Site icon Vistara News

ತಂತ್ರಜ್ಞಾನ: ಕಾರು ಖರೀದಿಗೆ ಪರಿಗಣಿಸುವ 3 ಹೊಸ ಅಂಶಗಳು ನಿಮಗೆ ಗೊತ್ತೆ?

ನಾನೊಂದು ಕಾರು ಖರೀದಿಸಿದೆ ಎಂದು ಹೇಳಿದರೆ, “ಎಷ್ಟು ಮೈಲೇಜ್‌ ಕೊಡುತ್ತೆ?” ಎಂದು ಕೇಳುವ ಪರಿಪಾಠ ಭಾರತದಲ್ಲಿ ಕೆಲ ವರ್ಷಗಳ ಹಿಂದೆ ಇತ್ತು. ಹಳೆಯ ಅಭ್ಯಾಸದ ಮೇಲೆ ಈಗಲೂ ಕೆಲವರು ಈ ಪ್ರಶ್ನೆ ಕೇಳುತ್ತಾರಾದರೂ ತಂತ್ರಜ್ಞಾನದ ಬೆಳವಣಿಗೆ ಕಾರಣಕ್ಕೆ ಈ ಮನಃಸ್ಥಿತಿ ಸಂಪೂರ್ಣ ಬದಲಾಗಿದೆ. ಕಾರು ಎಂದರೆ ಕೇವಲ ಮೈಲೇಜ್‌ ಅಲ್ಲ, ಅದನ್ನೂ ಮೀರಿದ ಮತ್ತೂ ಅನೇಕ ವಿಚಾರಗಳು ಈಗ ಹೊರಹೊಮ್ಮಿವೆ.

ಎಷ್ಟು ಕೊಟ್ರಿ? ಎಂದು ಕೇಳುತ್ತಿದ್ದ ಕಾಲ

ಕಾರು ಖರೀದಿಸಲು ಭಾರತದಲ್ಲಿ ವಿಶೇಷವಾಗಿ ಪರಿಗಣನೆ ಆಗುತ್ತಿದ್ದದ್ದು ಎರಡು ಅಂಶ. ಮೊದಲನೆಯದು ಮೈಲೇಜ್‌ ಆದರೆ ಅದರ ಜತೆಗೇ ಏಳುತ್ತಿದ್ದ ಇನ್ನೊಂದು ಪ್ರಶ್ನೆ, ಕಾರಿನ ದರ. ಕಾರಿನ ದರ ಒಂದು ಬಾರಿ ಖರ್ಚಾಗುವಂಥದ್ದು. ಒಂದು ಬಾರಿಗೆ ನನ್ನ ಜೇಬಿನಲ್ಲಿ ಎಷ್ಟು ಹಣ ಇರಬೇಕು, ಎಷ್ಟು ಸಾಲ ಮಾಡಬೇಕು ಎಂದು ಆಲೋಚಿಸಲು ಇದು ಸಹಾಯವಾಗುತ್ತಿತ್ತು. ಕಾರು ಎಂದರೆ ಅತ್ಯಂತ ಶ್ರೀಮಂತರು ಮಾತ್ರವೇ ಖರೀದಿಸಬಹುದು ಎಂಬಂತಿತ್ತು. ಆದರೆ ಮಾರುತಿ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟ ಕೂಡಲೆ ಈದು ಸಂಪೂರ್ಣ ಬದಲಾಯಿತು. ಮಧ್ಯಮ ವರ್ಗದ ಜನರೂ ಕಾರನ್ನು ಖರೀದಿಸಬಹುದು ಎಂದಾಯಿತು. ಇದೇ ಕಾರಣಕ್ಕೆ ಭಾರತದಲ್ಲಿ ಕಾರು ಉತ್ಪಾದನೆ ಕಂಪನಿಗಳು ಉತ್ಪನ್ನದ ದರ ಕಡಿಮೆ ಮಾಡಲು ಅನೇಕ ಸರ್ಕಸ್‌ ಮಾಡುತ್ತಿದ್ದವು. ಅನೇಕ ಬಾರಿ ಗುಣಮಟ್ಟದಲ್ಲಿ, ಸುರಕ್ಷತಾ ಸೌಲಭ್ಯಗಳಲ್ಲಿಯೂ ರಾಜಿ ಮಾಡಿಕೊಳ್ಳುತ್ತಿದ್ದವು. ಭಾರತೀಯರಿಗೆ ಒಟ್ಟು ಕಾರು ಬಂದರೆ ಸಾಕಿತ್ತು, ಅದಕ್ಕೆ ತಕ್ಕಂತೆ ಕಂಪನಿಗಳು ಕಾಸಗೆ ತಕ್ಕ ಕಜ್ಜಾಯ ನೀಡುತ್ತಿದ್ದವು.

  1. ಇನ್ಫೋಟೈನ್ಮೆಂಟ್‌: ಕಾರು ಎಂದರೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸಂಚರಿಸಲು ಖರೀದಿಸುವ ಒಂದು ಯಾತ್ರಿಕ ಉಪಕರಣ ಎನ್ನುವಂತಿತ್ತು. ಕ್ಯಾಸೆಟ್‌ ಹಾಡು ಕೇಳಲು ಒಂದು ಪ್ಲೇಯರ್‌ ಇರುತ್ತಿತ್ತು. ನಂತರ ಈ ಸ್ಥಾನಕ್ಕೆ ಸಿಡಿ, ಡಿವಿಡಿ, ಪೆನ್‌ ಡ್ರೈವ್‌, ಎಫ್‌ಎಂಗಳೂ ಸೇರಿಕೊಂಡವು. ಆದರೆ ಇತ್ತೀಚಿನ ದಿನಗಗಳಲ್ಲಿ ಗ್ರಾಹಕರು ಗುಣಮಟ್ಟದ ಕುರಿತು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಡಾಲ್ಬಿ, ಹರ್ಮನ್‌ನಂತಹ ಬ್ರ್ಯಾಂಡೆಡ್‌ ಕಂಪನಿಗಳ ಉಪಕರಣ, ಸೌಲಭ್ಯಗಳ ಮೂಲಕವೇ ಸಂಗೀತವನ್ನು ಕೇಳಬೇಕು ಎಂಬ ಮನಃಸ್ಥಿತಿ ಹೆಚ್ಚುತ್ತಿದೆ. ಜತೆಗೆ ವಿಡಿಯೋ ನೋಡುವಿಕೆಯಲ್ಲೂ ಎಚ್‌ಡಿ ಸೌಲಭ್ಯವನ್ನು ಕೇಳುತ್ತಿದ್ದಾರೆ. ಅದರ ಜತೆಗೆ, ಬಟನ್‌ಗಳ ಬದಲಿಗೆಟಚ್‌ಸ್ಕ್ರೀನ್‌ ಬೇಡಿಕೆ ಹೆಚ್ಚಾಗುತ್ತಿದೆ.
  2. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌: ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ, ಯುದ್ಧೋಪಕರಣಗಳ ಕ್ಷೇತ್ರಗಳಲ್ಲಿ ಕೇಳಿಬರುತ್ತಿದ್ದ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌(ಕೃತಕ ಬುದ್ಧಿಮತ್ತೆ) ಆಟೊಮೊಬೈಲ್‌ ಕ್ಷೇತ್ರಕ್ಕೂ ಕಾಲಿಟ್ಟಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲಾಗುತ್ತಿದೆ. ಕಾರಿನ ಹಿಂಬದಿ ಕ್ಯಾಮೆರಾದಲ್ಲಿ ವಿಡಿಯೋ ಮಾತ್ರ ಕಾಣಿಸುತ್ತಿತ್ತು. ಈಗ ಆ ಕ್ಯಾಮೆರಾವನ್ನು ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಜತೆಗೆ ಸೇರಿಸಲಾಗಿದ್ದು, ಹಿಂಬದಿಯಲ್ಲಿರುವ ವಸ್ತು ಅಥವಾ ವ್ಯಕ್ತಿ ಎಷ್ಟು ದೂರದಲ್ಲಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಎಸಿ ಆನ್‌ ಮಾಡುವುದು, ಹಾಡನ್ನು ಬದಲಾಯಿಸುವುದು, ದೂರವಾಣಿ ಕರೆ ಸ್ವೀಕರಿಸುವಂತಹ ಕೆಲಸಕ್ಕೆ ವಾಯ್ಸ್‌ ಕಮಾಂಡಿಂಗ್‌ ಸೌಲಭ್ಯ ಇದೀಗ ಜನಪ್ರಿಯವಾಗುತ್ತಿದೆ.
  3. ಅಡಾಸ್‌ ಜನಪ್ರಿಯತೆ: ಕಾರನ್ನು ಚಲಾಯಿಸುವಾಗ ಪ್ರಯಾಣಿಕರ ಹಾಗೂ ಚಾಲಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಅನೇಕ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದೆ. ಅದರಲ್ಲಿ ಆಧುನಿಕ ಚಾಲಕ ಸಹಾಯಕ ವ್ಯವಸ್ಥೆಯೂ(ಎಡಿಎಎಸ್‌-ಅಡಾಸ್‌) ಸಹ ಒಂದು. ಕಾರು ಚಲಾಯಿಸುವಾಗ ಅಪಘಾತಗಳನ್ನು ತಪ್ಪಿಸಲು ಅನೇಕ ವ್ಯವಸ್ಥೆಗಳನ್ನು ಸೇರಿಸಲಾಗುತ್ತಿದೆ. ಅಕ್ಕಪಕ್ಕದಲ್ಲಿ ಚಲಿಸುತ್ತಿರುವ ಕಾರುಗಳಿಂದ ಸುರಕ್ಷಿತ ದೂರ ಕಾಪಾಡಿಕೊಳ್ಳುವುದರಿಂದ ಮೊದಲುಗೊಂಡು, ಚಾಲಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಚಾಲಕರು ಸುಲಭವಾಗಿ ಕುಳಿತು ಡ್ರೈವ್‌ ಮಾಡಲು ಅಗತ್ಯ ಸ್ಥಳಾವಕಾಶ, ಉತ್ತಮ ಆಸನಗಳು, ಸ್ಟೀರಿಂಗ್‌ ನಿಯಂತ್ರಣದಲ್ಲಿ ಗುಣಮಟ್ಟ ಹೆಚ್ಚಳ ಮಾಡಲಾಗುತ್ತಿದೆ.

ಇಂತಹ ಅನೇಕ ತಂತ್ರಜ್ಞಾನಾಧಾರಿತ ವ್ಯವಸ್ಥೆಗಳು ಆಟೋಮೊಬೈಲ್‌ ಕ್ಷೇತ್ರವನ್ನು ಸಂಪೂರ್ಣ ಬದಲಾಯಿಸಿವೆ. ನಿಮ್ಮ ಕಾರಿಗೆ ಬೆಲೆ ಎಷ್ಟು? ಎಷ್ಟು ಮೈಲೇಜ್‌ ಕೊಡುತ್ತದೆ? ಎನ್ನುವುದಕ್ಕಿಂತಲೂ ಮುಖ್ಯವಾಗಿ ನಿಮ್ಮ ಕಾರಿನಲ್ಲಿ ಹರ್ಮನ್‌ ಕಂಪನಿಯ ಮ್ಯೂಸಿಕ್‌ ಸಿಸ್ಟಂ ಇದೆಯ? ಏರ್‌ಬ್ಯಾಗ್ಸ್‌ ಇದೆಯ? ಟ್ಯೂಬ್‌ಲೆಸ್‌ ಟೈರ್‌ ಇದೆಯ? ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಬಳಕೆ ಮಾಡಿದ್ದಾರ ಎಂದು ಕೇಳುವ ಪ್ರವೃತ್ತಿ ಹೆಚ್ಚಾಗುತ್ತಿದೆ.

Exit mobile version