Site icon Vistara News

WhatsApp Accounts Ban | 23.9 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್, ಕಾರಣ ಏನು?

WhatsApp Bans Accouts

ನವ ದೆಹಲಿ: ಸೋಷಿಯಲ್ ಮೀಡಿಯಾಗಳಲ್ಲಿ ನಕಲಿ ಸುದ್ದಿ ಮತ್ತು ವದಂತಿಗಳು ಹರಡುವುದನ್ನು ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವು ಕಠಿಣವಾಗಿರುವ ಮಾಹಿತಿ ತಂತ್ರಜ್ಞಾನ(ಐಟಿ) ಕಾಯಿದೆಯನ್ನು ಜಾರಿಗೆ ತಂದಿರುವುದು ಗೊತ್ತಿರುವ ಸಂಗತಿ. ಈ ಕಾಯಿದೆಯ ಅನ್ವಯ ಸೋಷಿಯಲ್ ಮೀಡಿಯಾಗಳು, ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತಿ ತಿಂಗಳು ವರದಿಯನ್ನು ಬಿಡುಗಡೆ ಮಾಡಬೇಕಾಗುತ್ತದೆ. ಅದರಂತೆ, ವಾಟ್ಸ್ಆ್ಯಪ್ ಜುಲೈ ತಿಂಗಳ ವರದಿಯನ್ನು ಬಿಡುಗಡೆ ಮಾಡಿದ್ದು, 23.9 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಲಾಗಿದೆ!. ಪ್ರಸಕ್ತ ಸಾಲಿನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ವಾಟ್ಸ್ಆ್ಯಪ್ ಖಾತೆ(WhatsApp Accounts Ban)ಗಳ್ನು ಬ್ಯಾನ್ ಮಾಡಿದ್ದು ಇದೇ ಮೊದಲು!

ಬಳಕೆದಾರರ ಮನವಿಗಳನ್ನು ಆಲಿಸಿ, ಬಗೆಹರಿಸುವ ಸಂಬಂಧ ಸಮಿತಿಗಳನ್ನು ರಚಿಸುವುದಕ್ಕಾಗಿ ಕರಡನ್ನು ಜೂನ್ ತಿಂಗಳಿನಲ್ಲಿಯೇ ಕಳುಹಿಸಲಾಗಿತ್ತು. ಅದರಂತೆ, ಯಾವುದೇ ಸುದ್ದಿಯ, ಪೋಸ್ಟ್ ಮೂಲವನ್ನು ಬಹಿರಂಗಪಡಿಸುವಂತೆ ಕೋರ್ಟ್ ಕೇಳಿಕೊಂಡರೆ ಅಂಥ ಮಾಹಿತಿಯನ್ನು ಸೋಷಿಯಲ್ ಮೀಡಿಯಾ ವೇದಿಕೆಗಳು ಬಿಟ್ಟು ಕೊಡಬೇಕಾಗುತ್ತದೆ.

ವಾಟ್ಸ್ಆ್ಯಪ್ ಈಗ ಬ್ಯಾನ್ ಮಾಡಿರುವ 23.9 ಲಕ್ಷ ಖಾತೆಗಳ ಪೈಕಿ 14.2 ಲಕ್ಷ ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ. ವಾಟ್ಸ್ಆ್ಯಪ್‌ನ ದೂರು ನಿವಾರಣಾ ಸಮಿತಿಯ ಮೂಲಕ ಬಂದ ಮನವಿಗಳ ಆಧಾರದ ಮೇಲೆ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಹಾಗೆಯೇ, ನಿಯಮ ಬಾಹಿರವಾಗಿರುವ ಖಾತೆಗಳನ್ನು ಗುರುತಿಸಲು ಟೂಲ್ಸ್ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ. ಜುಲೈ ತಿಂಗಳಲ್ಲಿ ವಾಟ್ಸ್ಆ್ಯಪ್ 574 ಕುಂದುಕೊರತೆಯ ವರದಿಗಳನ್ನು ಸ್ವೀಕರಿಸಿದೆ.

ಸೋಷಿಯಲ್ ಮೀಡಿಯಾಗಳ ಪೈಕಿ ವಾಟ್ಸ್ಆ್ಯಪ್‌ನಿಂದಲೇ ಅತಿ ಹೆಚ್ಚು ಫೇಕ್ ನ್ಯೂಸ್ ಮತ್ತು ದ್ವೇಷ ಭಾಷಣ ಹರಡಲು ಕಾರಣವಾಗುತ್ತಿದೆ ಎಂಬ ಟೀಕೆ ಮೊದಲಿನಿಂದಲೂ ಇದೆ. ಇಡೀ ಜಗತ್ತಿನಾದ್ಯಂತ ಈ ವಾಟ್ಸ್ಆ್ಯಪ್ ವಿರುದ್ಧ ಈ ಆರೋಪವಿದೆ. ಜೂನ್ ತಿಂಗಳಲ್ಲಿ 22.1 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಲಾಗಿತ್ತು.

ಮೆಟಾ ಒಡೆತನದ ವಾಟ್ಸ್ಆ್ಯಪ್ ಜಗತ್ತಿನ ಬಹುಬಳಕೆಯ ಮೆಸೆಜಿಂಗ್ ಆ್ಯಪ್ ಆಗಿದೆ. ಭಾರತದಲ್ಲಿ ಸುಮಾರು 49 ಕೋಟಿ ವಾಟ್ಸ್ಆ್ಯಪ್ ಬಳಕೆದಾರರಿದ್ದಾರೆ. ಅಂದರೆ, ಇಡೀ ಜಗತ್ತಿನಲ್ಲೇ ವಾಟ್ಸ್ಆ್ಯಪ್ ಬಳಕೆದಾರರ ಪೈಕಿ ಭಾರತವೇ ಮುಂದಿದೆ. ನಂತರದ ಸ್ಥಾನವು ಬ್ರೆಜಿಲ್‌ಗಿದೆ. ಹಾಗಾಗಿ, ವಾಟ್ಸ್ಆ್ಯಪ್ ತಾಣವನ್ನು ಸಕಾರಾತ್ಮಕವಾಗಿ ಬಳಕೆಗೆ ಅನುವಾಗುವಂತೆ ನೋಡಿಕೊಳ್ಳುವುದು ಅಗತ್ಯ. ಈ ನೆಲೆಯಲ್ಲಿ ಪ್ರತಿ ತಿಂಗಳು ವಾಟ್ಸ್ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡುತ್ತದೆ.

ಇದನ್ನೂ ಓದಿ | WhatsAppನಲ್ಲಿ ಹೊಸ ಫೀಚರ್‌:‌ ಸ್ಟೇಟಸ್‌, ಫೋಟೊ ಬೇಕಾದವರು ಮಾತ್ರ ನೋಡುವಂತೆ ಮಾಡಬಹುದು!

Exit mobile version