Site icon Vistara News

AI Index Report: ಕೃತಕ ಬುದ್ಧಿಮತ್ತೆ ಕೌಶಲ ವೃದ್ಧಿಯಲ್ಲಿ ಭಾರತ ವಿಶ್ವನಾಯಕ; ಅಮೆರಿಕ ವರದಿ

Artificial Intelligence

India leads the way in global AI skill penetration: Stanford University’s AI Index Report

ವಾಷಿಂಗ್ಟನ್:‌ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ (Artificial Intelligence) ಜಗತ್ತೇ ತೆರೆದುಕೊಳ್ಳುತ್ತಿದೆ. ಅದರಲ್ಲೂ, ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯಂತಹ ಚಾಟ್‌ಬಾಟ್‌ಗಳು (ChatBot) ಪ್ರಬಂಧ ಬರೆಯುವುದರಿಂದ ಹಿಡಿದು, ಕೋಡ್‌ ರಚನೆವರೆಗೆ ಛಾಪು ಮೂಡಿಸುತ್ತಿವೆ. ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಇದು ಸಾರುತ್ತಿದೆ. ಇದರ ಬೆನ್ನಲ್ಲೇ, “ಕೃತಕ ಬುದ್ಧಿಮತ್ತೆ ಕೌಶಲ ಅಭಿವೃದ್ಧಿಯಲ್ಲಿ (AI Skill Penetration) ಭಾರತವು ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ” ಎಂದು ಅಮೆರಿಕ ವಿಶ್ವವಿದ್ಯಾಲಯವೊಂದು ವರದಿ ಪ್ರಕಟಿಸಿದೆ.

ಕೃತಕ ಬುದ್ಧಿಮತ್ತೆ ಕೌಶಲ ಅಭಿವೃದ್ಧಿಯಲ್ಲಿ ಯಾವ ದೇಶಗಳು ಎಷ್ಟು ಪ್ರಗತಿ ಸಾಧಿಸಿವೆ ಎಂಬ ಕುರಿತು ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯವು ಎಐ ಇಂಡೆಕ್ಸ್‌ ವರದಿ (AI Index Report 2023) ಪ್ರಕಟಿಸಿದೆ. ಜಾಗತಿಕವಾಗಿ ಕೃತಕ ಬುದ್ಧಿಮತ್ತೆ ಕ್ರಾಂತಿ ಸೃಷ್ಟಿಮಾಡುವಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಿರುವುದು ಸಕಾರಾತ್ಮಕ ಸಂಗತಿಯಾಗಿದೆ.

ನೀತಿ ಆಯೋಗದ ಮಾಜಿ ಸಿಇಒ ಸಂತಸ

ಗಿಟ್‌ಹಬ್‌ನಲ್ಲಿ (GitHub) ಕೃತಕ ಬುದ್ಧಿಮತ್ತೆ ಪ್ರಾಜೆಕ್ಟ್‌ಗಳನ್ನು ಕೈಗೊಳ್ಳುವಲ್ಲಿ ಭಾರತದ ಸಾಫ್ಟ್‌ವೇರ್‌ ಡೆವಲಪರ್‌ಗಳು 2022ರಲ್ಲಿ ಶೇ.24.2ರಷ್ಟು ಕೊಡುಗೆ ನೀಡಿದ್ದಾರೆ ಎಂದು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯ ವರದಿ ತಿಳಿಸಿದೆ. ಜಗತ್ತಿನಲ್ಲೇ ಕೃತಕ ಬುದ್ಧಿಮತ್ತೆ ಕೌಶಲ ವೃದ್ಧಿಯಲ್ಲಿ ಭಾರತವು ನಾಯಕನ ಸ್ಥಾನದಲ್ಲಿದೆ. ಇದರಿಂದ ಜಾಗತಿಕವಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮತ್ತಷ್ಟು ಏಳಿಗೆ ಸಾಧ್ಯವಾಗಲಿದೆ.

ಇದನ್ನೂ ಓದಿ: Generative AI: ಜನರೇಟಿವ್ ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ನಷ್ಟವಾಗಲ್ಲ, ಹೆಚ್ಚಾಗುತ್ತವೆ!

2022ರಲ್ಲಿ ಜಗತ್ತಿನಲ್ಲಿ ಮೂರು ರಾಷ್ಟ್ರಗಳು ಕೃತಕ ಬುದ್ಧಿಮತ್ತೆ ಕೌಶಲ ವೃದ್ಧಿಯಲ್ಲಿ ಅಗ್ರ ಸ್ಥಾನ ಪಡೆದಿವೆ. ಭಾರತವು 3.2 ರೇಟಿಂಗ್‌ನೊಂದಿಗೆ ಅಗ್ರಸ್ಥಾನಿಯಾದರೆ, ಅಮೆರಿಕ 2.2 ಹಾಗೂ ಜರ್ಮನಿ 1.7 ರೇಟಿಂಗ್‌ ಪಡೆದಿವೆ. ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್‌ ಕಾಂತ್‌ ಅವರು ಭಾರತದ ಏಳಿಗೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. “ಭಾರತದ ಚಾಣಾಕ್ಷತೆಯು ಜಾಗತಿಕವಾಗಿ ಮಿನುಗುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತವು ಜಾಗತಿಕ ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ ಸೇರಿ ಹಲವು ಕ್ಷೇತ್ರಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

Exit mobile version