ಬೆಂಗಳೂರು : ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಜಗತ್ತಿನಲ್ಲಿ ಎರಡನೇ ಸ್ಥಾನವಿದ್ದು, ಚೀನಾದ ನಂತರದ ಸ್ಥಾನವಿದೆ. 60 ಕೋಟಿಗೂ ಹೆಚ್ಚು ಮಂದಿ ಇಲ್ಲಿ ಸ್ಮಾರ್ಟ್ಫೋನ್ಗಳನ್ನು ಬಳಸುತ್ತಾರೆ. ಇದೇ ಕಾರಣಕ್ಕೆ ವಿಶ್ವದ ಬಹುತೇಕ ಸ್ಮಾರ್ಟ್ಫೋನ್ ತಯಾರಕ ಕಂಪನಿಗಳು ಭಾರತಕ್ಕೆ ದಾಂಗುಡಿ ಇಡುತ್ತವೆ. ಆದರೆ, ಚೀನಾ ಮೂಲದ ಕಂಪನಿಗಳದ್ದೇ ಇಲ್ಲಿ ಪಾಬಲ್ಯ. ಅಗ್ಗದ ದರಕ್ಕೆ ಅತ್ಯಾಧುನಿಕ ಫೀಚರ್ಗಳು ಲಭ್ಯವಾಗುತ್ತಿರುವುದೇ ಅದಕ್ಕೆ ಕಾರಣ. ಜತೆಗೆ ಕ್ಯಾಮೆರಾ ವಿಚಾರಕ್ಕೆ ಬಂದಾಗಲೂ ಚೀನಾ ಮೂಲದ ಕಂಪನಿಗಳು ಸಿಕ್ಕಾಪಟ್ಟೆ ಫ್ಯಾನ್ಸಿ. ಹೀಗಾಗಿ ಅಲ್ಲಿನ ಫೋನ್ಗಳು ಭಾರತದಲ್ಲಿ ಸಿಂಹಪಾಲು ಹೊಂದಿದೆ.
ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಸ್ಮಾರ್ಟ್ಫೋನ್ಗಳ ಬಳಕೆದಾರರು ಹೆಚ್ಚಾಗುತ್ತಿದ್ದರೂ, 2022ರಲ್ಲಿ ಅಷ್ಟೇನೂ ಪ್ರಗತಿ ಕಂಡಿಲ್ಲ. 5 ತಂತ್ರಜ್ಞಾನ ವರ್ಷದ ಕೊನೆಯಲ್ಲಿ ಬಳಕೆಗೆ ಬಂದಿದ್ದರೂ ಹಿಂದಿನ ಲಯದಲ್ಲೇ ಮೊಬೈಲ್ ಫೋನ್ಗಳು ಮಾರಾಟವಾಗಿವೆ. ಹೀಗಾಗಿ ಸ್ಮಾರ್ಟ್ಫೋನ್ ಮಾರಾಟದ ವಿಚಾರದಲ್ಲಿ ಭಾರತದ ಮಾರುಕಟ್ಟೆಯದ್ದು ಆರಕ್ಕೇಳದ, ಮೂರಕ್ಕಿಳಿಯದ ಸ್ಥಿತಿ ಎದುರಿಸಿದೆ. ಆದಾಗ್ಯೂ ಸ್ವಲ್ಪ ಪ್ರಗತಿ ಕಂಡಿರುವ ಒಪ್ಪೊ ಕಂಪನಿ ಮಾತ್ರ. ಈ ರೀತಿಯಾಗಿ 2022ರಲ್ಲಿ (Year Eneder 2022) ಭಾರತದಲ್ಲಿ ಸ್ಮಾರ್ಟ್ಫೋನ್ ಕಂಪನಿಗಳು ಹೇಗೆ ಪ್ರಗತಿ ಸಾಧಿಸಿದವು ಎಂಬುದನ್ನು ನೋಡೊಣ.
ಆ್ಯಪಲ್
2022ರಲ್ಲಿ ಆ್ಯಪಲ್ ಕಂಪನಿಯು ನಾಚ್ ಡಿಸ್ಪ್ಲೆ ಬಳಕೆಯನ್ನು ನಿಲ್ಲಿಸಿತು. ಐಫೋನ್ 14 ಪ್ರೊ ಸೀರಿಸ್ನಿಂದ ಡೈನಾಮಿಕ್ ಐಲ್ಯಾಂಡ್ ಫೀಚರ್ ತಂದಿತು. ಆದರೆ, ಹಿಂದಿನ ಐಫೋನ್ 14ನಲ್ಲಿ ನಾಚ್ ಡಿಸ್ಪ್ಲೇ ಕೊಡುವುದನ್ನು ಮುಂದುವರಿಸಿತು. ಇದು ಸ್ವಲ್ಪ ಮಟ್ಟಿಗೆ ಗೊಂದಲಕಾರಿ ನಿರ್ಧಾರ ಎನಿಸಿತು. ಅಲ್ಲದೆ, ಐಫೋನ್ 14ನೊಂದಿಗೆ ಮಿನಿ ಸೀರಿಸ್ನ ಫೋನ್ಗಳ ಉತ್ಪಾದನೆಯನ್ನೂ ನಿಲ್ಲಿಸಿತು. ಐಫೋನ್ ಕಂಪನಿ ಮೊದಲ ಬಾರಿಗೆ 13 ಎಂಪಿ ಸೆನ್ಸಾರ್ಗೆ ಬದಲಅಗಿ 48 ಎಂಪಿ ಕ್ಯಾಮೆರಾ ಬಳಕೆಯನ್ನು ಆರಂಭಿಸಿತು. ಜತೆಗೆ ಕ್ರ್ಯಾಶ್ ಡಿಟೆಕ್ಷನ್ ಹಾಗೂ ಸ್ಯಾಟಲೈಟ್ ನ್ಯಾವಿಗೇಷನ್ ಫೀಚರ್ ಅನ್ನೂ ನೀಡಿತು. ಇದು ಎಲ್ಲ ಕಡೆ ಬಳಕೆಯಲ್ಲಿ ಇಲ್ಲ.
ಆಸುಸ್
ತೈವಾನ್ ಮೂಲದ ಲ್ಯಾಪ್ಟಾಪ್ ತಯಾರಕ ಸಂಸ್ಥೆಯಾಗಿರುವ ಆಸುಸ್ ROG 6 ಸೀರಿಸ್ನ ಮೊಬೈಲ್ಗಳನ್ನು ಭಾರತದ ಮಾರುಕಟ್ಟೆಗೆ ಇಳಿಸಿತು. 18 ಜಿಬಿ ರ್ಯಾಮ್, 512 ಜಿಬಿ ರೋಮ್ ಹಾಗೂ 6000 ಎಮ್ಎಎಚ್ ಬ್ಯಾಟರಿ ಸಾಮರ್ಥ್ಯದ ಈ ಫೋನ್ ಗೇಮಿಂಗ್ಗಾಗಿಯೇ ಮಾಡಿದ ಸ್ಮಾರ್ಟ್ಫೋನ್. ಇದು ಅಷ್ಟೇನೂ ಯಶಸ್ಸು ಸಾಧಿಸಲಿಲ್ಲ ಹಾಗೂ ಫೋನ್ಗಳ ಮಾರಾಟದಲ್ಲೂ ಪ್ರಗತಿ ಸಾಧಿಸಲಿಲ್ಲ.
ಗೂಗಲ್
ಎರಡು ವರ್ಷಗಳ ಅಂತರದ ಬಳಿಕ ಸರ್ಚ್ ಎಂಜಿನ್ ದೈತ್ಯ ಆಲ್ಫಾಬೆಟ್, ಪಿಕ್ಸೆಲ್ ಫೋನ್ಗಳನ್ನು ಭಾರತದ ಮಾರುಕಟ್ಟೆಗೆ ಇಳಿಸಿತು. ಪಿಕ್ಸೆಲ್ 6ಎ, ಪಿಕ್ಸೆಲ್7 ಹಾಗೂ ಪಿಕ್ಸೆಲ್ 7 ಪ್ರೊ ಈ ಫೋನ್ಗಳು. ಭಾರತದ ಪ್ರೀಮಿಯಮ್ ಸೆಗ್ಮೆಂಟ್ನ ಗ್ರಾಹಕರನ್ನು ಮನ ಸೆಳೆಯುವ ತಂತ್ರ ಮಾಡಿದರೂ ಪೂರ್ಣ ಯಶಸ್ಸು ದೊರೆಯಲಿಲ್ಲ. ಪಿಕ್ಸೆಲ್ ಇಯರ್ ಬಡ್ ಅನ್ನು ಭಾರತದಲ್ಲಿ ಮಾರುಕಟ್ಟೆಗೆ ಇಳಿಸುವ ಯೋಜನೆಯೂ ಇದೆ.
ಲಾವಾ
ಇನ್ನೂ ಕಣ್ಮುಚ್ಚದ ಭಾರತದ ಏಕೈಕ ಸ್ಮಾರ್ಟ್ಫೋನ್ ಬ್ರಾಂಡ್ ಲಾವಾ, ಚೀನಾ ಕಂಪನಿಗಳ ಅಬ್ಬರದ ನಡುವೆಯೂ ಮಾರುಕಟ್ಟೆಯಲ್ಲಿ ಉಳಿಯುವ ಪ್ರಯತ್ನವನ್ನು ಮಾಡಿದೆ. ಬ್ಲೇಜ್ ಸೀರಿಸ್ ಫೋನ್ಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಜನಮನ ಸೆಳೆಯಲು ಯತ್ನಿಸಿದೆ. ಬ್ಲೇಜ್ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ದೊರೆಯುವ 5 ಜಿ ಫೋನ್. ಇದರ ಪ್ರೊ ಆವೃತ್ತಿಯಲ್ಲಿ 50 ಎಂಪಿ ಕ್ಯಾಮೆರಾ ಕೂಡ ನೀಡಲಾಗಿದೆ.
ಸ್ಯಾಮ್ಸಂಗ್
2022ರಲ್ಲಿ ಸ್ಯಾಮ್ಸಂಗ್ ಕಂಪನಿಯು ಎರಡು ಫೋಲ್ಡೇಬಲ್ ಫೋನ್ಗಳನ್ನು ಮಾರಾಟಕ್ಕೆ ಇಳಿಸಿತು. ಝಡ್ ಸೀರಿಸ್ನ ಈ ಫೋನ್ಗಳು ಪ್ರೀಮಿಯಮ್ ಮಾರುಕಟ್ಟೆಯ ಫೋನ್ಗಳಾಗಿವೆ. 2023ರಲ್ಲಿ ಇನ್ನಷ್ಟು ಹೊಸ ತಾಂತ್ರಿಕತೆಯೊಂದಿಗೆ ಬರುವುದಾಗಿ ದಕ್ಷಿಣ ಕೊರಿಯಾ ಮೂಲದ ಕಂಪನಿಯು ಹೇಳಿದೆ. ಅಲ್ಲದೆ, ಫೋಲ್ಡ್ (ಮಡಚಬಹುದಾದ) ಫೋನ್ಗಳ ಜನಪ್ರಿಯತೆ ಹೆಚ್ಚಿಸಲು ಬೆಲೆ ಕಡಿಮೆ ಮಾಡುವ ಉದ್ದೇಶವನ್ನೂ ಹೊಂದಿದೆ.
ಒಪ್ಪೊ
ಭಾರತದ ಮಾರುಕಟ್ಟೆಯಲ್ಲಿ 2022ರಲ್ಲಿ ಸ್ವಲ್ಪ ಮಟ್ಟಿಗೆ ಪ್ರಗತಿ ಸಾಧಿಸಿದ ಸ್ಮಾರ್ಟ್ಫೋನ್ ತಯಾರ ಕಂಪನಿಯೆಂದರೆ ಒಪ್ಪೊ. ರೆನೊ ಸೀರಿಸ್ ಕಡೆಗೆ ಈ ಕಂಪನಿಯು ಹೆಚ್ಚು ಗಮನ ಹರಿಸಿದ್ದು ಮಾರಾಟವೂ ಪ್ರಗತಿಯಲ್ಲಿದೆ. ಮುಂದಿನ ವರ್ಷ ಫೋಲ್ಡ್ ಫೋನ್ ರುವ ಸೂಚನೆಯನ್ನು ಒಪ್ಪೊ ಕಂಪನಿ ನೀಡಿದೆ.
ವಿವೊ
ಬಿಬಿಕೆ ಎಲೆಕ್ಟ್ರಾನಿಕ್ಸ್ನ ವಿವೊ ಬ್ರಾಂಡ್ 2022ರಲ್ಲಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿರುವ ಒತ್ತಡದಲ್ಲಿತ್ತು ವಿವೊ. ಜತೆಗೆ ಮಾರಾಟವೂ ಕುಸಿತ ಕಂಡಿದೆ. ಆದರೆ, ಸಬ್ಬ್ರಾಂಡ್ ಐಕೂ ಭಾರತದಲ್ಲಿ ಜನಪ್ರಿಯತೆ ಪಡೆಯಲು ಆರಂಭಿಸಿದೆ. ಇದೊಂದು ಗೇಮಿಂಗ್ ಉದ್ದೇಶದ ಫೊನ್.
ಒನ್ ಪ್ಲಸ್
ಒನ್ಪ್ಲಸ್ 10 ಮೂಲಕ ಒನ್ಪ್ಲಸ್ ಕಂಪನಿಯು 2022ನೇ ವರ್ಷವನ್ನು ಆರಂಭಿಸಿತ್ತು. ಆದರೆ, ನಾರ್ಡ್ ಸೀರಿಸ್ನ ಮೊಬೈಲ್ಗಳು ಜನಪ್ರಿಯತೆ ಗಳಿಸಿದವು. ಹೀಗಾಗಿ ಸತತವಾಗಿ ನಾರ್ಡ್ ಸೀರಿಸ್ನ ಮೊಬೈಲ್ಗಳನ್ನು ಮಾರುಕಟ್ಟೆಗೆ ಇಳಿಸಿತು. ಸ್ಮಾರ್ಟ್ವಾಚ್, ಇಯರ್ ಬಡ್ ಹಾಗೂ ಸ್ಮಾರ್ಟ್ ಟಿವಿಯನ್ನು ಮಾರುಕಟ್ಟೆಗೆ ಇಳಿಸಿದ ಹಿನ್ನೆಲೆಯಲ್ಲಿ ನಿಧಾನವಾಗಿ ಜನಪ್ರಿಯತೆ ಕಂಡುಕೊಂಡಿತು.
ರಿಯಲ್ಮಿ
ಬಜೆಟ್ ಹಾಗೂ ಮಿಡ್ ಸೆಗ್ಲೆಂಟ್ ಎಂಬ ಗೊಂದಲದ ನಡುವೆ ರಿಯಲ್ಮಿ ಸ್ವಲ್ಪ ಮಟ್ಟಿನ ಮಾರುಕಟ್ಟೆಯನ್ನು ಕಂಡುಕೊಂಡಿದೆ. ಕ್ಸಿಯೊಮಿಗೆ ಪೈಪೋಟಿ ನೀಡುವುದೇ ಈ ಕಂಪನಿಯ ಉದ್ದೇಶದಂತಿದೆ. 2022ರಲ್ಲಿ 150 ವ್ಯಾಟ್ನ ಚಾರ್ಜಿಂಗ್ ತಾಂತ್ರಿಕತೆಯನ್ನು ಪರೀಕ್ಷೆಗೆ ಒಳಪಡಿಸಿದೆ. ವಿನ್ಯಾಸದ ಕಡೆಗೆ ರಿಯಲ್ಮಿ ಹೆಚ್ಚು ಆಸಕ್ತಿ ವಹಿಸಿದೆ.
ಶಿವೊಮಿ
ಹಣಕಾಸಿನ ಅಕ್ರಮ ಪ್ರಕರಣದಲ್ಲಿ ಸಿಲುಕಿ ಬಿದ್ದು ಬ್ಯಾಂಕ್ ಖಾತೆಗಳು ತಟಸ್ಥಗೊಂಡ ಕಾರಣ ಈ ಕಂಪನಿಗೆ 2022ರಲ್ಲಿ ಹೆಚ್ಚಿನ ಸಾಧನೆ ಸಾಧ್ಯವಾಗಿಲ್ಲ. ಅತ್ಯಂತ ಕೆಟ್ಟ ವರ್ಷ ಎಂದೇ ಇದನ್ನು ಪರಿಗಣಿಸಲಾಗಿದೆ. 2014 ಜುಲೈನಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶ ಪಡೆದ ಬಳಿಕದಿಂದ ಈ ಕಂಪನಿಯು ಅತ್ಯಂತ ಕಳಪೆ ಪ್ರದರ್ಶನ ನೀಡಿದ ವರ್ಷವಿದು. ರೆಡ್ಮಿ ಮತ್ತು ಪೊಕೊ ಬ್ರಾಂಡ್ಗಳ ಮೂಲಕ ಆನ್ಲೈನ್ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನ ಹೊಂದಿರುವ ಹೊರತಾಗಿಯೂ ಪ್ರಗತಿ ಸಾಧಿಸಿದ್ದ ಶೂನ್ಯ. ಹೊಸ ಸೀರಿಸ್ಗಳ ಪರಿಚಯಿಸುವಲ್ಲೂ ಸೋತಿದೆ. ನ
ನಥಿಂಗ್
ಲಂಡನ್ ಮೂಲದ ನಥಿಂಗ್ ಕಂಪನಿಯು 2022ರ ಬೇಸಿಗೆಯಲ್ಲಿ ಫೋನ್ ನಂಥಿಂಗ್ ಫೋನ್ 1 ಅನ್ನು ಮಾರುಕಟ್ಟೆಗೆ ಇಳಿಸಿತು. ಇದು ನಿಧಾನವಾಗಿ ಜನಪ್ರಿಯತೆ ಪಡೆದುಕೊಂಡಿದೆ. ಬ್ರಾಂಡ್ನ ಪರಿಚಯವೇ ಈ ಕಂಪನಿಯ ಗುರಿಯಾಗಿರುವ ಕಾರಣ ಹೆಚ್ಚು ಫೋನ್ಗಳನ್ನು ಬಿಡುಗಡೆ ಮಾಡಿಲ್ಲ. ಆದರೆ, ಪಾರದರ್ಶಕ ವಿನ್ಯಾಸ ಸೇರಿದಂತೆ ಹಲವು ಹೊಸತನಗಳು ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ | OnePlus and Jio | ಭಾರತದಲ್ಲಿ ಇನ್ನು ಒನ್‌ಪ್ಲಸ್‌ನ ಸ್ಮಾರ್ಟ್‌ಫೋನ್‌ಗಳಿಗೆ ಜಿಯೋ ಟ್ರೂ 5ಜಿ ಸೇವೆಯ ಬೆಂಬಲ