ನವದೆಹಲಿ: ರಿಲಯನ್ಸ್ ಇಂಡಸ್ಟ್ರೀ ಮತ್ತು ಬಿಪಿ ಪಿಎಲ್‌ಸಿ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಇಳಿಕೆ ಮಾಡಿದ ಬೆನ್ನಲ್ಲೇ, ಮತ್ತೊಂದು ಖಾಸಗಿ ಕಂಪನಿ ನಾಯರಾ ಎನರ್ಜಿ (Nayara Energy) ಕೂಡ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಒಂದು ರೂಪಾಯಿ ಇಳಿಕೆ ಮಾಡಿದೆ. ಅಂದರೆ, ಸಾರ್ವಜನಿಕ ವಲಯದ ಕಂಪನಿಗಳು ಮಾರಾಟ ಮಾಡುವ ದರಕ್ಕೆ ಹೋಲಿಸಿದರೆ, ಈ ಕಂಪನಿಗಳು ಮಾರಾಟ ಮಾಡುವ ದರದಲ್ಲಿ ಒಂದ ರೂ. ಕಡಿಮೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯ ಹೊರತಾಗಿಯೂ, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(HPCL) ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಮಾಡುತ್ತಿಲ್ಲ. ಆದರೆ, ಖಾಸಗಿ ಕಂಪನಿಗಳು ಈ ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ನೀಡಲು ಮುಂದಾಗಿದ್ದು, ಒಂದು ರೂಪಾಯಿ ದರ ಇಳಿಕೆ ಮಾಡಿವೆ.
ದೇಶೀಯ ಬಳಕೆಯನ್ನು ಮತ್ತಷ್ಟು ಉತ್ತೇಜಿಸಲು ಮತ್ತು ಸ್ಥಳೀಯ ಗ್ರಾಹಕರನ್ನು ಉತ್ತಮವಾಗಿ ಪೂರೈಸಲು, ನಾವು ಜೂನ್ 2023ರ ಅಂತ್ಯದವರೆಗೆ ನಮ್ಮ ಚಿಲ್ಲರೆ ಮಳಿಗೆಗಳಲ್ಲಿ 1 ರೂಪಾಯಿ ರಿಯಾಯಿತಿಯನ್ನು ಪರಿಚಯಿಸಿದ್ದೇವೆ ಎಂದು ನಾಯರಾ ಎನರ್ಜಿಯ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: Jio-bp diesel : ಲೀಟರ್‌ಗೆ 1 ರೂ. ಡಿಸ್ಕೌಂಟ್‌ನಲ್ಲಿ ಜಿಯೊ-ಬಿಪಿ ಡೀಸೆಲ್, ದರ ಸಮರದಿಂದ ಟ್ರಕ್ ಮಾಲೀಕರಿಗೆ ಲಾಭವೆಷ್ಟು?
ಭಾರತದ 86,925 ಪೆಟ್ರೋಲ್ ಪಂಪ್‌ಗಳಲ್ಲಿ ಶೇ.7ರಷ್ಟು ಪಾಲನ್ನು ನಾಯರಾ ಎನರ್ಜಿ ಹೊಂದಿದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನದಂತಹ 10 ರಾಜ್ಯಗಳಲ್ಲಿ ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಕಂಪನಿಗಳಿಗಿಂತಲೂ ಲೀಟರ್‌ಗೆ 1 ರೂಪಾಯಿ ಕಡಿಮೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಾರಾಟ ಮಾಡುತ್ತಿದೆ. ಈ ತಿಂಗಳ ಆರಂಭದಲ್ಲಿ, ರಿಲಯನ್ಸ್ ಮತ್ತು ಬಿಪಿಯ ಚಿಲ್ಲರೆ ಇಂಧನ ಜಂಟಿ ಉದ್ಯಮವಾದ ಜಿಯೋ-ಬಿಪಿ, ಸರ್ಕಾರಿ ಸ್ವಾಮ್ಯದ ಕಂಪನಿಗಳು ಮಾರಾಟ ಮಾಡುವ ಡೀಸೆಲ್‌ಗಿಂತ ಪ್ರತಿ ಲೀಟರ್‌ಗೆ 1 ರೂಪಾಯಿಗೆ ಕಡಿಮೆಗೆ ಮಾರಾಟ ಮಾಡಲು ಆರಂಭಿಸಿತ್ತು. ಅದೇ ಹಾದಿಯನ್ನು ನಾಯರಾ ಎನರ್ಜಿ ಕೂಡ ತುಳಿದಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.