ಹೊಸದಿಲ್ಲಿ: ಡಿಜಿಟಲ್ ಸುದ್ದಿ ವೇದಿಕೆಗಳು (Digital News) ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ (Social media) ಸರ್ಕಾರಿ ಜಾಹೀರಾತು ಪ್ರಕಟಿಸಲು ಅವಕಾಶ ಕಲ್ಪಿಸುವ ಜಾಹೀರಾತು ನೀತಿಯನ್ನು (digital advertisement policy) ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ಬಿಡುಗಡೆ ಮಾಡಿದ 2023ರ ಡಿಜಿಟಲ್ ಜಾಹೀರಾತು ನೀತಿಯು, ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು, ಡಿಜಿಟಲ್ ಆಡಿಯೊ ಪ್ಲಾಟ್‌ಫಾರ್ಮ್‌ಗಳು, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಸಬಲೀಕರಿಸುವ ನೀತಿಯನ್ನು ಹೊಂದಿದೆ. ಇವರು ಇನ್ನು ಮುಂದೆ ಸರ್ಕಾರಿ ಜಾಹೀರಾತುಗಳನ್ನು ಪ್ರದರ್ಶಿಸಬಹುದು. ಪ್ರತಿ ತಿಂಗಳು ಕನಿಷ್ಠ 2.5 ಲಕ್ಷ ಬಳಕೆದಾರರನ್ನು ಹೊಂದಿದ ವೆಬ್ಸೈಟ್‌ಗಳು, ಒಟಿಟಿ ಹಾಗೂ ಪಾಡ್‌ಕಾಸ್ಟ್‌ಗಳ ರೀತಿಯ ಡಿಜಿಟಲ್ ವೇದಿಕೆಗಳಲ್ಲಿ ಸರ್ಕಾರಿ ಜಾಹೀರಾತು ನೀಡಲು ಅವಕಾಶ ಕಲ್ಪಿಸುವ ಡಿಜಿಟಲ್ ಜಾಹೀರಾತು ನೀತಿಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ವತಿಯಿಂದ ರೂಪಿಸಲಾಗಿದೆ.
ಡಿಜಿಟಲ್ ಮಾಧ್ಯಮಗಳಲ್ಲಿಯೂ ಪ್ರಚಾರ ನಡೆಸಲು ಕೇಂದ್ರೀಯ ಸಂವಹನ ಬ್ಯುರೋಗೆ(CBC) ಈ ನೀತಿ ಅಧಿಕಾರ ನೀಡುತ್ತದೆ. ವೆಬ್ಸೈಟ್‌ಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆ ಸರಳಗೊಳಿಸುವವುದರೊಂದಿಗೆ ಮೊಬೈಲ್ ಆಪ್‌ಗಳ ಮೂಲಕ ಸಾರ್ವಜನಿಕ ಸೇವಾ ಅಭಿಯಾನಗಳ ಸಂದೇಶಗಳನ್ನು ಪ್ರಸಾರ ಮಾಡಲು ಇದರಿಂದ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ. ಐದು ವರ್ಷಗಳವರೆಗೆ ಮಾನ್ಯವಾಗಿರುವ ಈ ನೀತಿಯು, ವೆಬ್‌ಸೈಟ್‌ಗಳಲ್ಲಿ ಕೇಂದ್ರ ಸರ್ಕಾರದ ಜಾಹೀರಾತುಗಳಿಗೆ ಎಂಪನೆಲ್‌ಮೆಂಟ್ ಮತ್ತು ದರ ನಿಗದಿಗಾಗಿ 2016ರ ನೀತಿ ಮಾರ್ಗಸೂಚಿಗಳನ್ನು ಬದಲಾಯಿಸುತ್ತದೆ. 2016ರ ನೀತಿಯನ್ನು ಹಿಂದಿನ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ (DAVP) ಬಿಡುಗಡೆ ಮಾಡಿದೆ.
“ಸರ್ಕಾರವು ಈಗ ಸಾರ್ವಜನಿಕ ಸೇವಾ ಸಂದೇಶಗಳನ್ನು ಜನರು ತಮ್ಮ ಗಮನವನ್ನು ಹೆಚ್ಚು ಇಟ್ಟಿರುವ ವೇದಿಕೆಗಳಿಗೆ ಕೊಂಡೊಯ್ಯಬೇಕಿದೆ. ಪ್ರಸ್ತುತ, CBC ಅಡಿಯಲ್ಲಿ, ಎಲ್ಲಾ ಜಾಹೀರಾತುಗಳಲ್ಲಿ 1% ಮಾತ್ರ ಡಿಜಿಟಲ್ ಆಗಿದೆ. ಇಲ್ಲಿಯವರೆಗೆ ಡಿಜಿಟಲ್ ಜಾಹೀರಾತಿನಲ್ಲಿ, ನಾವು ಸುದ್ದಿ ವಾಹಿನಿಗಳು ಮತ್ತು ಅವರ ವೆಬ್‌ಸೈಟ್‌ಗಳಲ್ಲಿ ಮಾತ್ರ ಜಾಹೀರಾತು ನೀಡುತ್ತಿದ್ದೆವು. ಈಗ ಸಾರ್ವಜನಿಕರು ಏನನ್ನು ಹೆಚ್ಚು ನೋಡುತ್ತಾರೋ ಅದರ ಮೇಲೆ ಜಾಹೀರಾತು ನೀಡಲು ನಾವು ಪ್ರಜ್ಞಾಪೂರ್ವಕ ನಿರ್ಧಾರವನ್ನು ಮಾಡಿದ್ದೇವೆʼʼ ಎಂದು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದಾರೆ.
2020ರ ಮುದ್ರಣ ಮಾಧ್ಯಮ ಜಾಹೀರಾತು ನೀತಿಯ ಅಡಿಯಲ್ಲಿ, ಪತ್ರಿಕೆಗಳ ವೆಬ್‌ಸೈಟ್‌ಗಳು ಒಳಗೊಂಡಿರುವುದಿಲ್ಲ. ಹೊಸ ನೀತಿಯ ಮೂಲಕ, ಸುದ್ದಿ ವೆಬ್‌ಸೈಟ್‌ಗಳು ಮತ್ತು ಅವುಗಳ ಅಪ್ಲಿಕೇಶನ್‌ಗಳು ಜಾಹೀರಾತನ್ನು ಪಡೆಯಬಹುದು. ಇದರಲ್ಲಿ ಮುದ್ರಣ ಆವೃತ್ತಿಗಳ ಇ-ಪೇಪರ್‌ಗಳು ಸೇರಿಲ್ಲ.
ಹೊಸ ನೀತಿ ಅನ್ವಯ ಜಾಹೀರಾತು ದರಕ್ಕೆ ಸ್ಪರ್ಧಾತ್ಮಕ ಬಿಡ್ಡಿಂಗ್ ವ್ಯವಸ್ಥೆ ಪರಿಚಯಿಸಲಾಗಿದೆ. ಇದು ಪಾರದರ್ಶಕತೆಯನ್ನು ಖಾತರಿಪಡಿಸುತ್ತದೆ. ದರಗಳು ಮೂರು ವರ್ಷಕ್ಕೆ ಸಿಂಧುವಾಗಿರಲಿವೆ. ಎಲ್ಲಾ ಅರ್ಹ ಏಜೆನ್ಸಿಗಳಿಗೆ ಅನ್ವಯವಾಗುತ್ತವೆ. ಕೇಂದ್ರೀಯ ಸಂವಹನ ಬ್ಯುರೋ ಪಟ್ಟಿಗೆ ಸೇರಲು ವೆಬ್ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. 20 ದಶಲಕ್ಷಕ್ಕೂ ಅಧಿಕ ಬಳಕೆದಾರರು -ಎ ಪ್ಲಸ್, 10 ರಿಂದ 20 ದಶಲಕ್ಷ ಬಳಕೆದಾರರು -ಎ, 5ರಿಂದ 10 ದಶಲಕ್ಷ ಬಳಕೆದಾರರು -ಬಿ, 0.25ರಿಂದ 5 ದಶಲಕ್ಷ ಬಳಕೆದಾರರು -ಸಿ ಎಂದು ಪರಿಗಣಿಸಲಾಗುವುದು.
ಭಾರತದಲ್ಲಿ 880 ದಶಲಕ್ಷಕಿಂತ ಅಧಿಕ ಇಂಟರ್ನೆಟ್ ಸಂಪರ್ಕವಿದೆ. 172 ದಶಲಕ್ಷಕ್ಕೂ ಹೆಚ್ಚು ಟೆಲಿಕಾಂ ಚಂದಾದಾರರಿದ್ದಾರೆ. ಪ್ರಸ್ತುತ ಸಾಮಾಜಿಕ ಮಾಧ್ಯಮ ವೇದಿಕೆಗಳು ಸಾರ್ವಜನಿಕ ಸಂವಹನಕ್ಕೆ ಜನಪ್ರಿಯ ಮಾರ್ಗಗಳಾಗಿವೆ. ವಿವಿಧ ವೇದಿಕೆಗಳ ಮೂಲಕ ಹೆಚ್ಚು ಜನರನ್ನು ತಲುಪುವಂತಾಗಲು ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಜಾಹೀರಾತು ನೀಡುವ ಪ್ರಕ್ರಿಯೆಯನ್ನು ಈ ನೀತಿ ಸರಳಗೊಳಿಸಿದೆ. ಡಿಜಿಟಲ್ ಮಾಧ್ಯಮ ಏಜೆನ್ಸಿಗಳನ್ನು ಪಟ್ಟಿಗೆ ಸೇರಿಸಲು ಈ ನೀತಿಯಿಂದ ಸಿಬಿಸಿಗೆ ಅಧಿಕಾರ ನೀಡುತ್ತದೆ.
ಇದನ್ನೂ ಓದಿ: Deep Fake: ಡೀಪ್ ಫೇಕ್ ಎನ್ನುವ ಡಿಜಿಟಲ್ ಭಯೋತ್ಪಾದನೆ ಎದುರಿಸಲು ಸಜ್ಜಾಗಿ!