Site icon Vistara News

Twitter: ಡಿಲಿಟ್ ಮಾಡಿದ ಟ್ವೀಟ್ಸ್ ಮತ್ತೆ ಪ್ರತ್ಯಕ್ಷ! ಬೆಚ್ಚಿ ಬಿದ್ದ ಬಳಕೆದಾರರು

Deleted tweets appears on twitter, bug problem?

ನವದೆಹಲಿ: ಎಲಾನ್ ಮಸ್ಕ್ (Elon Musk) ಒಡೆತನದ ಮೈಕ್ರೋಬ್ಲಾಗಿಂಗ್‌ ಟ್ವಿಟರ್‌ನಲ್ಲಿ (Twitter) ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಬಳಕೆದಾರರು ಡಿಲಿಟ್ ಮಾಡಿದ ಟ್ವೀಟ್‌ಗಳು ಮತ್ತೆ ರಿಪೋಸ್ಟ್ ಆಗುತ್ತಿವೆ! ಹೌದು, ಅಮೆರಿಕದ ಪತ್ರಕರ್ತರೊಬ್ಬರಿಗೆ ಮೊದಲಿಗೆ ಈ ರೀತಿಯ ಅನುಭವವಾಗಿದ್ದು, ಆ ಬಳಿಕ ಬಹಳಷ್ಟು ಬಳಕೆದಾರರು ಕೂಡ ತಾವು ಈ ಹಿಂದೆ ಡಿಲಿಟ್ ಮಾಡಿದ ಪೋಸ್ಟ್‌ಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಟ್ವಿಟರ್‌ನಲ್ಲಿನ ತಾಂತ್ರಿಕ ಸಮಸ್ಯೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ದಿ ವರ್ಜ್ ಪತ್ರಕರ್ತ ಜೇಮ್ಸ್ ವಿನ್ಸೆಂಟ್ ಅವರು ಮೊದಲಿಗೆ ಈ ಬಗ್ಗೆ ರಿಪೋರ್ಟ್ ಮಾಡಿದ್ದರು. ಎರಡು ವಾರಗಳ ಹಿಂದೆ ತಮ್ಮೆಲ್ಲ ಟ್ವೀಟ್‌ಗಳನ್ನು ಅವರು ಡಿಲಿಟ್ ಮಾಡಿದ್ದರು. ಆದರೆ, ಅವರಿಗೆ ಸೋಮವಾರ ಆಶ್ಚರ್ಯ ಕಾದಿತ್ತು. ಡಿಲಿಟ್ ಮಾಡಿದ್ದ ಎಲ್ಲ ಟ್ವೀಟ್‌ಗಳು ಮತ್ತೆ ಕಾಣಿಸಿಕೊಂಡಿವೆ. 2020ರಲ್ಲಿ ಸಂವಹನ ನಡೆಸಿದ ಟ್ವೀಟ್‌ಗಳೂ ಕೂಡ ಮತ್ತೆ ಪೋಸ್ಟ್ ಆಗಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಈ ರೀತಿಯ ಸಮಸ್ಯೆ ಎದುರಾಗಿದ್ದು ಅವರಿಗೊಬ್ಬರಿಗೆ ಮಾತ್ರ ಅಲ್ಲ. ಇನ್ನೂ ಹಲವರು ಇದೇ ರೀತಿಯ ಸಮಸ್ಯೆಗೆ ಸಿಲುಕಿದ್ದರು. ಬಹಳಷ್ಟು ಜನರು ತಾವು ಡಿಲಿಟ್ ಮಾಡಿದ ಟ್ವೀಟ್‌ಗಳು ಮತ್ತೆ ಪೋಸ್ಟ್ ಆಗುತ್ತಿವೆ ಎಂದು ರಿಪೋರ್ಟ್ ಮಾಡುತ್ತಿದ್ದರು.

ಸಾಮಾಜಿಕ ಮಾಧ್ಯಮ ವೇದಿಕೆ ಮಾಸ್ಟೋಡಾನ್ ಬಳಸುವ ಡಿಕ್ ಮೊರೆಲ್ ಎಂಬುವವರು ಕಳೆದ ನವೆಂಬರ್‌ನಲ್ಲಿ, ರೆಡಾಕ್ಟ್ ಎಂಬ ಸಾಧನವನ್ನು ಬಳಸಿಕೊಂಡು ತಮ್ಮ ಎಲ್ಲಾ ಟ್ವೀಟ್‌ಗಳು, ಲೈಕ್ಸ್, ಮೀಡಿಯಾ ಫೈಲ್‌ಗಳು ಮತ್ತು ರಿಟ್ವೀಟ್‌ಗಳನ್ನು ಡಿಲಿಟ್ ಮಾಡಿದ್ದರು. ಅವರು ತಮ್ಮ ಪ್ರೊಫೈಲ್‌ನಿಂದ 38,000 ಟ್ವೀಟ್‌ಗಳನ್ನು ಯಶಸ್ವಿಯಾಗಿ ಅಳಿಸಿ ಹಾಕಿದ್ದರು. ಆದರೆ, ಟ್ವಿಟರ್‌ನಲ್ಲಿ ಕಾಣಿಸಿಕೊಂಡ ಬಗ್ ಪರಿಣಾಮ, ಅವರು ಅಳಿಸಿ ಹಾಕಿದ್ದ ಅಷ್ಟೂ ಟ್ವೀಟ್‌ಗಳು ಮತ್ತೆ ಮರುಸ್ತಾಪನೆಯಾಗಿದ್ದನ್ನು ಕಂಡು ಆಘಾತಕ್ಕೊಳಗಾದರು. ಇದೇ ರೀತಿಯ ಅನುಭವ ಅನೇಕ ಬಳಕೆದಾರರಿಗೆ ಆಗಿದೆ.

ಟ್ವಿಟರ್‌ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗೆ ಮೂಲ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಆದರೆ, ಈ ಸಮಸ್ಯೆ ಎಲ್ಲ ಬಳಕೆದಾರರಿಗೆ ಆಗಿಲ್ಲ. ಕೆಲವರಿಗೆ ಮಾತ್ರವೇ ಈ ಅನುಭವ ಆಗಿದೆ. ಆದರೆ, ಮೊರೆಲ್ ಅವರು ಹೇಳುವ ಪ್ರಕಾರ, ಸುಮಾರು 400 ಜನರು ಈ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಈ ಕುರಿತು ಮಾಹಿತಿ ಪಡೆಯಲು ದಿ ವರ್ಜ್ ಪತ್ರಕರ್ತ ವಿನ್ಸೆಂಟ್ ಅವರು ಟ್ವಿಟರ್ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಅವರಿಗೆ ಕೇವಲ ಆಟೋಮೆಟೆಡ್ ಪ್ರತಿಕ್ರಿಯೆ ಮಾತ್ರವೇ ದೊರೆತಿದೆ ಹೊರತು ಯಾವುದೇ ಪರಿಹಾರ ಸಿಕ್ಕಿಲ್ಲ.

ಇದನ್ನೂ ಓದಿ: Instagram: ಟ್ವಿಟರ್​ಗೆ ಪೈಪೋಟಿ ಕೊಡಲು ಮುಂದಾದ ಇನ್​ಸ್ಟಾಗ್ರಾಂ; ಶೀಘ್ರವೇ​ ಹೊಸ ಆ್ಯಪ್ ಬಿಡುಗಡೆ?!

ಇದು ಟ್ವಿಟ್ಟರ್ ಬಳಕೆದಾರರಿಗೆ ಟ್ವೀಟ್‌ಗಳನ್ನು ಅಳಿಸಲು ಅನುವು ಮಾಡಿಕೊಡುವ ಮೂರನೇ ವ್ಯಕ್ತಿಯ ಪರಿಕರಗಳಲ್ಲಿನ ದೋಷದಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಅಲ್ಲದೇ ಟ್ವಿಟರ್‌ನ ಸರ್ವರ್-ಸಂಬಂಧಿತ ಸಮಸ್ಯೆ ಕೂಡ ಆಗಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ತಂತ್ರಜ್ಞಾನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version