Site icon Vistara News

ವಂಚಕನಾದ ಕ್ರಿಕೆಟಿಗ; ರಿಷಬ್ ಪಂತ್‌ಗೇ ₹1.6 ಕೋಟಿ ಮೋಸ; ಡಿಜಿಪಿ ಅಲೋಕ್‌ ಕುಮಾರ್‌ ಹೆಸರೂ ದುರ್ಬಳಕೆ!

conman mrinank singh

ಹೊಸದಿಲ್ಲಿ: ಇದು U-19 ಕ್ರಿಕೆಟಿಗನೊಬ್ಬ ಮೋಸಗಾರನಾದ ಕತೆ. ಈತ ಭಾರತದ ವಿಕೆಟ್‌ಕೀಪರ್- ಬ್ಯಾಟ್ಸ್‌ಮನ್ ರಿಷಬ್ ಪಂತ್‌ಗೂ (Rishabh pant) ₹1.6 ಕೋಟಿ ವಂಚಿಸಿದ್ದಾನೆ. ಜೊತೆಗೆ ರಾಜ್ಯದ ಹೆಚ್ಚುವರಿ ಡಿಜಿಪಿ ಅಲೋಕ್‌ ಕುಮಾರ್‌ ಅವರ ಹೆಸರನ್ನೂ ದಿಲ್ಲಿ ಪೋಲಿಸರಿಂದ ಪಾರಾಗಲು ದುರ್ಬಳಕೆ ಮಾಡಿಕೊಂಡಿದ್ದಾನೆ.

ಹರಿಯಾಣ ಮೂಲದ ಇವನ ಹೆಸರು ಮೃಣಾಂಕ್ ಸಿಂಗ್ (Mrinank Singh). ಐಷಾರಾಮಿ ಜೀವನಶೈಲಿಯ ವ್ಯಾಮೋಹ ಹೊಂದಿದ್ದ ಈತ ಕಾಸು ಖರ್ಚು ಮಾಡದೇ ಸದಾ ದುಬಾರಿ ರೆಸ್ಟೋರೆಂಟ್‌ಗಳಲ್ಲಿ ಭೋಜನ ಮಾಡುತ್ತ, ಪಂಚತಾರಾ ಹೋಟೆಲ್‌ಗಳಲ್ಲಿ ಉಳಿಯುತ್ತ ಐಷಾರಾಮಿ ಜೀವನ ನಡೆಸುವ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದ. ಹಿಂದೊಮ್ಮೆ ಮುಂಬೈ ಇಂಡಿಯನ್ಸ್‌ ಐಪಿಎಲ್‌ ತಂಡದ ಆಟಗಾರನಾಗಿದ್ದ ಈತ ಈಗಲೂ ಅದರ ಆಟಗಾರನಂತೆ ಪೋಸ್ ನೀಡುತ್ತ ಹಲವು ಮಹಿಳೆಯರನ್ನು ವಂಚಿಸಿದ್ದಾನೆ; ಅಂತಾರಾಷ್ಟ್ರೀಯ ಬ್ರಾಂಡ್‌ಗಳೊಂದಿಗೆ ವ್ಯವಹರಿಸಿದ್ದಾನೆ. ಹೀಗೆ ವಂಚಿಸಿ ದಿಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

2014ರಿಂದ 2018ರವರೆಗೆ ಮುಂಬೈ ಇಂಡಿಯನ್ಸ್‌ಗೆ ಈತ ಆಡಿದ್ದ. ತಾನು ʼಜನಪ್ರಿಯʼ ಎಂಬ ಭಾವವನ್ನು ನೋಡುಗರಲ್ಲಿ ಬಿತ್ತುತ್ತಿದ್ದ. ಶ್ರೀಮಂತ ಮಹಿಳೆಯರ ಮೇಲೆ ಪ್ರಭಾವ ಬೀರುತ್ತಿದ್ದ. ದುಬಾರಿ ಪಂಚತಾರಾ ಹೋಟೆಲ್‌ಗಳಲ್ಲಿ ಬಿಲ್‌ಗಳನ್ನು ಪಾವತಿಸದೆ ಉಳಿದುಕೊಳ್ಳುತ್ತಿದ್ದ.

2022ರಲ್ಲಿ ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಒಂದು ವಾರ ತಂಗಿದ್ದ. ₹5.53 ಲಕ್ಷ ಬಿಲ್ ಹಣವನ್ನು ಅಡಿಡಾಸ್ ಕಂಪನಿ ಪಾವತಿಸುವುದಾಗಿ ಸಿಬ್ಬಂದಿಗೆ ತಿಳಿಸಿದ್ದ. ಹೋಟೆಲ್ ಸಿಬ್ಬಂದಿ ಆತನನ್ನು ನಂಬಿ ಬ್ಯಾಂಕ್ ವಿವರಗಳನ್ನು ಹಂಚಿಕೊಂಡಿದ್ದರು. ನಕಲಿ ಐಡಿ ನೀಡಿದ್ದ. ಬಾಕಿ ಪಾವತಿಸಲು ಹೋಟೆಲ್ ಹಲವಾರು ಬಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಇವನು ಫೋನ್ ಸ್ವಿಚ್ ಆಫ್ ಮಾಡಿ ಕಣ್ಮರೆಯಾಗಿದ್ದ. ಹೋಟೆಲ್‌ನವರು ಪೊಲೀಸ್‌ ದೂರು ನೀಡಿದ್ದರು.

ಪೊಲೀಸರು ತನ್ನ ಹಿಂದೆ ಬಿದ್ದಿರುವುದು ಗೊತ್ತಾಗಿ ತನ್ನ ಫೋನ್ ಅನ್ನು ಆಫ್ ಮಾಡಿದ್ದ. ತಾನು ದುಬೈನಲ್ಲಿ ನೆಲೆಸಿದ್ದೇನೆ ಎಂದು ಪರಿಚಯಸ್ಥರನ್ನು ನಂಬಿಸಿದ್ದ. ಈತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಘಟನೆ ನಡೆದ ಸುಮಾರು ಒಂದು ವರ್ಷದ ನಂತರ ಡಿಸೆಂಬರ್ 25ರಂದು ಹಾಂಗ್ ಕಾಂಗ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಈತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಅಲ್ಲಿ ಈತ ಇನ್ನೊಂದು ಆಟ ಕಟ್ಟಿದ್ದ. ಕರ್ನಾಟಕದ ಕರ್ನಾಟಕ ಪೊಲೀಸ್‌ನ ಹೆಚ್ಚುವರಿ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರಂತೆ ಬಿಂಬಿಸುತ್ತಾ ರಾಜ್ಯದ ಹಿರಿಯ ಐಪಿಎಸ್‌ ಅಧಿಕಾರಿಗಳಿಗೆ ಕರೆ ಮಾಡಿದ್ದ. ತನ್ನ ಮಗ ಮೃಣಾಂಕ್ ಸಿಂಗ್‌ ಅಕ್ರಮವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದು, ಆತನನ್ನು ಬಿಡಿಸಲು ನಿಮ್ಮ ಸಹಾಯ ಬೇಕಿದೆ ಎಂದು ನಂಬಿಸಲು ಪ್ರಯತ್ನಿಸಿದ್ದ.

ಆದರೆ ಪೊಲೀಸರು ಸುಲಭವಾಗಿ ಮೋಸ ಹೋಗಲಿಲ್ಲ. ತನ್ನ ತಂದೆ ಅಶೋಕ್ ಕುಮಾರ್ ಸಿಂಗ್ ಅವರು 80ರ ದಶಕದ ಉತ್ತರಾರ್ಧದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡಿದ್ದರು ಮತ್ತು ಪ್ರಸ್ತುತ ಏರ್ ಇಂಡಿಯಾದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ದೆಹಲಿಯ ಇಂದಿರಾಗಾಂಧಿ ಇಂಟರ್‌ನ್ಯಾಶನಲ್‌ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮತ್ತೊಮ್ಮೆ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ. ಆದರೂ ಪೊಲೀಸರು ಅವನನ್ನು ಬಂಧಿಸಿ ಬಾಯಿ ಬಿಡಿಸಿದರು.

2020- 2021ರಲ್ಲಿ ಕ್ರಿಕೆಟಿಗ ರಿಷಬ್‌ ಪಂತ್ ಅವರಿಗೆ ₹1.63 ಕೋಟಿ ವಂಚಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇವನ ಇತರ ಬಲಿಪಶುಗಳಲ್ಲಿ ಕ್ಯಾಬ್ ಡ್ರೈವರ್‌ಗಳು, ಯುವತಿಯರು, ಬಾರ್‌ಗಳು, ರೆಸ್ಟೋರೆಂಟ್‌ಗಳು ಇತ್ಯಾದಿ ಸೇರಿವೆ. ಈತ ತನ್ನ Instagram ಖಾತೆಯಲ್ಲಿ 40,000ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾನೆ. ಅಲ್ಲಿ ಅವನು ತನ್ನ ಐಷಾರಾಮಿ ಜೀವನಶೈಲಿಯ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾನೆ.

ಪೊಲೀಸರು ಆತನ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಹಲವಾರು ಮಹಿಳೆಯರೊಂದಿಗೆ ಈತ ಆಕ್ಷೇಪಾರ್ಹ ಭಂಗಿಯಲ್ಲಿರುವ ಫೋಟೋಗಳು ಕಂಡುಬಂದಿವೆ. ಆತ ಮಾದಕವಸ್ತು ಖರೀದಿಸುತ್ತಿದ್ದುದು ಪತ್ತೆಯಾಗಿದೆ. ಈತನ ವಿರುದ್ಧ ವಿವಿಧ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದಾನೆ. ರಾಜಸ್ಥಾನದ OPJS ವಿಶ್ವವಿದ್ಯಾನಿಲಯದಿಂದ ಮಾನವ ಸಂಪನ್ಮೂಲದಲ್ಲಿ ಎಂಬಿಎ ಮಾಡಿದ್ದ. ಆದರೆ ಕುಟುಂಬಕ್ಕೆ ಇವನ ಮೇಲೆ ಯಾವುದೇ ಹಿಡಿತವಿರಲಿಲ್ಲ. ಆರೋಪಿಯನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಬೆಂಗಳೂರಲ್ಲೇ ವಂಚಕ ಸುಕೇಶ್‌ ಚಂದ್ರಶೇಖರ್‌ 12 ಲಕ್ಸುರಿ ಕಾರುಗಳ ಹರಾಜು; ನಿಮಗೂ ಇದೆ ಚಾನ್ಸ್!

Exit mobile version