ಬಹು ನಿರೀಕ್ಷೆಯ Apple iPhone 14 ಇಂದು ಲೋಕಾರ್ಪಣೆಯಾಗಲಿದೆ. iPhone 14 ಜತೆಗೆ ಆಪಲ್ ವಾಚ್ ಸರಣಿಯ 8ನೇ ಆವೃತ್ತಿ ಕೂಡ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ಅಮೆರಿಕದ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋ ಎಂಬಲ್ಲಿರುವ ಆಪಲ್ ಪಾರ್ಕ್‌ನಿಂದಲೇ ಆಗಲಿದೆ.
ಅಮೆರಿಕದಲ್ಲಿ ಇಂದು ಮುಂಜಾನೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಭಾರತದಲ್ಲಿ ನಾವು ರಾತ್ರಿ 10.30ಕ್ಕೆ ನೋಡಬಹುದು. ಆಪಲ್‌ನ ಸಿಇಒ ಟಿಮ್ ಕುಕ್ ಐಫೋನ್‌ನ 14ನೇ ಆವೃತ್ತಿಯ ತೆರೆ ಸರಿಸಲಿರುವ ವ್ಯಕ್ತಿ. ಆಪಲ್‌ನ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೂಲಕ ಇದನ್ನು ವೀಕ್ಷಿಸಬಹುದು.
ಏನಿದೆ iPhone 14ನಲ್ಲಿ?
ಕಳೆದ 13 ಆವೃತ್ತಿಗಳ ಬಿಡುಗಡೆಗೆ ಮೊದಲೂ ಆಪಲ್ ತನ್ನ ಹೊಸ ಫೋನ್‌ನ ಫೀಚರ್‌ಗಳ ಬಗೆಗಿನ ರಹಸ್ಯಗಳನ್ನು ಕಾಪಾಡಿಕೊಂಡು ಬಂದಿತ್ತು. ಈ ಸಲವೂ ಕೊನೆ ಕ್ಷಣದವರೆಗೂ ಊಹಾಪೋಹ ಹೊರತುಪಡಿಸಿದರೆ ಕೀ ಫೀಚರ್‌ಗಳನ್ನು ಬಿಟ್ಟುಕೊಟ್ಟಿಲ್ಲ. ಆದರೆ ಈ ಹಿಂದಿನ ಐಫೋನ್ ಮಿನಿ ಮಾರಾಟ ನಿರೀಕ್ಷೆಯಂತೆ ಆಗಿಲ್ಲ. ಹೀಗಾಗಿ ಆಪಲ್ 5.4 ಇಂಚಿನ ಐಫೋನ್ ಮಿನಿಯನ್ನು ಕೈಬಿಡಲಿದೆ. ಮತ್ತು ಈ ವರ್ಷ ದೊಡ್ಡ ಐಫೋನ್‌ಗಳತ್ತ ಗಮನಹರಿಸಲಿದೆ. ಇಂದು ಬಿಡುಗಡೆಯಾಗಲಿರುವ ನಾಲ್ಕು ಆವೃತ್ತಿಗಳೆಂದರೆ, 6.1 ಇಂಚಿನ ಐಫೋನ್ 14, 6.1 ಇಂಚಿನ ಐಫೋನ್ 14 ಪ್ರೊ, 6.7 ಇಂಚಿನ ಐಫೋನ್ 14 (ಮ್ಯಾಕ್ಸ್ ಅಥವಾ ಪ್ಲಸ್) ಮತ್ತು 6.7 ಇಂಚಿನ ಐಫೋನ್ 14 ಪ್ರೊ ಮ್ಯಾಕ್ಸ್.
ಐಫೋನ್ 14 ಸರಣಿಯು ಸುಧಾರಿತ ಕ್ಯಾಮೆರಾಗಳು, ದೊಡ್ಡ ಸೆನ್ಸರ್, ವೇಗವಾದ ಚಾರ್ಜಿಂಗ್ ಮತ್ತು ಸ್ಯಾಟಲೈಟ್ ಕನೆಕ್ಟಿವಿಟಿ ಜತೆ ಬರಲಿದೆ ಎಂದು ಹೇಳಲಾಗಿದೆ.
ಹೊಸ ವಿನ್ಯಾಸ
ಐಫೋನ್ 14 ತನ್ನ ಸ್ಟ್ಯಾಂಡರ್ಡ್ ನಾಚ್ ವಿನ್ಯಾಸದೊಂದಿಗೆ ಮುಂದುವರಿಯುವ ನಿರೀಕ್ಷೆಯಿದೆ. ಪ್ರೊ ಮಾದರಿಯಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಲಾಗಿದೆ. ಡಿಸ್‌ಪ್ಲೇಯಲ್ಲಿ ಕ್ಯಾಮೆರಾಕ್ಕಾಗಿ ವೃತ್ತಾಕಾರದ ಒಂದು ರಂಧ್ರ ಹಾಗೂ ಫೇಸ್ ಐಡಿಗೆ ಗುಳಿಗೆ ಆಕಾರದ ಕಟೌಟ್ ಇರುವ ನಿರೀಕ್ಷೆಯಿದೆ. ಇವೆರಡನ್ನೂ ಆಪಲ್ ಸಾಫ್ಟ್‌ವೇರ್ ಸಂಯೋಜಿಸುತ್ತದೆ. ಹೊಸ ಐಫೋನ್‌ನಲ್ಲಿನ ಕ್ಯಾಮೆರಾ ಉಬ್ಬುಗಳು ದಪ್ಪವಾಗಿರಬಹುದು. ಈ ವರ್ಷ ಹೊಸ ಪರ್ಪಲ್ ಬಣ್ಣದ ಮಾದರಿಯನ್ನು ಸಹ ನಿರೀಕ್ಷಿಸಲಾಗಿದೆ.
ಕ್ಯಾಮೆರಾ ಅಪ್‌ಗ್ರೇಡ್
ಐಫೋನ್ 14 ಕ್ಯಾಮೆರಾಗಳು 48 MP ಸೆನ್ಸರ್‌ನೊಂದಿಗೆ ಬರಲಿದ್ದು, ಪ್ರೊ ಮಾದರಿಯಲ್ಲಿ ಇನ್ನಷ್ಟು ಅಪ್‌ಗ್ರೇಡ್ ಹೊಂದುವ ನಿರೀಕ್ಷೆಯಿದೆ. ಎಲ್ಲಾ ನಾಲ್ಕು ಐಫೋನ್ 14 ಮಾದರಿಗಳು ಆಟೋಫೋಕಸ್ ಶಕ್ತಗೊಂಡ ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿವೆ.
ಇದನ್ನೂ ಓದಿ | iPhone 14 | ಸೆಪ್ಟೆಂಬರ್ 7ಕ್ಕೆ ಐಫೋನ್ 14, ಆ್ಯಪಲ್ ವಾಚ್ ಬಿಡುಗಡೆ
ಹೆಚ್ಚು ಶಕ್ತಿಶಾಲಿ ಪ್ರೊಸೆಸರ್
ಆಪಲ್ ಪ್ರೊ ಮಾದರಿಯಲ್ಲಿ ತನ್ನ ಮುಂದಿನ ತಲೆಮಾರಿನ A16 ಚಿಪ್‌ಸೆಟ್ ಅನ್ನು ಪರಿಚಯಿಸುತ್ತಿದೆ. ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ X65 ಚಿಪ್ ಅನ್ನೂ ಬಳಸಿರಬಹುದೆಂದು ಹೇಳಲಾಗಿದೆ. ಇದು 5ನೇ ತಲೆಮಾರಿನ 10 ಗಿಗಾಬಿಟ್ ಸ್ಪೀಡಿನ ವೇಗವಾದ ಸಂಪರ್ಕ ಹೊಂದಿದ ಸುಧಾರಿತ ಸೆಟ್ ಆಗಿದೆ. ಇದಲ್ಲದೆ ಸ್ಯಾಟಲೈಟ್ ಕನೆಕ್ಟಿವಿಟಿಯನ್ನೂ ಪರಿಚಯಿಸುವ ನಿರೀಕ್ಷೆಯಿದೆ. ಯಾವುದೇ ಸೆಲ್ಯುಲಾರ್ ಕವರೇಜ್ ಇಲ್ಲದ ತುರ್ತು ಸಂದರ್ಭದಲ್ಲಿ ಮೆಸೇಜ್ ಕಳುಹಿಸಲು ಇದು ಅವಕಾಶ ನೀಡುತ್ತದೆ.
ಬ್ಯಾಟರಿ ಅಪ್‌ಗ್ರೇಡ್
ಐಫೋನ್ 14 ಪ್ರೊ ಮಾದರಿಯಲ್ಲಿ ದೊಡ್ಡ ಬ್ಯಾಟರಿಗಳಿರಲಿವೆ ಎಂದು ಹೇಳಲಾಗಿದೆ. iPhone 14ನ ಮೂಲ ಮಾದರಿ 3279 mAh ಬ್ಯಾಟರಿಯೊಂದಿಗೆ ಬರಬಹುದು. iPhone 13 Proನಲ್ಲಿ 3095mAh ಬ್ಯಾಟರಿ ಇದ್ದುದರಿಂದ, iPhone 14 Proನಲ್ಲಿ 3200mAh ಬ್ಯಾಟರಿ ಇರಬಹುದೆಂಬ ನಿರೀಕ್ಷೆಯಿದೆ.
ಬೆಲೆಯೆಷ್ಟು?
ಭಾರತಕ್ಕೆ, ಬೆಂಗಳೂರಿಗೆ ಬಂದಾಗ iPhone 14 Pro Max ಬೆಲೆ ಸುಮಾರು 1,25,525 ರೂ., iPhone 14 Pro ಬೆಲೆ ಸುಮಾರು 1,14,011 ರೂ., iPhone 14 Plus ಬೆಲೆ ಸುಮಾರು 85,000 ಮತ್ತು iPhone 14 ಬೆಲೆ ಸುಮಾರು ರೂ. 77,000 ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ | iPhone 14 | ಭಾರತದಲ್ಲಿ ಐಫೋನ್ 14 ಉತ್ಪಾದನೆ, ಚೀನಾಗೆ ಭಾರೀ ಹಿನ್ನಡೆ!