Site icon Vistara News

OLA Electric Car | ಓಲಾ ಎಲೆಕ್ಟ್ರಿಕ್‌ ಕಾರು 2024ಕ್ಕೆ ಬಿಡುಗಡೆ, ಸಿಇಒ ಭವೀಶ್‌ ಅಗ್ರವಾಲ್‌ ಘೋಷಣೆ

ola electric CEO bhavish aggrawal

ಬೆಂಗಳೂರು: ಓಲಾ ತನ್ನ ನೂತನ ಎಲೆಕ್ಟ್ರಿಕ್‌ ಕಾರನ್ನು ೨೦೨೪ರಲ್ಲಿ ಬಿಡುಗಡೆಗೊಳಿಸಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ಭವೀಶ್‌ ಅಗ್ರವಾಲ್‌ ಸೋಮವಾರ ತಿಳಿಸಿದ್ದಾರೆ.

ಓಲಾದ ಮೂವ್‌ ಒಎಸ್‌ ೩ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನೂ ಅವರು ಘೋಷಿಸಿದ್ದಾರೆ. ಇದು ಈ ವರ್ಷ ದೀಪಾವಳಿ ವೇಳೆಗೆ ಬಿಡುಗಡೆಯಾಗಲಿದೆ.

ಓಲಾದ ಎಲೆಕ್ಟ್ರಿಕ್‌ ಕಾರು ಭಾರತದಲ್ಲಿ ವೇಗವಾಗಿ ಸಂಚರಿಸುವ ಕಾರುಗಳಲ್ಲಿ ಒಂದಾಗಲಿದೆ. ದೇಶದ ಮಹತ್ತ್ವಾಕಾಂಕ್ಷೆಯ ಯೋಜನೆಗಳಲ್ಲಿ ಇದೂ ಒಂದಾಗಲಿದೆ. ಕಾರು ಕೇವಲ ೪ ಸೆಕೆಂಡ್‌ನಲ್ಲಿ ಗಂಟೆಗೆ ೧೦೦ ಕಿ.ಮೀ ವೇಗವನ್ನು ಪಡೆದುಕೊಳ್ಳಲಿದೆ. ಪ್ರತಿ ಚಾರ್ಜ್‌ಗೆ ೫೦೦ ಕಿ.ಮೀ ದೂರ ಸಂಚರಿಸಬಲ್ಲುದು. ಇದು ಕೀಲೆಸ್‌ ಮತ್ತು ಹ್ಯಾಂಡ್‌ಲೆಸ್‌ ಕಾರು ಆಗಿರಲಿದೆ ಎಂದು ಸಿಇಒ ಭವೀಶ್‌ ಅಗ್ರವಾಲ್‌ ತಿಳಿಸಿದ್ದಾರೆ.

ತಮಿಳುನಾಡಿನ ಬೃಹತ್‌ ಕಾರ್ಖಾನೆಯಲ್ಲಿ ಓಲಾದ ಕಾರು ಉತ್ಪಾದನೆಯಾಗಲಿದೆ. ನಾವು ಸೆಮಿಕಂಡಕ್ಟರ್‌, ಸೋಲಾರ್‌, ಎಲೆಕ್ಟ್ರಾನಿಕ್‌ ಮತ್ತು ಇತರ ಉತ್ಪಾದನಾ ಕ್ರಾಂತಿಯನ್ನು ಮಿಸ್‌ ಮಾಡಿಕೊಂಡಿದ್ದೇವೆ. ಆದರೆ ಎಲೆಕ್ಟ್ರಿಕ್‌ ಸೆಲ್‌ ಮತ್ತು ಬ್ಯಾಟರಿಗಳ ವಿಭಾಗದಲ್ಲಿ ವಿಶ್ವಾದ್ಯಂತ ಈಗಲೂ ಕೆಲಸ ನಡೆಯುತ್ತಿದೆ. ಹೀಗಾಗಿ ಈ ವಿಭಾಗದಲ್ಲಿ ಈಗ ನಾವು ಹೂಡಿಕೆ ಮಾಡಿದರೆ ಮಾರುಕಟ್ಟೆಯ ನಾಯಕತ್ವವನ್ನು ವಹಿಸಬಹುದು ಎಂದು ಅಗ್ರವಾಲ್‌ ಹೇಳಿದ್ದಾರೆ. ಓಲಾ ಪ್ರಮುಖ ೫೦ ನಗರಗಳಲ್ಲಿ ೧೦೦ ಹೈಪರ್‌ ಚಾರ್ಜರ್‌ಗಳನ್ನು ಅಳವಡಿಸಲು ನಿರ್ಧರಿಸಿದೆ.

ಓಲಾ ಎಸ್‌ ೧ ಎಲೆಕ್ಟ್ರಿಕ್‌ ಸ್ಕೂಟರ್‌ ದರ ೧ ಲಕ್ಷ ರೂ: ಓಲಾ ಎಸ್‌೧ ಎಲೆಕ್ಟ್ರಿಕ್‌ ಸ್ಕೂಟರ್‌ನ ಆರಂಭಿಕ ದರವನ್ನು ಓಲಾ ೯೯,೯೯೯ ರೂ.ಗೆ ನಿಗದಿಪಡಿಸಿದೆ. ಓಲಾ ಆ್ಯಪ್‌ನಲ್ಲಿ ೪೯೯ ರೂ. ಟೋಕನ್‌ ಮೊತ್ತಕ್ಕೆ ಸ್ಕೂಟರ್‌ ಬುಕ್‌ ಮಾಡಬಹುದು. ೨,೯೯೯ ರೂ. ಇಎಂಐನೊಂದಿಗೆ ಓಲಾ ಎಸ್‌೧ ಸ್ಕೂಟರ್‌ ಖರೀದಿಸಬಹುದು.

Exit mobile version