Site icon Vistara News

4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

Suzuki India

ನವದೆಹಲಿ: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಇಂಡಿಯಾ (Suzuki India) ಸುಮಾರು 4 ಲಕ್ಷಕ್ಕೂ ಹೆಚ್ಚು ಬೈಕ್‌ ಮತ್ತು ಸ್ಕೂಟರ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾಗಿದೆ. ಇಗ್ನಿಷನ್ ಕಾಯಿಲ್‌ಗೆ ಸಂಪರ್ಕ ಹೊಂದಿರುವ ಹೈ-ಟೆನ್ಶನ್ ಕಾರ್ಡ್‌ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಒಟ್ಟು 3,88,411 ದ್ವಿಚಕ್ರ ವಾಹನಗಳನ್ನು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

2022ರ ಏಪ್ರಿಲ್ 30 ಮತ್ತು 2022ರ ಡಿಸೆಂಬರ್ 3ರ ನಡುವೆ ತಯಾರಿಸಲಾದ, ಬಹು ಬೇಡಿಕೆಯ ಆಕ್ಸೆಸ್ 125, ಅವೆನಿಸ್ 125 ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ 125 (Access 125, Avenis 125, and Burgman Street 125) ಅನ್ನು ಹಿಂಪಡೆಯಲು ಕಂಪನಿ ಮುಂದಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಬೈಕ್‌ಗಳ ಪೈಕಿ ಟೆಕ್-ಲೋಡೆಡ್ ವಿ-ಸ್ಟ್ರೋಮ್ 800 ಡಿಇ (V-Strom 800 DE) ಮಾಡೆಲ್‌ನಲ್ಲಿ ಕೂಡ ಇದೇ ಸಮಸ್ಯೆ ಕಂಡು ಬಂದಿದೆ. ಜತೆಗೆ ಹಿಂದಿನ ಟೈರ್‌ ವಿಚಾರದಲ್ಲಿ ಸಮಸ್ಯೆ ಇರುವ ಬಗ್ಗೆಯೂ ಕಂಪನಿ ಗಮನಿಸಿದೆ. ಬ್ರ್ಯಾಂಡ್ ಹಂಚಿಕೊಂಡ ವಿವರಗಳ ಪ್ರಕಾರ, ಟೈರ್ ಟ್ರೆಡ್‌ನ ಕೆಲವು ಭಾಗವು ಬೇರ್ಪಟ್ಟು ಅದರಲ್ಲಿ ಬಿರುಕುಗಳನ್ನು ಉಂಟು ಮಾಡಬಹುದು ಈ ಕಾರಣಕ್ಕೆ ವಿ-ಸ್ಟ್ರೋಮ್ 800 ಡಿಇ ಅನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತದೆ.

ಹೀಗೆ ಪರಿಶೀಲಿಸಿ

ಒಂದುವೇಳೆ ನೀವು ಖರೀದಿಸಿದ ವಾಹನ ಕಂಪನಿ ಹಿಂಪಡೆಯಲಿರುವ ಲಿಸ್ಟ್‌ನಲ್ಲಿದ್ದು ಅದನ್ನು ಹೇಗೆ ಕಂಡುಕೊಳ್ಳುವುದು ಎನ್ನುವ ಚಿಂತೆಯಲ್ಲಿದ್ದೀರಾ? ಪರಿಶೀಲಿಸಲು ಇಲ್ಲಿದೆ ಸುಲಭ ವಿಧಾನ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ವಾಹನದ ವಿಐಎನ್‌ (VIN) ನಮೂದಿಸಿ ನಿಮ್ಮ ವಾಹನದಲ್ಲಿಯೂ ಬದಲಾವಣೆಯ ಅವಶ್ಯಕತೆ ಇದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.

ನಿಮ್ಮ ವಾಹನವನ್ನು ಚೆಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ (https://www.suzukimotorcycle.co.in/service-campaign)

ಅಪಾರ ಬೇಡಿಕೆ

ಸುಜುಕಿ ಇಂಡಿಯಾ ಸದ್ಯ ಸ್ಕೂಟರ್ ಮತ್ತು ಬೈಕ್ ವಿಭಾಗಗಳಲ್ಲಿ ಭಾರತದ ಗ್ರಾಹಕರ ಮನಸ್ಸು ಗೆದ್ದಿದೆ. ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದ್ದು ಪ್ರತಿಸ್ಪರ್ಧಿಗಳಿಗೆ ಸವಾಲೊಡ್ಡಿದೆ. ಈ ಪಟ್ಟಿಯಲ್ಲಿ ಸುಜುಕಿ ಆಕ್ಸೆಸ್ 125, ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಮತ್ತು ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125, ಸುಜುಕಿ ಕಟಾನಾ, ಸುಜುಕಿ ಜಿಕ್ಸರ್ ಎಸ್ಎಫ್, ಸುಜುಕಿ ಜಿಕ್ಸರ್ 250, ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್, ಸುಜುಕಿ ಜಿಎಸ್ಎಕ್ಸ್-ಆರ್ 1000 ಆರ್‌ಗೆ ಅಪಾರ ಬೇಡಿಕೆ ಇದೆ.

ಕಂಪನಿ ಹೇಳಿದ್ದೇನು?

ಎಂಜಿನ್ ಸ್ಥಗಿತ, ಸ್ಟಾರ್ಟ್ ಮಾಡುವಾಗ ಕಂಡುಬರುವ ತೊಂದರೆ, ದೋಷಪೂರಿತ ಸ್ಪೀಡೋಮೀಟರ್‌ಗಳ ಬಗ್ಗೆ ಗ್ರಹಾಕರು ದೂರು ಸಲ್ಲಿಸಿರುವ ಹಿನ್ನಲೆಯಲ್ಲಿ ವಾಹನಗಳನ್ನು ಹಿಂಪಡೆಯಲಾಗುತ್ತಿದೆ. ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಸುಜುಕಿ ಸೇವಾ ಕೇಂದ್ರಗಳಲ್ಲಿ ತಮ್ಮ ವಾಹನಗಳನ್ನು ದುರಸ್ತಿ ಪಡಿಸಬೇಕು ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

Exit mobile version