Site icon Vistara News

MotoGp : ಭಾರತದಲ್ಲಿ ನಡೆಯುವ ಬೃಹತ್‌ ಬೈಕ್‌ ರೇಸ್‌ನ ಟಿಕೆಟ್‌ ಮಾರಾಟ ಆರಂಭ; ದರ ಸಿಕ್ಕಾಪಟ್ಟೆ ದುಬಾರಿ!

Moto Gp

#image_title

ನವ ದೆಹಲಿ: ದೀರ್ಘ ಕಾಯುವಿಕೆಯ ಬಳಿಕ, ಭಾರತದಲ್ಲಿ ನಡೆಯಲಿರುವ ವಿಶ್ವದ ಅತ್ಯಂತ ಪ್ರತಿಷ್ಠಿತ ಮೋಟಾರ್‌ಸೈಕಲ್‌ ರೇಸ್‌ ಮೋಟೋಜಿಪಿಯ ಟಿಕೆಟ್‌ಗಳ ಮಾರಾಟ ಆರಂಭಗೊಂಡಿವೆ. ಬುಕ್ ಮೈ ಶೋನಿಂದ ಟಿಕೆಟ್ ಖರೀದಿಸಬಹುದಾಗಿದೆ. ನೊಯ್ಡಾಡ ಬುದ್ಧ ಇಂಟರ್‌ನ್ಯಾಷನಲ್‌ ಸರ್ಕೀಟ್‌ನಲ್ಲಿ ಈ ರೇಸ್‌ಗಳು ಸೆಪ್ಟೆಂಬರ್‌ 22ರಿಂದ 24ರವರೆಗೆ ರೇಸ್‌ಗಳು ನಡೆಯಲಿವೆ. ವಿಕ್ಷಣೆಗೆ ಸುಮಾರು 1,00,000 ಆಸನಗಳನ್ನು ಸಿದ್ಧಪಡಿಸಲಾಗಿದೆ. ಟಿಕೆಟ್‌ ದರ 800 ರೂಪಾಯಿಂದ ಆರಂಭಗೊಂಡು 40,000 ರೂಪಾಯಿ ತನಕ ನಿಗದಿ ಮಾಡಲಾಗಿದೆ.

ಸಾಮಾನ್ಯ ಸೀಟುಗಳು 10,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದ್ದರೆ, ಪ್ರಮುಖ ಟಿಕೆಟ್‌ಗಳು 20,000-30,000 ರೂ.ಗಳವರೆಗೆ ಬೆಲೆ ಹೊಂದಿದೆ. ‘ಪ್ಲಾಟಿನಂ ಕಾರ್ಪೊರೇಟ್ ಬಾಕ್ಸ್’ ಸೀಟುಗಳು 40,000 ರೂಪಾಯಿಗೆ ಮಾರಾಟವಾಗಲಿವೆ. ಟ್ರ್ಯಾಕ್‌ನ ನಾನಾ ಸ್ಟ್ಯಾಂಡ್‌ಗಳಿಗೆ ಪೂರಕವಾಗಿ ಟಿಕೆಟ್‌ ಬೆಲೆಯನ್ನು ನಿಗದಿ ಮಾಡಲಾಗಿದೆ. ಬುಕ್‌ ಮೈ ಶೋದಲ್ಲಿ ಪೂರ್ಣ ವಿವರ ನೀಡಲಾಗಿದೆ.

ಇದನ್ನೂ ಓದಿ : Moto GP : ಫೋರ್ಚುಗಲ್​ನಲ್ಲಿ ಭಾನುವಾರ ಮೋಟೊ ಜಿಪಿ ಮೊದಲ ಸುತ್ತಿನ ಫೈನಲ್​ ರೇಸ್​

ಮೋಟೋಜಿಪಿ ಸಂಘಟಕ ಡೋರ್ನಾ ಸ್ಪೋರ್ಟ್ಸ್ ಮತ್ತು ನೋಯ್ಡಾ ಮೂಲದ ಫೇರ್ ಸ್ಟ್ರೀಟ್ ಸ್ಪೋರ್ಟ್ಸ್ ನಡುವೆ ಏಳು ವರ್ಷಗಳ ಒಪ್ಪಂದದ ಪ್ರಕಾರ ಭಾರತದಲ್ಲಿ ರೇಸ್‌ ಆಯೋಜಿಸಲಾಗಿದೆ. ಅತ್ಯಂತ ವೇಗದ ಹಾಗೂ ಥ್ರಿಲ್‌ ಮೂಡಿಸುವ ಈ ರೇಸ್‌ ಭಾರತಕ್ಕೆ ಕಾಲಿಡುವುದು ಇದೆ ಮೊದಲು. ಭಾರತದಲ್ಲಿ ದ್ವಿ ಚಕ್ರ ವಾಹನಗಳಿಗೆ ದೊಡ್ಡ ಮಾರುಕಟ್ಟೆಯಿದೆ. ರೇಸ್‌ಗೆ ದೊಡ್ಡ ಪ್ರಮಾಣದ ಅಭಿಮಾನಿಗಳು ಇದ್ದಾರೆ. ಹೀಗಾಗಿ ಭಾರತದಲ್ಲಿ ಆಯೋಜಿಸಲು ಮುಂದಾಗಿದೆ.

ಡೊರ್ನಾ ಸ್ಪೋರ್ಟ್ಸ್‌ನ ಮುಖ್ಯ ಕ್ರೀಡಾ ಅಧಿಕಾರಿ ಕಾರ್ಲೋಸ್ ಎಜ್ಪೆಲೆಟಾ ಮಾತನಾಡಿ, “ಗ್ರ್ಯಾನ್‌ ಪ್ರಿ ಆಫ್ ಇಂಡಿಯಾದ ಟಿಕೆಟ್ ಮಾರಾಟವು ಪ್ರಾರಂಭವಾಗುತ್ತಿರುವುದು ನಮಗೆ ನಂಬಲಾಗದಷ್ಟು ಸಂತೋಷ ಉಂಟು ಮಾಡಿದೆ. ಈ ಯೋಜನೆಗೆ ಬೆಂಬಲ ನೀಡಿದ ಉತ್ತರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಭಾರತವು ವಿಶ್ವದ ಅತಿದೊಡ್ಡ ಮೋಟಾರ್‌ ಸೈಕಲ್ ಮಾರುಕಟ್ಟೆಯಾಗಿದೆ. ಹೀಗಾಗಿ ನಮ್ಮ ಕ್ರೀಡೆಯ ಬೆಳವಣಿಗೆಗೆ ದೊಡ್ಡ ಸಾಮರ್ಥ್ಯವನ್ನು ತರುತ್ತದೆ. ಇದು ಅಭಿಮಾನಿಗಳಿಗೆ ನಂಬಲಾಗದ ಅನುಭವವನ್ನು ನೀಡುತ್ತದೆ ಎಲ್ಲಾ ಭಾರತೀಯ ಮೋಟೋಜಿಪಿ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಟ್ರ್ಯಾಕ್ ಮೇಲ್ಮೈ ಮತ್ತು ರನ್ ಆಫ್ ಪ್ರದೇಶಗಳು ಮತ್ತು ಸುರಕ್ಷತಾ ದೃಷ್ಟಿಯಿಂದ ಆಗಬೇಕಾದ ಕಾಮಗಾರಿಗಳು ನಡೆಯುತ್ತಿದೆ. ರೇಸ್‌ ಯಶಸ್ವಿಯಾಗಿ ನಡೆದರೆ ಭಾರತದ ಮೋಟಾರ್‌ ಸೈಕಲ್‌ ರೇಸ್‌ ಕ್ಷೇತ್ರದಲ್ಲಿ ದೊಡ್ಡ ಇತಿಹಾಸವೇ ಸೃಷ್ಟಿಯಾಗಲಿದೆ.

Exit mobile version