ಮುಂಬೈ: ವಾಟ್ಸ್‌ಆ್ಯಪ್‌ನಲ್ಲೇ (WhatsApp JioMart) ಇನ್ನು ನೀವು ತರಕಾರಿ, ಹಣ್ಣುಗಳನ್ನು ಖರೀದಿಸಬಹುದು! ಹಾಗಂತ, ಯಾವ ಯಾವುದೋ ಅಂಗಡಿಯಿಂದಲ್ಲ, ಬದಲಿಗೆ ರಿಲಯನ್ಸ್ ಕಂಪನಿಯ ಜಿಯೋ ಮಾರ್ಟ್‌ನಿಂದ ಮಾತ್ರ ಖರೀದಿಸಬಹುದು. ಫೇಸ್‌ಬುಕ್‌ನ ಪೇರೆಂಟ್ ಕಂಪನಿ ಆಗಿರುವ ಮೆಟಾ ಹಾಗೂ ರಿಲಯನ್ಸ್ ರೀಟೆಲ್ ಜಂಟಿಯಾಗಿ ಇಂಥದೊಂದು ಅವಕಾಶವನ್ನು ಕಲ್ಪಿಸುತ್ತಿವೆ. ಬಳಕೆದಾರರು, ವಾಟ್ಸ್‌ಆ್ಯಪ್ ಚಾಟ್ ಮೂಲಕವೇ ಆರ್ಡರ್ ಮಾಡಬಹುದಾಗಿದೆ. ಈ ಪ್ರಯತ್ನವು ಜಗತ್ತಿನಲ್ಲೇ ಮೊದಲನೆಯದ್ದಾಗಿದೆ!
ಭಾರತದಲ್ಲಿ ಗ್ರಾಹಕರು ತಮ್ಮ ವಾಟ್ಸ್‌ಆ್ಯಪ್ ಮೂಲಕವೇ ಜಿಯೋ ಮಾರ್ಟ್‌ನಿಂದ ಯಾವುದೇ ವಸ್ತುಗಳನ್ನು ಖರೀದಿಸಬಹುದಾಗಿದೆ. ಇದು ಆನ್‌ಲೈನ್ ಮೂಲಕ ಖರೀದಿಸುವವರಿಗೆ ಹೊಸ ಖರೀದಿಯ ಅನುಭವವನ್ನು ನೀಡಲಿದೆ. ಜಿಯೋಮಾರ್ಟ್‌ನ ಸಂಪೂರ್ಣ ಕಿರಾಣಿ ಕ್ಯಾಟಲಾಗ್ ಅನ್ನು ಮನಬಂದಂತೆ ಬ್ರೌಸ್ ಮಾಡಲು, ಕಾರ್ಟ್‌ಗೆ ವಸ್ತುಗಳನ್ನು ಸೇರಿಸಲು ಮತ್ತು ಖರೀದಿಯನ್ನು ಪೂರ್ಣಗೊಳಿಸಲು ಪಾವತಿ ಮಾಡುವುದು ಸೇರಿದಂತೆ ಎಲ್ಲವನ್ನೂ ಈ ವಾಟ್ಸ್ಆ್ಯಪ್ ಚಾಟ್ ಮೂಲಕವೇ ನೆರವೇರಿಸಬಹುದು ಎಂದು ರಿಲಯನ್ಸ್ ರಿಟೇಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದೇಶದ ಆರ್ಥಿಕ ಅಭಿವೃದ್ಧಿಗೆ ಇಂಬು ನೀಡಲು ಮತ್ತು ಎಲ್ಲ ರೀತಿಯ ಅವಕಾಶಗಳನ್ನು ವ್ಯಾಪಾರಕ್ಕೆ, ಜನರಿಗೆ ಒದಗಿಸುವುದಕ್ಕಾಗಿಯೇ ಜಿಯೋ ಮತ್ತು ಮೆಟಾ ನಡುವೆ ಸ್ಟ್ರಾಟೆಜಿಕ್ ಸಹಭಾಗಿತ್ವ ಏರ್ಪಟ್ಟಿದೆ. ಈ ಮೂಲಕ ಭಾರತೀಯ ಡಿಜಿಟಲ್ ಪರಿವರ್ತನೆಗೆ ವೇಗ ಸಿಗಲಿದೆ. ವಾಟ್ಸ್‌ಆ್ಯಪ್‌ನಲ್ಲಿ ಜಿಯೋ ಮಾರ್ಟ್ ಅಕ್ಸೆಸ್, ಭಾರತದಲ್ಲಿ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವುದನ್ನು ಕ್ರಾಂತಿಕಾರಕಗೊಳಿಸಲಿದೆ, ಶಾಪಿಂಗ್ ಮಾಡುವ ಹೊಸ ಅನುಭವವನ್ನು ನೀಡಲಿದೆ ಎಂದು ತಿಳಿಸಿದೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಜಿಯೋ ಮಾರ್ಟ್ ಜತೆಗೆ ಪಾರ್ಟ್ನರ್‌ಶಿಪ್ ಸಾಧಿಸಿರುವುದು ಸಂತೋಷ ತಂದಿದೆ. ವಾಟ್ಸ್ಆ್ಯಪ್‌ನಲ್ಲಿ ಶಾಪಿಂಗ್ ಎಕ್ಸ್‌ಪಿರಿಯನ್ಸ್ ಒದಗಿಸುತ್ತಿರುವುದು ಇದು ನಮ್ಮ ಮೊತ್ತ ಮೊದಲ ಪ್ರಯೋಗವಾಗಿದೆ. ಜನರು ಈಗ ವಾಟ್ಸ್ಆ್ಯಪ್ ಮೂಲಕ ತರಕಾರಿಯನ್ನು ಖರೀದಿಸಬಹುದು ಎಂದು ತಿಳಿಸಿದ್ದಾರೆ.
ಇದನ್ನು ಓದಿ | WhatsApp New Feature: ವಾಟ್ಸ್‌ಆ್ಯಪ್ ಗ್ರೂಪ್‌ನೊಳಗೇ ಮತ್ತೆ ಗ್ರೂಪ್ಸ್ ಮಾಡಿ! ಶೀಘ್ರವೇ ಎಲ್ಲರಿಗೂ ಲಭ್ಯ