Site icon Vistara News

Facebook, Instagram Down: ಫೇಸ್‌ಬುಕ್‌, ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​; ಬಳಕೆದಾರರ ಪರದಾಟ

Facebook, Instagram Down

Facebook, Instagram Down

ನವದೆಹಲಿ: ಮೆಟಾ ಒಡೆತನದ ಫೇಸ್‌ಬುಕ್‌ (Facebook) ಹಾಗೂ ಇನ್‌ಸ್ಟಾಗ್ರಾಂ (Instagram) ಸರ್ವರ್‌ ಡೌನ್‌ (Server Down) ಆಗಿದ್ದು, ಸಾಮಾಜಿಕ ಜಾಲತಾಣಗಳಿಲ್ಲದೆ ಪ್ರಪಂಚದಾದ್ಯಂತದ ಜನ ಪರದಾಡುತ್ತಿದ್ದಾರೆ (Facebook, Instagram Down). ಇಂಟರ್‌ನೆಟ್‌ ಟ್ರಾಫಿಕ್‌ ಮೇಲೆ ನಿಗಾ ಇರಿಸುವ ಡೌನ್‌ ಡಿಟೆಕ್ಟರ್‌ ಸಂಸ್ಥೆಯ ಪ್ರಕಾರ, ಸಾವಿರಾರು ಬಳಕೆದಾರರ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಸುಮಾರು 18,000ಕ್ಕೂ ಹೆಚ್ಚು ವರದಿಗಳು ಬಂದಿದ್ದು, ಆ ಪೈಕಿ ಶೇ. 59ರಷ್ಟು ಮಂದಿ ಅಪ್ಲಿಕೇಶನ್ ಪ್ರವೇಶಿಸುವಾಗ ಸಮಸ್ಯೆಗಳನ್ನು ಎದುರಿಸಿದರೆ ಶೇ. 34ರಷ್ಟು ಬಳಿಕೆದಾರರು ಸರ್ವರ್ ಸಂಪರ್ಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶೇ. 7ರಷ್ಟು ಮಂದಿಗೆ ಲಾಗಿನ್ ಮಾಡುವಾಗ ಸಮಸ್ಯೆ ಕಂಡು ಬಂದಿದೆ.

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ್ಯಪ್‌ ಓಪನ್‌ ಮಾಡುವಾಗ ʼSomething went wrong. There’s an issue and the page could not be loadedʼ, ʼError loading media’ ಮುಂತಾದ ಮೆಸೇಜ್‌ ಕಂಡು ಬರುತ್ತಿದೆ ಎಂದು ಬಳಕೆದಾರರು ದೂರಿದ್ದಾರೆ. ಇಂಟರ್‌ನೆಟ್‌ ಮೇಲ್ವಿಚಾರಣಾ ಗುಂಪು ನೆಟ್‌ಬ್ಲಾಕ್ಸ್‌ (NetBlocks) ಕೂಡ ಎರಡು ಸಾಮಾಜಿಕ ಜಾಲತಾಣದ ವೆಬ್‌ಸೈಟ್‌ಗಳು ಪ್ರಸ್ತುತ ‘ಅಂತಾರಾಷ್ಟ್ರೀಯ ಸ್ಥಗಿತಗಳನ್ನು’ ಅನುಭವಿಸುತ್ತಿವೆ ಎಂಬ ಅಂಶವನ್ನು ಗಮನಿಸಿದೆ.

“ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ಸೇರಿದಂತೆ ಮೆಟಾ ಪ್ಲಾಟ್‌ಫಾರ್ಮ್‌ಗಳು ಪ್ರಸ್ತುತ ಅಂತಾರಾಷ್ಟ್ರೀಯ ಸ್ಥಗಿತಗಳನ್ನು ಅನುಭವಿಸುತ್ತಿವೆ. ಇದು ದೇಶೀಯ ಮಟ್ಟದ ಇಂಟರ್‌ನೆಟ್‌ ಅಡೆತಡೆಗಳು ಅಥವಾ ಫಿಲ್ಟರಿಂಗ್‌ಗೆ ಸಂಬಂಧಿಸಿಲ್ಲ” ಎಂದು ನೆಟ್‌ಬ್ಲಾಕ್ಸ್‌ ತಿಳಿಸಿದೆ. ವಿಶೇಷವೆಂದರೆ ಈ ವರ್ಷದ ಮಾರ್ಚ್‌ನಲ್ಲಿಯೂ ಇದೇ ರೀತಿಯ ಸಮಸ್ಯೆ ಕಂಡು ಬಂದಿತ್ತು. ಪ್ರಪಂಚದಾದ್ಯಂತದ ಲಕ್ಷಾಂತರ ಬಳಕೆದಾರರು ತಮ್ಮ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆ ಲಾಗ್ ಔಟ್ ಆಗುತ್ತಿರುವ ಬಗ್ಗೆ ದೂರು ನೀಡಿದ್ದರು.

ನೆಟ್ಟಿಗರು ಏನಂದ್ರು?

ಮೆಟಾ ಫ್ಲಾಟ್‌ಫಾರ್ಮ್‌ನಲ್ಲಿ ಪದೇ ಪದೆ ಇಂತಹ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇರೆ ಯಾವ ಅಪ್ಲಿಕೇಷನ್‌ಗಳಲ್ಲಿಯೂ ಇಷ್ಟರ ಮಟ್ಟಿಗೆ ಸಮಸ್ಯೆ ಕಂಡುಬರುತ್ತಿಲ್ಲ ಎಂದು ಹೇಳಿದ್ದಾರೆ. ಪರಿಸ್ಥಿತಿಯಿಂದ ನಿರಾಶೆಗೊಂಡ ಬಳಕೆದಾರರೊಬ್ಬರು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಸ್ಥಗಿತದ ಬಗೆಗಿನ ನೆಟ್‌ಬ್ಲಾಕ್ಸ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿ, “ಬಹುಶಃ ಈ ಸಮಸ್ಯೆ ಬಗೆಹರಿಯುವಂತೆ ಕಾಣಿಸುತ್ತಿಲ್ಲʼʼ ಎಂದು ಹೇಳಿದ್ದಾರೆ. ʼʼಮೆಟಾ ಸರ್ವರ್‌ನಲ್ಲಿ ಸಮಸ್ಯೆ ಎದುರಾಗಿರಬೇಕು. ಅದೇ ಕಾರಣಕ್ಕೆ ಫೇಸ್‌ಬುಕ್‌ ಕೂಡ ಕೆಲಸ ಮಾಡುತ್ತಿಲ್ಲʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Facebook Server: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸರ್ವರ್‌ ಡೌನ್;‌ ನಿಮ್ಮ ಖಾತೆ ಚೆಕ್‌ ಮಾಡಿಕೊಳ್ಳಿ

ಈ ವರ್ಷ ಮಾರ್ಚ್‌ನಲ್ಲಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಸರ್ವರ್‌ ಡೌನ್‌ ಆಗಿತ್ತು. ಕೆಲಹೊತ್ತು ಮೊಬೈಲ್‌ ಹಾಗೂ ಕಂಪ್ಯೂಟರ್‌ನಲ್ಲಿ ಎರಡೂ ಖಾತೆಗಳು ಲಾಗ್‌ಔಟ್‌ ಆಗಿದ್ದು, ಮತ್ತೆ ಲಾಗ್‌ಇನ್‌ ಆಗುತ್ತಿರಲಿಲ್ಲ. ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಇಲ್ಲದೆ ಜನ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಮೆಟಾ ಕಂಪನಿಯು ಪ್ರತಿಕ್ರಿಯಿಸಿದ್ದು, ಜನರ ಕ್ಷಮೆಯಾಚಿಸಿತ್ತು.

Exit mobile version