Site icon Vistara News

Business success | Yulu | ಬೆಂಗಳೂರಿನ ಯುಲು ಬೈಕ್ಸ್‌ನಲ್ಲಿ ನಾನಾ ಕಂಪನಿಗಳ 653 ಕೋಟಿ ರೂ. ಹೂಡಿಕೆ!

yulu

ಬೆಂಗಳೂರು: ಬೆಂಗಳೂರಿನಲ್ಲಿ ನೀವು ಸಣ್ಣ ಎಲೆಕ್ಟ್ರಿಕ್‌ ಬೈಕ್‌ಗಳನ್ನು ನೋಡಿರಬಹುದು. ಬಹುಶಃ ಅದರಲ್ಲಿ ಪ್ರಯಾಣಿಸರಬಹುದು. 2017ರಲ್ಲಿ ಆರಂಭವಾದ ಯುಲು ಬೈಕ್ಸ್‌ ( Yulu ) ಇದೀಗ ದೇಶ-ವಿದೇಶಗಳ ಕಂಪನಿಗಳಿಂದ ಹೂಡಿಕೆಯನ್ನು ಆಕರ್ಷಿಸುವ ಮಟ್ಟಿಗೆ ಬೆಳೆದಿದೆ!

ಇತ್ತೀಚೆಗೆ ಬಜಾಜ್‌ ಆಟೊ, ಅಮೆರಿಕ ಮೂಲದ ಮ್ಯಾಗ್ನಾ ಇಂಟರ್‌ನ್ಯಾಶನಲ್‌ ಕಂಪನಿಯಿಂದ 653 ಕೋಟಿ ರೂ.ಗಳ ಹೂಡಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಬಜಾಜ್‌ ಆಟೊ ಈ ಹಿಂದೆಯೂ ಯುಲು ಬೈಕ್ಸ್‌ನಲ್ಲಿ (Yulu Bikes Pvt Ltd) 57 ಕೋಟಿ ರೂ.ಗಳನ್ನು ಹೂಡಿಕೆ ಮಾಡಿತ್ತು. ಇದರಿಂದಾಗಿ ಯುಲುಗೆ ತನ್ನ ಪ್ರಾಡಕ್ಟ್‌ಗಳನ್ನು ಬಲಪಡಿಸಲು, ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲು ಆರ್ಥಿಕ ಚೈತನ್ಯ ಸಿಕ್ಕಿದಂತಾಗಿದೆ. ಯುಲು ಈಗ 1 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಬೈಕ್‌ಗಳನ್ನು ಹೊಂದಲು ಸಿದ್ಧತೆ ನಡೆಸಿದೆ. ಮುಂದಿನ 12 ತಿಂಗಳಿನಲ್ಲಿ 500 ಬ್ಯಾಟರಿ ಚಾರ್ಜಿಂಗ್‌ ಸ್ಟೇಶನ್‌ಗಳು ಮತ್ತು ಸ್ವೈಪಿಂಗ್‌ ಸ್ಟೇಶನ್‌ಗಳನ್ನು ಅಳವಡಿಸಲು ಉದ್ದೇಶಿಸಿದೆ.

ಯುಲುಗೆ ಬೆಳೆಯಲು ನೂರು ಪಟ್ಟು ಅವಕಾಶ!

ಯುಲು ಬೈಕ್ಸ್‌ಗೆ 100 ಪಟ್ಟು ಬೆಳೆಯಲು ಅವಕಾಶ ಸೃಷ್ಟಿಯಾಗಿದೆ. ಒಂದು ಕಡೆ ಸಾರಿಗೆ ಸೇವೆ (Mobility as a service) ಮತ್ತೊಂದು ಕಡೆ ಬ್ಯಾಟರಿ ಬಿಸಿನೆಸ್‌ (Battery as a service) ಕೂಡ ಮಾಡಲು ಹೇರಳ ಅವಕಾಶಗಳು ಇವೆ ಎನ್ನುತ್ತಾರೆ ಯುಲುವಿನ ಸಹ ಸಂಸ್ಥಾಪಕ ಅಮಿತ್‌ ಗುಪ್ತಾ.

2017ರಲ್ಲಿ ಸ್ಥಾಪನೆಯಾದ ಯುಲು ಬೆಂಗಳೂರಿನಲ್ಲಿ ಜನಪ್ರಿಯವಾಗುತ್ತಿದೆ. ಜನರಿಗೆ ಮೆಟ್ರೊ ನಿಲ್ದಾಣದಿಂದ, ರೈಲ್ವೆ ಸ್ಟೇಶನ್‌ನಿಂದ ಬಸ್‌ ನಿಲ್ದಾಣಗಳಿಂದ ಮನೆಗೆ ತೆರಳಲು, ಕಚೇರಿಗೆ ಅಥವಾ ಇನ್ನೆಲ್ಲಿಗೊ ಹೋಗಲು ಯುಲು ಎಲೆಕ್ಟ್ರಿಕ್‌ ಬೈಕ್‌ ನೆರವಾಗುತ್ತದೆ. ಇವಿ ಚಾರ್ಜಿಂಗ್‌ ಸ್ಟೇಶನ್‌ಗಳ ನೆಟ್‌ ವರ್ಕ್‌ಗಳನ್ನು ಹೊಂದಿದೆ. ಮ್ಯಾಗ್ನಾದ ಸಹಭಾಗಿತ್ವದೊಂದಿಗೆ ಯುಲು ಎನರ್ಜಿ ಅಸ್ತಿತ್ವಕ್ಕೆ ಬರಲಿದದು, ರಾಷ್ಟ್ರವ್ಯಾಪಿಯಾಗಿ ಚಾರ್ಜಿಂಗ್‌ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಸಲಿದೆ. ಇದರಿಂದ ಜನತೆಗೆ ಎಲೆಕ್ಟ್ರಿಕ್‌ ವಾಹನವನ್ನು ಖರೀದಿಸುವ ಖರ್ಚು ಉಳಿತಾಯವಾಗಬಹುದು ಎಂದು ಅಮಿತ್‌ ಗುಪ್ತಾ ಹೇಳಿದ್ದಾರೆ.

ಯುಲು 2020-21ರಲ್ಲಿ 13.7 ಕೋಟಿ ರೂ.ಗಳ ಆದಾಯವನ್ನು ಗಳಿಸಿತ್ತು. ಪ್ರಸ್ತುತ 10,000 ಎಲೆಕ್ಟ್ರಿಕ್‌ ದ್ವಿ ಚಕ್ರ ವಾಹನಗಳನ್ನು ಒಳಗೊಂಡಿದೆ. ಬೆಂಗಳೂರು-ದಿಲ್ಲಿ ಮತ್ತು ಮುಂಬಯಿನಲ್ಲಿ ವಹಿವಾಟು ನಡೆಸುತ್ತಿದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಮತ್ತೆ 18 ನಗರಗಳಿಗೆ ವಿಸ್ತರಣೆಯಾಗಲಿದೆ. ಕಡಿಮೆ ವೇಗದ, ಹಗುರ ಹಾಗೂ ಅಗಲ ಕಿರಿದಾದ ರಸ್ತೆಯಲ್ಲೂ ಸುಲಭವಾಗಿ ಸಂಚರಿಸಲು ಸೂಕ್ತವಾದ ಇ-ಬೈಕ್‌ಗಳ ಸೇವೆಯನ್ನು ಜನತೆಗೆ ಯುಲು ಒದಗಿಸುತ್ತದೆ.

ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಟ್ರಾಫಿಕ್‌ ಸಮಸ್ಯೆಯಿಂದ ಪಾರಾಗಲು ಯುಲು ಯುಪಯುಕ್ತ. ಇದು ಸಣ್ಣ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ. ನೋಡಲು ಮಕ್ಕಳ ಆಟದ ಸೈಕಲ್‌ನಂತೆ ಕಾಣುತ್ತದೆ. ಬೇರೆ ಎಲ್ಲ ಸ್ಕೂಟರ್‌ಗಿಂತ ಹಗುರ. ಆದರೆ ನಗರದ ಒಳಗೆ ಸಂಚರಿಸಲು ಉಪಯುಕ್ತ. ಸೈಕಲ್‌ಗಿಂತ ವೇಗವಾಗಿ ಇದರಲ್ಲಿ ಚಲಿಸಬಹುದು. ಗಂಟೆಗೆ ಗರಿಷ್ಠ ವೇಗ 25 ಕಿ.ಮೀ. ಯುಲು ಅಪ್ಲಿಕೇಷನ್‌ ಅನ್ನು ಮೊಬೈಲ್‌ನಲ್ಲಿ ಡೌನ್‌ ಲೋಡ್‌ ಮಾಡಿಕೊಂಡು ಸೇವೆ ಪಡೆಯಬಹುದು.

ಯಾರಿವರು ಯುಲು ಸ್ಥಾಪಕ ಅಮಿತ್‌ ಗುಪ್ತಾ?

ಯುಲು ಸಂಸ್ಥಾಪಕ ಅಮಿತ್‌ ಗುಪ್ತಾ

ಬೆಂಗಳೂರಿನಲ್ಲಿ ಯುಲು ಸೇವೆಯನ್ನು ಪರಿಚಯಿಸಿದ ಅಮಿತ್‌ ಗುಪ್ತಾ 1996ರಲ್ಲಿ ಕಾನ್ಪುರದ ಐಐಟಿಯಿಲ್ಲಿ ಮೆಕಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿಟೆಕ್‌ ಗಳಿಸಿದವರು. ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ನಲ್ಲಿ ಉನ್ನತ ಶಿಕ್ಷಣ ಪಡೆದವರು. ಉತ್ತರ ಅಮೆರಿಕದಲ್ಲಿ ಇನ್‌ಮೊಬಿ ಕಂಪನಿಯ ಮೊಬೈಲ್‌ ಜಾಹೀರಾತು ವಹಿವಾಟನ್ನು ಅಭಿವೃದ್ಧಿಪಡಿಸಿದವರು. ಒಇಎಂ ಮತ್ತು ಟೆಲ್ಕೊ ಸಲ್ಯೂಷನ್ಸ್‌ನ ಸಹ ಸಂಸ್ಥಾಪಕರು. ಕಳೆದ 2017ರಲ್ಲಿ ಯುಲುವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು.

ಇದನ್ನೂ ಓದಿ: Business success |‌ 10,000 ರೂ.ನಿಂದ ಆರಂಭವಾದ ಶರ್ಟ್‌ ಮಾರಾಟ ಈಗ 400 ಕೋಟಿ ರೂ. ಫ್ಯಾಷನ್‌ ಬ್ರಾಂಡ್!

Exit mobile version