Site icon Vistara News

Bomber Drone: ಭಾರತದ ಮೊದಲ ಬಾಂಬರ್ ಡ್ರೋನ್ ಅನಾವರಣ; ಇದರ ವಿಶೇಷತೆ ಹೀಗಿದೆ ನೋಡಿ

bomber drone

ಬೆಂಗಳೂರು: ಭಾರತದ ಮೊತ್ತ ಮೊದಲ ಸ್ವದೇಶಿ ತಂತ್ರಜ್ಞಾನದ ಬಾಂಬರ್‌ ಡ್ರೋನ್‌ (Indigenous Bomber Drone) ಬೆಂಗಳೂರಿನಲ್ಲಿ ಅನಾವರಣಗೊಂಡಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electronic City) ಅನಾವರಣಗೊಂಡಿರುವ ಈ ಬಾಂಬರ್‌ ಡ್ರೋನ್‌ ಅನ್ನು ʼಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಟೆಕ್ನಾಲಜೀಸ್ʼ ಸಂಸ್ಥೆ ನಿರ್ಮಾಣ ಮಾಡಿದೆ. ಇದಕ್ಕೆ FWD-200B UAV ಎಂದು ಹೆಸರಿಡಲಾಗಿದೆ.

ಭಾರತದ ಮೊದಲ ಮಿಲಿಟರಿ ದರ್ಜೆಯ (Indian military) ಬಾಂಬರ್ ಡ್ರೋನ್ ಇದಾಗಿದೆ. ಡ್ರೋನ್‌ಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ, ಹೆಲಿಕಾಪ್ಟರ್‌ಗಿಂತ ಚಿಕ್ಕದಾಗಿರುವ ಈ ವಾಹಕ, ಪೈಲಟ್‌ರಹಿತವಾಗಿ ಕಾರ್ಯಾಚರಿಸಿ ಬಾಂಬ್‌ಗಳನ್ನು ಹೊತ್ತೊಯ್ದು ವೈರಿನೆಲೆಗಳ ಮೇಲೆ ಉದುರಿಸಬಲ್ಲುದು ಎಂದು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಸಂಸ್ಥಾಪಕ, ಸಿಇಒ ಸುಹಾಸ್ ತೇಜ ಸ್ಕಂದ ವಿವರಿಸಿದ್ದಾರೆ.

FWD-200B UAV ಎಂದು ತಾಮತ್ರಿಕವಾಗಿ ಕರೆಯಲಾಗುವ ಈ ಡ್ರೋನ್ ವಿಮಾನವನ್ನು ಇಂದು ಎಲೆಕ್ಟ್ರಾನಿಕ ಸಿಟಿಯಲ್ಲಿ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಸಂಸ್ಥೆ ಅನಾವರಣ ಮಾಡಿದೆ. ರಕ್ಷಣಾ ಕ್ಷೇತ್ರದಲ್ಲಿ ವಿದೇಶಗಳ ಮೇಲಿನ ಅವಲಂಬನೆಗೆ ಬ್ರೇಕ್ ಹಾಕಲು ಸ್ವದೇಶಿ ಡ್ರೋನ್ ವಿಮಾನ‌ ತಯಾರಿಸಲಾಗಿದೆ. ಇದರೊಂದಿಗೆ ಸುಧಾರಿತ ಮಾನವರಹಿತ ಯುದ್ಧ ಡ್ರೋನ್ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ. ಇದರ ಆರಂಬಿಕ ಟೆಸ್ಟ್‌ಗಳು ಆಗಿದ್ದು, ಅಡ್ವಾನ್ಸ್‌ಡ್‌ ಪರೀಕ್ಷೆಗಳು ಇನ್ನೆರಡು ತಿಂಗಳಲ್ಲಿ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಇದರ ಉದ್ಘಾಟನೆ ಮಾಡಿಸುವ ಚಿಂತನೆಯನ್ನು ಸುಹಾಸ್ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಸದ್ಯ ದಾಳಿ ಡ್ರೋನ್‌ಗಳು ಲಭ್ಯವಿಲ್ಲ. ಇರಾನ್‌ ಹಾಗೂ ರಷ್ಯಾಗಳು ಇದನ್ನು ಈಗಾಗಲೇ ಬಳಸುತ್ತಿವೆ. ಇಸ್ರೇಲ್‌ ಮೇಲೆ ದಾಳಿ ಮಾಡಲು ಕೂಡ ಪ್ಯಾಲೆಸ್ತೀನಿನ ಬಂಡುಕೋರರು ಸಣ್ಣ ಗಾತ್ರದ ಇಂಥದೇ ಡ್ರೋನ್‌ಗಳನ್ನು ಬಳಸಿದ್ದರು. ಈ ಬಗೆಯ ಡ್ರೋನ್‌ಗಳು ಆಧುನಿಕ ಯುದ್ಧದ ವೈಖರಿಯನ್ನೇ ಬದಲಿಸಲಿವೆ. ಕ್ಷಿಪಣಿಗಳು ದುಬಾರಿಯಾಗಿದ್ದು, ಅದಕ್ಕಿಂತ ಡ್ರೋನ್‌ಗಳು ಅಗ್ಗವಾಗಿವೆ. FWD-200B UAV ಸುಮಾರು 200 ಕಿಲೋದಷ್ಟು ಪೇಲೋಡ್‌ ಅನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಭಾರತ ಈಗ ಅಮೆರಿಕದ ಪ್ರಿಡೇಟರ್ ಡ್ರೋನ್‌ಗಳನ್ನು (Predator Drone) ತರಿಸುತ್ತಿದೆ. ಆದರೆ ಇದು 250 ಕೋಟಿಗಳಷ್ಟು ದುಬಾರಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ದೇಶೀಯವಾಗಿ ತಯಾರಾದ FWD-200B ಭಾರತದಲ್ಲಿ ಸ್ವದೇಶಿ ತಂತ್ರಜ್ಞಾನದೊಂದಿಗೆ ಕೇವಲ 25ಯಿಂದ 50 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ. ಭಾರತವನ್ನು ಜಾಗತಿಕ ಡ್ರೋನ್ ಉತ್ಪಾದನೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿಸುವ ಗುರಿ ತಮ್ಮದು. ಇನ್ನು ಎರಡು ತಿಂಗಳಲ್ಲಿ ಇದು ಭಾರತದ ಮಿಲಿಟರಿಯನ್ನು ಸೇರುವ ಆಶಯ ಇದೆ. ಈ ಮೂಲಕ ನಮ್ಮ ರಾಷ್ಟ್ರದ ವಾಯು ರಕ್ಷಣಾ ವ್ಯವಸ್ಥೆಯನ್ನು ಸಶಕ್ತಗೊಳಿಸಲು ಸಂಸ್ಥೆ ಮುಂದಾಗಿದೆ ಎಂದು ಸುಹಾಸ್‌ ತಿಳಿಸಿದ್ದಾರೆ.

ಇದನ್ನೂ ಓದಿ: Tejas Aircraft: ಸ್ವದೇಶಿ ʼತೇಜಸ್ʼ ವಿಮಾನದಲ್ಲಿ ಮೋದಿ ಹಾರಾಟ: ಪಾಕಿಸ್ತಾನ, ಚೀನಾಗೆ ನಡುಕ!

Exit mobile version