Site icon Vistara News

NASA: ಚಂದ್ರನ ದಕ್ಷಿಣ ಧ್ರುವದ ಬೆರಗುಗೊಳಿಸುವ ಚಿತ್ರ ಕ್ಲಿಕ್ಕಿಸಿದ ನಾಸಾ, ಏನಿದೆ ಅದರಲ್ಲಿ?

nasa picture moon south pole

ನ್ಯೂಯಾರ್ಕ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ (NASA) ಅತ್ಯಧುನಿಕ ಕ್ಯಾಮೆರಾಗಳು ಚಂದ್ರನ ದಕ್ಷಿಣ ಧ್ರುವದ ಚಿತ್ರಗಳ ಅಪೂರ್ವ ಸಂಯೋಜನೆ (ಮೊಸಾಯಿಕ್)ಯೊಂದನ್ನು ಬಹಿರಂಗಪಡಿಸಿದ್ದು, ಇದು ಬೆರಗುಗೊಳಿಸುವಂತಿದೆ.

ಬಾಹ್ಯಾಕಾಶ ಸಂಸ್ಥೆ ನಾಸಾ ನಮ್ಮ ಬ್ರಹ್ಮಾಂಡದ ಬೆರಗಾಗಿಸುವಂಥ ಚಿತ್ರಗಳನ್ನು ಆಗಾಗ ಸೆರೆಹಿಡಿಯುತ್ತದೆ. ಮಂಗಳವಾರ ನಾಸಾ ಎರಡು ವಿಭಿನ್ನ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ಚಂದ್ರನ ದಕ್ಷಿಣ ಧ್ರುವ ಚಿತ್ರಣವನ್ನು ಹಂಚಿಕೊಂಡಿದೆ. ನಾಸಾದ ಪ್ರಕಾರ ಈ ಚಿತ್ರ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಹಲವು ವಿಶಿಷ್ಟ ವಿವರಗಳನ್ನು ಬಹಿರಂಗಪಡಿಸಿದೆ.

ಶಾಕಲ್ಟನ್ ಕ್ರೇಟರ್ ಎಂಬ ಸುಂದರವಾದ ಕುಳಿಯನ್ನು ಇದು ಎತ್ತಿ ತೋರಿಸಿದೆ. ಬಹುಶಃ ಚಿತ್ರದಲ್ಲಿ ಕಾಣಬರುವ ಕುಳಿಯು 2025ರಲ್ಲಿ ನಾಸಾದ ಬಾಹ್ಯಾಕಾಶ ನೌಕೆ ಆರ್ಟೆಮಿಸ್ III ಮಿಷನ್‌ನ ಲ್ಯಾಂಡಿಂಗ್ ಸ್ಥಳ ಆಗಿರುವ ಸಾಧ್ಯತೆ ಇದೆ. ಈ ಪ್ರದೇಶ ಹಿಂದೆ ಎಂದೂ ಪರಿಶೋಧಿಸಲ್ಪಟ್ಟಿಲ್ಲ. ವೈಜ್ಞಾನಿಕ ಸಂಶೋಧನೆಗೆ ಇಲ್ಲಿ ಹೆಚ್ಚಿನ ಆಸ್ಪದವಿದೆ. ಈ ಪ್ರದೇಶ ಐಸ್ ನಿಕ್ಷೇಪಗಳು ಅಥವಾ ಇತರ ಘನೀಕೃತ ದ್ರವಗಳನ್ನು ಹೊಂದಿದೆ ಎಂದು ಭಾವಿಸಲಾಗಿದೆ.

ನಾಸಾ ಚಿತ್ರವನ್ನು ಹಂಚಿಕೊಂಡಿದ್ದು, ʼಮೂನ್‌ಲೈಟ್ ಸೋನಾಟಾ’ ಎಂದು ಶೀರ್ಷಿಕೆ ನೀಡಿದೆ. ಇದು ನಾಸಾದ ಲೂನಾರ್‌ ವಿಚಕ್ಷಣ ಆರ್ಬಿಟರ್ ಕ್ಯಾಮೆರಾ (LROC) ಮತ್ತು ಡ್ಯಾನುರಿ ಎಂಬ ಕೊರಿಯಾ ಏರೋಸ್ಪೇಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಬಾಹ್ಯಾಕಾಶ ನೌಕೆಯಲ್ಲಿರುವ NASA ಉಪಕರಣವಾದ ShadowCam ಚಿತ್ರಿಸಿದ ಫೋಟೋಗಳ ಸಂಯೋಜನೆಯಾಗಿದೆ.

LROC ಚಂದ್ರನ ಮೇಲ್ಮೈಯ ವಿವರವಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಆದರೆ ನೇರ ಸೂರ್ಯನ ಬೆಳಕು ಬೀಳದ ಚಂದ್ರನ ನೆರಳಿನ ಭಾಗಗಳನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯುವ ಸಾಮರ್ಥ್ಯವನ್ನು ಕಡಿಮೆ ಹೊಂದಿದೆ. ShadowCam ಕ್ಯಾಮೆರಾ LROCಗಿಂತ 200 ಪಟ್ಟು ಹೆಚ್ಚು ಬೆಳಕು-ಸೂಕ್ಷ್ಮವಾಗಿದೆ ಮತ್ತು ಅತ್ಯಂತ ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. LROCಗೆ ಗೋಚರಿಸದ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತದೆ. ಹೀಗಾಗಿ ಬಾಹ್ಯಾಕಾಶ ವಿಶ್ಲೇಷಕರು ಎರಡೂ ಉಪಕರಣಗಳ ಚಿತ್ರಗಳನ್ನು ಸಂಯೋಜಿಸಿ ಭೂಪ್ರದೇಶದ ಸಮಗ್ರ ದೃಶ್ಯ ನಕ್ಷೆಯನ್ನು ರಚಿಸಿದ್ದಾರೆ.

ಶಾಡೋಕ್ಯಾಮ್‌ನ ಚಿತ್ರಣದಿಂದಾಗಿ ಈ ಸಂಯೋಜನೆಯಲ್ಲಿ ಶಾಶ್ವತ ನೆರಳಿನ ಪ್ರದೇಶಗಳಾದ ಶಾಕಲ್ಟನ್ ಕ್ರೇಟರ್‌ನ ಆಂತರಿಕ ನೆಲ ಮತ್ತು ಗೋಡೆಗಳು ವಿವರವಾಗಿ ಗೋಚರಿಸಿವೆ. ಇದರಲ್ಲಿರುವ ಸೂರ್ಯನ ಬೆಳಕು ಬೀಳುವ ಪ್ರದೇಶಗಳು, ಕುಳಿಯ ಅಂಚು ಮತ್ತು ಪಾರ್ಶ್ವಗಳು, LROC ಸಂಗ್ರಹಿಸಿದ ಚಿತ್ರವಾಗಿದೆ.

ಇದನ್ನೂ ಓದಿ: Samudrayaan: ಚಂದ್ರಯಾನ 3 ಸಕ್ಸೆಸ್ ಬೆನ್ನಲ್ಲೇ ‘ಸಮುದ್ರಯಾನ’ಕ್ಕೆ ಸಿದ್ಧವಾದ ಭಾರತ! ಏನಿದು ಮತ್ಸ್ಯ ಮಿಷನ್?

Exit mobile version