ನವದೆಹಲಿ: ವಾಟ್ಸಾಪ್ (WhatsApp) ಬಳಕೆದಾರರಿಗೆ ಇದು ಎಚ್ಚರಿಕೆಯ ಸುದ್ದಿ! ವಾಟ್ಸಾಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಸೈಬರ್ ಖದೀಮರು (Cyber Crime) ಹೊಸ ದಾರಿಯೊಂದನ್ನು ಕಂಡುಕೊಂಡಿದ್ದಾರೆ. ಅವರ ಜಾಲಕ್ಕೆ ಬಲೆ ಬೀಳುವ ಬಳಕೆದಾರರು ತೀವ್ರ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ. ಹಾಗಾಗಿ, ಈ ನಿಟ್ಟಿನಲ್ಲಿ ಎಚ್ಚರದಿಂದ ಇರುವಂತೆ ಮುಂಬೈ ಪೊಲೀಸರು (Mumbai Police) ಎಲ್ಲ ವಾಟ್ಸಾಪ್ ಬಳಕೆದಾರರಿಗೆ ನೀಡಿದ್ದಾರೆ. ಈಗ ಪಿಂಕ್ ವಾಟ್ಸಾಪ್ ಸ್ಕ್ಯಾಮ್ (Pink WhatsApp Scam) ತಲೆ ಎತ್ತಿದೆ. ವಾಟ್ಸಾಪ್‌ನಲ್ಲಿ ಕಳೆದ ಕೆಲವು ದಿನಗಳಿಂದ ನ್ಯೂ ಪಿಂಕ್ ಲುಕ್ ವಾಟ್ಸಾಪ್ ವಿಥ್ ಎಕ್ಸಟ್ರಾ ಫೀಚರ್ಸ್ ಎಂಬ ಲಿಂಕ್ ಹರಿದಾಡುತ್ತಿದೆ. ಅಪ್ಪಿ ತಪ್ಪಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆ್ಯಪ್ ಏನಾದರೂ ನೀವು ಡೌನ್‌ಲೋಡ್ ಮಾಡಿಕೊಂಡರೆ ಕತೆ ಮುಗೀತು. ಸೈಬರ್ ಖದೀಮರು ವಾಟ್ಸಾಪ್ ಮೂಲಕ ನಿಮ್ಮ ಮೊಬೈಲ್ ಫೋನ್ ಹ್ಯಾಕ್ ಮಾಡಲು ಹರಿ ಬಿಟ್ಟಿರುವ ಹೊಸ ಮಾಲ್ವೇರ್ (Malware) ಇದಾಗಿದೆ. ನೀವು ಏನಾದರೂ ಈ ಫೀಚರ್ ಡೌನ್‌ಲೋಡ್ ಮಾಡಿಕೊಂಡಿದ್ದೀರಾ? ಒಂದು ಸಾರಿ ಚೆಕ್ ಮಾಡಿಕೊಳ್ಳಿ.
ವಂಚಕರು ಹಲವಾರು ಹೊಸ ತಂತ್ರಗಳು ಮತ್ತು ಮೋಸದ ಬಳಕೆದಾರರನ್ನು ಸೈಬರ್ ವಂಚನೆಗಳನ್ನು ಮಾಡಲು ತಮ್ಮ ಬಲೆಗೆ ಬೀಳುವಂತೆ ಆಮಿಷವೊಡ್ಡುವ ಮಾರ್ಗಗಳನ್ನು ಅನುಸರಿಸುತ್ತಾರೆ. ಈ ರೀತಿಯ ವಂಚನೆಗಳ ಬಗ್ಗೆ ಬಳಕೆದಾರರು ಜಾಗರೂಕರಾಗಿರಬೇಕು. ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರಲು ಹೆಚ್ಚಿನ ಎಚ್ಚರಿಕೆಗಳನ್ನು ಕ್ರಮಗಳನ್ನು ಅನುಸರಿಸಬೇಕು ಎಂದು ಸರ್ಕಾರಿ ಸಲಾಹ ಸಮಿತಿ ಹೇಳಿದೆ.
ಏನಿದು ಪಿಂಕ್ ವಾಟ್ಸಾಪ್ ಸ್ಕ್ಯಾಮ್?
‘ಪಿಂಕ್ ಕಲರ್ ವಾಟ್ಸಾಪ್ ಲೋಗೋ’ವನ್ನು ಅಪ್‌ಡೇಟ್ ಮಾಡಲು ಮತ್ತು ಪಡೆದುಕೊಳ್ಳಲು ಯುಆರ್‌ಎಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂಬ ಫೇಕ್ ಲಿಂಕ್ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ವಾಟ್ಸಾಪ್ ಯಾವುದೇ ಪಿಂಕ್ ಲೋಗೋ ಬಿಡುಗಡೆ ಮಾಡಿಲ್ಲ. ಹಾಗಾಗಿ, ಈ ಫೇಕ್ ಲಿಂಕ್ ಫಿಶಿಂಗ್ ಲಿಂಕ್ ಆಗಿದೆ. ಒಂದೊಮ್ಮೆ ಬಳಕೆದಾರರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಅವರ ತಮ್ಮ ಫೋನ್ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿದ್ದಾರೆ. ಸೈಬರ್ ಖದೀಮರು ಮೊಬೈಲ್ ಹ್ಯಾಕ್ ಮಾಡಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಮ್ಮೆ ನಿಮ್ಮ ಮೊಬೈಲ್ ಸೈಬರ್ ಖದೀಮರ ನಿಯಂತ್ರಣಕ್ಕೆ ಹೋಯಿತು ಎಂದರೆ, ಅದರಲ್ಲಿರುವ ಫೋಟೋ, ಒಟಿಪಿಗಳು, ಕಾಂಟಾಕ್ಟ್‌ಗಳನ್ನು ಖದಿಯಬಹುದು. ನಿಮ್ಮ ಎಲ್ಲ ಡೇಟಾವನ್ನು ವಂಚಕರು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
ಇಷ್ಟು ಮಾತ್ರವಲ್ಲದೇ ನಿಮ್ಮ ಮೊಬೈಲ್‌ನಲ್ಲಿರುವ ಕಾಂಟಾಕ್ಟ್ ಸಂಖ್ಯೆಗಳನ್ನು, ಫೋಟೋಗಳನ್ನು ದುರುಪಯೋಗ ಪಡಿಸಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಖಾತೆ ಸೇರಿದಂತೆ ಇತರ ಮಾಹಿತಿಯನ್ನು ಕದಿಯಬಹುದು. ಇದರಿಂದ ನೀವು ಹಣವನ್ನು ಕೂಡ ಕಳೆದುಕೊಳ್ಳಬಹುದಾಗಿದೆ. ಹಾಗಾಗಿ ಹುಷಾರಿಗಿರಿ.
ಫೇಕ್ ಪಿಂಕ್ ವಾಟ್ಸಾಪ್ ಡೌನ್‌ಲೋಡ್ ಮಾಡಿಕೊಂಡಿದ್ದರೆ ಏನು ಮಾಡುವುದು?
ಪಿಂಕ್ ವಾಟ್ಸಾಪ್ ಲೋಗೋ ಆಸೆಗೆ ಬಿದ್ದು ಈ ಫೇಕ್ ಲಿಂಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರೆ ಕೂಡಲೇ ಅದನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಬೇಕೆಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಯಾವಯಾವುದೋ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಂತೆ ಮತ್ತು ಅಧಿಕೃತ ಪ್ಲೇ ಸ್ಟೋರ್‌ಗಳ ಹೊರತಾಗಿ ಬೇರೆ ಯಾವುದೇ ಆ್ಯಪ್ ಡೌನ್‌ಲೋಡ್ ಮಾಡದಂತೆ ಪೊಲೀಸರು ಬಳಕೆದಾರರಿಗೆ ಎಚ್ಚರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: WhatsApp Links Scam: ವಾಟ್ಸಾಪ್ ಲಿಂಕ್ಸ್ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಸುರಕ್ಷತೆಗೆ ಹೀಗೆ ಮಾಡಿ…
ಏತನ್ಮಧ್ಯೆ, ವಾಟ್ಸಾಪ್‌ನಲ್ಲಿ ವಂಚನೆಯ ಕರೆಗಳು ಮತ್ತು ಸಂದೇಶಗಳು ಹೆಚ್ಚುತ್ತಿವೆ. +84, +62, +60 ಮತ್ತು ಹೆಚ್ಚಿನವುಗಳಿಂದ ಪ್ರಾರಂಭವಾಗುವ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಅಜ್ಞಾತ ಕರೆಗಳು ಬರುತ್ತಿವೆ ಎಂದು ಬಹಳಷ್ಟು ಬಳಕೆದಾರರು ಟ್ವಿಟರ್‌ನಲ್ಲಿ ದೂರಿದ್ದಾರೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.