Site icon Vistara News

Neeraj Chopra: ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಚಿನ್ನ ಮಿಸ್‌ ಆದದ್ದು ಹೇಗೆ? ಕೋಚ್‌ ಏನ್‌ ಹೇಳ್ತಾರೆ ನೋಡಿ

neeraj chopra kashinath naik 1

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ನಿನ್ನೆ ರಾತ್ರಿ ನಡೆದ ಜಾವೆಲಿನ್‌ ಎಸೆತ (Javelin throw) ಪಂದ್ಯದಲ್ಲಿ ಭಾರತಕ್ಕೆ ಬೆಳ್ಳಿಯ ಪದಕ (Silver medal) ಗೆದ್ದುಕೊಟ್ಟಿದ್ದಾರೆ ಬಂಗಾರದ ಹುಡುಗ ನೀರಜ್ ಚೋಪ್ರಾ (Neeraj Chopra). ಚಿನ್ನದ ಪದಕವನ್ನೇ ಗೆದ್ದು ತರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅದು ಕೈತಪ್ಪಿತು. ಯಾಕೆ ಹೀಗಾಯ್ತು? ಇದಕ್ಕೆ ನೀರಜ್ ಚೋಪ್ರಾ ಅವರ ಕೋಚ್‌ (Coach) ಕಾಶೀನಾಥ್ ನಾಯ್ಕ್ (Kashinath Naik) ನೀಡಿದ ಕಾರಣ ಇಲ್ಲಿದೆ.

ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.

ʼನೀರಜ್ ಚೋಪ್ರಾ ಸತತ ಎರಡನೇ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುತ್ತಿರೋದಕ್ಕೆ ಸಂತಸವಾಗಿದೆ. ಆದರೆ ಈ ಬಾರಿ ಚಿನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ ಅನ್ನೋ ಬೇಸರವೂ ಇದೆ. ನೀರಜ್ ಚೋಪ್ರಾ ಅತ್ಯುತ್ತಮ ಎಸೆತವನ್ನೇ ಎಸೆದಿದ್ದಾರೆ. ಆದರೆ ಪಾಕಿಸ್ತಾನದ ಅರ್ಷದ್ ನದೀಮ್ ಇನ್ನಷ್ಟು ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ. ನೀರಜ್‌ ತನ್ನ ಮೊದಲ ಎಸೆತದಲ್ಲಿ ಪೌಲ್‌ ಆಗಿದ್ದು ಬೆಳ್ಳಿ ಪದಕ ಬರುವುದಕ್ಕೆ ಕಾರಣವಾಯಿತುʼ ಎಂದು ಕಾಶೀನಾಥ್‌ ವಿವರಿಸಿದ್ದಾರೆ.

ಕೋಚ್‌ ಕಾಶಿನಾಥ ನಾಯ್ಕ್‌

2022ರ ಕಾಮನ್ ವೇಲ್ತ್ ಗೇಮ್ಸ್ ಬಳಿಕ ಅರ್ಷದ್ ನದೀಮ್ ಗಾಯದ ಸಮಸ್ಯೆಗೊಳಗಾಗಿದ್ದರು. ಗಾಯದಿಂದ ವಾಪಸಾದ ಬಳಿಕವೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿಯೂ 88 ಮೀಟರ್ ಎಸೆದಿದ್ರು. ಆದ್ರೆ ನೀರಜ್ ತನ್ನ ಮೊದಲ ಎಸೆತದಲ್ಲಿ ಪೌಲ್ ಆಗಿದ್ದು ಅವರಿಗೆ ಧೈರ್ಯ ತುಂಬಿತು. ಒಂದು ವೇಳೆ ನೀರಜ್ ತನ್ನ ಮೊದಲ ಎಸೆತದಲ್ಲಿ 88, 89 ಮೀಟರ್ ಎಸೆದಿದ್ರೆ ಆತ ನರ್ವಸ್ ಆಗಿಬಿಡುತ್ತಿದ್ದ. ನೀರಜ್ ಮೊದಲ ಎಸೆತ ಫೌಲ್ ಆಗಿದ್ರಿಂದಲೇ ಆತನ ಆತ್ಮವಿಶ್ವಾಸ ಹೆಚ್ಚಾಯ್ತು ಎಂದು ಕಾಶೀನಾಥ್‌ ಹೇಳಿದ್ದಾರೆ.

ಯಾವಾಗಲೂ ನೀರಜ್ ತನ್ನ ಮೊದಲ ಎಸೆತದಲ್ಲಿ 88, 89 ಮೀಟರ್ ಎಸೆಯುತ್ತಿದ್ದ. ಆದರೆ ಈ ಬಾರಿ ಪೌಲ್ ಆಗಿದ್ದು ಅರ್ಷದ್ ನದೀಮ್‌ಗೆ ವರವಾಯ್ತು. ನದೀಮ್ ಒಲಿಂಪಿಕ್ಸ್ ರೆಕಾರ್ಡ್ಸ್ ಮಾಡುತ್ತಿದ್ದಂತೆ ನೀರಜ್ ನರ್ವಸ್ ಆಗಿಬಿಟ್ಟ. ಆದರೂ ನೀರಜ್ ತನ್ನ ಸಾಮರ್ಥ್ಯ ಮೀರಿ ಪ್ರಯತ್ನ ಮಾಡಿದ್ದಾನೆ. ಅಥ್ಲೆಟಿಕ್ಸ್‌ನಲ್ಲಿ ಸತತ ಎರಡನೇ ಪದಕ ಗೆದ್ದು ಸಾಧನೆ ಮಾಡಿದ್ದಾನೆ. ಇದು ನಿಜಕ್ಕೂ ದೊಡ್ಡ ಸಾಧನೆ ಎಂದು ತಮ್ಮ ಶಿಷ್ಯನನ್ನು ಕಾಶೀನಾಥ್ ನಾಯ್ಕ ಶ್ಲಾಘಿಸಿದ್ದಾರೆ.

ಪೌಲ್‌ ಮಾಡಿದ ನೀರಜ್

ನೀರಜ್​ ಚೋಪ್ರಾ ಅವರ ಮೊದಲ ಎಸೆತವೇ ಪೌಲ್​. ಹೀಗಾಗಿ ನಿರಾಸೆಯ ಆರಂಭವಾಯಿತು. ನಂತರದ ಎಸೆತದಲ್ಲಿ 89.45 ಮೀಟರ್ ದೂರ ಎಸೆದರು. ಅಲ್ಲದೆ ಆ ಬಳಿಕದ ನಾಲ್ಕು ಎಸೆತಗಳು ಪೌಲ್​ ಆದವು. ತಮ್ಮ ಎಸೆತಗಳು ನಿರೀಕ್ಷೆಯಷ್ಟು ದೂರ ಹೋಗದ ಕಾರಣ ನಂತರದ ಮೂರು ಬಾರಿ ಅವರು ಅಂತಿಮ ಲೈನ್ ಮೆಟ್ಟಿ ಸ್ವತಃ ಪೌಲ್ ಮಾಡಿದರು. ಅರ್ಷದ್​ 92. ಮೀಟರ್​ಗಿಂತಲೂ ದೂರ ಎಸೆದ ತಕ್ಷಣವೇ ಒತ್ತಡಕ್ಕೆ ಬಿದ್ದ ನೀರಜ್​ಗೆ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ಅರ್ಷದ್​ ತಮ್ಮ ಕೊನೇ ಎಸೆತವನ್ನೂ 91. 79 ಮೀಟರ್ ದೂರ ಎಸೆದರು. ಅಂದ ಹಾಗೆ ಪಾಕಿಸ್ತಾನಕ್ಕೆ 32 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಪದಕವೊಂದು ದೊರಕಿತು. ಅದೂ ಚಿನ್ನ!

ಇದನ್ನೂ ಓದಿ: Neeraj Chopra : ನೀರಜ್​ ಚೋಪ್ರಾಗೆ ರಜತ ಪದಕ; ಪಾಕಿಸ್ತಾನದ ನದೀಮ್​ಗೆ ಒಲಿಂಪಿಕ್​ ದಾಖಲೆಯ ಬಂಗಾರ

Exit mobile version