೇ ಈ ಕೆಲಸ ಆಗಬೇಕು. ಅನೇಕ ವಿಧದಲ್ಲಿ, ಸುಶಿಕ್ಷಿತರು ಮತ್ತು ಬದುಕಲು ತಮ್ಮದೇ ರೀತಿಯನ್ನು ಹೊಂದಿರುವ ಜನಸಂಖ್ಯೆಯ ಚಿಕ್ಕ ಭಾಗವನ್ನು ಹೊರತುಪಡಿಸಿ, ಬಹಳಷ್ಟು ಮಹಿಳೆಯರನ್ನು ಕೀಳಾಗೇ ಕಾಣಲಾಗುತ್ತದೆ. ಒಂದು ಮುಖ್ಯ ಕಾರಣವೆಂದರೆ, ಎಲ್ಲೋ ಪುರುಷರ ಮನಸ್ಸಿನಲ್ಲಿ, ಅವರು ಮಹಿಳೆಯರನ್ನು ಅಗ್ಗವಾಗಿ ಕಾಣುತ್ತಾರೆ. ಹೆಂಡತಿಗೆ ಒಂದು ಉಡುಗೊರೆಯನ್ನು ಕೊಂಡೊಯ್ದರೆ, ಎಲ್ಲವೂ ಸರಿಯಾಗುತ್ತದೆ. ಅವಳಿಗೊಂದು ಆಭರಣವನ್ನೋ, ಉಡುಗೆಯನ್ನೋ ಕೊಟ್ಟರೆ, ಎಲ್ಲವೂ ಸರಿಯಾಗುತ್ತದೆ ಎನ್ನುವ ವಿಚಾರ ಪುರುಷರ ಮನಸ್ಸಿನಲ್ಲಿ ಎಲ್ಲೋ ಆಳದಲ್ಲಿದೆ. ಅವರ ಮನಸ್ಸಿನಲ್ಲಿ ಇಂತಹ ವಿಚಾರ ಇದ್ದಕ್ಕಿದ್ದಂತೆ ಬಂದಿದ್ದೇನಲ್ಲ. ಇದನ್ನು ಕಾಲಾಂತರದಲ್ಲಿ ಮಹಿಳೆಯರು ತಾವೇ ಗಳಿಸಿಕೊಂಡಿದ್ದು. ಮಹಿಳೆಯರು ಹೇಗಾದರೂ ಸಣ್ಣಪುಟ್ಟ ಆಭರಣಗಳಿಂದ ತೃಪ್ತರಾಗುತ್ತಾರೆ ಎಂದು ಪುರುಷರು ಭಾವಿಸಿದರೆ, ಅವರು ಸಹಜವಾಗಿಯೇ ಮಹಿಳೆಯರನ್ನು ಕೀಳಾಗಿ ಕಾಣುತ್ತಾರೆ.

ಪ್ರಶ್ನೆಯಿರುವುದು ನೀವು ಪುರುಷರೋ ಅಥವಾ ಮಹಿಳೆಯರೋ ಎನ್ನುವುದರ ಬಗ್ಗೆಯಲ್ಲ. ಥಳುಕುಪಳುಕಿನ ಉಡುಗೊರೆಗಳನ್ನು ಅಪೇಕ್ಷಿಸುವ ಯಾರನ್ನಾದರೂ ನೀವು ಸಹಜವಾಗಿ ಕೀಳಾಗಿ ನೋಡುತ್ತೀರಿ. ದುರದೃಷ್ಟವಶಾತ್, ಈಗಿನ ದಿನಗಳಲ್ಲಿ, ಮಹಿಳೆಯರ ದೊಡ್ಡ ಭಾಗಕ್ಕೆ ಸ್ವಇಚ್ಛೆಯಿಂದ ಅಥವಾ ಸಾಂಸ್ಕೃತಿಕವಾಗಿ ಇಂತಹದ್ದನ್ನೇ ಅರಸಲು ಹೇಳಿಕೊಡಲಾಗಿದೆ. ಸಂಸ್ಕೃತಿ, ಮತಧರ್ಮ ಮತ್ತು ಸಾಮಾಜಿಕ ಸನ್ನಿವೇಶಗಳು ಮಹಿಳೆಯರು ಥಳುಕುಪಳುಕಿನ ವಸ್ತುಗಳನ್ನು ಅರಸುವಂತೆ ರೂಪಿಸುತ್ತಿವೆಯೇ ಹೊರತು ಅದಕ್ಕಿಂತ ಉನ್ನತವಾದದ್ದನ್ನೇನೂ ಅಲ್ಲ.

ಮಹಿಳೆಯರು ಇಂತಹ ವಿಚಾರಗಳ ಅಚ್ಚೊತ್ತನ್ನು ಕಿತ್ತೊಗೆಯದಿದ್ದರೆ, ಮಹಿಳೆಯರು ಜೀವನದ ಉನ್ನತ ಸಾಧ್ಯತೆಗಳನ್ನು ಅರಸಲು ಆರಂಭಿಸದಿದ್ದರೆ, ಹೋರಾಟವು ಗೌರವವನ್ನು ತಂದುಕೊಡುವುದಿಲ್ಲ. ಹೋರಾಡುವುದರಿಂದ ನಿಮಗೆ ಗೌರವ ದೊರಕುವುದಿಲ್ಲ. ನೀವು ವಿಕಸನಗೊಳ್ಳುವುದರಿಂದ ನೀವು ಗೌರವವನ್ನು ಪಡೆದುಕೊಳ್ಳುತ್ತೀರಿ. ಗೌರವವಿಲ್ಲದಿದ್ದರೆ, ಸ್ವಾತಂತ್ರ್ಯ ಎನ್ನುವುದು ಒಂದು ಅಸ್ವಾಭಾವಿಕ ಪರಿಸ್ಥಿತಿಯಾಗಿರುತ್ತದೆ; ಸ್ವಾತಂತ್ರ್ಯ ಸಿಗುವ ಮಾತಿಲ್ಲ. ಆದ್ದರಿಂದ, ಅದು ಒಬ್ಬ ಪುರುಷನೇ ಆಗಿರಲಿ ಅಥವಾ ಮಹಿಳೆಯೇ ಆಗಿರಲಿ, ತಮ್ಮನ್ನು ತಾವು ದೇಹದೊಂದಿಗೆ ಗುರುತಿಸಿಕೊಳ್ಳದೆ, ಅದನ್ನು ಮೀರುವುದು ನಡೆಯಬೇಕು,

ಪ್ರಾಚೀನ ಭಾರತದಲ್ಲಿ, ವಿಶೇಷವಾಗಿ ಜೀವನದ ಆಧ್ಯಾತ್ಮಿಕ ಅಂಶಗಳಲ್ಲಿ, ಪುರುಷ ಮತ್ತು ಮಹಿಳೆ ಸರಿಸಮಾನರಾಗಿ ಜೀವಿಸುತ್ತಿದ್ದರು. ಇಬ್ಬರಲ್ಲಿ ಒಬ್ಬರಿಗೆ ಆಧ್ಯಾತ್ಮಿಕತೆಯ ಬಗ್ಗೆ ಒಲವಾದಾಗ, ಅವನು ಅಥವಾ ಅವಳು ತನ್ನ ಕುಟುಂಬವನ್ನು ಬಿಟ್ಟು ಹೋಗಬಹುದಿತ್ತು. ಪುರುಷರೇ ಆಗಿರಲಿ, ಅಥವಾ ಮಹಿಳೆಯರೇ ಆಗಿರಲಿ, ಅವರು ‘ಆಧ್ಯಾತ್ಮಿಕ ಅನ್ವೇಷಣೆಯಲ್ಲಿ’ ತೊಡಗಬಹುದಿತ್ತು. ಏಕೆಂದರೆ, ಒಬ್ಬ ವ್ಯಕ್ತಿ ಉನ್ನತವಾದದ್ದನ್ನು ಅರಸಲು ಆರಂಭಿಸಿದಾಗ, ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಬೇಕು ಎನ್ನುವ ಅರಿವಿತ್ತು. ಆಧ್ಯಾತ್ಮಿಕ ಪ್ರಕ್ರಿಯೆಯೆಂದರೆ ನಿಮ್ಮ ಭೌತಿಕ ಶರೀರವನ್ನು ಮೀರಿರುವಂತಹುದನ್ನು ಅರಸುತ್ತಿದ್ದೀರ ಎಂದು.

Women mind power

ಮೈತ್ರೇಯಿಯ ಬಗ್ಗೆ ಒಂದು ಸುಂದರವಾದ ಕಥೆ ಇದೆ. ನಾವು ಕೇಳಿರುವ ಮಹಾನ್ ಮಹಿಳೆಯರಲ್ಲಿ ಒಬ್ಬಳಷ್ಟೆ ಈ ಮೈತ್ರೇಯಿ – ಯೋಗ ಪರಂಪರೆಯಲ್ಲಿ ಇಂತಹ ಹಲವಾರು ಮಹಿಳೆಯರಿದ್ದಾರೆ. ಯಾಜ್ಞವಲ್ಕ್ಯ ಮತ್ತು ಮೈತ್ರೇಯಿ ದಂಪತಿಗಳಾಗಿದ್ದರು. ಈ ಸಂಬಂಧ ಮತ್ತು ನಿಕಟತೆಯು ತನ್ನನ್ನು ಬಂಧಿಸಿರುವುದಾಗಿ ಯಾಜ್ಞವಲ್ಕ್ಯನಿಗೆ ಅನಿಸಿ, ಅವನು ಉನ್ನತವಾದದ್ದನ್ನು ಅರಸಲು ಇಚ್ಛಿಸಿ, ಹೀಗೆಂದನು, “ನನ್ನ ಬಳಿ ಇರುವುದೆಲ್ಲವನ್ನೂ ನಾನು ನಿಮಗೆ ಕೊಟ್ಟುಬಿಡುವೆನು.” ಅವರ ಸಂಬಂಧವಿನ್ನೂ ಪ್ರೀತಿಯ ಸಂಬಂಧವಾಗಿತ್ತು. “ನನ್ನ ಬಳಿ ಏನಿದೆಯೋ, ಅದೆಲ್ಲವನ್ನೂ ನಿನಗೆ ಕೊಡುವೆ. ನನ್ನನ್ನು ಬಿಡುಗಡೆ ಮಾಡು. ನಾನು ಪರಮ ತತ್ವವನ್ನು ಹುಡುಕಲು ಹೋಗುತ್ತಿದ್ದೇನೆ.” ಇದನ್ನು ಕೇಳಿ ಮೈತ್ರೇಯಿ ತಕ್ಷಣ ಹೀಗಂದಳು, “ನೀವು ಪರಮ ತತ್ವವನ್ನು ಹುಡುಕಲು ಹೊರಟರೆ, ನಾನು ನಿಮ್ಮ ಈ ಅಲ್ಪಾಸ್ತಿ, ನಿಮ್ಮ ಮನೆ, ಈ ಅಸಂಬದ್ಧಕ್ಕೆಲ್ಲಾ ತೃಪ್ತಳಾಗುತ್ತೇನೆ ಎಂದು ನೀವೇಕೆ ಭಾವಿಸುತ್ತೀರಿ? ನಾನೂ ಪರಮ ತತ್ವವನ್ನು ಹುಡುಕುತ್ತೇನೆ.”

ಮಹಿಳೆಯರು ಈ ರೀತಿಯಲ್ಲಿ ಇದ್ದರೆ ಮಾತ್ರ, ಅಂದರೆ, ಅವಳೂ ಉನ್ನತವಾದದ್ದನ್ನು ಅರಸುತ್ತಿದ್ದರೆ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ಯಾವುದೇ ಹೋರಾಟದ ಅಗತ್ಯವಿರುವುದಿಲ್ಲ. ಸಾಮಾಜಿಕವಾಗಿ, ಹೌದು, ಹೋರಾಟದ ಅಗತ್ಯವಿದೆ; ಈಗಾಗಲೇ ಸ್ಥಾಪಿತವಾಗಿರುವ ಕೆಲ ಅಂಶಗಳ ಬದಲಾವಣೆ ಮಾಡಬೇಕು, ಆದ್ದರಿಂದ ಒಂದಷ್ಟು ಕೆಲಸವನ್ನು ಮಾಡಬೇಕು. ಆದರೆ, ಮಹಿಳೆಯರಾಗಿ, ನಿಮ್ಮೊಳಗೆ, ನಿಮ್ಮನ್ನು ನೀವು ಮಹಿಳೆಯಾಗಿ ಗುರುತಿಸಿಕೊಳ್ಳುವ ಅಗತ್ಯವಿಲ್ಲ. ರಸ್ತೆಯಲ್ಲಿ ಮನುಷ್ಯರಂತೆ ನಡೆದಾಡಿ.

ಮಹಿಳೆಯರು ಲೈಂಗಿಕವಾಗಿ ಮುಕ್ತವಾದರೆ ಅವರು ಸ್ವತಂತ್ರರಾಗುತ್ತಾರೆ ಎಂದು ಜನರು ಹೇಳುತ್ತಿದ್ದಾರೆ. ಇದನ್ನು ಪಾಶ್ಚಿಮಾತ್ಯ ಮಹಿಳೆಯರು ನಂಬುತ್ತಾರೆ. ಲೈಂಗಿಕವಾಗಿ ಮುಕ್ತವಾಗುವುದರಿಂದ, ಅವರು ಹಿಂದೆಂದಿಗಿಂತಲೂ ಹೆಚ್ಚು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ವರ್ಷ 50 ಅಥವಾ 60 ಅಗಿದ್ದರೂ, ಅವಳೀಗಲೂ ಪುರುಷರನ್ನು ಯಾವಾಗಲೂ ಸೆಳೆಯಬೇಕು, ಓಲೈಸಬೇಕು. ಅವಳು 18 ವರ್ಷದವಳಾಗಿದ್ದಾಗ, ಎಲ್ಲರ ಗಮನವೂ ಅವಳ ಮೇಲಿತ್ತು. ಆದರೆ 50 ವರ್ಷವಾದಾಗ, ಅದೇ ರೀತಿಯ ಗಮನ ಸಿಗುವುದಿಲ್ಲ. ಈಗ ಬೇರೆಯವರ ಗಮನ ಸೆಳೆಯುವುದಕ್ಕೆ ನೀವು ಯಾರಾದಾದರೂ ಹಿಂದೆ ಓಡುತ್ತಿರಬೇಕು.

ಎಲ್ಲಿಯವರೆವಿಗೂ ಜನರಿಗೆ ತಾವು ಕೇವಲ ದೇಹವೆಂಬ ಅನುಭೂತಿಯರುತ್ತದೆಯೋ, ಬಂಧನದಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಜನರಿಗೆ ತಾವು ದೇಹಕ್ಕಿಂತ ಹೆಚ್ಚು ಎನ್ನುವ ಅನುಭೂತಿಯು ಬಂದಾಗಲೇ ಸ್ವಾತಂತ್ರ್ಯ ದೊರಕುವುದು. ಇಡೀ ಆಧ್ಯಾತ್ಮಿಕ ಪ್ರಕ್ರಿಯೆ, ಇಡೀ ಯೋಗ ವಿಜ್ಞಾನವು ಇರುವುದು ಅದರ ಬಗ್ಗೆಯಷ್ಟೆ – ನೀವು ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ, ಅದು ನಿಮ್ಮ ಭೌತಿಕ ಶರೀರದ ಮಿತಿಗಳನ್ನು ಮೀರಿದ ಚೇತನವನ್ನು ಅನುಭವಿಸಲು ನಿಮಗೆ ಸಹಾಯ ಮಾಡುವ ಬಗ್ಗೆಯಾಗಿದೆ. ಮತ್ತು ಸ್ವಾತಂತ್ರ್ಯ ಇರುವುದು ಅದರಲ್ಲಿಯೇ. ಲೈಂಗಿಕವಾಗಿ ಮುಕ್ತವಾಗುವುದರಿಂದ ನೀವು ಸ್ವತಂತ್ರರಾಗುವುದಿಲ್ಲ. ನಿಮ್ಮ ಲಿಂಗದಿಂದ ನೀವು ಸ್ವತಂತ್ರರಾದರೆ ಮಾತ್ರ ನೀವು ಸ್ವತಂತ್ರರಾದಂತೆ. ಒಬ್ಬ ಪುರುಷ ಅಥವಾ ಮಹಿಳೆ ಪರಿಪೂರ್ಣವಾಗಿ ಸ್ವತಂತ್ರರಾಗಲಾರರು. ಲಿಂಗದ ಗುರುತನ್ನು ಯಾರು ಮೀರುತ್ತಾರೋ, ಅವರೇ ಸ್ವತಂತ್ರರು.

ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn
ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ

Exit mobile version