Site icon Vistara News

Godfather of A.I : ತಾನೇ ಸೃಷ್ಟಿಸಿದ ಎ.ಐ ತಂತ್ರಜ್ಞಾನಕ್ಕೆ ಬೆಚ್ಚಿ ಗೂಗಲ್‌ಗೇ ರಾಜೀನಾಮೆ ಕೊಟ್ಟ ವಿಜ್ಞಾನಿ!

Godfather of AI Scientist who resigned from Google after being shocked by the AI ​​technology he created

#image_title

ವಾಷಿಂಗ್ಟನ್‌ : ಜೆಫ್ರಿ ಹಿಂಟನ್‌ ! (Geoffrey Hinton) ಇವರ ಹೆಸರು ಇದೀಗ ವಿಶಿಷ್ಟ ಕಾರಣಕ್ಕಾಗಿ ಜಗತ್ತಿನ ಗಮನ ಸೆಳೆದಿದೆ. ಹಿರಿಯ ಕಂಪ್ಯೂಟರ್‌ ವಿಜ್ಞಾನಿಯಾಗಿರುವ ಜೆಫ್ರಿ ಹಿಂಟನ್‌ ಬರೋಬ್ಬರಿ 45 ವರ್ಷಗಳ ಹಿಂದೆಯೇ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅಥವಾ ಕೃತಕ ಬುದ್ದಿಮತ್ತೆ (Artificial intelligence) ಬಗ್ಗೆ ಪಿಎಚ್‌ಡಿ ಬರೆದಿದ್ದರು. ತಮ್ಮ ಹಲವಾರು ದಶಕಗಳ ಸಂಶೋಧನೆಯಿಂದ ಎ.ಐ ಕ್ಷೇತ್ರದಲ್ಲಿ ಅವರ ಮಾತುಗಳಿಗೆ ಭಾರಿ ಬೆಲೆ ಇದೆ.

ಕಳೆದ 10 ವರ್ಷಗಳಿಂದ ತಂತ್ರಜ್ಞಾನ ದಿಗ್ಗಜ ಗೂಗಲ್‌ (Google) ಕಂಪನಿಯಲ್ಲಿ ವಿಜ್ಞಾನಿಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇದೀಗ ರಾಜೀನಾಮೆ ನೀಡಿದ್ದಾರೆ. ನ್ಯೂಯಾರ್ಕ್‌ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು, ಎ.ಐ ತಂತ್ರಜ್ಞಾನವು ಜಗತ್ತಿಗೆ ಒಡ್ಡಿರುವ ಬೆದರಿಕೆ ಬಗ್ಗೆ ಪ್ರಪಂಚಾದ್ಯಂತ ಜನ ಜಾಗೃತಿ ಮೂಡಿಸಲು ಯತ್ನಿಸುವುದಾಗಿ ಅವರು ಹೇಳಿದ್ದಾರೆ!

ಮುಂಬರುವ 30-50 ವರ್ಷಗಳಲ್ಲಿ ಅಥವಾ ಇವೆಲ್ಲದಕ್ಕಿಂತಲೂ ಕಡಿಮೆ ವರ್ಷದಲ್ಲಿ ಎ.ಐ ಅಪಾಯ ಇಡೀ ಜಗತ್ತನ್ನು ಕಾಡಲಿದೆ. ಎ.ಐ ಕ್ಷೇತ್ರದಲ್ಲಿ ಅವರ ಸಂಶೋಧನೆಗೆ 2018ರಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಟರ್ನಿಂಗ್‌ ಅವಾರ್ಡ್‌ (Turning Award) ಅವರಿಗೆ ಲಭಿಸಿತ್ತು. ಇದನ್ನು ಕಂಪ್ಯೂಟರ್‌ ವಿಜ್ಞಾನದ ನೊಬೆಲ್‌ ಪ್ರಶಸ್ತಿ ಎಂದೇ ಕರೆಯಲಾಗುತ್ತದೆ. ಎಐ ತಂತ್ರಜ್ಞಾನದ ಸದ್ಯದ ಅಪಾಯಗಳೆಂದರೆ ಉದ್ಯೋಗ ಕಡಿತ, ನಕಲಿ ಫೋಟೊ, ವಿಡಿಯೊ ಮತ್ತು ಟೆಕ್ಸ್ಟ್‌ಗಳ ಪ್ರಸಾರ ಹೆಚ್ಚುವುದಾಗಿದೆ. ಅವುಗಳು ಬಹುತೇಕ ಅಸಲಿಯಂತೆ ಕಾಣಲಿವೆ ಎಂದು ಜೆಫ್ರಿ ಹಿಂಟನ್‌ ಹೇಳಿದ್ದಾರೆ.

ಗೂಗಲ್‌ ಅನ್ನು ಟೀಕಿಸಲು ಸಾಧ್ಯವಾಗಲಿದೆ ಎಂಬ ಕಾರಣಕ್ಕೆ ನಾನು ರಾಜೀನಾಮೆ ನೀಡಿದ್ದೇನೆ ಎಂದು ವರದಿಯಾಗಿದೆ. ಆದರೆ ವಾಸ್ತವವಾಗಿ ಗೂಗಲ್‌ ಮೇಲೆ ಎಐ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಪರಿಗಣಿಸದೆಯೇ ಎಐ ಅಪಾಯದ ಬಗ್ಗೆ ಮುಕ್ತವಾಗಿ ಮಾತನಾಡಲು ಈಗ ಸಾಧ್ಯ. ಗೂಗಲ್‌ ತುಂಬ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂದು ಜೆಫ್ರಿ ಹಿಂಟನ್‌ ಟ್ವೀಟ್‌ ಮಾಡಿದ್ದಾರೆ.

ಈಗ ನಾವು ಸೃಷ್ಟಿಸುತ್ತಿರುವ ಡಿಜಿಟಲ್‌ ಇಂಟಲಿಜೆನ್ಸ್‌ ಅಥವಾ ಕೃತಕ ಬುದ್ದಿಮತ್ತೆಯು ಜೈವಿಕ ಬುದ್ದಿಮತ್ತೆಗಿಂತ ವಿಭಿನ್ನವಾಗಿದೆ ಎಂದು ಹಿಂಟನ್ ಸಂದರ್ಶನದಲ್ಲಿ ಹೇಳಿದ್ದಾರೆ. ಓಪನ್‌ ಎಐ (OpenAI) ಸಂಸ್ಥೆ ಅಭಿವೃದ್ಧಿಪಡಿಸಿರುವ ಲಾರ್ಜ್‌ ಲಾಂಗ್ವೇಜ್‌ ಮಾಡೆಲ್‌ GPT-4 ಅನ್ನು ಹಿಂಟನ್‌ ಪ್ರಸ್ತಾಪಿಸಿ ಈ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದಾರೆ.

ನಾನು 1000 ಡಿಜಿಟಲ್‌ ಏಜೆಂಟ್‌ಗಳನ್ನು ಹೊಂದಿದ್ದರೆ ಅವುಗಳು ಸಮಾನ ಮೌಲ್ಯ (weights) ಹೊಂದಿರುತ್ತವೆ. ಒಂದು ಏಜೆಂಟ್‌ ಒಂದು ವಿಷಯವನ್ನು ಕಲಿತ ಕೂಡಲೇ ಎಲ್ಲ ಉಳಿದ ಏಜೆಂಟ್‌ಗಳೂ ಕಲಿಯುತ್ತವೆ. ಏಕೆಂದರೆ weightಗಳನ್ನು ಅವುಗಳು ಹಂಚುತ್ತವೆ. ಜೈವಿಕ ಏಜೆಂಟ್‌ಗಳು (Biological agents) ಆ ರೀತಿ ಮಾಡಲಾರವು. ಆದ್ದರಿಂದ ಡಿಜಿಟಲ್‌ ಏಜೆಂಟ್‌ಗಳು ವ್ಯಕ್ತಿಗತ ಜೈವಿಕ ಏಜೆಂಟ್‌ಗಳಿಗಿಂತ ಭಿನ್ನವಾಗಿರುತ್ತವೆ. ಆದ್ದರಿಂದ ಜಿಪಿಟಿ- 4 ಯಾವುದೇ ಒಬ್ಬ ವ್ಯಕ್ತಿಗಿಂತ ಹೆಚ್ಚು ಜ್ಞಾನವನ್ನು ಕೂಡಲೇ ತನ್ನದಾಗಿಸಬಹುದು ಎಂದು ಜೆಫ್ರಿ ಹಿಂಟನ್‌ (Geoffrey Hinton) ವಿವರಿಸಿದ್ದಾರೆ.

ಎ.ಐ ತಂತ್ರಜ್ಞಾನ ಮನುಕುಲವನ್ನೇ ಅಳಿಸಿ ಹಾಕುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಜೆಫ್ರಿ ಹಿಂಟನ್‌ ಅವರು, ಇದನ್ನು ಊಹಿಸಲು ಸಾಧ್ಯವಿಲ್ಲ ಎಂದಷ್ಟೇ ಹೇಳುತ್ತೇನೆ ಎಂದು ಉತ್ತರಿಸಿದ್ದಾರೆ. ಇದು ವಿಜ್ಞಾನಿಗಳ ವಲಯವನ್ನು ತಲ್ಲಣಗೊಳಿಸಿದೆ.

ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರು ಬಹಿರಂಗವಾಗಿಯೇ ಎಐ ತಂತ್ರಜ್ಞಾನದ ಅಪಾಯಗಳ ಬಗ್ಗೆಯೂ ಎಚ್ಚರಿಸಿದ್ದಾರೆ. ಈ ನಡುವೆ ಗೂಗಲ್‌ ಐಐ ತಂತ್ರಜ್ಞಾನ ಆಧಾರಿತ ಸೆಲ್ಫ್‌ ಲರ್ನಿಂಗ್‌ ರೊಬಾಟ್‌, ಬಾರ್ಡ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ.

Exit mobile version