Site icon Vistara News

Apple Watch | 12 ವರ್ಷದ ಬಾಲಕಿಯ ಕ್ಯಾನ್ಸರ್ ಪತ್ತೆ ಹಚ್ಚಿದ ಆ್ಯಪಲ್ ವಾಚ್!

Apple Watch

ನವ ದೆಹಲಿ: ಆ್ಯಪಲ್ ವಾಚ್ (Apple Watch) ಕೇವಲ ಉತ್ಕೃಷ್ಟ ತಂತ್ರಜ್ಞಾನ ಗ್ಯಾಜೆಟ್ ಮಾತ್ರವಲ್ಲ, ಇದೊಂದು ಜೀವನ ಉಳಿಸುವ ಸಾಧನವಾಗಿಯೂ ಬಳಕೆಯಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ. ತನ್ನ ಹೃದಯಬಡಿತ ವೇಗವಾಗಿ ಬಡಿದುಕೊಳ್ಳುತ್ತಿರುವುದನ್ನು ಆ್ಯಪಲ್ ವಾಚ್ ಮೂಲಕ 12 ವರ್ಷದ ಹುಡುಗಿಯು ಕಂಡುಕೊಂಡಿದ್ದಾಳೆ. ಬಳಿಕ ಆಕೆ ವೈದ್ಯಕೀಯ ಪರೀಕ್ಷೆಯನ್ನು ಕೈಗೊಳ್ಳುತ್ತಿದ್ದಂತೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ! ಅಂದ ಹಾಗೆ ಈ ಬಾಲಕಿ ಆ್ಯಪಲ್ ವಾಚ್ ಎಸ್‌ಇ ಬಳಸುತ್ತಿದ್ದಳು. ಈ ವಾಚ್‌ನಲ್ಲಿ ಹಾರ್ಟ್‌ರೇಟ್ ಮಾನಿಟರಿಂಗ್ ಮಾಡುವ ಸೌಲಭ್ಯವಿದೆ.

ಇಮಾನಿ ಮೈಲ್ಸ್ ಎಂಬ 12 ವರ್ಷದ ಬಾಲಕಿಗೆ ಆ್ಯಪಲ್ ವಾಚ್ ಮೂಲಕವೇ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಈಕೆ ಆ್ಯಪಲ್ ವಾಚ್ ಎಸ್‌ಇ ಬಳಸುತ್ತಿದ್ದಳು. ಕೆಲವು ದಿನಗಳಿಂದ ಹೃದಯವು ಅಸಹಜವಾಗಿ ಬಡಿದುಕೊಳ್ಳುತ್ತಿರುವ ಬಗ್ಗೆ ವಾಚ್ ಅಲರ್ಟ್ ರವಾನಿಸುತ್ತಿತ್ತು. ಇದನ್ನು ಅವರ ತಾಯಿ ಜೆಸ್ಸಿಕಾ ಕಿಚನ್ ಗಮನಿಸಿದ್ದಾರೆ.

ಬಳಿಕ ಜೆಸ್ಸಿಕಾ ಅವರು ತಮ್ಮ ಪುತ್ರಿ ಇಮಾನಿಯನ್ನು ಆಸ್ಪತ್ರೆಗೆ ಕರೆದುಕೊಂಡಿದ್ದಾರೆ. ಅಲ್ಲಿ ಪರೀಕ್ಷೆ ನಡೆಸಿದಾಗ ಅಪೆಂಡಿಕ್ಸ್‌ ತೊಂದರೆ ಇರುವುದು ಗೊತ್ತಾಗಿದೆ. ಆದರೆ, ಈ ಸಮಸ್ಯೆ ಇಲ್ಲಿಗೆ ನಿಂತಿಲ್ಲ. ಅಪೆಂಡಿಕ್ಸ್‌ನಲ್ಲಿ ನ್ಯೂರೋಎಂಡೊಕ್ರೈನ್ ಟ್ಯೂಮರ್ ಇರುವ ಮಾಹಿತಿಯನ್ನು ವೈದ್ಯರು ಬಾಲಕಿಯ ತಾಯಿಗೆ ತಿಳಿಸಿದ್ದಾರೆ. ಇದು ಮಕ್ಕಳಲ್ಲಿ ಕಂಡು ಬರುವ ವಿರಳ ಟ್ಯೂಮರ್. ದೇಹದ ಇತರ ಭಾಗಗಳಿಗೂ ಅದು ವ್ಯಾಪಿಸುತ್ತಿರುವುದರಿಂದ ಕೂಡಲೇ ಚಿಕಿತ್ಸೆ ಮಾಡುವುದು ಅಗತ್ಯ ಎಂದು ಹೇಳಿದ್ದಾರೆ. ವೈದ್ಯಕೀಯ ಚಿಕಿತ್ಸೆ ಬಳಿಕ ಇಮಾನಿ ಈಗ ಆರೋಗ್ಯವಾಗಿದ್ದಾರೆ. ಒಂದು ವೇಳೆ, ಆಪಲ್ ವಾಚ್ ಅಲರ್ಟ್ ನೀಡದೇ ಹೋಗಿದ್ದರೆ ತಮ್ಮ ಪುತ್ರಿ ತೀವ್ರ ತೊಂದರೆಯನ್ನು ಅನುಭವಿಸಬೇಕಾಗುತ್ತಿತ್ತು ಎಂದು ಜೆಸ್ಸಿಕಾ ಹೇಳಿದ್ದಾರೆ.

ಇದನ್ನೂ ಓದಿ | Apple iPhone | ಚಾರ್ಜರ್‌ ಇಲ್ಲದೆ ಐಫೋನ್‌ ಮಾರಾಟಕ್ಕೆ, ಬ್ರೆಜಿಲ್‌ನಲ್ಲಿ ಆ್ಯಪಲ್‌ಗೆ ಬಿತ್ತು 156 ಕೋಟಿ ರೂ. ದಂಡ!

Exit mobile version