ಪುಣೆ: ಹೈಡ್ರೋಜನ್ ಇಂಧನವನ್ನು ಬಳಸುವ ಭಾರತದ ಮೊಟ್ಟ ಮೊದಲ ಬಸ್ ಅನ್ನು ಪುಣೆಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಾಯಕ ಸಚಿವ ಜಿತೇಂದರ್ ಸಿಂಗ್ ಅವರು ಉದ್ಘಾಟಿಸಿದರು. ಈ ಬಸ್ (Hydrogen fuel cell bus) ಅನ್ನು ಸಿಎಸ್‌ಐಆರ್-ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ಮತ್ತು ಕೆಪಿಐಟಿ ಲಿಮಿಟೆಡ್ ಅಭಿವೃದ್ಧಿ ಪಡಿಸಿದೆ.
ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಬಸ್‌ನ ವಿಡಿಯೊ ಶೇರ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ತ್ವಾಕಾಂಕ್ಷೆಯ ರಾಷ್ಟ್ರೀಯ ಹಸಿರು ಹೈಡ್ರೋಜನ್ ಅಭಿಯಾನದ ಅಡಿಯಲ್ಲಿ ಭಾರತದ ಮೊದಲ ಹೈಡ್ರೋಜನ್ ಫ್ಯುಯೆಲ್ ಸೆಲ್ ಬಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಏನಿದು ಹೈಡ್ರೋಜನ್ ಇಂಧನ ತಂತ್ರಜ್ಞಾನ?
ಈ ವಿನೂತನ ಬಸ್, ಹೈಡ್ರೋಜನ್ ಮತ್ತು ಗಾಳಿಯ ಮಿಶ್ರಣದಿಂದ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಈ ವಿದ್ಯುತ್ ಮೂಲಕ ಬಸ್ ಚಾಲನೆಯಾಗುತ್ತದೆ. ಈ ಹೈಡ್ರೋಜನ್ ಸೆಲ್ ಬಸ್‌ನಿಂದ ಹೊರಡುವ ಏಕೈಕ ತ್ಯಾಜ್ಯ ನೀರು. ಹೀಗಾಗಿ ಇದು ಅತ್ಯಂತ ಪರಿಸರಸ್ನೇಹಿ ವಾಹನವಾಗಿದೆ.
ಹೈಡ್ರೋಜನ್ ಇಂಧನ ಆಧಾರಿತ ಬಸ್‌ಗೆ ತಗಲು ವೆಚ್ಚವು ಡೀಸೆಲ್ ಇಂಧನ ಬಳಸುವ ಬಸ್‌ಗಿಂತಲೂ ಕಡಿಮೆ. ಪರಿಸರ ಮಾಲಿನ್ಯವೂ ಇರುವುದಿಲ್ಲ. ಡೀಸೆಲ್ ಚಾಲಿತ ಬಸ್‌ನಿಂದ ೧೨-೧೪% CO೨ ಮಾಲಿನ್ಯ ಸೂಸಿದರೆ, ಹೈಡ್ರೋಜನ್ ಇಂಧನ ಬಳಸುವ ವಾಹನದಲ್ಲಿ ಈ ಮಾಲಿನ್ಯವೇ ಇರುವುದಿಲ್ಲ.
ಇಂಧನ ದಕ್ಷತೆಯಲ್ಲೂ ಡೀಸೆಲ್ ವಾಹನಗಳಿಗಿಂತ ಹೈಡ್ರೋಜನ್ ಇಂಧನ ಬಳಸುವ ವಾಹನಗಳು ವಾಸಿ. ಭಾರತೀಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಪ್ರತಿಭಾ ಸಾಮರ್ಥ್ಯವನ್ನು ಇದು ಬಿಂಬಿಸಿದೆ.