ನವ ದೆಹಲಿ: ಕೃತಕ ಬುದ್ದಿಮತ್ತೆ (Artificial Intelligence) ತಂತ್ರಜ್ಞಾನದ ಸ್ಫೋಟಕ ಬೆಳವಣಿಗೆಯ ಪರಿಣಾಮ ಭವಿಷ್ಯದಲ್ಲಿ ಜಗತ್ತು ಸರ್ವನಾಶವಾಗುವ ಅಪಾಯ ಇದೆ ಎಂದು ನೂರಾರು ಎಐ ವಿಜ್ಞಾನಿಗಳು, ಸಂಶೋಧಕರು ಮತ್ತು ಚಿಂತಕರು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಹೀಗೆ ಎಚ್ಚರಿಸಿದವರಲ್ಲಿ ಸ್ವತಃ ಎಐ ವಲಯದಲ್ಲಿ ಮುಂಚೂಣಿಯಲ್ಲಿರುವ ಓಪನ್ ಎಐ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಸ್ಯಾಮ್ ಆಲ್ಟ್‌ಮನ್ ಮತ್ತು ಗೂಗಲ್ ಡೀಪ್ ಮೈಂಡ್ ಕಂಪನಿಯ ಮುಖ್ಯಸ್ಥ ಡೆಮಿಸ್ ಹ್ಯಾಸ್ಸಾಬೀಸ್ ಕೂಡ ಇದ್ದಾರೆ ಎಂಬುದು ವಿಶೇಷ.
ಎಐ ತಂತ್ರಜ್ಞಾನದಿಂದ ಮನುಕುಲದ ಅಳಿವು ಆಗದಂತೆ ತಡೆಯುವುದು ಜಾಗತಿಕ ಮಟ್ಟದ ಆದ್ಯತೆಯಾಗಬೇಕು ಎಂದು ನೂರಾರು ತಜ್ಞರು ಪತ್ರದಲ್ಲಿ ಹೇಳಿಕೆಗೆ ಸಹಿ ಹಾಕುವ ಮೂಲಕ ವಿಶ್ವಸಮುದಾಯವನ್ನು ಎಚ್ಚರಿಸಿದ್ದಾರೆ.
ಒಂದೇ ಸಾಲಿನ ಪತ್ರ!
ವಿಶೇಷ ಏನೆಂದರೆ ಈ ಬಹಿರಂಗ ಪತ್ರದಲ್ಲಿ ಒಂದೇ ವಾಕ್ಯವಿದೆ. ಅದು ಇಂತಿದೆ: ಮನುಕುಲದ ಅಳಿವಿಗೆ ಕಾರಣವಾಗಬಲ್ಲ ಪರಮಾಣು ಯುದ್ಧ ಮತ್ತು ಸಾಂಕ್ರಾಮಿಕ ರೋಗದಂಥ ಮಹಾ ವಿಪತ್ತುಗಳ ಜತೆಗೆ ಎಐನಿಂದ ಉಂಟಾಗಬಹುದಾದ ಅಪಾಯವನ್ನೂ ಪರಿಗಣಿಸಿ, ಅದನ್ನು ಹತ್ತಿಕ್ಕಲು ಜಾಗತಿಕ ಮಟ್ಟದಲ್ಲಿ ಆದ್ಯತೆ ನೀಡಬೇಕು (Mitigating the risk of extinction from AI should be a global priority alongside other societal-scale risks such as pandemics and nuclear war)
ಈ ಪತ್ರಕ್ಕೆ ಎಐ ತಜ್ಞರು, ಪ್ರೊಫೆಸರ್‌ಗಳು, ಪರ್ತಕರ್ತರು, ನೀತಿ ನಿರೂಪಕರು ಮತ್ತು ಸಾರ್ವಜನಿಕರು ಸೇರಿ 350ಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಸೆಂಟರ್ ಫಾರ್ ಎಐ ಸೇಫ್ಟಿ (Centre for AI Safety) ಎಂಬ ಎನ್‌ಜಿಒ ಈ ಅಭಿಯಾನ ಕೈಗೊಂಡಿದೆ.
ಕೃತಕ ಬುದ್ಧಿಮತ್ತೆಯಿಂದ ಸಮಾಜಕ್ಕೆ ಉಂಟಾಗಬಹುದಾದ ಹಾನಿ ಬಗ್ಗೆ ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಮತ್ತು ಇತರರು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು. Future of Life Institute ಎಂಬ ಸಂಸ್ಥೆ ಕೂಡ ಇತ್ತೀಚೆಗೆ ಇಂಥದ್ದೇ ಬಹಿರಂಗ ಪತ್ರ ಬರೆದಿದೆ. ಎಲಾನ್ ಮಸ್ಕ್ ಸೇರಿ ಹಲವರು ಇದಕ್ಕೆ ಸಹಿ ಹಾಕಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭ ಅನೇಕ ಉದ್ಯೋಗಗಳು ನಷ್ಟವಾಗಿತ್ತು. ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಅತಿ ದೊಡ್ಡ ಆತಂಕವೊಂದು ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial Intelligence) ಕ್ಷೇತ್ರದಿಂದ ಬಂದಿದೆ. ಈ ಟೆಕ್ನಾಲಜಿ ಐಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂಬ ಭೀತಿ ಅಕ್ಷರಶಃ ಆವರಿಸಿದೆ. ChatGPT ಮತ್ತು Generative artificial intelligence (Gen-AI) ಕಾರ್ಪೊರೇಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಮೈಕ್ರೊಸಾಫ್ಟ್ ಬೆಂಬಲಿತ ಓಪನ್ ಎಐ (Open-AI) ಕಳೆದ ವರ್ಷ ನವೆಂಬರ್‌ನಲ್ಲಿ ChatGPT ಅನ್ನು ಬಿಡುಗಡೆಗೊಳಿಸಿದ ಬಳಿಕ ಅನೇಕ ಆತಂಕಗಳಿಗೆ ಕಾರಣವಾಗಿದೆ.
ಎಐ ಬಗ್ಗೆ ಜನ ಜಾಗೃತಿ ಸಲುವಾಗಿ ಕೆಲಸಕ್ಕೇ ರಾಜೀನಾಮೆ ಕೊಟ್ಟಿದ್ದ ವಿಜ್ಞಾನಿ!
ಜೆಫ್ರಿ ಹಿಂಟನ್ ! (Geoffrey Hinton) ಎಂಬ ಎಐ ವಿಜ್ಞಾನಿ ಕೂಡ ಈ ತಂತ್ರಜ್ಞಾನದ ಅಪಾಯದ ಬಗ್ಗೆ ಗಮನ ಸೆಳೆದಿದ್ದಾರೆ. ಹಿರಿಯ ಕಂಪ್ಯೂಟರ್ ವಿಜ್ಞಾನಿಯಾಗಿರುವ ಜೆಫ್ರಿ ಹಿಂಟನ್ ಬರೋಬ್ಬರಿ 45 ವರ್ಷಗಳ ಹಿಂದೆಯೇ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಥವಾ ಕೃತಕ ಬುದ್ದಿಮತ್ತೆ (Artificial intelligence) ಬಗ್ಗೆ ಪಿಎಚ್‌ಡಿ ಬರೆದಿದ್ದರು. ತಮ್ಮ ಹಲವಾರು ದಶಕಗಳ ಸಂಶೋಧನೆಯಿಂದ ಎ.ಐ ಕ್ಷೇತ್ರದಲ್ಲಿ ಅವರ ಮಾತುಗಳಿಗೆ ಭಾರಿ ಬೆಲೆ ಇದೆ.
ಕಳೆದ 10 ವರ್ಷಗಳಿಂದ ತಂತ್ರಜ್ಞಾನ ದಿಗ್ಗಜ ಗೂಗಲ್ (Google) ಕಂಪನಿಯಲ್ಲಿ ವಿಜ್ಞಾನಿಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು, ಎ.ಐ ತಂತ್ರಜ್ಞಾನವು ಜಗತ್ತಿಗೆ ಒಡ್ಡಿರುವ ಬೆದರಿಕೆ ಬಗ್ಗೆ ಪ್ರಪಂಚಾದ್ಯಂತ ಜನ ಜಾಗೃತಿ ಮೂಡಿಸಲು ಯತ್ನಿಸುವುದಾಗಿ ಅವರು ಹೇಳಿದ್ದಾರೆ!ಮುಂಬರುವ 30-50 ವರ್ಷಗಳಲ್ಲಿ ಅಥವಾ ಇವೆಲ್ಲದಕ್ಕಿಂತಲೂ ಕಡಿಮೆ ವರ್ಷದಲ್ಲಿ ಎ.ಐ ಅಪಾಯ ಇಡೀ ಜಗತ್ತನ್ನು ಕಾಡಲಿದೆ ಎಂದು ಹಿಂಟನ್ ಹೇಳುತ್ತಾರೆ.
ಇದನ್ನೂ ಓದಿ: TCS: ಗೂಗಲ್ ಕ್ಲೌಡ್ ಜತೆಗೂಡಿ ಜನೆರೇಟಿವ್ ಎಐ ಆರಂಭಿಸಿದ ಟಿಸಿಎಸ್