ಬೈಜೂಸ್ ಆನ್‌ಲೈನ್ ಶಿಕ್ಷಣ ಸಂಸ್ಥೆಯ ʼಎಜುಕೇಶನ್ ಫಾರ್ ಆಲ್ʼ ಸಾಮಾಜಿಕ ಉಪಕ್ರಮದ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿಯನ್ನು ನೇಮಿಸಲಾಗಿದೆ.
ಅರ್ಜೆಂಟೈನಾ ಫುಟ್ಬಾಲ್ ತಂಡದ ಕ್ಯಾಪ್ಟನ್ ಆಗಿರುವ ಮೆಸ್ಸಿ, ಬೈಜೂಸ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. “ನಾನು BYJU’s ಜೊತೆ ಪಾಲುದಾರಿಕೆ ಆರಿಸಿಕೊಂಡಿದ್ದೇನೆ. ಪ್ರತಿಯೊಬ್ಬರೂ ಕಲಿಕೆಯಲ್ಲಿ ಪ್ರೀತಿ ಬೆಳೆಸಿಕೊಳ್ಳುವಂತೆ ಮಾಡುವುದು ಸಂಸ್ಥೆಯ ಉದ್ದೇಶ. ಇದು ನನ್ನ ಮೌಲ್ಯಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಉತ್ತಮ ಗುಣಮಟ್ಟದ ಶಿಕ್ಷಣವು ಜೀವನವನ್ನು ಬದಲಾಯಿಸುತ್ತದೆ. BYJU’S ಲಕ್ಷಾಂತರ ವಿದ್ಯಾರ್ಥಿಗಳ ವೃತ್ತಿ ಜೀವನವನ್ನು ಮಾರ್ಪಡಿಸಿದೆ. ವಿಶ್ವಾದ್ಯಂತ ಯುವ ಕಲಿಕಾಸಕ್ತರಿಗೆ ಉನ್ನತ ಸ್ಥಾನ ತಲುಪಲು ಪ್ರೇರೇಪಿಸುತ್ತಿದೆʼʼ ಎಂದು ಮೆಸ್ಸಿ ಹೇಳಿದ್ದಾರೆ.
BYJU’S Education for all ಇದು ಎಡ್‌ಟೆಕ್ ಕಂಪನಿಯ ಲಾಭರಹಿತ, ಸಾಮಾಜಿಕ ಸೇವಾ ವಿಭಾಗ. ಪ್ರಸ್ತುತ ಭಾರತದಲ್ಲಿ 55 ಲಕ್ಷ ಮಕ್ಕಳು ಬೈಜೂಸ್‌ನಲ್ಲಿ ಕಲಿಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಕತಾರ್‌ನಲ್ಲಿ ನಡೆದ FIFA ವಿಶ್ವಕಪ್ 2022ರ ಅಧಿಕೃತ ಪ್ರಾಯೋಜಕತ್ವವನ್ನು BYJU’S ಪಡೆದಿತ್ತು.
ಇದನ್ನೂ ಓದಿ | BYJU’S | 2,500 ಉದ್ಯೋಗ ಕಡಿತಕ್ಕೆ ಸಿಬ್ಬಂದಿಯ ಕ್ಷಮೆ ಯಾಚಿಸಿದ ಬೈಜೂಸ್
“ಲಿಯೋನೆಲ್ ಮೆಸ್ಸಿ ಅವರೊಂದಿಗೆ ಭಾಗಿಯಾಗಲು ನಾವು ಉತ್ಸುಕರಾಗಿದ್ದೇವೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರಾದ ಅವರು ಸಾರ್ವಕಾಲಿಕ ಶ್ರೇಷ್ಠ ವಿದ್ಯಾರ್ಥಿಯೂ ಆಗಿದ್ದಾರೆ. ಈ ಪಾಲುದಾರಿಕೆ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಲಿದೆʼʼ ಎಂದು BYJU’S ನ ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ.
ಫುಟ್‌ಬಾಲ್ ಪ್ರಪಂಚದಾದ್ಯಂತ ಸುಮಾರು 350 ಕೋಟಿ ಅಭಿಮಾನಿಗಳನ್ನು ಹೊಂದಿದೆ. ಲಿಯೋನೆಲ್ ಮೆಸ್ಸಿ ಸೋಶಿಯಲ್ ಮೀಡಿಯಾದಲ್ಲಿ ಸುಮಾರು 45 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಅರ್ಜೆಂಟೀನಾದ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕರಾಗಿ ಲಯೋನೆಲ್ ಮೆಸ್ಸಿ 2022ರ FIFA ವಿಶ್ವಕಪ್ ಪಂದ್ಯಾಟದಲ್ಲಿ ತಮ್ಮ ಆಟ ಪ್ರದರ್ಶಿಸಲಿದ್ದಾರೆ. ಮೆಸ್ಸಿ ತಮ್ಮದೇ ಆದ ʼಲಿಯೋ ಮೆಸ್ಸಿ ಫೌಂಡೇಶನ್ʼ ಹೆಸರಿನ ದತ್ತಿ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ.
ಇದನ್ನೂ ಓದಿ | Fifa World Cup | ಕೇರಳದಲ್ಲಿ ಅಭಿಮಾನಿಗಳ ಮಧ್ಯೆ ಮೆಸ್ಸಿ, ನೇಮರ್ ಕಟೌಟ್ ವಾರ್