ಬೆಂಗಳೂರು: ಪಾಸ್‌ವರ್ಡ್ ನಿರ್ವಹಣಾ ಪರಿಹಾರ ಕಂಪನಿ (Password management solution company) ನಾರ್ಡ್‌ಪಾಸ್ (NordPass) 2023ರಲ್ಲಿ ಹೆಚ್ಚಾಗಿ ಬಳಸಲಾಗಿದ್ದ ಪಾಸ್‌ವರ್ಡ್‌ಗಳ (Password) ಪಟ್ಟಿಯನ್ನು ಬಿಡುಗಡೆ ಮಾಡಿದೆ. ‘123456’ ಎನ್ನುವುದು ಭಾರತದಲ್ಲಿ ಮತ್ತು ವಿಶ್ವದಲ್ಲೇ ಸಾಮಾನ್ಯವಾಗಿ ಕಂಡು ಬಂದ ಪಾಸ್‌ವರ್ಡ್ ಆಗಿತ್ತು ಎಂದು ನಾರ್ಡ್‌ಪಾಸ್ ತಿಳಿಸಿದೆ.
ದುರ್ಬಲ ಮತ್ತು ಸರಳ ಪಾಸ್‌ವರ್ಡ್‌ಗಳನ್ನು ಬಳಸಬೇಡಿ. ಇದನ್ನು ಹ್ಯಾಕ್ ಮಾಡುವುದು ಸುಲಭ ಎನ್ನುವ ತೀವ್ರ ಎಚ್ಚರಿಕೆಯ ನಡುವೆಯೂ ಜನರು ನೆನಪಿನಲ್ಲಿಟ್ಟುಕೊಳ್ಳಲು ಅನುಕೂಲ ಎನ್ನುವ ಕಾರಣಕ್ಕೆ ಈ ಪಾಸ್‌ವರ್ಡ್‌ಗಳನ್ನು ಬಳಸಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಿರ್ದಿಷ್ಟ ಸ್ಥಳವನ್ನು ಸೂಚಿಸುವ ಪದಗಳು ಕೂಡ ಜನರ ಪಾಸ್‌ವರ್ಡ್‌ಗಳಲ್ಲಿ ಕಂಡುಬಂದಿವೆ. ಜಾಗತಿಕವಾಗಿ ಇಂಟರ್‌ನೆಟ್ ಬಳಕೆದಾರರು ತಮ್ಮ ದೇಶ ಅಥವಾ ನಗರಗಳ ಹೆಸರನ್ನು ಬಳಸಿದ್ದಾರೆ. ಇದಕ್ಕೆ ನಮ್ಮ ದೇಶವೂ ಹೊರತಲ್ಲ. ‘India@123’ ಎನ್ನುವ ಪಾಸ್‌ವರ್ಡ್ ಕೂಡ ವ್ಯಾಪಕ ಬಳಕೆಯಲ್ಲಿದೆ.
ಜನರು ಬದಲಾಯಿಸಲು ಇಚ್ಛಿಸದ ಪಾಸ್‌ವರ್ಡ್‌ಗಳಲ್ಲಿ ಒಂದಾದ ‘ಅಡ್ಮಿನ್’ ಎಂಬ ಪದವು ಭಾರತ ಮತ್ತು ಇತರ ಅನೇಕ ದೇಶಗಳಲ್ಲಿ ಈ ವರ್ಷ ಅತ್ಯಂತ ಸಾಮಾನ್ಯವಾಗಿ ಕಂಡು ಬಂದಿದೆ. ಅಲ್ಲದೆ ಕಳೆದ ವರ್ಷ ಜಾಗತಿಕವಾಗಿ ಅಗ್ರ ಸ್ಥಾನದಲ್ಲಿದ್ದ ‘password’ ಪದ ಈ ಬಾರಿಯೂ ಇಂಟರ್‌ನೆಟ್ ಬಳಕೆದಾರರ ಫೇವರೇಟ್ ಆಗಿದೆ.
ಭಾರತದಲ್ಲಿ ಕಂಡು ಬಂದಿರುವ ಸಾಮಾನ್ಯ ಪಾಸ್‌ವರ್ಡ್‌ಗಳ ಪಟ್ಟಿ
- 123456
- admin
- 12345678
- 12345
- password
- Pass@123
- 123456789
- Admin@123
- India@123
- admin@123
- Pass@1234
- 1234567890
- Abcd@1234
- Welcome@123
- Abcd@123
- admin123
- administrator
- Password@123
- Password
- UNKNOWN
ಸಂಖ್ಯೆಗಳೇ ಜನಪ್ರಿಯ
ವಿಶ್ವದ ಅತ್ಯಂತ ಜನಪ್ರಿಯ ಪಾಸ್‌ವರ್ಡ್‌ಗಳಲ್ಲಿ ಸುಮಾರು ಮೂರನೇ ಒಂದು ಭಾಗ (31%) ಸಂಪೂರ್ಣವಾಗಿ ಸಂಖ್ಯೆಯನ್ನು ಒಳಗೊಂಡಿದೆ. ಉದಾಹರಣೆಗೆ ‘123456789’, ‘12345’, ‘000000’ ಮತ್ತಿತರ ಸಂಖ್ಯೆ ಬಹಳ ಜನಪ್ರಿಯ. ವರದಿಯ ಪ್ರಕಾರ, ಈ ವರ್ಷದ ಜಾಗತಿಕ ಪಟ್ಟಿಯಲ್ಲಿನ ಶೇಕಡಾ 70ರಷ್ಟು ಪಾಸ್‌ವರ್ಡ್‌ಗಳನ್ನು ಒಂದು ಸೆಕೆಂಡಿಗಿಂತ ಕಡಿಮೆ ಅವಧಿಯಲ್ಲಿ ಭೇದಿಸಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಪಾಸ್‌ವರ್ಡ್‌ಗಳ ಕುರಿತು ನಾರ್ಡ್‌ಪಾಸ್ ಸುಮಾರು 5 ವರ್ಷಗಳಿಂದ ಸಂಶೋಧನೆ ನಡೆಸುತ್ತಿದೆ. ಈ ಪೈಕಿ ‘123456’ ಎನ್ನುವುದು ಸುಮಾರು 4 ವರ್ಷ ಅಗ್ರಸ್ಥಾನದಲ್ಲಿತ್ತು ಎಂದು ತಿಳಿಸಿದೆ.
ಇದನ್ನೂ ಓದಿ: Tata Technologies : ರಾಜ್ಯದಲ್ಲಿ ಟಾಟಾ ಟೆಕ್ನಾಲಜೀಸ್‌ನಿಂದ 2,000 ಕೋಟಿ ರೂ. ಹೂಡಿಕೆ
ಪಾಸ್‌ಕೀಸ್ ಹೆಚ್ಚು ಸುರಕ್ಷಿತ
ಹೆಚ್ಚಿನ ಸುರಕ್ಷತೆಗಾಗಿ ಪಾಸ್‌ಕೀಸ್ (Passkeys) ಬಳಸಬಹುದು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ. “ಈ ತಂತ್ರಜ್ಞಾನವು ಅಸುರಕ್ಷಿತ ಪಾಸ್‌ವರ್ಡ್‌ನಿಂದ ರಕ್ಷಣೆ ಒದಗಿಸುತ್ತದೆ. ಇದರಿಂದ ಬಳಕೆದಾರರನ್ನು ಹೆಚ್ಚು ಸುರಕ್ಷಿತರಾಗಿರುತ್ತಾರೆ” ಎಂದು ತಜ್ಞರು ಹೇಳುತ್ತಾರೆ.
ಸಾಂಪ್ರದಾಯಿಕ ಪಾಸ್‌ವರ್ಡ್‌ಗಳ ಬದಲಿಗೆ ಪಾಸ್‌ವರ್ಡ್ ರಹಿತ ಲಾಗಿನ್ ಬಳಸುವ ಮೂಲಕ ನಿಮ್ಮ ಎಲ್ಲ ಖಾತೆಗಳನ್ನು ಹೆಚ್ಚು ಸುರಕ್ಷಿತವಾಗಿಸುವ ಗುರಿಯನ್ನು ಪಾಸ್ ಕೀಗಳು ಹೊಂದಿವೆ. ಪ್ರತಿ ಪಾಸ್ ಕೀಯು ಮರುಬಳಕೆ ಮಾಡಲಾಗದ ಅನನ್ಯ ಡಿಜಿಟಲ್ ಕೀಲಿಯಾಗಿದ್ದು, ಅವುಗಳನ್ನು ಕಂಪನಿಯ ಸರ್ವರ್‌ಗಳ ಬದಲು ನಿಮ್ಮ ಉಪಕರಣಗಳಲ್ಲಿ ಎನ್ಕ್ರಿಪ್ಟ್ ಮಾಡಿದ ಸ್ವರೂಪದಲ್ಲಿ ಸಂಗ್ರಹಿಸಲಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ