ನವ ದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರ (NCRB Report) 2021ರ ವರದಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿಗೆ ಸಂಬಂಧಿಸಿದಂತೆ ಆಶ್ಚರ್ಯಕರ ಸಂಗತಿಯೊಂದು ಹೊರ ಬಿದ್ದಿದೆ. ಇದೇನು ಖುಷಿ ಪಡುವ ವಿಷಯವಲ್ಲ. 2021ರ ವರದಿಯ ಪ್ರಕಾರ, ಬೆಂಗಳೂರು ಐಡೆಂಟಿಟಿ ಥೆಫ್ಟ್ ಕೇಸ್‌ಗಳಲ್ಲಿ ನಂಬರ್ ಒನ್ ಸ್ಥಾನ ಗಳಿಸಿದೆ. ಅದರರ್ಥ, ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಲ್ಲೇ ಅತಿ ಹೆಚ್ಚು ಗುರುತು ಮಾಹಿತಿ ಕಳವು ಪ್ರಕರಣಗಳು ದಾಖಲಾಗಿವೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಇನ್ ಇಂಡಿಯಾ-2021ರ ವರದಿಯ ಪ್ರಕಾರ, ಒಟ್ಟು 19 ಮೆಟ್ರೋ ಸಿಟಿಗಳಲ್ಲಿ ದಾಖಲಾದ 1,685 ಪ್ರಕರಣಗಳ ಪೈಕಿ ಬೆಂಗಳೂರಿನ ಪಾಲು ಶೇ.72ರಷ್ಟಿದೆ! ನಂತರದ ಸ್ಥಾನದಲ್ಲಿ ಕಾನ್ಪುರ್(119), ಸೂರತ್‌ನಲ್ಲಿ(109) ನಗರಗಳಿವೆ.
ಏನಿದು ಐಡೆಂಟಿಟಿ ಥೆಫ್ಟ್?
ಸೈಬರ್ ಕ್ರಿಮಿನಲ್ಸ್ ಅಕ್ರಮವಾಗಿ ನಿಮ್ಮ ಖಾಸಗಿ ಮತ್ತು ಮಹತ್ವದ ಮಾಹಿತಿಯನ್ನು ಕಳವು ಮಾಡುವುದಾಗಿದೆ. ಇದರಲ್ಲಿ ನಿಮ್ಮ ಸ್ಮಾರ್ಟ್‌ಫೋನುಗಳು, ಇಮೇಲ್, ಇನ್ನಿತರ ಜಿಡಿಟಲ್ ಸಾಧನಗಳಲ್ಲಿರುವ ಮೂಲಕ ಮಾಹಿತಿಯನ್ನು ಕದ್ದು, ಅಪರಾಧ ಇಲ್ಲವೇ ಹಣವನ್ನು ಪೀಕುವುದಕ್ಕೆ ಬಳಸಿಕೊಳ್ಳಲಾಗುತ್ತದೆ.
ಇಷ್ಟು ಮಾತ್ರವಲ್ಲದೇ, ಬ್ಯಾಂಕು ಖಾತೆಗಳಿಂದ ನಿಮ್ಮ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸುವುದು ಅಥವಾ ಸೋಷಿಯಲ್ ಮೀಡಿಯಾದ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ದುಡ್ಡು ವಸೂಲಿ ಮಾಡುವುದು, ಸೇಡಿಗಾಗಿ ಅಕೌಂಟ್‍ಗಳ ಮೇಲೆ ನಿಯಂತ್ರಣ ಸಾಧಿಸುವುದು ಸೇರುತ್ತದೆ.
ಶಿಕ್ಷೆ ಏನು?
ಐಡೆಂಟಿಟಿ ಥೆಫ್ಟ್ ಪ್ರಕರಣಗಳ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಬಹುದು. 2000ರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಸಿ ಪ್ರಕಾರ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ.ವರೆಗೆ ದಂಡವನ್ನು ವಿಧಿಸಬಹುದಾಗಿದೆ.
ಕರ್ನಾಟಕ ನಂ.1
ಗುರುತು ಮಾಹಿತಿ ಪ್ರಕರಣದಲ್ಲಿ ನಗರಗಳ ಪೈಕಿ ಬೆಂಗಳೂರು ಅಗ್ರಸ್ಥಾನಿಯಾಗಿದೆ. ಹಾಗಾಗಿ ಸಹಜವಾಗಿಯೇ, ರಾಜ್ಯಗಳ ಪೈಕಿ ಕರ್ನಾಟಕವೂ ಅಗ್ರ ಪಟ್ಟ ಪಡೆದುಕೊಂಡಿದೆ.
2021ರಲ್ಲಿ ದೇಶಾದ್ಯಂತ ಒಟ್ಟು 4,071 ಐಡೆಂಟೆಟಿ ಥೆಫ್ಟ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕರ್ನಾಟಕದಲ್ಲಿ 1,764 ಪ್ರಕರಣಗಳಿವೆ. ಸೈಬರ್ ಕ್ರೈಮ್‌ಗಳ ಪ್ರಕರಣ ದಾಖಲಾತಿಯಲ್ಲೂ ಬೆಂಗಳೂರ ದೇಶದಲ್ಲಿ ಮುಂದಿದೆ. ನಂತರದ ಸ್ಥಾನದಲ್ಲಿ ಹೈದ್ರಾಬಾದ್ ಮತ್ತು ಮುಂಬೈ ನಗರಗಳಿವೆ. ಇದೇ ವೇಳೆ, ಕರ್ನಾಟಕದಲ್ಲಿ ಸತತ ಮೂರು ವರ್ಷಗಳಿಂದ ಸೈಬರ್ ಕ್ರೈಮ್‌ಗಳಲ್ಲಿ ಇಳಿಕೆಯಾಗುತ್ತಿದೆ ಎಂಬ ಸಂಗತಿಯೂ ವರದಿಯಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ | Cyber Crime | ಸೈಬರ್ ಖದೀಮರಿಗೆ ಗಂಟಲ ಮುಳ್ಳಾಗುತ್ತಿದೆ ಗೋಲ್ಡನ್ ಅವರ್