ನವದೆಹಲಿ: ಭಾರತದಲ್ಲಿಯೇ ಕಾರುಗಳ ಸುರಕ್ಷತೆಯನ್ನು ಅಳೆಯುವ ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್‌ಗೆ (Bharat New Car Assessment Programme or Bharat NCAP) ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಚಾಲನೆ ನೀಡಿದ್ದಾರೆ. ಇದರೊಂದಿಗೆ ಸ್ವಂತ ಎನ್‌ಸಿಪಿ ಹೊಂದಿದ ರಾಷ್ಟ್ರಗಳಾದ ಜಪಾನ್, ಆಸ್ಟ್ರೇಲಿಯಾ, ಅಮೆರಿಕ, ಲ್ಯಾಟಿನ್ ಅಮೆರಿಕದಂತಹ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ.
ಭಾರತದ ರಸ್ತೆ ಸುರಕ್ಷತೆ ಹಾಗೂ ಕಾರುಗಳ ಅಪಘಾತ (Crash) ಸುರಕ್ಷತೆಯನ್ನು ಅಳೆಯುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ. ಹಾಗಾದರೆ ಏನಿದು ಭಾರತ್ ಎನ್‌ಸಿಎಪಿ? ಇದರಿಂದ ದೇಶದಲ್ಲಿ ಯಾವ ವಾಹನಗಳ ಸುರಕ್ಷತೆ ಪ್ರಮಾಣ ಅಳೆಯುವುದು ಸಾಧ್ಯ? ಜನರಿಗೆ ಹೇಗೆ ಉಪಯೋಗವಾಗುತ್ತದೆ ಎಂಬರ ಮಾಹಿತಿ ಇಲ್ಲಿದೆ.
ಭಾರತ್ ಎನ್‌ಸಿಎಪಿಗೆ ಚಾಲನೆ
ಏನಿದು ಭಾರತ್ ಎನ್‌ಸಿಎಪಿ?
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಅಡಿಯಲ್ಲಿ ಭಾರತ್ ಎನ್‌ಸಿಎಪಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಗರಿಷ್ಠ ಎಂಟು ಪ್ಯಾಸೆಂಜರ್‌ಗಳು ಕುಳಿತುಕೊಳ್ಳಬಹುದಾದ ಅಥವಾ ಗರಿಷ್ಠ 3.5 ಟನ್ ತೂಕದ ಕಾರುಗಳ ಸುರಕ್ಷತೆಯ ಸಾಮರ್ಥ್ಯವನ್ನು ಅಳೆಯುತ್ತದೆ. ಅಮೆರಿಕ, ಜಪಾನ್‌ನಂತಹ ಶ್ರೇಣಿಯಲ್ಲಿಯೇ ಭಾರತದ ರಸ್ತೆ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಭಾರತ್ ಎನ್‌ಸಿಎಪಿಯನ್ನು ಜಾರಿಗೆ ತರಲಾಗಿದೆ. ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಮೊದಲು ಕಾರಿನ ಮುಂಭಾಗ (Frontal), ಬದಿ (Side), ಪೋಲ್ ಸೈಡ್‌ನಲ್ಲಿ ಕ್ರ್ಯಾಶ್ ಮಾಡಿಸಿ, ದಕ್ಷತೆ ಆಧಾರದ ಮೇಲೆ ರೇಟಿಂಗ್ ನೀಡಲಾಗುತ್ತದೆ.
ಜನರಿಗೆ ಹೇಗೆ ಅನುಕೂಲ?
ಆನ್‌ಲೈನ್‌ನಲ್ಲಿ ಮೊಬೈಲ್ ಸೇರಿ ಯಾವುದೇ ಉತ್ಪನ್ನಗಳ ರೇಟಿಂಗ್ ಆಧಾರದ ಮೇಲೆ ಖರೀದಿಸುವ ರೀತಿಯಲ್ಲಿಯೇ ಭಾರತ್ ಎನ್‌ಸಿಎಪಿ ನೀಡುವ ರೇಟಿಂಗ್ ಆಧಾರದ ಮೇಲೆಯೇ ಕಾರುಗಳನ್ನು ಖರೀದಿಸಲು ಜನರಿಗೆ ಅನುಕೂಲವಾಗಲಿದೆ. ಗರಿಷ್ಠ 5 ಸ್ಟಾರ್‌ಗಳವರೆಗೆ ಭಾರತ್ ಎನ್‌ಸಿಎಪಿಯು ರೇಟಿಂಗ್ ನೀಡಲಿದೆ. ಈ ಸುರಕ್ಷತಾ ರೇಟಿಂಗ್‌ಅನ್ನು ಗಮನಿಸಿಯೇ ಜನ ಕಾರುಗಳನ್ನು ಖರೀದಿಸಬಹುದಾಗಿದೆ.
ಇದನ್ನೂ ಓದಿ: Nitin Gadkari: ದ್ವಾರಕಾ ಎಕ್ಸ್‌ಪ್ರೆಸ್‌ವೇ ವಿಡಿಯೊ ಹಂಚಿಕೊಂಡ ಗಡ್ಕರಿ; ಭೂಮಿ ಮೇಲೆ ರಂಗೋಲಿ ಬಿಡಿಸಿದಂತೆ ಇದೆ ರಸ್ತೆ
ಭಾರತದಲ್ಲಿಯೇ ಗುಣಮಟ್ಟದ ಕಾರುಗಳ ಉತ್ಪಾದನೆ ಹಾಗೂ ಕಾರಿನ ಬಿಡಿಭಾಗಗಳ ಉತ್ಪಾದನೆಗೆ ಭಾರತ್ ಎನ್‌ಸಿಎಪಿಯು ಆರೋಗ್ಯಕರ ಸ್ಪರ್ಧೆ ಏರ್ಪಡಿಸುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ದೇಶದಲ್ಲಿ ರೋಡ್ ಟ್ರಾಫಿಕ್‌ನಿಂದ ಸಂಭವಿಸುವ ಅಪಘಾತಗಳಲ್ಲಿ ವಾರ್ಷಿಕ 13 ಲಕ್ಷ ಜನ ಮೃತಪಡುತ್ತಾರೆ. ಹೀಗೆ ರಸ್ತೆ ಹಾಗೂ ಕಾರುಗಳ ಸುರಕ್ಷತೆಯ ಮೂಲಕ ಅಪಘಾತ ಪ್ರಮಾಣವನ್ನು ತಗ್ಗಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಭಾರತ್ ಎನ್‌ಸಿಎಪಿಯನ್ನು ಜಾರಿಗೆ ತಂದಿದೆ.