Site icon Vistara News

ಚಾಟ್‌ಜಿಪಿಟಿಯ ಎಲ್ಲ ಬಳಕೆದಾರರಿಗೂ ವಾಯ್ಸ್ ಫೀಚರ್ ಲಭ್ಯ; ಓಪನ್ಎಐ ಘೋಷಣೆ

ChatGPT all users are now able to get voice feature Says OpenAI

ನವದೆಹಲಿ: ಓಪನ್ಎಐ (OpenAI) ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗಲಾಟೆ ನಡೆಯುತ್ತಿರುವ ಹೊತ್ತಿನಲ್ಲಿ ಕಂಪನಿಯು, ಕೃತಕ ಬುದ್ಧಿಮತ್ತೆ (artificial intelligence tool) ಟೂಲ್ ಚಾಟ್‌ಜಿಪಿಟಿಗೆ (ChatGPT) ವಾಯ್ಸ್ ಫೀಚರ್‌ (voice feature) ಅನ್ನು ಎಲ್ಲ ಬಳಕೆದಾರರಿಗೆ ನೀಡಲಾಗುವುದು ಎಂದು ಘೋಷಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಹಣ ಪಾವತಿಸಿದ ಚಂದಾದಾರಿಗೆ ಮಾತ್ರವೇ ಈ ವಾಯ್ಸ್ ಫೀಚರ್ ಬಳಕೆಗೆ ದೊರೆಯುತ್ತಿತ್ತು. ಅದೀಗ ಉಚಿತವಾಗಿ ಎಲ್ಲ ಬಳಕೆದಾರಿಗೆ ಲಭ್ಯವಾಗಲಿದೆ.

ಎಕ್ಸ್ ವೇದಿಕೆಯಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಓಪನ್ಎಐ, ವಾಯ್ಸ್‌ನೊಂದಿಗೆ ಚಾಟ್‌ಜಿಪಿಟಿ ಈಗ ಎಲ್ಲಾ ಉಚಿತ ಬಳಕೆದಾರರಿಗೆ ಲಭ್ಯವಿದೆ. ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಸಂಭಾಷಣೆಯನ್ನು ಪ್ರಾರಂಭಿಸಲು ಹೆಡ್‌ಫೋನ್‌ಗಳ ಐಕಾನ್ ಅನ್ನು ಟ್ಯಾಪ್ ಮಾಡಿ ಎಂದು ಹೇಳಿದೆ.

ಕುತೂಹಲಕಾರಿ ಎಂದರೆ, ಓಪನ್‌ಎಐನ ಮಾಜಿ ಅಧ್ಯಕ್ಷ ಗ್ರೆಗ್ ಬ್ರಾಕ್‌ಮನ್ ಅವರೂ ಚಾಟ್‌ಜಿಪಿಟಿಯ ಅಪ್‌ಡೇಟ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ವಾಯ್ಸ್ ಫೀಚರ್ ಚಾಟ್‌ಜಿಪಿಟಿ ಬಳಕೆಯ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಎಕ್ಸ್‌ ವೇದಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಅವರು, ಚಾಟ್‌ಜಿಪಿಟಿ ವಾಯ್ಸ್ ಫೀಚರ್ ಈಗ ಎಲ್ಲ ಉಚಿತ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಫೀಚರ್ ಬಳಸಿ ನೋಡಿ, ಚಾಟ್‌ಜಿಪಿಟಿ ಬಳಕೆಯ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ತಿಳಿಸಿದ್ದಾರೆ.

ಸ್ಯಾಮ್ ಆಲ್ಟ್‌ಮನ್ ಅವರನ್ನು ಸಿಇಒ ಸ್ಥಾನದಿಂದ ಆಡಳಿತ ಮಂಡಳಿ ಕಿತ್ತು ಹಾಕಿದ ಬೆನ್ನಲ್ಲೇ ಬ್ರಾಕ್‌ಮನ್ ಅವರು ತಮ್ಮ ಅಧ್ಯಕ್ಷ ಹುದ್ದೆಗ ರಾಜೀನಾಮೆ ನೀಡಿದ್ದರು. ಹಾಗಿದ್ದೂ, ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮತ್ತು ಸ್ಯಾಮ್ ಆಲ್ಟ್‌ಮನ್ ಅವರನ್ನು ಮತ್ತೆ ಸಿಇಒ ಸ್ಥಾನಕ್ಕೆ ನೇಮಕ ಮಾಡುತ್ತಿದೆ. ಹೂಡಿಕೆದಾರರು ಮೊದಲಿಗೆ ಸ್ಯಾಮ್ ಪರವಾಗಿ ಒತ್ತಡ ಹೇರಿದ್ದರು. ಬಳಿಕ ಕಂಪನಿ ಸಿಬ್ಬಂದಿ ಕೂಡ ಸ್ಯಾಮ್ ನೇಮಕಕ್ಕೆ ತೀವ್ರ ಒತ್ತಡ ತಂದರು. ಸ್ಯಾಮ್ ಅವರನ್ನು ವಾಪಸ್ ನೇಮಕ ಮಾಡಿದ್ದರೆ ಸಾಮೂಹಿಕ ರಾಜೀನಾಮೆಯ ಬೆದರಿಕೆಯನ್ನುಹಾಕಿದ್ದರು.

ಏನಿದು ಚಾಟ್‌ಜಿಪಿಟಿ ವಾಯ್ಸ್ ಫೀಚರ್?

ಬಳಕೆದಾರರ ಆದ್ಯತೆಗಳಿಗೆ ಅನುಗುಣವಾಗಿ ಆಯ್ಕೆ ಮಾಡಬಹುದಾದ ಐದು ವಿಭಿನ್ನ ಧ್ವನಿಗಳ ಲಾಭವನ್ನು ಪಡೆಯುವ ಮೂಲಕ ಚಾಟ್‌ಜಿಪಿಟಿ ಬಳಕೆದಾರರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ಓಪನ್ಎಐ ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ತನ್ನ ಬ್ಲಾಗ್‌ನಲ್ಲಿ ಬಹಿರಂಗಪಡಿಸಿತ್ತು. ಪ್ರತಿ ಧ್ವನಿಯನ್ನು ರಚಿಸಲು ವೃತ್ತಿಪರ ಧ್ವನಿ ನಟರ ಸಹಾಯವನ್ನು ಪಡೆದಿದೆ ಎಂದು ಕಂಪನಿ ಹೇಳಿದೆ. ಹಾಗೆಯೇ ಮಾತನಾಡುವ ಪದಗಳನ್ನು ಪಠ್ಯಕ್ಕೆ ಲಿಪ್ಯಂತರಿಸಲು ಕಂಪನಿಯ ಸ್ವಾಮ್ಯದ ವಿಸ್ಪರ್ ಸ್ಪೀಚ್ ರೆಕಗ್ನಿಷನ್ ಸಿಸ್ಟಮ್ ಅನ್ನು ಬಳಸಲಾಗುತ್ತಿದೆ ಎಂದು ಅದು ತಿಳಿಸಿದೆ.

ಚಾಟ್‌ಜಿಪಿಟಿಯ ಹೊಸ ಧ್ವನಿ ಸಾಮರ್ಥ್ಯಗಳು ಹೊಸ ಪಠ್ಯದಿಂದ ಭಾಷಣದ ಮಾದರಿಯಿಂದ ಚಾಲಿತವಾಗಿದ್ದು, ಓಪನ್ಎಐ ಹೇಳುವ ಪ್ರಕಾರ ಕೇವಲ ಪಠ್ಯ ಮತ್ತು ಕೆಲವು ಸೆಕೆಂಡುಗಳ ಮಾತಿನ ಮಾದರಿಗಳಿಂದ ಮಾನವ ತರಹದ ಆಡಿಯೊವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಅನೇಕ “ಸೃಜನಶೀಲ ಮತ್ತು ಪ್ರವೇಶಿಸುವಿಕೆ-ಕೇಂದ್ರಿತ ಅಪ್ಲಿಕೇಶನ್‌ಗಳಿಗೆ” ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಬಹುದು.

ಈ ಸುದ್ದಿಯನ್ನೂ ಓದಿ: Olympus AI: ಚಾಟ್‌ಜಿಪಿಟಿಗೆ ಠಕ್ಕರ್ ನೀಡಲು ರೆಡಿಯಾಗುತ್ತಿದೆ ಅಮೆಜಾನ್‌ನ ‘ಒಲಿಂಪಸ್’!

Exit mobile version