ನವ ದೆಹಲಿ: ಈ ವರ್ಷ ಮಧ್ಯಭಾಗದಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಮೊಬೈಲ್ ಸೇವೆಗಳ ದರಗಳಲ್ಲಿ (Mobile tariffs) ಏರಿಕೆ ಮಾಡುವ ನಿರೀಕ್ಷೆ ಇದೆ.
ಈ ವರ್ಷ ೫ಜಿ ಸಂಬಂಧಿತ ಆದಾಯದಲ್ಲಿ ಟೆಲಿಕಾಂ ಕಂಪನಿಗಳಿಗೆ ಅಂಥ ನಿರೀಕ್ಷೆ ಇಲ್ಲದಿರುವುದರಿಂದ (ARPU-average revenue per user) 4ಜಿ ಸಂಬಂಧಿತ ಆದಾಯ ಏರಿಕೆ ನಿರ್ಣಾಯಕವಾಗಿದೆ. ಹೀಗಾಗಿ 4ಜಿ ಪ್ರಿಪೇಯ್ಡ್ ಸೇವೆಗಳ ದರಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಬ್ರೋಕರೇಜ್ ಸಂಸ್ಥೆ ಐಐಎಫ್‌ಎಲ್ ತಿಳಿಸಿದೆ. 2024ರಲ್ಲಿ ಸಾರ್ವತ್ರಿಕ ಚುನಾವಣೆಯ ಹೊಸ್ತಿಲಿನಲ್ಲಿರುವಾಗ ಟೆಲಿಕಾಂ ದರ ಏರಿಕೆಯಾದರೆ ಮತದಾರರು ಆಕ್ರೋಶಗೊಳ್ಳುವ ಸಾಧ್ಯತೆಯೂ ಇದೆ ಎಂದು ವರದಿ ತಿಳಿಸಿದೆ.
ಪ್ರಿ ಪೇಯ್ಡ್, ಪೋಸ್ಟ್ ಪೇಯ್ಡ್ ಪ್ಲಾನ್ ದರ ಏರಿಕೆ ನಿರೀಕ್ಷೆ: ಪ್ರಿ ಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಪ್ಲಾನ್‌ಗಳ ದರಗಳನ್ನು ಟೆಲಿಕಾಂ ಕಂಪನಿಗಳು ಏರಿಸುವ ಸಾಧ್ಯತೆ ಇದೆ. ಪೋಸ್ಟ್ ಪೇಯ್ಡ್ ಪ್ಲಾನ್‌ಗಳಲ್ಲಿ ಕಂಪನಿಗಳಿಗೆ ಆದಾಯ ಕೂಡ ಇಳಿಕೆಯಾಗುತ್ತಿರುವುದು ಇದಕ್ಕೆ ಮತ್ತೊಂದು ಕಾರಣ ಎನ್ನುತ್ತಾರೆ ತಜ್ಞರು.
ಈ ಹಿಂಎ 2021ರ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಮೊಬೈಲ್ ಸೇವೆಗಳ ದರಗಳು ಏರಿಕೆಯಾಗಿತ್ತು. ಆಗ 42% ತನಕ ದರ ಏರಿತ್ತು. ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೊ, ವೊಡಾ ಫೋನ್ ಸೇವೆಗಳ ದರ ಏರಿಕೆಯಾಗಿತ್ತು.
ದರ ಏರಿಕೆಗೆ ಕಾರಣವೇನು?
ಟೆಲಿಕಾಂ ಕಂಪನಿಗಳು 5ಜಿ ಸ್ಪೆಕ್ಟ್ರಮ್ ಸಲುವಾಗಿ ವಾರ್ಷಿಕ ಬಹು ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿದೆ. ಎರಡನೆಯದಾಗಿ 5ಜಿ ಸೇವೆ ಇನ್ನೂ ವ್ಯಾಪಕವಾಗಬೇಕಾಗಿರುವುದರಿಂದ ಸದ್ಯಕ್ಕೆ 4ಜಿ ಮೂಲಕ ಆದಾಯ ನಿರ್ಣಾಯಕವಾಗಿದೆ. ರಿಲಯನ್ಸ್ ಜಿಯೊ ಮತ್ತು ವೊಡಾಫೋನ್ ಐಡಿಯಾ ಕಂಪನಿಗೆ ದರ ಏರಿಕೆ ನಿರ್ಣಯಕವಾಗಿದೆ. ರಿಲಯನ್ಸ್ ಜಿಯೊ ಮುಂದಿನ 18-24 ತಿಂಗಳುಗಳಲ್ಲಿ ಐಪಿಒಗೆ ಸಜ್ಜಾಗುತ್ತಿದೆ. ಹೀಗಾಗಿ ಹೆಚ್ಚಿನ ಆದಾಯ ತೋರಿಸಬೇಕಾಗಿದೆ. ವೊಡಾಫೋನ್ ಐಡಿಯಾ ತನ್ನ ಸಾಲದ ಬಾಕಿ ತೀರಿಸಬೇಕಾಗಿದೆ.
ಈಗಿರುವ ಅಗ್ಗದ ಪ್ರಿ ಪೇಯ್ಡ್ ಪ್ಲಾನ್: ಪ್ರಸ್ತುತ ಏರ್‌ಟೆಲ್‌ನಿಂದ 155 ರೂ, 121 ರೂ 179 ರೂ.ಗಳ ಪ್ರಿ ಪೇಯ್ಡ್ ಪ್ಲಾನ್ ಇದೆ. ರಿಲಯನ್ಸ್ ಜಿಯೊದಿಂದ 155 ರೂ. 209 ರೂ.ಗಳ ಪ್ಲಾನ್ ಇದೆ.
ಜಿಯೊ, ಏರ್‌ಟೆಲ್ ಬಂಡವಾಳ ವೆಚ್ಚ ಹೆಚ್ಚಳ: 2023ರಲ್ಲಿ ರಿಲಯನ್ಸ್ ಜಿಯೊ ಮತ್ತು ಏರ್‌ಟೆಲ್‌ನ ಬಂಡವಾಳ ವೆಚ್ಚದಲ್ಲಿ ಏರಿಕೆಯಾಗಲಿದೆ. ಉಭಯ ಕಂಪನಿಗಳು ತಮ್ಮ 5ಜಿ ನೆಟ್ ವರ್ಕ್ ಜಾರಿಯ ಸಲುವಾಗಿ ಭಾರಿ ಬಂಡವಾಳವನ್ನು ಹೂಡಿಕೆ ಮಾಡುತ್ತಿವೆ. ಏರ್‌ಟೆಲ್ 58,000 ಕೋಟಿ ರೂ. ಹೂಡಿಕೆ ಮಾಡುವ ನಿರೀಕ್ಷೆ ಇದೆ.