ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ತನ್ನ ೫ಜಿ ಸೇವೆಯನ್ನು ಮುಂಬರುವ ದೀಪಾವಳಿಗೆ ಆರಂಭಿಸಲಿದೆ ( Reliance AGM) ಎಂದು ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಸೋಮವಾರ ತಿಳಿಸಿದ್ದಾರೆ.
ದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕತಾದಲ್ಲಿ ದೀಪಾವಳಿಗೆ ಜಿಯೊ (ಅಕ್ಟೋಬರ್ 24) ೫ಜಿ ಸೇವೆ ಆರಂಭವಾಗಲಿದೆ. ೨೦೨೩ರ ಡಿಸೆಂಬರ್ ವೇಳೆಗೆ ದೇಶದ ಎಲ್ಲ ತಾಲ್ಲೂಕುಗಳಲ್ಲಿ ರಿಲಯನ್ಸ್ ೫ಜಿ ಸೇವೆ ಸಿಗಲಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದರು.
ಸಮೂಹದ ೪೫ನೇ ವಾರ್ಷಿಕ ಮಹಾ ಸಭೆಯಲ್ಲಿ (Reliance AGM) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಸೋಮವಾರ ಈ ಘೋಷಣೆ ಮಾಡಿದ್ದಾರೆ. ಮಧ್ಯಾಹ್ನ ವಿಡಿಯೊ ಕಾನ್ಫರೆನ್ಸ್ ಮೂಲಕ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಮುಕೇಶ್ ಅಂಬಾನಿ ಅವರು, ೫ಜಿ ಸೇವೆಯ ವಿವರಗಳನ್ನು ನೀಡಿದರು.
೫ಜಿ ನೆಟ್ ವರ್ಕ್ ಅಳವಡಿಸುವ ಸಲುವಾಗಿ ರಿಲಯನ್ಸ್ ಇಂಡಸ್ಟ್ರೀಸ್ ೨ ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದೆ. ಜಿಯೊ ೫ಜಿ ವಿಶ್ವದ ಅತಿ ದೊಡ್ಡ ೫ಜಿ ನೆಟ್ ವರ್ಕ್ ಆಗಲಿದೆ. ಜಿಯೊ ೫ಜಿಯನ್ನು ಸ್ಟ್ಯಾಂಡ್ ಅಲೋನ್ ೫ಜಿ ಎಂದು ಕರೆಯಲಾಗುವುದು. ಅಂದರೆ ಇದಕ್ಕೆ ೪ಜಿ ನೆಟ್ ವರ್ಕ್‌ನ ಯಾವುದೇ ಅವಲಂಬನೆಯ ಅಗತ್ಯ ಇರುವುದಿಲ್ಲ ಎಂದು ವಿವರಿಸಿದರು.
ಜಿಯೊ ಮೆಗಾ ೫ಜಿ ಪ್ಲಾನ್
ರಿಲಯನ್ಸ್ ಜಿಯೊ ತನ್ನ ವಾರ್ಷಿಕ ವರದಿಯಲ್ಲಿ, ಜಿಯೊ ೧,೦೦೦ ನಗರಗಳಲ್ಲಿ ೫ಜಿ ಕವರೇಜ್ ನೀಡಲು ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿತ್ತು. ಆಗಸ್ಟ್ ೧ರಂದು ನಡೆದ ೧.೫ ಲಕ್ಷ ಕೋಟಿ ರೂ.ಗಳ ೫ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ರಿಲಯನ್ಸ್ ಜಿಯೊ ಸುಮಾರು ಅರ್ಧದಷ್ಟು ಸ್ಪೆಕ್ಟ್ರಮ್ ಅನ್ನು ಖರೀದಿಸಿತ್ತು. ರಿಲಯನ್ಸ್ ಜಿಯೊ ೮೮,೦೭೮ ಕೋಟಿ ರೂ. ವೆಚ್ಚದಲ್ಲಿ ಹೆಚ್ಚು ಸ್ಪೆಕ್ಟ್ರಮ್ ಅನ್ನು ತನ್ನದಾಗಿಸಿತ್ತು. ಏಳು ದಿನಗಳ ಕಾಲ ೪೦ ಸುತ್ತುಗಳಲ್ಲಿ ೫ಜಿ ಸ್ಪೆಕ್ಟ್ರಮ್ ಹರಾಜು ನಡೆದಿತ್ತು.
ನಾಯಕತ್ವ ಹಸ್ತಾಂತರ ಪ್ರಕ್ರಿಯೆ: ಮುಕೇಶ್ ಅಂಬಾನಿಯವರು ಕಳೆದ ಜೂನ್‌ನಲ್ಲಿ ರಿಲಯನ್ಸ್ ಇನ್ಫೋಕಾಮ್‌ನ ಅಧ್ಯಕ್ಷ ಸ್ಥಾನವನ್ನು ತಮ್ಮ ಹಿರಿಯ ಪುತ್ರ ಆಕಾಶ್ ಅಂಬಾನಿ ಅವರಿಗೆ ಬಿಟ್ಟುಕೊಟ್ಟಿದ್ದರು.