ಆಟೋಮೊಬೈಲ್
MotoGp : ಭಾರತದಲ್ಲಿ ನಡೆಯುವ ಬೃಹತ್ ಬೈಕ್ ರೇಸ್‌ನ ಟಿಕೆಟ್ ಮಾರಾಟ ಆರಂಭ; ದರ ಸಿಕ್ಕಾಪಟ್ಟೆ ದುಬಾರಿ!
ಸೆಪ್ಟೆಂಬರ್ 22ರಿಂದ 24 ರವರೆಗೆ ರೇಸ್ ನಡೆಯಲಿದ್ದು, ಟಿಕೆಟ್ ಬೆಲೆ 800 ರೂಪಾಯಿಂದ ಆರಂಭಗೊಂಡು 40 ಸಾವಿರ ರೂಪಾಯಿ ತನಕ ಇದೆ.
ನವ ದೆಹಲಿ: ದೀರ್ಘ ಕಾಯುವಿಕೆಯ ಬಳಿಕ, ಭಾರತದಲ್ಲಿ ನಡೆಯಲಿರುವ ವಿಶ್ವದ ಅತ್ಯಂತ ಪ್ರತಿಷ್ಠಿತ ಮೋಟಾರ್‌ಸೈಕಲ್ ರೇಸ್ ಮೋಟೋಜಿಪಿಯ ಟಿಕೆಟ್‌ಗಳ ಮಾರಾಟ ಆರಂಭಗೊಂಡಿವೆ. ಬುಕ್ ಮೈ ಶೋನಿಂದ ಟಿಕೆಟ್ ಖರೀದಿಸಬಹುದಾಗಿದೆ. ನೊಯ್ಡಾಡ ಬುದ್ಧ ಇಂಟರ್‌ನ್ಯಾಷನಲ್ ಸರ್ಕೀಟ್‌ನಲ್ಲಿ ಈ ರೇಸ್‌ಗಳು ಸೆಪ್ಟೆಂಬರ್ 22ರಿಂದ 24ರವರೆಗೆ ರೇಸ್‌ಗಳು ನಡೆಯಲಿವೆ. ವಿಕ್ಷಣೆಗೆ ಸುಮಾರು 1,00,000 ಆಸನಗಳನ್ನು ಸಿದ್ಧಪಡಿಸಲಾಗಿದೆ. ಟಿಕೆಟ್ ದರ 800 ರೂಪಾಯಿಂದ ಆರಂಭಗೊಂಡು 40,000 ರೂಪಾಯಿ ತನಕ ನಿಗದಿ ಮಾಡಲಾಗಿದೆ.
ಸಾಮಾನ್ಯ ಸೀಟುಗಳು 10,000 ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದ್ದರೆ, ಪ್ರಮುಖ ಟಿಕೆಟ್‌ಗಳು 20,000-30,000 ರೂ.ಗಳವರೆಗೆ ಬೆಲೆ ಹೊಂದಿದೆ. ‘ಪ್ಲಾಟಿನಂ ಕಾರ್ಪೊರೇಟ್ ಬಾಕ್ಸ್’ ಸೀಟುಗಳು 40,000 ರೂಪಾಯಿಗೆ ಮಾರಾಟವಾಗಲಿವೆ. ಟ್ರ್ಯಾಕ್‌ನ ನಾನಾ ಸ್ಟ್ಯಾಂಡ್‌ಗಳಿಗೆ ಪೂರಕವಾಗಿ ಟಿಕೆಟ್ ಬೆಲೆಯನ್ನು ನಿಗದಿ ಮಾಡಲಾಗಿದೆ. ಬುಕ್ ಮೈ ಶೋದಲ್ಲಿ ಪೂರ್ಣ ವಿವರ ನೀಡಲಾಗಿದೆ.
ಇದನ್ನೂ ಓದಿ : Moto GP : ಫೋರ್ಚುಗಲ್ನಲ್ಲಿ ಭಾನುವಾರ ಮೋಟೊ ಜಿಪಿ ಮೊದಲ ಸುತ್ತಿನ ಫೈನಲ್ ರೇಸ್
ಮೋಟೋಜಿಪಿ ಸಂಘಟಕ ಡೋರ್ನಾ ಸ್ಪೋರ್ಟ್ಸ್ ಮತ್ತು ನೋಯ್ಡಾ ಮೂಲದ ಫೇರ್ ಸ್ಟ್ರೀಟ್ ಸ್ಪೋರ್ಟ್ಸ್ ನಡುವೆ ಏಳು ವರ್ಷಗಳ ಒಪ್ಪಂದದ ಪ್ರಕಾರ ಭಾರತದಲ್ಲಿ ರೇಸ್ ಆಯೋಜಿಸಲಾಗಿದೆ. ಅತ್ಯಂತ ವೇಗದ ಹಾಗೂ ಥ್ರಿಲ್ ಮೂಡಿಸುವ ಈ ರೇಸ್ ಭಾರತಕ್ಕೆ ಕಾಲಿಡುವುದು ಇದೆ ಮೊದಲು. ಭಾರತದಲ್ಲಿ ದ್ವಿ ಚಕ್ರ ವಾಹನಗಳಿಗೆ ದೊಡ್ಡ ಮಾರುಕಟ್ಟೆಯಿದೆ. ರೇಸ್‌ಗೆ ದೊಡ್ಡ ಪ್ರಮಾಣದ ಅಭಿಮಾನಿಗಳು ಇದ್ದಾರೆ. ಹೀಗಾಗಿ ಭಾರತದಲ್ಲಿ ಆಯೋಜಿಸಲು ಮುಂದಾಗಿದೆ.
ಡೊರ್ನಾ ಸ್ಪೋರ್ಟ್ಸ್‌ನ ಮುಖ್ಯ ಕ್ರೀಡಾ ಅಧಿಕಾರಿ ಕಾರ್ಲೋಸ್ ಎಜ್ಪೆಲೆಟಾ ಮಾತನಾಡಿ, “ಗ್ರ್ಯಾನ್ ಪ್ರಿ ಆಫ್ ಇಂಡಿಯಾದ ಟಿಕೆಟ್ ಮಾರಾಟವು ಪ್ರಾರಂಭವಾಗುತ್ತಿರುವುದು ನಮಗೆ ನಂಬಲಾಗದಷ್ಟು ಸಂತೋಷ ಉಂಟು ಮಾಡಿದೆ. ಈ ಯೋಜನೆಗೆ ಬೆಂಬಲ ನೀಡಿದ ಉತ್ತರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಭಾರತವು ವಿಶ್ವದ ಅತಿದೊಡ್ಡ ಮೋಟಾರ್ ಸೈಕಲ್ ಮಾರುಕಟ್ಟೆಯಾಗಿದೆ. ಹೀಗಾಗಿ ನಮ್ಮ ಕ್ರೀಡೆಯ ಬೆಳವಣಿಗೆಗೆ ದೊಡ್ಡ ಸಾಮರ್ಥ್ಯವನ್ನು ತರುತ್ತದೆ. ಇದು ಅಭಿಮಾನಿಗಳಿಗೆ ನಂಬಲಾಗದ ಅನುಭವವನ್ನು ನೀಡುತ್ತದೆ ಎಲ್ಲಾ ಭಾರತೀಯ ಮೋಟೋಜಿಪಿ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಟ್ರ್ಯಾಕ್ ಮೇಲ್ಮೈ ಮತ್ತು ರನ್ ಆಫ್ ಪ್ರದೇಶಗಳು ಮತ್ತು ಸುರಕ್ಷತಾ ದೃಷ್ಟಿಯಿಂದ ಆಗಬೇಕಾದ ಕಾಮಗಾರಿಗಳು ನಡೆಯುತ್ತಿದೆ. ರೇಸ್ ಯಶಸ್ವಿಯಾಗಿ ನಡೆದರೆ ಭಾರತದ ಮೋಟಾರ್ ಸೈಕಲ್ ರೇಸ್ ಕ್ಷೇತ್ರದಲ್ಲಿ ದೊಡ್ಡ ಇತಿಹಾಸವೇ ಸೃಷ್ಟಿಯಾಗಲಿದೆ.
ಆಟೋಮೊಬೈಲ್
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
ಮೊಬೈಲ್ ಕೊಡದ ಕೋಪಕ್ಕೆ 11 ವರ್ಷದ ಅಕ್ಕ ಹಾಗೂ 10 ವರ್ಷದ ತಮ್ಮ ಅಮ್ಮನ ಕಾರಿನಲ್ಲಿಯೇ (Viral News) ಮನೆ ಬಿಟ್ಟು ಹೋಗಿದ್ದರು.
ವಾಷಿಂಗ್ಟನ್: ಹೆತ್ತವರ ವಾಹನವನ್ನು ರಸ್ತೆಯಲ್ಲಿ ಓಡಿಸಿ ಪೊಲೀಸರಿಗೆ ಸಿಕ್ಕಿ ಬೀಳುವ ಹಲವಾರು ಪ್ರಕರಣಗಳು ನಡೆಯುತ್ತಿರುತ್ತವೆ. ಬಹುತೇಕ ಪ್ರಕರಣಗಳು ಹದಿ ಹರೆಯದ ಮಕ್ಕಳ ಶೋಕಿಗೆ ನಡೆದಿರುತ್ತವೆ. ಆದರೆ, ಈ ಘಟನೆಯಲ್ಲಿ ಮಕ್ಕಳು ಅಮ್ಮನ ಮೇಲಿನ ಕೋಪಕ್ಕೆ ಅವರ ಕಾರನ್ನೇ ಎತ್ತಿಕೊಂಡು 300 ಕಿಲೋ ಮೀಟರ್ ದೂರ ಸಾಗಿದ ಮೇಲೆ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ. 11 ವರ್ಷದ ಅಕ್ಕ ಹಾಗೂ 10 ವರ್ಷದ ತಮ್ಮನನ್ನು ಪೊಲೀಸರು ಅಡ್ಡಗಟ್ಟಿ ಹಿಡಿದು ಅವರ ಪೋಷಕರ ಮೇಲೆ ಕೇಸ್ ಜಡಿದು ಮನೆಗೆ ವಾಪಸ್ ಕಳುಹಿಸಿದ್ದಾರೆ ಎಂಬುದಾಗಿ (Viral News) ವರದಿಯಾಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ. ಅಮೆರಿಕದಲ್ಲಿ.
ಅಮೆರಿಕದ ಉತ್ತರ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಅಸಮಾಧಾನಗೊಂಡ ಇಬ್ಬರು ಮಕ್ಕಳು ತಮ್ಮ ತಾಯಿಯ ಕಾರನ್ನು ತೆಗೆದುಕೊಂಡು ಗಂಟೆಗಳ ಕಾಲ ಓಡಿಸಲು ನಿರ್ಧರಿಸಿದ್ದರು. ಮನೆಯಲ್ಲಿ ಗಲಾಟೆ ಮಾಡಿಕೊಂಡ ಮಕ್ಕಳು ಮನೆ ತೊರೆಯಲು ನಿರ್ಧರಿಸಿದ್ದರು.
ಉತ್ತರ ಫ್ಲೋರಿಡಾದ ಪೊಲೀಸರು ಗುರುವಾರ ಮುಂಜಾನೆ 3: 50 ರ ಸುಮಾರಿಗೆ ಅಲಚುವಾದಲ್ಲಿ ಮಕ್ಕಳಿಬ್ಬರು ವಾಹನ ಚಾಲನೆ ಮಾಡುತ್ತಿರುವುದನ್ನು ಗಮನಿಸಿ ಅವರನ್ನು ಬೆನ್ನಟ್ಟಿದ್ದಾರೆ. 10 ವರ್ಷದ ಬಾಲಕ ಮತ್ತು ಅವನ 11 ವರ್ಷದ ಸಹೋದರಿಯನ್ನು ತಡೆದಿದ್ದಾರೆ. ಅದಕ್ಕಿಂತ ಮೊದಲು ಮಕ್ಕಳ ತಾಯಿ ಪೊಲೀಸರಿ ಅವರಿಬ್ಬರೂ ಪರಾರಿಯಾಗಿರುವ ದೂರು ನೀಡಿದ್ದರು. 10 ವರ್ಷದ ಬಾಲಕ ಕಾರನ್ನು ಓಡಿಸಿದ್ದರೆ ಆತನ ಸಹೋದರೆ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದಳು ಎಂದು ಪೊಲೀಸರ ತಿಳಿಸಿದ್ದಾರೆ.
ಮೊಬೈಲ್ ಕೊಡದಕ್ಕೆ ಕೋಪ
ಇಬ್ಬರೂ ಮಕ್ಕಳು ಅತಿಯಾದ ಮೊಬೈಲ್ ಗೀಳಿಗೆ ಬಿದಿದ್ದರು. ಹೀಗಾಗಿ ತಾಯಿ ಹೊರಗೆ ಹೋಗುವಾಗ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಕೊಂಡು ಹೋಗಿದ್ದರು. ಇದಕ್ಕೆ ಕೋಪಗೊಂಡ ಅಕ್ಕ , ತಮ್ಮ ಅಮ್ಮನ ಕಾರನ್ನೇ ಎತ್ತಿಕೊಂಡು ಮನೆ ಬಿಟ್ಟು ಹೋಗಿದ್ದಾರೆ.
ಮಕ್ಕಳನ್ನು ಹಿಡಿದ ಪೊಲೀಸರು ಅವರನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಈ ವೇಳೆ ಪೋಷಕರಿಗೆ ಪೊಲೀಸರು ಬುದ್ಧಿ ಹೇಳಿದ್ದಾರೆ. ಇವೆಲ್ಲದರ ನಡುವೆ ತಾಯಿ ಮಕ್ಕಳ ಮೇಲೆಯೂ ಕಾರು ಕಳ್ಳತನದ ದೂರು ದಾಖಲಿಸಿದ್ದರು. ಪೊಲೀಸರು ಮಧ್ಯಸ್ಥಿಕೆಯಲ್ಲಿ ಎಲ್ಲ ದೂರುಗಳನ್ನು ತೆಗೆದುಹಾಕಲಾಗಿದೆ.
ಇದನ್ನೂ ಓದಿ : Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
ಅಜಾಗರೂಕ ಚಾಲನೆಯ ಕೇಸನ್ನೂ ಮಕ್ಕಳ ಮೇಲೆ ಹಾಕಿಲ್ಲ. ತಾಯಿ ಎಲ್ಲ ದೂರುಗಳನ್ನು ವಾಪಸ್ ಪಡೆದರೂ ಅಜಾಗರೂಕ ಚಾಲನೆಯ ಕೇಸ್ ಮಕ್ಕಳ ಮೇಲೆ ಹಾಕಿದ್ದರು. ಆದರೆ ಅಲ್ಲಿನ ನ್ಯಾಯಾಲಯ ಮಕ್ಕಳ ಮೇಲಿನ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಿಲ್ಲ. ಹೀಗಾಗಿ ಪೊಲೀಸರೂ ಆ ಕೇಸನ್ನೂ ಕೈಬಿಟ್ಟಿದ್ದಾರೆ.
ಭಾರತದಲ್ಲಿ ಪೋಷಕರಿಗೆ ಜೈಲು ಶಿಕ್ಷೆ
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವ ಪ್ರಕರಣಗಳು ಭಾರತದಲ್ಲಿ ಸಾಮಾನ್ಯವಾಗಿದೆ. ಅಪ್ರಾಪ್ತ ವಯಸ್ಕರು ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ಅಥವಾ ಸವಾರಿ ಮಾಡಿ ಸಿಕ್ಕಿಬಿದ್ದಾಗ, ಅವರನ್ನು ಬಂಧಿಸಿ ನಂತರ ಬಾಲಾಪರಾಧಿ ನ್ಯಾಯಾಲಯಗಳಿಗೆ ಕಳುಹಿಸಲಾಗುತ್ತದೆ. ಬಾಲಾಪರಾಧಿ ಕಸ್ಟಡಿಯಲ್ಲಿದ್ದಾಗ ಆಪ್ತ ಸಲಹೆಗಳನ್ನು ಪಡೆಯುತ್ತಾರೆ. ಆದರೆ ಅವರಿಗೆ ವಾಹನ ಓಡಿಸಲು ಬಿಟ್ಟ ಪೋಷಕರನ್ನು ಕಠಿಣ ಜೈಲು ಶಿಕ್ಷೆಗಳಿಗೆ ಒಳಪಡಿಸಲಾಗುತ್ತದೆ.
ಅಪರಾಧಗಳಲ್ಲಿ ಪದೇ ಪದೇ ತೊಡಗುವ ಅಪ್ರಾಪ್ತ ವಯಸ್ಕರು ದೀರ್ಘಾವಧಿಯ ಸೆರೆವಾಸ ಸೇರಿದಂತೆ ಹೆಚ್ಚು ಕಠಿಣ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ನ್ಯಾಯಾಲಯವು ಪೋಷಕರಿಗೆ ನಿರ್ದಿಷ್ಟ ಶಿಕ್ಷೆಗಳನ್ನು ನಿರ್ಧರಿಸುತ್ತದೆ. ಔಪಚಾರಿಕ ಮತ್ತು ಕಾನೂನುಬದ್ಧ ಪರವಾನಗಿ ಪಡೆಯುವವರೆಗೆ ತಮ್ಮ ಮಕ್ಕಳು ವಾಹನಗಳನ್ನು ಓಡಿಸುವುದಿಲ್ಲ ಎಂದು ಬುದ್ಧಿ ಹೇಳಲಾಗುತ್ತದೆ.
ಆಟೋಮೊಬೈಲ್
Car Tyre : ಟೈರ್ಗಳು ಹೆಚ್ಚು ಬಾಳಿಕೆ ಬರಬೇಕೆಂದರೆ ಏನು ಮಾಡಬೇಕು? ಇಲ್ಲಿದೆ ಕೆಲವು ಸಿಂಪಲ್ ಟಿಪ್ಸ್
ವಾಹನದ ಸಂಪೂರ್ಣ ಭಾರ ಟೈರ್ಗಳ ಮೇಲೆ ಬೀಳುತ್ತವೆ. ಅದರ ಉತ್ತಮ (Car Tyre) ನಿರ್ವಹಣೆಯಿಂದ ಹೆಚ್ಚು ಬಾಳಿಕೆ ಬರುತ್ತದೆ ಹಾಗೂ ಅವಘಡವನ್ನು ತಪ್ಪಿಸಬಹುದು.
ಬೆಂಗಳೂರು: ನಿಮ್ಮ ಕಾರು ಅಥವಾ ಇನ್ಯಾವುದೇ ವಾಹನಗಳಲ್ಲಿ ಟೈರ್ಗಳು (Car Tyre) ಬಹುಮುಖ್ಯ ಭಾಗ. ಎಂಜಿನ್ ಸೃಜಿಸುವ ಶಕ್ತಿಯನ್ನು ಟೈರ್ಗೆ ರವಾನಿಸಿ ತಿರುಗುವಂತೆ ಮಾಡಿದಾಗ ಮಾತ್ರ ವಾಹನ ಮುಂದಕ್ಕೆ ಹೋಗುತ್ತದೆ. ಅದೂ ಅಲ್ಲದೆ, ವಾಹನ ಮತ್ತು ನೆಲದ ಜತೆ ಸಂಪರ್ಕ ಹೊಂದಿರುವ ಪ್ರಮುಖ ಭಾಗವೇ ಟೈರ್. ಎಂಥದ್ದೇ ಒರಟು ರಸ್ತೆಯಲ್ಲಿ ಸಲೀಸಾಗಿ ಪ್ರಯಾಣ ಮಾಡುವಂತಾದರೆ ಅದರ ಸಂಪೂರ್ಣ ಕ್ರೆಡಿಟ್ ಟೈರ್ಗಳಿಗೆ ಸಲ್ಲುತ್ತದೆ. ಆದರೆ, ವಾಹನದೊಳಗಿನ ಎಸಿ, ಮ್ಯೂಸಿಕ್ ಸಿಸ್ಟಮ್ ಕೊಡುವಷ್ಟು ಗಮನವನ್ನು ಬಹುತೇಕ ಮಂದಿ ಟೈರ್ಗಳಿಗೆ ಕೊಡುವುದಿಲ್ಲ. ಇಂಥ ವರ್ತನೆ ಅಪಘಾತಗಳಿಗೆ ಕಾರಣವಾಗುವ ಜತೆಗೆ ಪ್ರಯಾಣವನ್ನೇ ಯಾತನಾಮಯ ಮಾಡಬಹುದು.
ಮಣ್ಣಾಗಾಲಿ, ಟಾರು ರಸ್ತೆಯೇ ಆಗಲಿ ವಾಹನ ಸವಾರಿ ಅನುಭವ ಹೆಚ್ಚಿಸುವಲ್ಲಿ ನಿಮ್ಮ ಕಾರಿನ ಟೈರ್ ಗಳು ಪ್ರಮುಖ ಪಾತ್ರವಹಿಸುತ್ತವೆ. ಇಳಿಜಾರು ಅಥವಾ ಏರು ರಸ್ತೆಯಲ್ಲಿ, ವಾಹನ ಜಾರದಂತೆಯೂ ಟೈರ್ಗಳು ನೋಡಿಕೊಳ್ಳುತ್ತದೆ. ಇಷ್ಟೆಲ್ಲ ಅಗತ್ಯವಿರುವ ಟೈರ್ಗಳು ಹಳೆಯದಾದರೂ, ಸವೆದು ಹೋದರೂ ಮಾಲೀಕರು ಅದರ ಕಡೆಗೆ ಗಮನ ಹರಿಸುವುದಿಲ್ಲ. ಈ ರೀತಿ ಟೈರ್ಗಳ ಬಗ್ಗೆ ಕಾಳಜಿ ವಹಿಸದ ಕಾರಣ ಟೈರ್ಗಳು ಬೇಗ ಹಾಳಾಗಿ ಪ್ರಯಾಣದ ಖುಷಿ ನಾಶವಾಗುತ್ತದೆ. ಹಾಗಾದರೆ ಟೈರ್ಗಳ ಜೀವಿತಾವಧಿ ಹೇಗೆ ಹೆಚ್ಚಿಸುವುದು ಎಂಬ ಕೆಲವು ಸಲಹೆಗಳು ಇಲ್ಲಿವೆ. ಅದೇ ರೀತಿ ಕಾರಿನ ಟೈರ್ ಗಳನ್ನು ಯಾವಾಗ ಬದಲಾಯಿಸಬೇಕು ಎಂಬುದರ ಮಾಹಿತಿಯೂ ಇಲ್ಲಿದೆ.
ಹಠಾತ್ ಬ್ರೇಕಿಂಗ್ ಮತ್ತು ಏಕಾಏಕಿ ವೇಗವರ್ಧನೆಯನ್ನು ತಪ್ಪಿಸಿ
ಹಾರ್ಡ್ ಆಕ್ಸಿಲರೇಶನ್ (ಏಕಾಏಕಿ ವೇಗ ಹೆಚ್ಚಿಸುವುದು) ಅಥವಾ ಹೆವಿ ಬ್ರೇಕಿಂಗ್ ನಿಮ್ಮ ಕಾರಿನ ಟೈರ್ ಗಳ ಜೀವಿತಾವಧಿಯ ಮೇಲೆ ಪರಿಣಾಮ ಬೀರುತ್ತದೆ. ವೇಗವನ್ನು ಹೆಚ್ಚಿಸುವಾಗ ಅಥವಾ ತುಂಬಾ ಗಟ್ಟಿಯಾಗಿ ಬ್ರೇಕಿಂಗ್ ಮಾಡುವಾಗ ಹೆಚ್ಚಿನ ಘರ್ಷಣೆ ಉತ್ಪತ್ತಿಯಾಗುವುದು ಇದಕ್ಕೆ ಕಾರಣ. ಅಪಘಾತಗಳನ್ನು ತಪ್ಪಿಸಲು ಬ್ರೇಕ್ ಹಾಕುವುದು ಅನಿವಾರ್ಯ. ಆದರೆ, ಅನಗತ್ಯವಾಗಿ ಭಾರಿ ವೇಗವರ್ಧನೆ ಅಥವಾ ಅತಿಯಾದ ಬ್ರೇಕಿಂಗ್ ಪ್ರಯೋಗಿಸದೇ ಇರುವುದು ಉತ್ತಮ. ಟೈರ್ನ ಟ್ರೆಡ್ ಸಮರ್ಪಕವಾಗಿದ್ದರೆ ವಾಹನ ಸವಾರಿಯ ಅನುಭವ ಹೆಚ್ಚುತ್ತದೆ ಹಾಗೂ ಅವಘಡದಿಂದ ದೂರವಿರಲೂ ಸಾಧ್ಯವಾಗುತ್ತದೆ.
ಕಂಪನಿ ಶಿಫಾರಸು ಮಾಡಿದ ಟೈರ್ ಮತ್ತು ರಿಮ್ ಮಾತ್ರ ಬಳಸಿ
ಅನೇಕ ವಾಹನ ಬಳಕೆದಾರರು ಸೌಂದರ್ಯ ಹೆಚ್ಚಳ ಹಾಗು ಆಕರ್ಷಣೆಗಾಗಿ ತಮ್ಮ ಕಾರಿನ ರಿಮ್ ಮತ್ತು ಟೈರ್ಗಳನ್ನು ಬದಲಾಯಿಸುತ್ತಾರೆ. ದೊಡ್ಡ ಗಾತ್ರದ ರಿಮ್ ಬಳಸುತ್ತಾರೆ. ಈ ತಪ್ಪು ಮಾಡಲೇಬಾರದು. ವಾಹನ ತಯಾರಿಕಾ ಕಂಪನಿಯು ಶಿಫಾರಸು ಮಾಡಿದ ಟೈರ್ ಮತ್ತು ರಿಮ್ಗಳನ್ನು ಮಾತ್ರ ಬಳಸಬೇಕು. ಒಂದು ವೇಳೆ ಬದಲಾಯಿಸಬೇಕಾದರೆ ಟೈರ್- ಸ್ಪೆಷಲಿಸ್ಟ್ ಅನ್ನು ಸಂಪರ್ಕಿಸಿ. ಹೆಚ್ಚು ಅಗಲವಾದ ಟೈರ್ ಗಳನ್ನು ಬಳಸುವುದು (ಕಡಿಮೆ ಪ್ರೊಫೈಲ್ ಹೊಂದಿರುವವು) ಅದರದ್ದೇ ಅದ ಪ್ರಯೋಜನಗಳನ್ನು ಹೊಂದಿದೆ, ಆದರೆ ಟೈರ್ ಹಾಗೂ ಇಂಧನ ಮೈಲೇಜ್ ಕೊಡುವುದು ಕಡಿಮೆ.
ಸರಿಯಾದ ಗಾಳಿಯ ಒತ್ತಡ
ವಾಹನಗಳ ಟೈರ್ ನಲ್ಲಿ ಸೂಕ್ತ ಪ್ರಮಾಣದ ಗಾಳಿಯ ಒತ್ತಡವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ, ಟೈರ್ ಗಳ ಅತಿಯಾದ ಅಥವಾ ಕಡಿಮೆ ಗಾಳಿಯ ಒತ್ತಡದಲ್ಲಿ ಓಡುವುದನ್ನು ತಪ್ಪಿಸುವುದು ಉತ್ತಮ. ಕಂಪನಿಯು ನಿಗದಿ ಮಾಡಿದ ಗಾಳಿಯ ಒತ್ತಡವನ್ನೇ ಟೈರ್ಗಳಲ್ಲಿ ಮೆಂಟೇನ್ ಮಾಡಬೇಕು. ವಾಹನದ ಚಾಲಕನ ಬಾಗಿಲು, ಡ್ರೈವರ್-ಸೈಡ್ ಬಿ-ಪಿಲ್ಲರ್ ಅಥವಾ ಬಳಕೆದಾರ ಕೈಪಿಡಿಯಲ್ಲಿ ಕಂಪನಿ ಶಿಫಾರಸು ಮಾಡಿದ ಟೈರ್ ಪ್ರೆಶರ್ ಮಾಹಿತಿ ನೀಡಿರಲಾಗುತ್ತದೆ. ಕಡಿಮೆ ಗಾಳಿಯು ಟೈರ್ ಗಳಲ್ಲಿ ಹೆಚ್ಚಿನ ಸವೆತಕ್ಕೆ ಕಾರಣವಾಗುತ್ತದೆ. ಅಲ್ಲದೆ, ಇದು ವೇಗವರ್ಧನೆ ಮತ್ತು ಬ್ರೇಕಿಂಗ್ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಅತಿಯಾದ ಗಾಳಿಯ ಒತ್ತಡ ಬ್ರೇಕಿಂಗ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜೊತೆಗೆ, ಟೈರ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತವೆ. ಸಿಮೆಂಟ್ ರಸ್ತೆಗಳಲ್ಲಿ ನಿಮ್ಮ ಕಾರನ್ನು ಬಳಸಲು ಹೊರಟರೆ ಟೈರ್ಗಳ ಗಾಳಿಯ ಒತ್ತಡ ಸ್ವಲ್ಪ ಹೆಚ್ಚಿಸಬೇಕು. ಏಕೆಂದರೆ ಸಿಮೆಂಟ್ ರಸ್ತೆಗಳಲ್ಲಿ ವೇಗವನ್ನು ಹೆಚ್ಚಿಸುವಾಗ ಅಥವಾ ಬ್ರೇಕಿಂಗ್ ಮಾಡುವಾಗ ಹೆಚ್ಚಿನ ಘರ್ಷಣೆ ಉಂಟಾಗುತ್ತದೆ.
ನಿಯಮಿತ ವೀಲ್ ಅಲೈನ್ಮೆಂಟ್
ವಾಹನ ಚಕ್ರಗಳನ್ನು ಆಗಾಗ ಅಲೈನ್ಮೆಂಟ್ ಗೆ ಒಳಪಡಿಸುವುದರಿಂದ ಹೆಚ್ಚಿನ ಲಾಭವಿದೆ. ವೇಗವಾಗಿ ಹೋಗುವಾಗ ಉಂಟಾಗುವ ಘರ್ಷಣೆಗಳಿಂದಾಗಿ ಸಾಮಾನ್ಯವಾಗಿ ಅಲೈನ್ಮೆಂಟ್ ಏರುಪೇರಾಗುತ್ತದೆ. ಇದು ಟೈರ್ಗಳು ಓರೆ ಕೋರೆ ಸವೆಯಲು ಕಾರಣವಾಗುತ್ತದೆ. ಹೀಗಾಗಿ ನಿಯಮಿತವಾಗಿ ಟೈರ್ ಅಲೈನ್ಮೆಂಟ್ ಮಾಡಿಸುವುದು ಉತ್ತಮ. ಸಸ್ಪೆನ್ಷನ್ನಲ್ಲಿ ಸಮಸ್ಯೆ ಇದ್ದರೂ ಈ ಪ್ರಕ್ರಿಯೆಯಲ್ಲಿ ಗೊತ್ತಾಗುತ್ತದೆ. ಆದ್ದರಿಂದ, ವಾಹನದ ಟೈರ್ ಗಳು ಮತ್ತು ನಿಮ್ಮ ಕಾರಿನ ಸಸ್ಪೆಂಷನ್ ಘಟಕಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ವೀಲ್ ಅಲೈನ್ ಮೆಂಟ್ ಅನ್ನು ಆಗಾಗ ಮಾಡಿದಬೇಕು. ಇದರಿಂದ ಟೈರ್ಗಳು ಹೆಚ್ಚು ಬಾಳಿಕೆ ಬರುತ್ತವೆ.
ಟೈರ್ಗಳನ್ನು ಹಿಂದೆ ಮುಂದೆ ಬದಲಾಯಿಸಿ (ರೊಟೇಷನ್)
ಎಲ್ಲಾ ಟೈರ್ ಗಳ ಟ್ರೆಡ್ ಸವೆತವನ್ನು ಏಕ ರೂಪದಲ್ಲಿ ಇರುವಂತೆ ನೋಡಿಕೊಳ್ಳುವುದಕ್ಕೆ ಇದು ಉತ್ತಮ ಮಾರ್ಗವಾಗಿದೆ. ವಾಸ್ತವವಾಗಿ, ಲೈವ್ ಆಕ್ಸಲ್ ನಲ್ಲಿರುವ (ಎಂಜಿನ್ನಿಂದ ಶಕ್ತಿ ರವಾನೆಯಾಗುವ) ಚಕ್ರಗಳ ಟೈರ್ ಗಳು ಹೆಚ್ಚಿದ ಸವೆತಕ್ಕೆ ಒಳಗಾಗುತ್ತವೆ. ವೇಗೋತ್ಕರ್ಷದ ಸಮಯದಲ್ಲಿ ಕಡಿಮೆ ಘರ್ಷಣೆಯ ಉತ್ಪಾದನೆಯಿಂದಾಗಿ ಫ್ರೀ ಆಕ್ಸಲ್ ನಲ್ಲಿರುವ ಟೈರ್ಗಳು ಕಡಿಮೆ ಸವೆತ ಕಾಣುತ್ತದೆ. ಆದ್ದರಿಂದ, ನಿಯಮಿತವಾಗಿ ಚಕ್ರಗಳನ್ನು ಬದಲಾಯಿಸಬೇಕು ಅದೇ ರೀತಿ ಸ್ಪೇರ್ ಟೈರ್ಗಳನ್ನೂ ನಿಯಮಿತವಾಗಿ ಬಳಸಬೇಕು. ಇದು ಎಲ್ಲಾ ಐದು ಟೈರ್ ಗಳಲ್ಲಿ ಸಮ ರೀತಿಯಲ್ಲಿ ಥ್ರೆಡ್ ಸವೆತವನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ.
ವಾಹನದ ಟೈರ್ಗಳನ್ನು ಯಾವಾಗ ಬದಲಾಯಿಸಬೇಕು?
ನಿಮ್ಮ ಕಾರಿನ ಟೈರ್ ಗಳ ಮೇಲೆ ಎಷ್ಟು ಥ್ರೆಡ್ ಇವೆ ಎಂಬುದು ಅದರ ಆರೋಗ್ಯವನ್ನು ಸೂಚಿಸುತ್ತದೆ. ರಸ್ತೆ ಮೇಲಿರುವ ಎಲ್ಲ ವಾಹನಗಳ ಟೈರ್ ಸೂಕ್ತ ಥ್ರೆಡ್ ಇರಲೇಬೇಕು. ಈ ಅಭ್ಯಾಸ ಅನೇಕ ರೀತಿಯಲ್ಲಿ ಅಗತ್ಯ. ನಿಮ್ಮ ಕಾರನ್ನು ವಿವಿಧ ರಸ್ತೆ ಮೇಲ್ಮೈಗಳಲ್ಲಿ ಆರಾಮವಾಗಿ ಓಡಿಸಲು ಸಹಾಯ ಮಾಡುತ್ತದೆ. ರಸ್ತೆಯ ಮೇಲಿನ ಹಿಡಿತಕ್ಕೆ ಥ್ರೆಡ್ ಕಾರಣ; ಕಾರ್ನರಿಂಗ್, ವೇಗ ಹೆಚ್ಚಳ ಮತ್ತು ಬ್ರೇಕಿಂಗ್ಗೆ ಸಹಾಯ ಮಾಡುತ್ತದೆ. ಒದ್ದೆಯಾದ ಮೇಲ್ಮೈಗಳಲ್ಲಿ, ಥ್ರೆಡ್ ನೀರನ್ನು ಟೈರ್ ಗಳಿಂದ ದೂರ ಹೋಗುವಂತೆ ಮಾಡುತ್ತದೆ. ಬ ಪ್ರಸ್ತುತ ಬರುವ ಟೈರ್ಗಳಲ್ಲಿ ಥ್ರೆಡ್ ಸವೆತ ಇಂಡಿಕೇಟರ್ಗಳಿರುತ್ತವೆ. ನಿಮ್ಮ ವಾಹನದ ಟೈರ್ ಗಳನ್ನು ಯಾವಾಗ ಬದಲಾಯಿಸಬೇಕೆಂದು ನಿರ್ಧರಿಸಲು ಅದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಟೈರ್ ಗಳಲ್ಲಿ ಅಂತಹ ಯಾವುದೇ ಸೂಚಕವಿಲ್ಲದಿದ್ದರೆ ಸವೆತದ ಸ್ಥಿತಿಯನ್ನು ನಿರ್ಣಯಿಸಲು ನೀವು ನಾಣ್ಯದ ತಂತ್ರವನ್ನು ಬಳಸಬಹುದು. ನಾಣ್ಯವೊಂದನ್ನು ಥ್ರೆಡ್ಗಳ ನಡುವೆ ಇಟ್ಟು ನೋಡಿ. ಹಾಗೂ ಅದನ್ನು ಸದಾ ಕಾರಿನಲ್ಲಿಟ್ಟುಕೊಳ್ಳಿ. ಹೊಸ ಟೈರ್ ಹಾಕುವಾಗ ನಾಣ್ಯ ಎಷ್ಟು ಆಳಕ್ಕೆ ಹೋಗುತ್ತಿತ್ತೊ ಅದರ ಅರ್ಧಕ್ಕಿಂತಲೂ ಕಡಿಮೆಯಾಗಿದ್ದರೆ ಟೈರ್ ಬದಲಾಯಿಸುವ ಸಮಯ ಬಂದಿದೆ ಎಂದರ್ಥ.
ಇದನ್ನೂ ಓದಿ : Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್, ಏನಿದರ ಪ್ರಯೋಜನ?
ಅಸಮವಾಗಿರುವ ಸವತೆ ಕಂಡು ಬಂದರೆ
ಹಾರ್ಡ್ ಬ್ರೇಕಿಂಗ್ ಮತ್ತು ಏಕಾಏಕಿ ಸ್ಪೀಡ್ ಹೆಚ್ಚಿಸುವ ಕಾರಣ ಟೈರ್ನ ಥ್ರೆಡ್ ಅಸಮ ಸವೆತಕ್ಕೆ ಒಳಗಾಗುತ್ತವೆ. ಕೆಲವು ಭಾಗಗಳಲ್ಲಿ ಟ್ರೆಡ್ ನ ಅಸಮ ಸವೆತವಿದ್ದರೆ, ಟೈರ್ ಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಲು ಪ್ರಾರಂಭಿಸುವ ಸಮಯವಾಗಿರುತ್ತದೆ ಅಸಮರ್ಪಕ ಗಾಳಿಯ ಒತ್ತಡವೂ ಅಸಮ ಟೈರ್ ಸವೆತಕ್ಕೆ ಮತ್ತೊಂದು ಕಾರಣ. ಹೀಗಾಗಿ ಟೈರ್ಗಳ ಕಾಳಜಿ ಮಾಡುವ ಅಭ್ಯಾಸ ಇಲ್ಲದಿದ್ದರೆ ವರ್ಷಕ್ಕೆ ಒಂದು ಬಾರಿ ಟೈರ್ಗಳಲ್ಲಿ ಅಸಮರ್ಪಕ ಸವತೆ ಇದೆಯಾ ಎಂಬುದನ್ನು ಪರಿಣತರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದೇ ಒಂದು ಕಡೆ ಹೆಚ್ಚು ಸವತೆ ಇದೆ ಎಂದಾದರೆ ತಕ್ಷಣ ಟೈರ್ ಬದಲಾಯಿಸಿ.
ಹಾನಿಗೊಳಗಾದ ಸೈಡ್ ವಾಲ್
ನಿಮ್ಮ ವಾಹನದ ಟೈರ್ ಗಳು ಹಾನಿಗೊಳಗಾದ ಸೈಡ್ ವಾಲ್ ಹೊಂದಿವೆಯೇ ಹೊಂದಿದ್ದರೆ ತಕ್ಷಣ ಬದಲಾವಣೆ ನಿರ್ಧಾರ ತೆಗೆದುಕೊಳ್ಳಬಹುದು. ಟೈರ್ ನ ಸೈಡ್ ವಾಲ್ ವಾಹನ ಸಂಪೂರ್ಣ ಭಾರವನ್ನು ಹೊರಬೇಕಾಗುತ್ತದೆ. ಹೀಗಾಗಿ ಅದು ಸದಾ ಬಲಿಷ್ಠವಾಗಿರಬೇಕಾಗುತ್ತದೆ. ಆದ್ದರಿಂದ, ಸೈಡ್ ವಾಲ್ ಗೆ ಹಾನಿಯಾದರೆ ಬಹಳ ಗಂಭೀರವಾಗಿ ಪರಿಗಣಿಸಬೇಕು. ಸೈಡ್ ವಾಲ್ ನಲ್ಲಿ ಯಾವುದೇ ಉಬ್ಬು, ಬಿರುಕು ಅಥವಾ ಗುಳ್ಳೆಗಳು ಎದ್ದಿದ್ದರೆ ಅಪಾಯದ ಸಂಕೇತವಾಗಿರುತ್ತವೆ. ಇದು ಸ್ಫೋಟಗೊಂಡು ಅಪಘಾತ ಉಂಟು ಮಾಡಬಹುದು. ವಾಹನಗಳು ಅತಿವೇಗದಲ್ಲಿ ಚಲಿಸುವಾಗ ಸಿಕ್ಕಾಪಟ್ಟೆ ಒತ್ತಡವು ಟೈರ್ಗಳ ಮೇಲೆ ಬೀಳುತ್ತದೆ. ಅತಿ ವೇಗದಲ್ಲಿ ಓಡುವ ವಾಹನವನ್ನು ನಿಯಂತ್ರಣಕ್ಕೆ ತರುವಾಗಲೂ ಇದೇ ರೀತಿಯ ಒತ್ತಡ ಎದುರಾಗುತ್ತದೆ. ಸೈಡ್ ವಾಲ್ ಹಾಳಾಗಿದ್ದಾರೆ ತಕ್ಷಣ ಒತ್ತಡ ತಾಳಲಾರದೆ ಸ್ಫೋಟಗೊಳ್ಳುತ್ತದೆ.
ಆಟೋಮೊಬೈಲ್
Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್, ಏನಿದರ ಪ್ರಯೋಜನ?
ದೆಹಲಿಯಲ್ಲಿ ಮೊದಲ ಗ್ರೀನ್ ಹೈಡ್ರೋಜನ್ ಫ್ಯೂಯಲ್ ಸೆಲ್ (Hydrogen fuel cell) ಬಸ್ಗೆ ಕೇಂದ್ರ ಸಚಿವರು ಹಸಿರು ನಿಶಾನೆ ತೋರಲಿದ್ದಾರೆ. ಇಂಡಿಯನ್ ಆಯಿಲ್ 15 ಫ್ಯೂಯಲ್ ಸೆಲ್ ಬಸ್ ಗಳ ಪ್ರಯೋಗಗಳನ್ನು ನಡೆಸಲಿದೆ.
ನವ ದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಇಂಧನ ಕೋಶ ಚಾಲಿತ ಬಸ್ (Hydrogen fuel cell Bus) ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ನಿಗಿದತ ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ನಿಂದ ಚಾಲಿತ 15 ಬಸ್ ಗಳ ಕಾರ್ಯಾಚರಣೆ ನಡೆಯಲಿದೆ. ಇಂಡಿಯನ್ ಆಯಿಲ್ ಸಂಸ್ಥೆಯು ಪ್ರಯೋಗಾರ್ಥವಾಗಿ ಈ ಬಸ್ಗಳ ಸಂಚಾರವನ್ನು ನಡೆಸಲಿದೆ. ಇಂಡಿಯಾ ಗೇಟ್ ನಲ್ಲಿ ಮೊದಲ ಎರಡು ಫ್ಯೂಯಲ್ ಸೆಲ್ ಬಸ್ಗಳಿಗೆ ಚಾಲನೆ ಸಿಗಲಿದೆ.
ಈ ಯೋಜನೆಯು ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಫ್ಯೂಯಲ್ ಸೆಲ್ ಬಸ್ ಕಾರ್ಯಾಚರಣೆಗಾಗಿ 350 ಬಾರ್ ಒತ್ತಡದಲ್ಲಿ ಗ್ರೀನ್ ಹೈಡ್ರೋಜನ್ ಒದಗಿಸುವ ಭಾರತದ ಮೊದಲ ಯೋಜನೆಯಾಗಿದೆ. ಇಂಡಿಯನ್ ಆಯಿಲ್ ಫರಿದಾಬಾದ್ನಲ್ಲಿರುವ ತನ್ನ ಆರ್ &ಡಿ ಕ್ಯಾಂಪಸ್ನಲ್ಲಿ ಇಂಧನ ತುಂಬಿಸುವ ಸೌಲಭ್ಯವನ್ನು ಸ್ಥಾಪಿಸಿದೆ, ಇದು ಸೌರ ಪಿವಿ ಫಲಕಗಳನ್ನು ಬಳಸಿಕೊಂಡು ವಿದ್ಯುದ್ವಿಭಜನೆಯ ಮೂಲಕ ಉತ್ಪಾದಿಸಿದ ಹಸಿರು ಹೈಡ್ರೋಜನ್ ಅನ್ನು ತುಂಬಿಸಲಿದೆ.
ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಉತ್ಪಾದಿಸುವ ಹಸಿರು ಹೈಡ್ರೋಜನ್ ಅನ್ನು ಕಡಿಮೆ ಇಂಗಾಲದ ಇಂಧನ ಮತ್ತು ಆಮದು ಮಾಡಲಾಗುವ ಪೆಟ್ರೋಲಿಯಂ ಇಂಧನಗಳಿಗೆ ಪರ್ಯಾಯವೆಂದು ಹೇಳಲಾಗಿದೆ . ಇದು ಭಾರತದ ಹೇರಳವಾದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ. ಪೆಟ್ರೋಲಿಯಂ ಸಂಸ್ಕರಣೆ, ರಸಗೊಬ್ಬರ ಉತ್ಪಾದನೆ ಮತ್ತು ಉಕ್ಕು ಉತ್ಪಾದನೆಯಂತಹ ಕ್ಷೇತ್ರಗಳಿಗೂ ಪೂರಕವಾಗಿದೆ.
ಇದನ್ನೂ ಓದಿ : Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
ಸಂಭಾವ್ಯ ಇಂಧನ, ಶೂನ್ಯ ಮಾಲಿನ್ಯ
ಇ-ಮೊಬಿಲಿಟಿ ಕ್ಷೇತ್ರದಲ್ಲಿ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನವು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಹೈಡ್ರೋಜನ್ ಕೋಶಗಳನ್ನು ಇಂಧನವಾಗಿ ಪರಿವರ್ತಿಸುವ ತಾಂತ್ರಿಕತೆ ಇದಾಗಿದೆ. ಇಂಧನ ಕೋಶಗಳಲ್ಲಿನ ಎಲೆಕ್ಟ್ರೋ-ರಾಸಾಯನಿಕ ಪ್ರಕ್ರಿಯೆಯು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕರೆಂಟ್ ಮೂಲಕ ಬಸ್ಗಳಲ್ಲಿ ಅಳವಡಿಸಿರುವ ಬ್ಯಾಟರಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಅದರ ಮೂಲಕ ಬಸ್ನ ಮೋಟಾರ್ಗೆ ಚಾಲನೆ ನೀಡಲಾಗುತ್ತದೆ.
ಬ್ಯಾಟರಿ ಚಾಲಿತ ವಾಹನಗಳಿಗೆ ಹೋಲಿಸಿದರೆ ಫ್ಯೂಯಲ್ ಸೆಲ್ ವಾಹನಗಳು ಕಡಿಮೆ ಸಮಯದಲ್ಲಿ ಇಂಧನ ತುಂಬಿಸುವ ಅನುಕೂಲಗಳನ್ನು ಹೊಂದಿವೆ. ಹೈಡ್ರೋಜನ್ ಅನಿಲವನ್ನು ಹೆಚ್ಚಿನ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ 350 ಬಾರ್ನಲ್ಲಿ ಇರುತ್ತದೆ. ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್ ಮಾಡಲೆಂದು ದೀರ್ಘ ಕಾಲ ನಿಲ್ಲಿಸಬೇಕಾಗುತ್ತದೆ. ಆದರೆ, ಇದರಲ್ಲಿ ಪೆಟ್ರೋಲ್ನಂತೆಯೇ ಹೈಡ್ರೋಜನ್ ತುಂಬಿಸಬಹುದಾಗಿದೆ.
ಈ ಮೊದಲ ಎರಡು ಬಸ್ಸುಗಳು ಬಿಡುಗಡೆಯಾದ ನಂತರ, ದೀರ್ಘಕಾಲೀನ ಕಾರ್ಯಕ್ಷಮತೆ ಮತ್ತು ಬಾಳಿಕೆಯನ್ನು ಪರಿಶೀಲಿಸಲು 300,000 ಕಿಲೋಮೀಟರ್ ಸಂಚಾರ ನಡೆಸಲಿದೆ. ಇದು ಶೂನ್ಯ ಹೊರ ಸೂಸುವಿಕೆಯನ್ನು ಹೊಂದಿದೆ.
ಆಟೋಮೊಬೈಲ್
HSRP Number Plate: ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಪಡೆಯೋದು ಹೇಗೆ? ಅಳವಡಿಸದಿದ್ರೆ ಭಾರಿ ದಂಡ!
HSRP Number Plate: ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ದ್ವಿಚಕ್ರ, ತ್ರಿಚಕ್ರ ಸೇರಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ. ಎಚ್‌ಎಸ್‌ಆರ್‌ಪಿ ಪಡೆಯುವುದು ಹೇಗೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಾಗಿ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಅವಕಾಶವಿದೆ. ಹೀಗಾಗಿ ಗಡುವಿನೊಳಗೆ ವಾಹನ ಮಾಲೀಕರು ಹೊಸ ಮಾದರಿಯ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು, ಇಲ್ಲದಿದ್ದರೆ 500ರಿಂದ 1000 ರೂ. ದಂಡ ಕಟ್ಟಬೇಕಾಗುತ್ತದೆ.
2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು (High Security Registration Plate-ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗಸ್ಟ್ 17ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದೇ ರೀತಿ ಆ.18ರಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.
ಅರ್ಜಿ ಸಲ್ಲಿಕೆಗೆ ನವೆಂಬರ್ 17 ಕೊನೇ ದಿನ
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಯೋಗೇಶ್ ಎ.ಎಂ ಅವರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಏನಿದು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್?
ಎಚ್‌ಎಸ್‌ಆರ್‌ಪಿ ಎಂದರೆ ಅತಿ ಸುರಕ್ಷಿತ ನೋಂದಣಿ ಫಲಕವಾಗಿದೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ಮಾಡಿರುತ್ತಾರೆ. ಈ ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ನಂಬರ್ ಪ್ಲೇಟ್‌ಗಳನ್ನು ಎರಡು ಲಾಕ್ ಪಿನ್‌ಗಳನ್ನು ಬಳಸಿ ಅಳವಡಿಸುತ್ತಾರೆ. ಇದರಿಂದ ಒರಿಜಿನಲ್ ಯಾವುದು, ನಕಲಿ ಯಾವುದು ಎಂದು ಸುಲಭವಾಗಿ ಗುರುತಿಸಬಹುದು.
ಎಚ್ಎಸ್ಆರ್‌ಪಿ ಪಡೆಯುವುದು ಹೇಗೆ?
- ಕರ್ನಾಟಕ ಸಾರಿಕೆ ಇಲಾಖೆ ವೆಬ್‌ಸೈಟ್ ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಎಂ) ವೆಬ್‌ಸೈಟ್ ಭೇಟಿ ನೀಡಿ ಮತ್ತು Book HSRP ಅನ್ನು ಕ್ಲಿಕ್ ಮಾಡಿ.
- ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
- ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
- HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
- HSRP ಶುಲ್ಕವನ್ನು ಅನ್‌ಲೈನ್‌ನಲ್ಲಿ ಪಾವತಿಸಿ, ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
- ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುವುದು.
- ನಿಮ್ಮ ಅನುಕೂಲಕ್ಕೆ ತಕ್ಕಂತಹ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
- ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
- ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ.
ಇದನ್ನೂ ಓದಿ | HSRP Number Plate : ಹಳೆ ವಾಹನಗಳಿಗೂ ಇನ್ನು HSRP ನಂಬರ್ ಪ್ಲೇಟ್ ಕಡ್ಡಾಯ; ನ. 17ರ ನಂತ್ರ ಬೀಳುತ್ತೆ ದಂಡ!
ಪ್ರಮುಖ ಅಂಶಗಳು
- ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್ ಅಥವಾ ಎಸ್‌ಐಎಎಂ ವೆಬ್‌ಸೈಟ್ ಮೂಲಕ HSRP ಅಳವಡಿಕೆಗೆ ಕಾಯ್ದಿರಿಸಿಕೊಳ್ಳಿ.
- ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್ / IND ಮಾರ್ಕ್ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP, ಒಂದೇ ರೀತಿಯ ಪ್ಲೇಟ್‌ಗಳು, ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಅವುಗಳು HSRP ಫಲಕಗಳಾಗಿರುವುದಿಲ್ಲ.
- HSRP ಅಳವಡಿಸದ ಹೊರತು, ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು, ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳಿಗೆ ಅನುಮತಿಸುವುದಿಲ್ಲ.
- ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ HSRP ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿರುವುದಿಲ್ಲ.
- HSRP ಅಳವಡಿಕೆಗೆ ನವೆಂಬರ್ 17 ಆಗಿದ್ದು, ಕೂಡಲೇ ಅರ್ಜಿ ಸಲ್ಲಿಸಿ.
-
ದೇಶ14 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ22 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ15 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ದೇಶ16 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್21 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ22 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್18 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್