Site icon Vistara News

Gaganyaan: ಮಾನವಸಹಿತ ಗಗನಯಾನದ ಮೊದಲ ಪ್ರಾತ್ಯಕ್ಷಿಕೆ ಅಕ್ಟೋಬರ್ 25ರಂದು

gaganyaan1

ಹೊಸದಿಲ್ಲಿ: ಭಾರತದ ಮಹತ್ವಾಕಾಂಕ್ಷಿ ಮಾನವಸಹಿತ ಬಾಹ್ಯಾಕಾಶ ಪ್ರಯಾಣ (manned space mission) ʼಗಗನಯಾನʼದ (Gaganyaan) ʼಅಬಾರ್ಟ್ ಟೆಸ್ಟ್ ಡೆಮೊʼ (abort test demo- ನೌಕೆ ಸ್ಥಗಿತ ಪರೀಕ್ಷಾರ್ಥ ಪ್ರಾತ್ಯಕ್ಷಿಕೆ) ಇದೇ ತಿಂಗಳ 25ರಂದು ನಡೆಸಲು ಉದ್ದೇಶಿಸಲಾಗಿದೆ.

ಸಿದ್ಧತೆಗಳು ನಿರೀಕ್ಷೆಯಂತೆ ನಡೆದರೆ ಅಕ್ಟೋಬರ್ 25ರ ಸುಮಾರಿಗೆ ಪರೀಕ್ಷಾರ್ಥ ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ- ISRO) ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದು ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಬಾಹ್ಯಾಕಾಶ ಮಿಷನ್‌ ಅನ್ನು ಇನ್ನೊಂದು ಹೆಜ್ಜೆ ಮುಂದಕ್ಕೆ ಒಯ್ಯಲಿದೆ.

“ಮಿಷನ್ ತಯಾರಿ ಯೋಜನೆಯ ಪ್ರಕಾರ ನಡೆಯುತ್ತಿದೆ. ನಾವು ಅಕ್ಟೋಬರ್ 25ರ ಸುಮಾರಿಗೆ ನೌಕೆ ಸ್ಥಗಿತಗೊಳಿಸುವ ಪರೀಕ್ಷಾ ಪ್ರದರ್ಶನವನ್ನು ಗುರಿಯಾಗಿರಿಸಿಕೊಂಡಿದ್ದೇವೆ. ಅದನ್ನು ಸಾಧಿಸಿದ ನಂತರ ನಾವು ಮಾನವರಹಿತ ಕಾರ್ಯಾಚರಣೆಯ ಸಿದ್ಧತೆಗಳನ್ನು ನಡೆಸುತ್ತೇವೆ” ಎಂದು ಇಸ್ರೋ ಅಧಿಕಾರಿ ಹೇಳಿದ್ದಾರೆ.

ಸೆಪ್ಟೆಂಬರ್ 26ರಂದು ಕೌನ್ಸಿಲ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಅಕ್ಟೋಬರ್‌ನಲ್ಲಿ ಸ್ಥಗಿತ ಪರೀಕ್ಷಾ ಪ್ರದರ್ಶನ ನಡೆಸುವ ಯೋಜನೆ ಬಗ್ಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮಾತನಾಡಿದ್ದರು. ಆದರೆ ದಿನಾಂಕ ಬಹಿರಂಗಪಡಿಸಿರಲಿಲ್ಲ.

ಗಗನಯಾನ ಯೋಜನೆಯು ಇಸ್ರೋದ ಮಾನವಸಹಿತ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯ ಸಾಬೀತುಪಡಿಸಲಿದೆ. ಮೂವರು ಗಗನಯಾತ್ರಿಗಳನ್ನು ಭೂಮಿಯಿಂದ 400 ಕಿಮೀ ದೂರದ ಕಕ್ಷೆಗೆ ಉಡಾಯಿಸಿ, ಮೂರು ದಿನಗಳ ನಂತರ ಅವರನ್ನು ಸುರಕ್ಷಿತವಾಗಿ ಹಿಂತಿರುಗಿಸುವ ಗುರಿಯನ್ನು ಹೊಂದಿದೆ.

ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಸಾಗಿಸುವ ಅತ್ಯುತ್ತಮ ದರ್ಜೆಯ ಉಡಾವಣಾ ವಾಹನ, ಬಾಹ್ಯಾಕಾಶದಲ್ಲಿ ಸಿಬ್ಬಂದಿಗೆ ಭೂಮಿಯಂತಹ ಪರಿಸರವನ್ನು ಒದಗಿಸುವ ಜೀವಾಧಾರಕ ವ್ಯವಸ್ಥೆ, ಸಿಬ್ಬಂದಿ ತುರ್ತುಸ್ಥಿತಿಯಲ್ಲಿ ಪಾರಾಗಲು ವ್ಯವಸ್ಥೆ, ಸಿಬ್ಬಂದಿ ತರಬೇತಿಗೆ ವ್ಯವಸ್ಥೆ ಸೇರಿದಂತೆ ಹಲವು ನಿರ್ಣಾಯಕ ತಂತ್ರಜ್ಞಾನಗಳ ಅಭಿವೃದ್ಧಿ, ಸಿಬ್ಬಂದಿ ಚೇತರಿಕೆ ಮತ್ತು ಪುನರ್ವಸತಿ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.

ಮಾನವ ಬಾಹ್ಯಾಕಾಶ ಯಾನದ ಕಾರ್ಯಾಚರಣೆಯ ಮುಂದಿನ ಹಂತಗಳ ಪ್ರಾತ್ಯಕ್ಷಿಕೆಗಳಲ್ಲಿ ಇಂಟಿಗ್ರೇಟೆಡ್ ಏರ್ ಡ್ರಾಪ್ ಟೆಸ್ಟ್ (ಐಎಡಿಟಿ), ಪ್ಯಾಡ್ ಅಬಾರ್ಟ್ ಟೆಸ್ಟ್ (ಪಿಎಟಿ) ಮತ್ತು ಟೆಸ್ಟ್ ವೆಹಿಕಲ್ (ಟಿವಿ) ಫ್ಲೈಟ್‌ಗಳು ಸೇರಿವೆ. ಇವೆಲ್ಲವೂ 2024ರ ಮೊದಲ ತ್ರೈಮಾಸಿಕದಲ್ಲಿ ನಿಗದಿಪಡಿಸುವ ನಿರೀಕ್ಷೆಯಿದೆ. ನಂತರ ಮಾನವರಿಲ್ಲದ ಮಿಷನ್ ಪ್ರಯೋಗ ನಡೆಯಲಿದೆ. ಎಲ್ಲಾ ವ್ಯವಸ್ಥೆಗಳ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಂಡು ಮುಂದಿನ ಹೆಜ್ಜೆ ಎಂದು ಇಸ್ರೋ ಹೇಳಿದೆ.

2024ರ ಕೊನೆಯ ತ್ರೈಮಾಸಿಕದಲ್ಲಿ ಅಥವಾ 2025ರ ಆರಂಭದಲ್ಲಿ ಗಗನಯಾನ ಉಡಾವಣೆಯ ನಿರೀಕ್ಷೆಯಿದೆ. ಮಿಷನ್‌ಗಾಗಿ ಆಯ್ಕೆಯಾದ ಗಗನಯಾತ್ರಿಗಳು ಪ್ರಸ್ತುತ ಇಸ್ರೋದ ವಿವಿಧ ಕಡೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ವಾರದ ಆರಂಭದಲ್ಲಿ ಭಾರತೀಯ ವಾಯುಪಡೆ (IAF) ಈ ಗಗನಯಾತ್ರಿಗಳ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಆದರೆ ಗುರುತು ಬಹಿರಂಗಪಡಿಸಿಲ್ಲ. ಈ ಗಗನಯಾತ್ರಿಗಳನ್ನು ʼಗಗನ್ನಾಟ್‌ʼ (Gaganauts) ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Gaganayaan Mission: ಬಾಹ್ಯಾಕಾಶಕ್ಕೆ ತೆರಳಲಿದೆ ‘ವ್ಯೋಮಿತ್ರ’ ಲೇಡಿ ರೋಬೋಟ್, ಇದು ಗಗನಯಾನ ಮಿಷನ್ ವಿಶೇಷ!

Exit mobile version