ಭಾರತದ ಕ್ಲಾಸ್ಸಿಕ್ ಕಾರು ಅಂಬಾಸಡರ್ ಈಗ ಹೊಸ ರೂಪದಲ್ಲಿ ವಿನ್ಯಾಸಗೊಂಡು ಮತ್ತೊಮ್ಮೆ ಮಾರುಕಟ್ಟೆಗೆ ಬರಲಿದೆ. 2014ರಲ್ಲಿ ಈ ಕಾರಿನ ಉತ್ಪಾದನೆ ನಿಲ್ಲಿಸಲಾಗಿತ್ತು. ಮುಂದಿನ ಎರಡು ವರ್ಷಗಳೊಳಗೆ ಅಂಬಾಸಡರ್ 2.0 ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.
ಅಂಬಾಸಡರ್ ಕಾರು ಎಂದಿಗೂ ಜನಪ್ರಿಯ. ದಶಕಗಳಿಂದ ಈ ಕಾರಿನ ಸ್ಟೇಟಸ್‌ಗೆ ಒಂದು ಘನತೆ ಇದೆ. ಈ ಹಿಂದೆ ಅಂಬಾಸಡರ್ ಕಾರು ಹೊಂದಿದವರು ಮಾತ್ರ ಶ್ರೀಮಂತರು ಎಂಬ ಮಾತಿತ್ತು. ಮದುವೆಯಲ್ಲಿ ಗಂಡಿನ ಕಡೆಯವರು ಅಂಬಾಸಡರ್ ಕಾರಿನಲ್ಲೇ ಬರಬೇಕು ಎಂದು ವಧುವಿನ ಕಡೆಯವರು ಆಸೆ ಪಡುತ್ತಿದ್ದರು. ಅದೇ ಕಾರ್‌ನಲ್ಲಿ ವಧುವನ್ನು ಕಳುಹಿಸಿಕೊಡಬೇಕು ಎಂಬುದು ಹೆಣ್ಣಿನ ಮನೆಯವರ ಕನಸಾಗಿತ್ತು. ಅಂಬಾಸಡರ್ ಕಾರಿನ ಘನತೆ ಹೀಗಿತ್ತು.
ಆದರೆ, ಹಿಂದುಸ್ತಾನ್ ಮೋಟಾರ್ಸ್ ಸಂಸ್ಥೆ ಈ ಕಾರನ್ನು 2004ರಲ್ಲಿ ನಿಲ್ಲಿಸಿತು. ಈಗ ಹಿಂದ್ ಮೋಟಾರ್ ಫೈನಾನ್ಶಿಯಲ್ ಕಾರ್ಪೊರೇಷನ್ ಆಫ್ ಇಂಡಿಯಾ ಫ್ರಾನ್ಸ್‌ನ ಕಾರು ಉತ್ಪಾದಕ ಸಂಸ್ಥೆಯಾದ peugeot ಜತೆ ಕೈಜೋಡಿಸಿದೆ. ಈ ಎರಡು ಸಂಸ್ಥೆಗಳ ಪರಿಶ್ರಮದಿಂದ ಹೊಸ ವಿನ್ಯಾಸದಲ್ಲಿ ಅಂಬಾಸಡರ್ 2.0 ಮೂಡಿಬರಲಿದೆ.
ಈ ಬಗ್ಗೆ ಮಾತನಾಡಿದ ಹಿಂದುಸ್ತಾನ್ ಮೋಟಾರ್ಸ್‌ನ ಮುಖ್ಯಸ್ಥ ಉತ್ತಮ್ ಬೋಸ್, ʼಆಂಬಿʼ ಹೊಸ ರೂಪದಲ್ಲಿ ಮೂಡಿಬರಲಿದೆ. ಈ ಕಾರಿನ ಮೆಕ್ಯಾನಿಕಲ್ ಸಿಸ್ಟಮ್ ಹಾಗೂ ಡಿಸೈನ್‌ಗಳು ಹೊಸತಾಗಿರಲಿವೆ. ಈ ಕಾರಿನ ಉತ್ಪಾದನೆ ಚೆನ್ನೈನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಂಬಾಸಡರ್‌ಗಿದೆ ಭವ್ಯ ಇತಿಹಾಸ!
ಹಿಂದುಸ್ತಾನ್ ಮೋಟಾರ್ಸ್‌ನ ಅಂಬಾಸಡರ್ ಕಾರು 1957ರಲ್ಲಿ ಲಾಂಚ್ ಆಗಿತ್ತು. ಮಾರುಕಟ್ಟೆಗೆ ಬಂದ ಕೆಲವೇ ಸಮಯದಲ್ಲಿ ಈ ಕಾರು ಜನಪ್ರಿಯತೆಯ ತುತ್ತ ತುದಿಗೇರಿತು. ಬ್ರಿಟಿಷ್ ಮೊರ‍್ರಿಸ್ ಆಕ್ಸ್‌ಫರ್ಡ್ ಸೀರಿಸ್ 3 ಕಾರಿನ ಮಾದರಿಯಲ್ಲಿ ಈ ಕಾರು ಪ್ರಸಿದ್ಧಿ ಪಡೆಯಿತು. ಇದನ್ನು ಖರೀದಿಸುವುದು ಜನರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ದಶಕಗಳ ಕಾಲ ಇದು ಬೆಸ್ಟ್ ಸೆಲ್ಲರ್ ಕಾರ್ ಎಂದು ಹೆಸರು ಮಾಡಿತ್ತು. 57 ವರ್ಷಗಳವರೆಗೆ ಈ ವಿಭಾಗದಲ್ಲಿ ಆಳ್ವಿಕೆ ನಡೆಸಿದ ಈ ಕಾರಿನ ಉತ್ಪಾದನೆಯನ್ನು 2014ರಲ್ಲಿ ನಿಲ್ಲಿಸಲಾಯಿತು. ಕ್ರಮೇಣ ಈ ಕಾರು ಡಿಮಾಂಡ್ ಕಳೆದುಕೊಂಡಿತು. ಪಶ್ಚಿಮ ಬಂಗಾಳದ ಉತ್ತರಪಾರದ ಹಿಂದುಸ್ತಾನ್ ಮೋಟಾರ್ಸ್‌ನ ಕಾರ್ಖಾನೆಯಿಂದ ಕೊನೆಯ ಕಾರನ್ನು ಸೇಲ್ ಮಾಡುವ ಮೂಲಕ ಕಾರಿನ ಉತ್ಪಾದನೆಯನ್ನು ಅಧಿಕೃತವಾಗಿ ನಿಲ್ಲಿಸಲಾಯಿತು.
ಆದರೆ, 2017ರಲ್ಲಿ ಹಿಂದುಸ್ತಾನ್ ಮೋಟಾರ್ಸ್ ಅಂಬಾಸಡರ್ ಕಾರನ್ನು ಪ್ಯುಗ್ಯೊಟ್ ಸಂಸ್ಥೆಗೆ ಮಾರಾಟ ಮಾಡಿತು. ಪ್ಯುಗ್ಯೊಟ್ ಸಂಸ್ಥೆ 1990ರಲ್ಲಿ ಭಾರತಕ್ಕೆ ಆಗಮಿಸಿದ ಪ್ರಸಿದ್ಧ ಕಾರು ಮೇಕರ್ ಸಂಸ್ಥೆಯಾಗಿದೆ. ಅಂಬಾಸಡರ್ 2.೦ ಹೇಗೆ ಮೂಡಿ ಬರಲಿದೆ ಎಂಬ ಬಗ್ಗೆ ವಾಹನ ಆಸಕ್ತರಲ್ಲಿ ಕುತೂಹಲ ಮೂಡಿಸಿದೆ.