ನವ ದೆಹಲಿ: ಭಾರತದ ಮೊಟ್ಟ ಮೊದಲ ೫ಜಿ ಸ್ಪೆಕ್ಟ್ರಮ್ ಹರಾಜು ಸೋಮವಾರ ಮುಕ್ತಾಯವಾಗಿದೆ. ಜುಲೈ ೨೬ರಿಂದ ಆಗಸ್ಟ್ ೧ರ ತನಕ ಒಟ್ಟು ೧,೫೦,೧೭೩ ರೂ.ಗಳ ಸ್ಪೆಕ್ಟ್ರಮ್ ಮಾರಾಟವಾಗಿದೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ನ ಭಾಗವಾಗಿರುವ ರಿಲಯನ್ಸ್ ಜಿಯೊ, ಅತಿ ಹೆಚ್ಚು ಸ್ಪೆಕ್ಟ್ರಮ್ ಖರೀದಿಸಿದೆ.
ರಿಲಯನ್ಸ್ ಜಿಯೊ ೨೪,೭೪೦ ಮೆಗಾಹರ್ಟ್ಸ್ ಮೌಲ್ಯದ ೫ಜಿ ಸ್ಪೆಕ್ಟ್ರಮ್ ಖರೀದಿಸಿದ್ದರೆ, ಏರ್‌ಟೆಲ್ ೧೯,೮೬೭ ಮೆಗಾಹರ್ಟ್ಸ್ ಮೌಲ್ಯದ ೫ಜಿ ಖರೀದಿಸಿದೆ.
ಯಾರಿಂದ ಎಷ್ಟು ೫ಜಿ ಸ್ಪೆಕ್ಟ್ರಮ್ ಖರೀದಿ?
ರಿಲಯನ್ಸ್ ಜಿಯೊದಿಂದ 24,740 ಮೆಗಾಹರ್ಟ್ಸ್ | 88,078 ಕೋಟಿ ರೂ. ಮೌಲ್ಯ |
ಭಾರ್ತಿ ಏರ್‌ಟೆಲ್, 19,867 ಮೆಗಾಹರ್ಟ್ಸ್ | 43,084 ಕೋಟಿ ರೂ. ಮೌಲ್ಯ |
ವೊಡಾಫೋನ್ ಐಡಿಯಾ, 6,228 ಮೆಗಾಹರ್ಟ್ಸ್ | 18,784 ಕೋಟಿ ರೂ. ಮೌಲ್ಯ |
ಅದಾನಿ ಗ್ರೂಪ್, 400 ಮೆಗಾ ಹರ್ಟ್ಸ್ | 212 ಕೋಟಿ ರೂ. |
ಸೋಮವಾರ ಹರಾಜಿನ ೭ನೇ ದಿನವಾಗಿತ್ತು. ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಎಂಟರ್‌ಪ್ರೈಸಸ್ ಹರಾಜಿನಲ್ಲಿ ಭಾಗವಹಿಸಿದ್ದವು. ೪ಜಿಗಿಂತ ೧೦ ಪಟ್ಟು ಹೆಚ್ಚು ವೇಗವನ್ನು ೫ಜಿ ಹೊಂದಿದೆ.
3ಜಿಯಿಂದ ೫ಜಿ ತನಕ ಹರಾಜಿನ ಮೌಲ್ಯ ವರ್ಧನೆ
3ಜಿ | 50,968 ಕೋಟಿ ರೂ. |
4ಜಿ | 77,815 ಕೋಟಿ ರೂ. |
5ಜಿ | 150,173 ಕೋಟಿ ರೂ. |
ಕಳೆದ ವರ್ಷ ನಡೆದ ೪ಜಿ ಸ್ಪೆಕ್ಟ್ರಮ್ ಹರಾಜಿನ ಮೌಲ್ಯ ೭೭,೮೧೫ ಕೋಟಿ ರೂ.ಗಳಾಗಿದ್ದರೆ, ೨೦೧೦ರಲ್ಲಿ ನಡೆದ ೩ಜಿ ಸ್ಪೆಕ್ಟ್ರಮ್ ಹರಾಜಿನ ಮೌಲ್ಯ ೫೦,೯೬೮ ಕೋಟಿ ರೂ. ಆಗಿತ್ತು. ಒಟ್ಟು ೭ ಸುತ್ತುಗಳಲ್ಲಿ ಹರಾಜು ನಡೆದಿತ್ತು. ಈ ವರ್ಷ ೪.೩ ಲಕ್ಷ ಕೋಟಿ ರೂ. ಮೌಲ್ಯದ ೭೨ ಗಿಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು ಹರಾಜಿಗಿಡಲಾಗಿತ್ತು. ೬೦೦ ಮೆಗಾಹರ್ಟ್ಸ್, ೭೦೦ ಮೆಗಾಹರ್ಟ್ಸ್, ೮೦೦ ಮೆಗಾಹರ್ಟ್ಸ್, ೯೦೦ ಮೆಗಾಹರ್ಟ್ಸ್, ೧೮೦೦ ಮೆಗಾಹರ್ಟ್ಸ್, ೨,೧೦೦ ಮೆಗಾಹರ್ಟ್ಸ್, ೨,೩೦೦ ಮೆಗಾಹರ್ಟ್ಸ್, ೨,೫೦೦ ಮೆಗಾಹರ್ಟ್ಸ್, ೩೩೦೦ ಮೆಗಾಹರ್ಟ್ಸ್, ೨೬ ಗಿಗಾಹರ್ಟ್ಸ್ ಶ್ರೇಣಿಯ ೫ಜಿ ಸ್ಪೆಕ್ಟ್ರಮ್ ಅನ್ನು ಹರಾಜಿಗಿಡಲಾಗಿತ್ತು.
ಉದ್ದಿಮೆಗಳ ವಿಸ್ತರಣೆಗೆ ಪೂರಕ: ೫ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ೧.೫ ಲಕ್ಷ ಕೋಟಿ ರೂ.ಗಳ ಸ್ಪೆಕ್ಟ್ರಮ್ ಮಾರಾಟ ಆಗಿರುವುದು ಉದ್ಯಮ ವಲಯ ಹಿಂದೆಂದಿಗೂ ಕಂಡರಿಯದಷ್ಟು ವಿಸ್ತರಣೆಯಾಗಲು ಅಣಿಯಾಗುತ್ತಿರುವುದರ ದ್ಯೋತಕ. ೭೦೦ ಮೆಗಾಹರ್ಟ್ಸ್ ಬ್ಯಾಂಡ್‌ಗಳ ೫ಜಿ ಸ್ಪೆಕ್ಟ್ರಮ್ ಮಾರಾಟವಾಗಿರುವುದಕ್ಕೂ ಇದೇ ಕಾರಣ. ದೀರ್ಘಕಾಲೀನವಾಗಿ ಪರಿಗಣಿಸುವುದಿದ್ದರೆ ೭೦೦ ಮೆಗಾಹರ್ಟ್ಸ್‌ನ ೫ಜಿ ಸ್ಪೆಕ್ಟ್ರಮ್ ದುಬಾರಿ ಎನ್ನಿಸಿದರೂ, ಜನತೆಗೆ ಪ್ರಯೋಜನಕ್ಕೆ ಬರಲಿದೆ. ಭಾರಿ ಜನ ಸಾಂದ್ರತೆಯ ದೇಶದಲ್ಲಿ ಸರ್ಕಾರಕ್ಕೆ ಭವಿಷ್ಯದ ೫ಜಿ ಮೂಲಸೌಕರ್ಯ ಅಭಿವೃದ್ಧಿಗೆ ಹರಾಜಿನಿಂದ ಸಿಗುವ ಆದಾಯ ಉಪಯೋಗವಾಗಲಿದೆ. ಉದ್ದಿಮೆಸ್ನೇಹಿ ಉಪಕ್ರಮವಾಗಿ ಪ್ರತಿ ವರ್ಷ ೨೦ ಸಮಾನ ಕಂತುಗಳಲ್ಲಿ ಸ್ಪೆಕ್ಟ್ರಮ್ ಪಾವತಿಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಧ್ಯಯನದ ಪ್ರಕಾರ ೫ಜಿ ಸೇವೆ ಲಭಿಸಿದ ಮೊದಲ ವರ್ಷ ೪ ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು ೫ಜಿ ಸೇವೆ ಪಡೆಯಲಿದ್ದಾರೆ ಎಂದು ಪ್ರೈಮಸ್ ಪಾರ್ಟ್ನರ್ಸ್ ಕಂಪನಿಯ ಸಹ ಸಂಸ್ಥಾಪಕ ದೇವ್‌ರೂಪ್ ಧಾರ್ ಅವರು ತಿಳಿಸಿದ್ದಾರೆ.
” ಹೂಡಿಕೆ ಮತ್ತು ಮೂಲಸೌಕರ್ಯ ದೃಷ್ಟಿಯಿಂದ ರಿಲಯನ್ಸ್ ಜಿಯೊ ಮೇಲುಗೈ ಪಡೆಯಬಹುದು. ಆದರೆ ಇತರ ಕಂಪನಿಗಳಿಗೂ ಇದರಿಂದ ಅನುಕೂಲವಾಗಲಿದೆʼʼ ಎಂದು ಅವರು ತಿಳಿಸಿದ್ದಾರೆ.
೫ಜಿ ಸ್ಪೆಕ್ಟ್ರಮ್ ಹರಾಜಿನ ಮುಖ್ಯಾಂಶಗಳು
- ಹರಾಜಿನಲ್ಲಿ ಮಾರಾಟವಾಗಿರುವ ಒಟ್ಟು ೫ಜಿ ಸ್ಪೆಕ್ಟ್ರಮ್ ಮೌಲ್ಯ: ೧,೫೦,೧೭೩ ಕೋಟಿ ರೂ.
- ಹರಾಜು ನಡೆದ ದಿನಗಳು: ೭
- ೪ಜಿ ಸ್ಪೆಕ್ಟ್ರಮ್ಗೆ (೭೭,೮೧೫ ಕೋಟಿ ರೂ.) ಹೋಲಿಸಿದರೆ ಇಮ್ಮಡಿ ಮೌಲ್ಯದ ಹರಾಜು
- ಪ್ರಮುಖ ಬಿಡ್ಡರ್: ರಿಲಯನ್ಸ್ ಜಿಯೊ. ಉಳಿದ ಬಿಡ್ಡರ್-ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಗ್ರೂಪ್
- ಮೊದಲ ದಿನದ ಹರಾಜಿನಲ್ಲಿ ಸ್ವೀಕರಿಸಿದ ಬಿಡ್ ಮೌಲ್ಯ: ೧.೪೫ ಲಕ್ಷ ಕೋಟಿ ರೂ.
ಇದನ್ನೂ ಓದಿ:ವಿಸ್ತಾರ Explainer | 5G ತಂತ್ರಜ್ಞಾನದಿಂದ ಅನುಕೂಲ ಅಪಾರ, ಅನನುಕೂಲ ಅತ್ಯಲ್ಪ