ನವ ದೆಹಲಿ: ಭಾರತದ ರಸ್ತೆಯಲ್ಲಿರುವ ಎಲ್ಲ ಕಾರುಗಳು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಕೊಡುವುದಿಲ್ಲ. ಇಲ್ಲಿ ಮೈಲೇಜ್‌ಗೆ ಹೆಚ್ಚು ಆದ್ಯತೆ ನೀಡುವ ಕಾರಣ ಕಂಪನಿಗಳು ವಾಹನದ ಒಟ್ಟು ತೂಕ ಕಡಿಮೆ ಮಾಡುವ ಉದ್ದೇಶದಿಂದ ಕನಿಷ್ಠ ದರ್ಜೆಯ ವಸ್ತುಗಳನ್ನು ಬಳಸಿಕೊಂಡು ಕಾರುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತವೆ. ಹೀಗಾಗಿ ಅವಘಡಗಳ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಹಾನಿಯಾಗುತ್ತವೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾರತ್ NCAP ರಚಿಸಿ ಕಾರುಗಳಿಗೆ ಸುರಕ್ಷತಾ ರೇಟಿಂಗ್ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಶುಕ್ರವಾರ ಅವರು ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಅವರ ಪ್ರಕಾರ ಭಾರತದಲ್ಲಿ ಉತ್ಪಾದನೆಯಾಗುವ ಎಲ್ಲ ಕಾರುಗಳು ಮುಂದೆ ಸ್ಥಾಪನೆಯಾಗಲಿರುವ ಭಾರತ್ NCAPನಿಂದ ಪ್ರಮಾಣಿಕೃತಗೊಂಡಿರಬೇಕು. ವಾಹನಗಳು ಒಳಗಿರುವ ಪ್ರಯಾಣಿಕರಿಗೆ ಎಷ್ಟರ ಮಟ್ಟಿಗೆ ಸುರಕ್ಷತೆ ನೀಡುತ್ತವೆ ಎಂಬುದನ್ನು ಆಧರಿಸಿ ರೇಟಿಂಗ್ ನೀಡಲಾಗುತ್ತದೆ. ಇದರಿಂದ ಭಾರತದ ಕಾರು ಖರೀದಿದಾರರಿಗೆ ಹಾಗೂ ರಫ್ತು ವ್ಯವಹಾರಕ್ಕೆ ನೆರವಾಗಲಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಭಾರತದಲ್ಲಿ ಕಾರುಗಳು ಸುರಕ್ಷತೆಗೆ ಆದ್ಯತೆ ನೀಡುವುದು ಕಡಿಮೆ. ಬಹುತೇಕರು ಕಡಿಮೆ ಬೆಲೆಗೆ ದೊಡ್ಡ ಗಾತ್ರದ ಕಾರುಗಳು ಎಲ್ಲಿ ಸಿಗುತ್ತವೆ ಎಂಬುದನ್ನು ಹುಡುಕುತ್ತಾರೆ. ಭಾರತದಲ್ಲಿರುವ ಕಾರು ತಯಾರಕ ಕಂಪನಿಗಳು ಇದಕ್ಕೆ ಪೂರಕವಾಗಿ ಕಾರುಗಳು ನಿರ್ಮಿಸುತ್ತವೆ. ವಾಹನಗಳ ದಟ್ಟಣೆ ಹೆಚ್ಚಾಗುವ ಜತೆಗೆ ಅತಿ ವೇಗದ ಎಕ್ಸ್‌ಪ್ರೆಸ್ ಹೈವೇಗಳ ಕಾರಣಕ್ಕೆ ಅವಘಡಗಳೂ ಹೆಚ್ಚಾಗಿವೆ. ಇದರಿಂದ ಜೀವ ಉಂಟಾಗುತ್ತಿವೆ. ಹೀಗಾಗಿ ಭಾರತ್ NCAP ಬಂದರೆ ಕಾರು ತಯಾರಕ ಕಂಪನಿಗಳು ಪ್ರಯಾಣಿಕರ ಸುರಕ್ಷತೆ ಕುರಿತೂ ಎಚ್ಚರಿಕೆ ವಹಿಸುವ ಸಾಧ್ಯತೆಗಳಿವೆ.
ಗ್ಲೋಬಲ್ NCAP ಮಾನದಂಡ
ನಿತಿನ್ ಗಡ್ಕರಿಯವರ ಹೇಳಿಕೆ ಪ್ರಕಾರ ಗ್ಲೋಬಲ್ NCAPನ ಮಾನದಂಡಗಳನ್ನು ಭಾರತ್ NCAPನಲ್ಲೂ ಅಳವಡಿಸಲಾಗುತ್ತದೆ. ಜತೆಗೆ ಭಾರತದ ಪರಿಸ್ಥಿತಿಗೆ ಅನುಕೂಲಕರವಾಗಿರುವ ಕೆಲವು ನಿಯಮಗಳನ್ನೂ ಸೇರಿಸಲಾಗುತ್ತದೆ. ಕಾರು ಉತ್ಪಾದನಾ ಘಟಕಗಳಲ್ಲಿ ಭಾರತ್ NCAP ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿ ರಸ್ತೆಗಿಳಿಯುವ ಪ್ರತಿಯೊಂದು ಕಾರುಗಳು ಎಷ್ಟರ ಮಟ್ಟಿಗೆ ಸುರಕ್ಷತೆ ಹೊಂದಿವೆ ಎಂಬುದನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಏನಿದು ಗ್ಲೋಬಲ್ NCAP
ಒಂದು ಕಂಪನಿಯು ನಾನಾ ವಾಹನಗಳನ್ನು ರಸ್ತೆಗೆ ಇಳಿಸುತ್ತವೆ. ಉದಾಹರಣೆಗೆ ಮಾರುತಿ ಕಂಪನಿಯಲ್ಲಿ ಹಲವಾರು ಬಗೆಯ ಕಾರುಗಳಿವೆ. ಆದರೆ, ಎಲ್ಲ ಕಾರುಗಳ ರಚನೆ ಹಾಗೂ ಗುಣಮಟ್ಟ ಬೇರೆಬೇರೆಯಾಗಿರುತ್ತವೆ. ಹೀಗಾಗಿ ಸುರಕ್ಷತೆಯ ಪ್ರಮಾಣದಲ್ಲೂ ವ್ಯತ್ಯಾಸ ಇರುತ್ತದೆ. ಇಂಥದ್ದನ್ನೆಲ್ಲ ಪರೀಕ್ಷೆ ಮಾಡಲು Global New Car Assessment Programme ವ್ಯವಸ್ಥೆಯನ್ನು ಬ್ರಿಟನ್ ಮೂಲದ ಲಾಭೇತರ ಸಂಸ್ಥೆ ಝೀರೊ ಫೌಂಡೇಷನ್ ಸ್ಥಾಪಿಸಿದೆ. ಕಾರು ತಯಾರಕ ಕಂಪನಿಗಳು ತಮ್ಮ ಕಾರಿನ ಸಾಮರ್ಥ್ಯವನ್ನು ಪರೀಕ್ಷೆ ಮಾಡಲು ಇಚ್ಚಿಸಿದರೆ ಈ ಸಂಸ್ಥೆಯ ಮೂಲಕ ಪರೀಕ್ಷೆ ಮಾಡಿಸಿಕೊಳ್ಳಬಹುದು. ಈ ಸಂಸ್ಥೆಯು ಮುಂದಿನ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕರಿಗೆ, ಹಿಂದಿನ ಸೀಟಿನಲ್ಲಿ ಕುಳಿತ ಪ್ರಯಾಣಿಕರಿಗೆ, ವಾಹನದೊಳಗಿರುವ ಮಕ್ಕಳಿಗೆ ಎಷ್ಟೆಷ್ಟು ಪ್ರಮಾಣದ ಸುರಕ್ಷತೆ ನೀಡುತ್ತದೆ ಎಂಬುದನ್ನು ಪರೀಕ್ಷಿಸುತ್ತದೆ. ಜತೆಗೆ ಹಿಂದಿನಿಂದ ಗುದ್ದಿದರೆ, ಬದಿಯಿಂದ ಗುದ್ದಿದರೆ, ಹಿಂದಿನಿಂದ ಗುದ್ದಿದರೆ, ವೇಗವಾಗಿ ಪಲ್ಟಿಯಾದರೆ ಹಾಗೂ ನಿಗದಿತ ಎತ್ತರದಿಂದ ಕೆಳಕ್ಕೆ ಬಿದ್ದರೆ ಎಷ್ಟರ ಮಟ್ಟಿಗೆ ಪ್ರಯಾಣಿಕರಿಗೆ ಹಾನಿಯಾಗುತ್ತದೆ ಎಂಬುದನ್ನು ಲೆಕ್ಕ ಹಾಕುತ್ತದೆ. ಅದಕ್ಕಾಗಿ ಪ್ರತಿಕೃತಿಗಳ ಹಾಗೂ ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ೧ರಿಂದ ೫ರವರೆಗೆ ಸ್ಟಾರ್ ನೀಡಲಾಗುತ್ತದೆ. ೫ ಸ್ಟಾರ್ ಪಡೆದ ಕಾರುಗಳು ಹೆಚ್ಚು ಸುರಕ್ಷಿತ ಎಂದು ಹೇಳಲಾಗುತ್ತದೆ.
ಭಾರತದ ಸುರಕ್ಷಿತ ಕಾರುಗಳು
ಟಾಟಾ ಮೋಟಾರ್ಸ್ ನಿರ್ಮಿಸುವ ಕಾರುಗಳು ಭಾರತದಲ್ಲಿ ಕಡಿಮೆ ಬೆಲೆಗೆ ದೊರೆಯುವ ಸುರಕ್ಷಿತ ಕಾರುಗಳು ಎಂಬ ಖ್ಯಾತಿ ಗಳಿಸಿವೆ. ಟಾಟಾ ನಿರ್ಮಿಸಿದ ಬಹುತೇಕ ಕಾರುಗಳು ಗ್ಲೋಬಲ್ Global New Car Assessment Programme ೫ ಸ್ಟಾರ್‌ಗಳನ್ನು ಪಡೆದುಕೊಂಡಿವೆ. ಆ ಕಂಪನಿಯ ಕಾರುಗಳು ಕನಿಷ್ಠ ಪಕ್ಷ ೪ ಸ್ಟಾರ್‌ಗಳನ್ನು ಹೊಂದಿರುತ್ತವೆ. ಮಹೀಂದ್ರಾ ಕಂಪನಿಯ ಕಾರುಗಳು ಇತ್ತೀಚೆಗೆ ಉತ್ತಮ ಸ್ಟಾರ್‌ಗಳನ್ನು ಹೊಂದುತ್ತಿವೆ. ಆರಂಭದಲ್ಲಿ ಭಾರತದಲ್ಲಿ ಕಾರು ತಯಾರು ಮಾಡುವ ಕಂಪನಿಗಳು ಗ್ಲೋಬಲ್ NCAP ಪರೀಕ್ಷೆ ಮಾಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಗ್ರಾಹಕರೇ ಈಗ ಜಾಗೃತರಾಗಿರುವ ಕಾರಣ ಆ ಕಂಪನಿಗಳೂ ಮಾನದಂಡ ಪೂರೈಸಲು ಯತ್ನಿಸುತ್ತದೆ. ನಿತಿನ್ ಗಡ್ಕರಿಯವರ ಯೋಜನೆ ಜಾರಿಗೆ ಬಂದರೆ ಎಲ್ಲರೂ ಈ ಮಾನದಂಡಗಳಿಗೆ ಒಳಪಡುವುದು ಅನಿವಾರ್ಯ.
ಇದನ್ನೂ ಓದಿ | TATA NEXON EV ಕಾರಿಗೆ ಬೆಂಕಿ ಬಿದ್ದಿದ್ಯಾಕೆ? ತನಿಖೆಗೆ ಆದೇಶಿಸಿದ ಟಾಟಾ ಮೋಟರ್ಸ್