ನವದೆಹಲಿ: ಪ್ರಯಾಣಿಕ ಕಾರುಗಳಿಗೆ (Passenger Cars) 6 ಏರ್‌ಬ್ಯಾಗ್ (6 Airbag) ಕಡ್ಡಾಯ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಅವರು ಹೇಳಿದ್ದಾರೆ. ಆರು ತಿಂಗಳ ಹಿಂದೆ ಕೇಂದ್ರ ಸರ್ಕಾರವು, ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ ಮಾಡುವುದಾಗಿ ಘೋಷಿಸಿತ್ತು. ಅಲ್ಲದೇ ಈ ನಿಯಮವು 2023 ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎಂದು ಹೇಳಿತ್ತು. ಅಂದರೆ, ನಿಯಮ ಜಾರಿಗೆ ಒಂದು ತಿಂಗಳು ಇರುವಾಗಲೇ, ನಿತಿನ್ ಗಡ್ಕರಿ ಅವರು 6 ಏರ್‌ಬ್ಯಾಗ್ ಕಡ್ಡಾಯ ಅಗತ್ಯವಿಲ್ಲ ಎಂದು ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಆಟೋಮೋಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ACMA) ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪಾಲ್ಗೊಂಡು ಮಾತನಾಡಿದರು.
ಈ ಸಭೆಯ ವೇಳೆ, ಆಟೋ ಕಾರ್ ಇಂಡಿಯಾ ಎಡಿಟರ್ ಹೊರ್ಮದ್ ಸೊರಾಬ್ಜಿ ಅವರು, ಪ್ರಯಾಣಿಕ ಕಾರುಗಳಿಗೆ 6 ಏರ್ ಬ್ಯಾಗ್ ಕಡ್ಡಾಯ ಮಾಡಿರುವ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೇ ಪ್ರಶ್ನೆ ಕೇಳಿದರು. ಆಗ ಉತ್ತರಿಸಿದ ನಿತಿನ್ ಗಡ್ಕರಿ ಅವರು, 6 ಏರ್‌ಬ್ಯಾಗ್ ಆರ್ಥಿಕ ಮಾದರಿ ಏನೇ ಇರಲಿ, ಜನರು ಆ ಕಾರನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಹಾಗಾಗಿ, 6 ಏರ್ ಬ್ಯಾಗ್ ಅಳವಡಿಕೆಯು ಮಾರುಕಟ್ಟೆಗೆ ಬಿಟ್ಟಿದ್ದು, ಅವರೇ ನಿರ್ಧರಿಸಬೇಕು. ಸ್ಟಾರ್ ರೇಟಿಂಗ್, ಭಾರತ್ ಎನ್‌ಸಿಎಪಿ ಇದೆ. ಈ ಕುರಿತು ತಯಾರಕರು ಮತ್ತು ಜನರು ನಿರ್ಧರಿಸಬಹುದು. ನಾವು ಅದನ್ನು ಅವರಿಗೆ ಬಿಡುತ್ತೇವೆ ಎಂದು ಹೇಳಿದರು.
Addressing 63rd ACMA Annual Session, New Delhi
— Nitin Gadkari (@nitin_gadkari) September 13, 2023
https://t.co/izH89H0UyK
6 ಏರ್ ಬ್ಯಾಗ್‌ಗಳ ನಿಯಮ ಕಡ್ಡಾಯ ಕುರಿತು ಖಚಿತತೆಯನ್ನು ಪಡೆಯಲು ಸೊರಾಬ್ಜಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೇಳಿದಾಗ, ನಾವು ಅದನ್ನು (6 ಏರ್‌ಬ್ಯಾಗ್) ಕಡ್ಡಾಯಗೊಳಿಸುವ ಅಗತ್ಯವಿಲ್ಲ. ನಾವು ನಿಯಮವನ್ನು ಕಡ್ಡಾಯಗೊಳಿಸಲು ಬಯಸುವುದಿಲ್ಲ. ಸ್ಟಾರ್ ರೇಟಿಂಗ್ ಮತ್ತು ಭಾರತ್ ಎನ್‌ಸಿಎಪಿ ಸಾಕು” ಎಂದು ಹೇಳಿದರು.
ಏನಿದು ಭಾರತ್ ಎನ್‌ಸಿಎಪಿ?
ಭಾರತದಲ್ಲಿಯೇ ಕಾರುಗಳ ಸುರಕ್ಷತೆಯನ್ನು ಅಳೆಯುವ ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್‌ಗೆ (Bharat New Car Assessment Programme or Bharat NCAP) ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಚಾಲನೆ ನೀಡಿದ್ದಾರೆ. ಇದರೊಂದಿಗೆ ಸ್ವಂತ ಎನ್‌ಸಿಪಿ ಹೊಂದಿದ ರಾಷ್ಟ್ರಗಳಾದ ಜಪಾನ್, ಆಸ್ಟ್ರೇಲಿಯಾ, ಅಮೆರಿಕ, ಲ್ಯಾಟಿನ್ ಅಮೆರಿಕದಂತಹ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ. ಭಾರತದ ರಸ್ತೆ ಸುರಕ್ಷತೆ ಹಾಗೂ ಕಾರುಗಳ ಅಪಘಾತ (Crash) ಸುರಕ್ಷತೆಯನ್ನು ಅಳೆಯುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಅಡಿಯಲ್ಲಿ ಭಾರತ್ ಎನ್‌ಸಿಎಪಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಗರಿಷ್ಠ ಎಂಟು ಪ್ಯಾಸೆಂಜರ್‌ಗಳು ಕುಳಿತುಕೊಳ್ಳಬಹುದಾದ ಅಥವಾ ಗರಿಷ್ಠ 3.5 ಟನ್ ತೂಕದ ಕಾರುಗಳ ಸುರಕ್ಷತೆಯ ಸಾಮರ್ಥ್ಯವನ್ನು ಅಳೆಯುತ್ತದೆ. ಅಮೆರಿಕ, ಜಪಾನ್‌ನಂತಹ ಶ್ರೇಣಿಯಲ್ಲಿಯೇ ಭಾರತದ ರಸ್ತೆ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಭಾರತ್ ಎನ್‌ಸಿಎಪಿಯನ್ನು ಜಾರಿಗೆ ತರಲಾಗಿದೆ. ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಮೊದಲು ಕಾರಿನ ಮುಂಭಾಗ (Frontal), ಬದಿ (Side), ಪೋಲ್ ಸೈಡ್‌ನಲ್ಲಿ ಕ್ರ್ಯಾಶ್ ಮಾಡಿಸಿ, ದಕ್ಷತೆ ಆಧಾರದ ಮೇಲೆ ರೇಟಿಂಗ್ ನೀಡಲಾಗುತ್ತದೆ.
ಜನರಿಗೆ ಹೇಗೆ ಅನುಕೂಲ?
ಆನ್‌ಲೈನ್‌ನಲ್ಲಿ ಮೊಬೈಲ್ ಸೇರಿ ಯಾವುದೇ ಉತ್ಪನ್ನಗಳ ರೇಟಿಂಗ್ ಆಧಾರದ ಮೇಲೆ ಖರೀದಿಸುವ ರೀತಿಯಲ್ಲಿಯೇ ಭಾರತ್ ಎನ್‌ಸಿಎಪಿ ನೀಡುವ ರೇಟಿಂಗ್ ಆಧಾರದ ಮೇಲೆಯೇ ಕಾರುಗಳನ್ನು ಖರೀದಿಸಲು ಜನರಿಗೆ ಅನುಕೂಲವಾಗಲಿದೆ. ಗರಿಷ್ಠ 5 ಸ್ಟಾರ್‌ಗಳವರೆಗೆ ಭಾರತ್ ಎನ್‌ಸಿಎಪಿಯು ರೇಟಿಂಗ್ ನೀಡಲಿದೆ. ಈ ಸುರಕ್ಷತಾ ರೇಟಿಂಗ್‌ಅನ್ನು ಗಮನಿಸಿಯೇ ಜನ ಕಾರುಗಳನ್ನು ಖರೀದಿಸಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Airbags | ಕಾರುಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯಕ್ಕೆ ಗಡುವು 1 ವರ್ಷ ಮುಂದೂಡಿಕೆ
ಭಾರತದಲ್ಲಿಯೇ ಗುಣಮಟ್ಟದ ಕಾರುಗಳ ಉತ್ಪಾದನೆ ಹಾಗೂ ಕಾರಿನ ಬಿಡಿಭಾಗಗಳ ಉತ್ಪಾದನೆಗೆ ಭಾರತ್ ಎನ್‌ಸಿಎಪಿಯು ಆರೋಗ್ಯಕರ ಸ್ಪರ್ಧೆ ಏರ್ಪಡಿಸುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ದೇಶದಲ್ಲಿ ರೋಡ್ ಟ್ರಾಫಿಕ್‌ನಿಂದ ಸಂಭವಿಸುವ ಅಪಘಾತಗಳಲ್ಲಿ ವಾರ್ಷಿಕ 13 ಲಕ್ಷ ಜನ ಮೃತಪಡುತ್ತಾರೆ. ಹೀಗೆ ರಸ್ತೆ ಹಾಗೂ ಕಾರುಗಳ ಸುರಕ್ಷತೆಯ ಮೂಲಕ ಅಪಘಾತ ಪ್ರಮಾಣವನ್ನು ತಗ್ಗಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಭಾರತ್ ಎನ್‌ಸಿಎಪಿಯನ್ನು ಜಾರಿಗೆ ತಂದಿದೆ.