ಹೊಸದಿಲ್ಲಿ: ‘ನ್ಯೂರಾಲಿಂಕ್ (Neuralink) ಬ್ರೈನ್ ಚಿಪ್ (Brain Chip) ಅಳವಡಿಸಿದ ಮೊದಲ ವ್ಯಕ್ತಿ ಇದೀಗ ಯೋಚನೆಯಿಂದಲೇ ಕಂಪ್ಯೂಟರ್ ಪರದೆಯ ಮೇಲಿನ ಕರ್ಸರ್ ಅನ್ನು ಚಲಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆʼ ಎಂದು ಟೆಕ್ ದೈತ್ಯ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ.
ಇದು ನಿಜವಾಗಿದ್ದರೆ, ಇದೊಂದು ಐತಿಹಾಸಿಕ ತಂತ್ರಜ್ಞಾನ ಬೆಳವಣಿಗೆ ಎನಿಸಲಿದೆ. ಈ ಪ್ರಯೋಗವನ್ನು ಮುಂದುವರಿಸಿ ಮನುಷ್ಯನ ನರರೋಗಗಳನ್ನು ನಿವಾರಿಸುವ, ಮಾನವ ಮೆದುಳು- ಕಂಪ್ಯೂಟರ್ ಸುಲಲಿತ ಸಂಪರ್ಕವನ್ನು ಸಾಧ್ಯವಾಗಿಸುವ ಕನಸನ್ನು ಎಲಾನ್ ಮಸ್ಕ್ ಹೊಂದಿದ್ದಾನೆ.
“ಮೆದುಳಿನ ಚಿಪ್ ಅಳವಡಿಕೆ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಈಗ ಪೂರ್ಣ ಚೇತರಿಸಿಕೊಂಡಿದ್ದಾನೆ. ನಿರೀಕ್ಷಿತ ನರಚಲನೆ ಪರಿಣಾಮಗಳನ್ನು ತೋರಿಸಿದ್ದಾನೆ. ಕೇವಲ ಯೋಚಿಸುವ ಮೂಲಕ ಪರದೆಯಲ್ಲಿ ಮೌಸ್ ಅನ್ನು ಚಲಿಸಲು ಆತನಿಂದ ಸಾಧ್ಯವಾಗಿದೆ” ಎಂದು ನ್ಯೂರಾಲಿಂಕ್ ಸ್ಟಾರ್ಟಪ್‌ನ ಸಂಸ್ಥಾಪಕ ಎಲಾನ್ ಮಸ್ಕ್ ಹೇಳಿದ್ದಾರೆ.
“ಈ ವ್ಯಕ್ತಿಯು ಸಾಧಿಸಿದ ಮೌಸ್ ಬಟನ್ ಕ್ಲಿಕ್‌ಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವುದು ನ್ಯೂರಾಲಿಂಕ್‌ನ ಪ್ರಸ್ತುತ ಗುರಿಯಾಗಿದೆ” ಎಂದು ಮಸ್ಕ್ ಹೇಳಿದ್ದಾರೆ. ಕಳೆದ ತಿಂಗಳು ಕಂಪನಿಯು ʼಮಾನವ ಪ್ರಯೋಗʼಕ್ಕೆ ಅನುಮೋದನೆ ಪಡೆದ ನಂತರ ಮೊದಲ ವ್ಯಕ್ತಿಗೆ ಮೆದುಳಿನ ಚಿಪ್ ಅನ್ನು ಯಶಸ್ವಿಯಾಗಿ ಅಳವಡಿಸಿತು. ವ್ಯಕ್ತಿಯ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ.
ಬನ್ನಿ, ನ್ಯೂರಾಲಿಂಕ್ ಹಾಗೂ ಅದು ನಡೆಸುತ್ತಿರುವ ಪ್ರಯೋಗದ ವಿವರಗಳನ್ನು ಇಲ್ಲಿ ನೋಡೋಣ.
ನ್ಯೂರಾಲಿಂಕ್ ಎಂದರೇನು?
2016ರಲ್ಲಿ ಎಲೋನ್ ಮಸ್ಕ್ ಸ್ಥಾಪಿಸಿದ ನ್ಯೂರಾಲಿಂಕ್ ಒಂದು ನ್ಯೂರೋಟೆಕ್ನಾಲಜಿ ಕಂಪನಿ. ʼನ್ಯೂರಾಲಿಂಕ್ʼ ಮಾನವನ ಮೆದುಳಿನಲ್ಲಿ ಅಳವಡಿಸಬಹುದಾದ ಒಂದು ಚಿಕ್ಕ ಕಂಪ್ಯೂಟರ್ ಚಿಪ್. ನ್ಯೂರಾಲಿಂಕ್‌ನ ಆರಂಭಿಕ ಪ್ರಯೋಗವೆಂದರೆ ʼಟೆಲಿಪತಿʼ. ಇದು ಬಳಕೆದಾರರು ತಮ್ಮ ಮನಸ್ಸಿನಿಂದಲೇ ನೇರವಾಗಿ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಜೊತೆಗೆ ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುತ್ತವೆ.
ನಮ್ಮ ದೇಹವನ್ನು ನಿಯಂತ್ರಿಸಲು ನಮ್ಮ ಮಿದುಳುಗಳು ವಿದ್ಯುತ್ ಸಂಕೇತಗಳನ್ನು ಬಳಸುವಂತೆಯೇ, ನ್ಯೂರಾಲಿಂಕ್ ಮೆದುಳಿನ ಚಿಪ್ ನಮ್ಮ ಆಲೋಚನೆಗಳು ಮತ್ತು ಡಿಜಿಟಲ್ ಪ್ರಪಂಚದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಜನವರಿಯಲ್ಲಿ ಎಲಾನ್ ಮಸ್ಕ್ ಮೊದಲ ಮಾನವನಿಗೆ ಚಿಪ್‌ನ ಯಶಸ್ವಿ ಅಳವಡಿಕೆಯಾಯಿತು ಎಂದು ಘೋಷಿಸಿದರು. ಕಂಪನಿಯು ಸೆಪ್ಟೆಂಬರ್‌ನಲ್ಲಿ ಮಾನವ ಪ್ರಯೋಗಕ್ಕೆ ಅನುಮೋದನೆಯನ್ನು ಪಡೆದುಕೊಂಡಿತ್ತು.
ಮೆದುಳನ್ನು ಕಂಪ್ಯೂಟರ್‌ಗೆ ಸಂಪರ್ಕಿಸುವುದು ಏಕೆ?
ʼದಿ ಲಿಂಕ್ʼ ಎಂದು ಕರೆಯಲ್ಪಡುವ ಇದು ಮೆದುಳು ಮತ್ತು ಕಂಪ್ಯೂಟರ್ ನಡುವಿನ ತಡೆರಹಿತ ಸಂವಹನವನ್ನು ಉಂಟುಮಾಡುವ ಗುರಿಯನ್ನು ಹೊಂದಿದೆ. ನಮ್ಮ ಮೆದುಳನ್ನು ಕಂಪ್ಯೂಟರ್‌ಗಳಿಗೆ ಸಂಪರ್ಕಿಸುವ ಮೂಲಕ, ನಾವು ನಮ್ಮ ಮನಸ್ಸನ್ನು ವಿಸ್ತರಿಸಬಹುದು ಮತ್ತು ಮಿತಿಗಳನ್ನು ಮೀರಬಹುದು ಎಂದು ಎಲಾನ್ ಮಸ್ಕ್ ನಂಬುತ್ತಾರೆ. ಇದು ನಮ್ಮ ಬುದ್ಧಿವಂತಿಕೆಯನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುವಂತಿದೆ. ವಿಷಯಗಳನ್ನು ವೇಗವಾಗಿ ಕಲಿಯಲು, ಮಾಹಿತಿಯನ್ನು ತ್ವರಿತವಾಗಿ ದಕ್ಕಿಸಿಕೊಳ್ಳಲು, ಮಾತಿನ ಅಗತ್ಯವಿಲ್ಲದೇ ನಮ್ಮ ಆಲೋಚನೆಗಳನ್ನು ಮಾತ್ರ ಬಳಸಿಕೊಂಡು ಇತರರೊಂದಿಗೆ ಸಂವಹನ ನಡೆಸಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.
ನ್ಯೂರಾಲಿಂಕ್ ಮೂಲಕ ಭವಿಷ್ಯದಲ್ಲಿ ನಮ್ಮ ಮೆದುಳಿನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು, ಮಾನವರು ಮತ್ತು ತಂತ್ರಜ್ಞಾನದ ನಡುವೆ ಇನ್ನಷ್ಟು ಗಾಢ ಸಹಜೀವನ ನಡೆಸಬಹುದು ಎಂಬುದು ಎಲಾನ್ ಮಸ್ಕ್ ಕನಸು.
ಇದು ನರವೈಜ್ಞಾನಿಕ ಸಮಸ್ಯೆ, ನರವ್ಯೂಹದ ಅಸ್ವಸ್ಥತೆ, ಮೆದುಳಿನ ಕಾರ್ಯಾಚರಣೆಯ ಸಮಸ್ಯೆಗಳನ್ನು ಹೊಂದಿದ ವ್ಯಕ್ತಿಗಳನ್ನು ಗುಣಪಡಿಸುವ ಚಿಂತನೆಯನ್ನೂ ಹೊಂದಿದೆ. ಎಲೆಕ್ಟ್ರಾನಿಕ್ ಸಾಧನಗಳ ಸಂಪರ್ಕದ ಮೂಲಕ ಮೆದುಳಿನ ನಿಯಂತ್ರಣವನ್ನು ಮರಳಿ ಪಡೆಯಲು ಇದು ಸಹಾಯ ಮಾಡುತ್ತದೆ. ನರಗಳ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಚಿಂತನೆಯನ್ನು ಕಾರ್ಯರೂಪಕ್ಕೆ ತರುತ್ತದೆ.
ಕಂಪನಿ $5 ಶತಕೋಟಿ ಮೌಲ್ಯ ಹೊಂದಿದೆ. ಪ್ರಯೋಗದ ಸುರಕ್ಷತಾ ಕ್ರಮಗಳ ಬಗ್ಗೆ ವಿಜ್ಞಾನಿಗಳಲ್ಲಿ ಕಳವಳವಿದೆ.
ಇದನ್ನೂ ಓದಿ: Elon Musk: ಭಾರತಕ್ಕೆ ವಿಶ್ವಸಂಸ್ಥೆ ಕಾಯಂ ಸ್ಥಾನ ನೀಡಿ; ಎಲಾನ್ ಮಸ್ಕ್ ಆಗ್ರಹ