Site icon Vistara News

Vinesh Phogat: ವಿನೇಶ್‌ ಫೋಗಟ್‌ ಅನರ್ಹ; ದಿಢೀರ್ 2-3 ಕೆ.ಜಿ ತೂಕ ಇಳಿಸಲು ಮುಂದಾದರೆ ದೇಹಕ್ಕೆ ಏನಾಗುತ್ತದೆ?

Vinesh Phogat

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics) ವಿನೇಶ್‌ ಫೋಗಟ್‌ (Vinesh Phogat) ಅವರಿಗೆ ಮಾತ್ರವಲ್ಲ ಇಡೀ ಭಾರತೀಯರಿಗೆ ಆಘಾತವಾಗಿದೆ. ಕುಸ್ತಿಯಲ್ಲಿ ಫೈನಲ್‌ ತಲುಪಿ ಇತಿಹಾಸ ಸೃಷ್ಟಿಸಿದ್ದ ಅವರು ಇನ್ನೇನು ಚಿನ್ನದ ಪದಕಕ್ಕಾಗಿ ಕಾದಾಡಬೇಕು ಎನ್ನುವರಷ್ಟರಲ್ಲಿಯೇ ದೇಹದ ತೂಕ 100 ಗ್ರಾಂ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಿರುವುದು ಕುಸ್ತಿಪಟುವಿನ ಜತೆಗೆ ಇಡೀ ದೇಶದ ಜನರಿಗೆ ಅಸಮಾಧಾನ ಉಂಟಾಗಿದೆ. ಮತ್ತೊಂದೆಡೆ, 52 ಕೆ.ಜಿ ತೂಕ ಹೊಂದಿದ್ದ ವಿನೇಶ್‌ ಫೋಗಟ್‌ ಅವರು 2 ಕೆ.ಜಿ ತೂಕ ಇಳಿಸಲು ಇಡೀ ರಾತ್ರಿ ವರ್ಕೌಟ್‌ ಮಾಡಿದ್ದು, ನಿರ್ಜಲೀಕರಣದಿಂದಾಗಿ ಬೆಳಗ್ಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ, ರಾತ್ರೋರಾತ್ರಿ ದೇಹದ ತೂಕವನ್ನು 2-3 ಕೆ.ಜಿ ಇಳಿಸಿದರೆ ದೇಹಕ್ಕೆ ಏನಾಗುತ್ತದೆ ಎಂಬುದರ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಜ್ಞರು ಮಾಹಿತಿ ನೀಡಿದ್ದಾರೆ.

ತಜ್ಞರು ಹೇಳುವುದೇನು?

‘ಒಂದೇ ರಾತ್ರಿಯಲ್ಲಿ ದೇಹದ ತೂಕವನ್ನು 2-3 ಕೆ.ಜಿ ಇಳಿಸುವುದು ಸಾಧ್ಯವೇ ಇಲ್ಲ ಅಂತಲ್ಲ. ಆದರೆ, ಹಾಗೆ ಮಾಡುವುದು ತುಂಬ ಅಪಾಯಕಾರಿ’ ಎಂದು ದೆಹಲಿಯ ಮಹಾರಾಜ ಅಗ್ರಸೇನ ಆಸ್ಪತ್ರೆಯ ಔಷಧ ತಜ್ಞ ಡಾ.ಸಂಜಯ್‌ ಗುಪ್ತಾ ತಿಳಿಸಿದ್ದಾರೆ. ಮತ್ತೊಬ್ಬ ಔಷಧ ತಜ್ಞರಾದ ಡಾ.ಮಂಜೀತಾ ನಾಥ್‌ ದಾಸ್‌ ಅವರು ಕೂಡ ಇದನ್ನೇ ಉಚ್ಚರಿಸಿದ್ದು, “ಹಾಗೆ ಮಾಡುವುದು ಪ್ರಾಣಕ್ಕೂ ಅಪಾಯಕಾರಿ” ಎಂದಿದ್ದಾರೆ.

“ನಮ್ಮ ದೇಹದ ತೂಕವು ಮೂಳೆ, ಮಾಂಸ ಹಾಗೂ ಬೊಜ್ಜನ್ನು ಆಧರಿಸಿರುತ್ತದೆ. ಆದರೆ, ನೀರು ಕುಡಿಯದೆ, ಉಪ್ಪು ಸೇವಿಸದೆ, ಕಾರ್ಬ್ಸ್‌ ಹಾಗೂ ಪ್ರೊಟೀನ್‌ಗಳನ್ನು ಮಾತ್ರ ಸೇವಿಸಿ ಇಡೀ ರಾತ್ರಿ ವರ್ಕೌಟ್‌ ಮಾಡಿದರೆ, 2-3 ಕೆ.ಜಿ ತೂಕ ಇಳಿಸಿದರೆ ದೇಹ ತಡೆದುಕೊಳ್ಳುವುದಿಲ್ಲ. ನಿರ್ಜಲೀಕರಣವು ದೇಹವನ್ನು ಬಾಧಿಸುತ್ತದೆ. ಅದರಲ್ಲೂ 29 ವರ್ಷದ ವಿನೇಶ್‌ ಫೋಗಟ್‌ ಅವರು ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದು ಅವರ ದೇಹದ ಮೇಲೆ ಪರಿಣಾಮ ಬೀರಿದೆ” ಎಂದು ಅವರು ತಿಳಿಸಿದ್ದಾರೆ.

ತೂಕ ಕಳೆದುಕೊಳ್ಳುವ ಪ್ರಸ್ತಾಪವೇ ಇಲ್ಲ

“ನೀರನ್ನೂ ಸೇವಿಸದೆ ರಾತ್ರಿಯಿಡೀ ವರ್ಕೌಟ್‌ ಮಾಡಿದರೆ ದೇಹವು ನಿರ್ಜಲೀಕರಣದಿಂದ ಬಸವಳಿದುಹೋಗುತ್ತದೆ. ಹಾಗೆ ಮಾಡಿದವರು ಬೆಳಗ್ಗೆ ಎದ್ದು ತಿರುಗಾಡಲು ಕೂಡ ಆಗುವುದಿಲ್ಲ. ಹೀಗೆ, ರಾತ್ರೋರಾತ್ರಿ ನೀರು ಕುಡಿಯದೆ, ವರ್ಕೌಟ್‌ ಮಾಡಿ, ತೂಕ ಕಳೆದುಕೊಳ್ಳುವಂತೆ ಸಾಮಾನ್ಯ ಜನರಿಗಾಗಲಿ, ಅಥ್ಲೀಟ್‌ಗಳಿಗಾಗಲಿ ವೈದ್ಯಕೀಯವಾಗಿ ಅನುಮತಿ ನೀಡಲು ಸಾಧ್ಯವೇ ಇಲ್ಲ” ಎಂಬುದಾಗಿ ಡಾ.ದಾಸ್‌ ತಿಳಿಸಿದ್ದಾರೆ.

ರಾತ್ರಿಯಿಡೀ ವರ್ಕೌಟ್‌ ಮಾಡುವುದು, ನೀರು ಸೇವಿಸದಿರುವುದರಿಂದ, ಕ್ಯಾಲರಿ ತೆಗೆದುಕೊಳ್ಳದಿರುವುದರಿಂದ ದೇಹದಲ್ಲಿ ಬ್ಲಡ್‌ ಶುಗರ್‌ ಲೆವೆಲ್‌ 70 ಮಿಲಿಗ್ರಾಂಗೆ (ಪ್ರತಿ ಡೆಸಿಲಿಟರ್‌ಗೆ) ಇಳಿಯಲಿದೆ. ದೇಹದ ಶಕ್ತಿಯ ಮೂಲವಾದ ಗ್ಲಿಕೋಜೆನ್‌ ಸಂಗ್ರಹವು ಕುಸಿತವಾಗುತ್ತದೆ. ಇದರಿಂದಾಗಿ ದೇಹವು ನಿಶ್ಯಕ್ತಿಗೊಳ್ಳುತ್ತದೆ ಎಂಬುದಾಗಿ ಡಾ.ಗುಪ್ತಾ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Vinesh Phogat: ವಿನೇಶ್‌ ಫೋಗಟ್‌ ಅನರ್ಹ; ಕ್ರಮ ಕೈಗೊಳ್ಳುವಂತೆ ಒಲಿಂಪಿಕ್ಸ್‌ ಅಸೋಸಿಯೇಷನ್‌ಗೆ ಮೋದಿ ಸೂಚನೆ!

Exit mobile version