Site icon Vistara News

Reliance Jio: 7 ವಸಂತ ಪೂರೈಸಿದ ರಿಲಯನ್ಸ್‌ ಜಿಯೋ; ಇಲ್ಲಿವೆ 7 ಕ್ರಾಂತಿಕಾರಿ ಬದಲಾವಣೆ!

Reliance jio at 7

ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಇಂದಿಗೆ (ಸೆಪ್ಟೆಂಬರ್ 5, 2023) ಏಳು ವರ್ಷಗಳನ್ನು ಪೂರ್ಣಗೊಳಿಸಿದೆ. ಇದು ಭಾರತೀಯರೆಲ್ಲರೂ ಸಂಭ್ರಮಿಸಬಹುದಾದ ದಿನ. ಏಕೆಂದರೆ ಏಳು ವರ್ಷಗಳ ಹಿಂದೆ, ರಿಲಯನ್ಸ್ ಮಾಲೀಕ ಮುಕೇಶ್ ಅಂಬಾನಿ (Mukesh Ambani) ಜಿಯೋವನ್ನು ಪ್ರಾರಂಭಿಸುವುದಾಗಿ ಘೋಷಿಸಿದಾಗ, ಮುಂದೊಂದು ದಿನ ರಿಲಯನ್ಸ್ ಜಿಯೋ ದೇಶದ ಡಿಜಿಟಲ್ ಮೂಲಸೌಕರ್ಯದ ಬೆನ್ನೆಲುಬಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಕಳೆದ 7 ವರ್ಷಗಳಲ್ಲಿ ಜಿಯೋದಿಂದಾಗಿ ದೇಶದಲ್ಲಿ ಸಾಕಷ್ಟು ಬದಲಾಗಿದೆ (Revolutionary changes). ಇದು ಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ಏಳು ವರ್ಷಗಳಲ್ಲಿ ಜಿಯೋ ಬೀರಿದ 7 ಪರಿಣಾಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದು ಬಳಕೆದಾರರಿಗೂ ಗೊತ್ತಿದೆ ಹಾಗೂ ಅನುಭವಕ್ಕೂ ಬಂದಿದೆ. ಆದರೂ ಒಮ್ಮೆ ನೆನಪಿಸಿಕೊಳ್ಳೋಣ.

1.ಉಚಿತ ಹೊರಹೋಗುವ ಕರೆಗಳು

ಸೆಪ್ಟೆಂಬರ್ 5, 2016ರಂದು ಬಿಡುಗಡೆಯಾದ ಮೊದಲ ದಿನ ರಿಲಯನ್ಸ್ ಜಿಯೋ ದೇಶದಲ್ಲಿ ದುಬಾರಿ ಆಗಿದ್ದ ಹೊರಹೋಗುವ ಕರೆಗಳ (ಔಟ್ ಗೋಯಿಂಗ್ ಕಾಲ್) ಯುಗವನ್ನು ಕೊನೆಗೊಳಿಸಿತು. ಹೊರಹೋಗುವ ಕರೆಗಳನ್ನು ಉಚಿತ ಮಾಡಿದ ಭಾರತದ ಮೊದಲ ಕಂಪನಿ ರಿಲಯನ್ಸ್ ಜಿಯೋ. ಇದು ಇಂದಿಗೂ ಮುಂದುವರಿದಿದೆ.

2.ಕಡಿಮೆಯಾದ ಡೇಟಾ ಮತ್ತು ಮೊಬೈಲ್ ಬಿಲ್‌ಗಳು

ಮೊಬೈಲ್ ಡೇಟಾದ ಬೆಲೆಗಳು ಮುಂಚೆ ಎಷ್ಟಿದ್ದವು ಅನ್ನೋದು ನೆನಪಿದೆಯಾ? ಏಳು ವರ್ಷ ಆಗಿಹೋಗಿದೆಯಲ್ಲಾ ಅದಕ್ಕೆ ಈ ಪ್ರಶ್ನೆ ಅಷ್ಟೇ. ಆಗ ಬಳಕೆದಾರರು ಪಾವತಿ ಮಾಡುತ್ತಿದ್ದದ್ದು ಪ್ರತಿ ಜಿಬಿಗೆ ಸುಮಾರು ರೂ 255. ಜಿಯೋ ಡೇಟಾ ಬೆಲೆಗಳನ್ನು ಬಹಳ ಆಕ್ರಮಣಕಾರಿಯಾಗಿ ಕಡಿಮೆ ಮಾಡಿದೆ ಮತ್ತು ಡೇಟಾವು ಪ್ರತಿ ಜಿಬಿಗೆ ರೂ 10 ಕ್ಕಿಂತ ಕಡಿಮೆ ಲಭ್ಯವಾಯಿತು. ಉಚಿತ ಕರೆ ಮತ್ತು ಕಡಿಮೆ ಡೇಟಾ ಬೆಲೆಗಳಿಂದಾಗಿ, ಮೊಬೈಲ್ ಬಿಲ್‌ಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಡೇಟಾ ಬಳಕೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ – ಡೇಟಾ ಬೆಲೆಗಳಲ್ಲಿನ ಕಡಿತವು ಡೇಟಾ ಬಳಕೆಯ ಮೇಲೆ ನೇರ ಪರಿಣಾಮ ಬೀರಿತು. ಜಿಯೋ ಬರುವ ಮೊದಲು, ಡೇಟಾ ಬಳಕೆ ವಿಷಯದಲ್ಲಿ ಭಾರತವು ವಿಶ್ವದಲ್ಲಿ 155ನೇ ಸ್ಥಾನದಲ್ಲಿತ್ತು. ಮತ್ತು ಇಂದು ಭಾರತವು ಮೊದಲ ಎರಡರಲ್ಲಿದೆ. ಈಗ ಜಿಯೋ ನೆಟ್‌ವರ್ಕ್‌ನಲ್ಲಿ ಪ್ರತಿ ತಿಂಗಳು 1,100 ಕೋಟಿ ಜಿಬಿ ಡೇಟಾವನ್ನು ಬಳಸಲಾಗುತ್ತಿದೆ. ಜಿಯೋ ಗ್ರಾಹಕರು ತಿಂಗಳಿಗೆ ಸರಾಸರಿ 25 ಜಿಬಿ ಡೇಟಾವನ್ನು ಬಳಸುತ್ತಾರೆ. ಇದು ಟೆಲಿಕಾಂ ಉದ್ಯಮದಲ್ಲಿ ಅತಿ ಹೆಚ್ಚು ಎನಿಸಿಕೊಂಡಿದೆ.

3.ಮೊಬೈಲ್‌ನ ಸಣ್ಣ ಪರದೆಯಲ್ಲಿ ಸಂಪೂರ್ಣ ಅಂಗಡಿ

ಜಿಯೋ ಕಾರಣದಿಂದಾಗಿ ಡೇಟಾ ಅಗ್ಗವಾಯಿತು ಮತ್ತು ಜಗತ್ತು ಕೇವಲ ಮೊಬೈಲ್ ನಲ್ಲೇ ಸಿಕ್ಕಿಹೋಯಿತು. ಈಗ ಮನರಂಜನೆಯ ವ್ಯಾಖ್ಯಾನವೇ ಬದಲಾಗಿದೆ. ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮನರಂಜನೆಯು ಕೇವಲ ಒಂದು ಕ್ಲಿಕ್ ಅಷ್ಟೇ ದೂರ. ರೈಲು, ವಿಮಾನ, ಸಿನಿಮಾ ಹೀಗೆ ಎಲ್ಲದರ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಆಗತೊಡಗಿದವು. ಹೋಟೆಲ್ ಬುಕಿಂಗ್ ಮತ್ತು ಆಹಾರ ಸೈಟ್‌ಗಳು ಮತ್ತು ಅಪ್ಲಿಕೇಷನ್‌ಗಳು ಹೊಸ ಎತ್ತರ ಕಾಣಲು ಆರಂಭವಾದವು. ಪ್ರವಾಸೋದ್ಯಮ ಅಭಿವೃದ್ಧಿ ಕಂಡಿದೆ. ಇ-ಕಾಮರ್ಸ್ ಕಂಪನಿಗಳು ಇಡೀ ಅಂಗಡಿಯನ್ನು ಮೊಬೈಲ್‌ಗೆ ತಂದಿವೆ. ಆನ್‌ಲೈನ್ ತರಗತಿ ಮತ್ತು ಕಚೇರಿ- ಕೋವಿಡ್‌ನ ಕೆಟ್ಟ ದಿನಗಳನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುತ್ತಾರೆ. ಶಿಕ್ಷಣ ಮತ್ತು ಕಚೇರಿ ಮನೆಯಿಂದಲೇ ನಡೆದವು, ಇಂದಿಗೂ ನಡೆಯುತ್ತಿವೆ. ಗಂಟೆಗಟ್ಟಲೆ ಇಂಟರ್ ನೆಟ್ ಬಳಸಲಾಗುತ್ತಿತ್ತು. ಕೈಗೆಟುಕುವ ಬೆಲೆಯಲ್ಲಿ ಡೇಟಾ ಸಿಗದಿದ್ದರೆ ಇದು ಸಾಧ್ಯವಿತ್ತಾ?! ಜಿಯೋ ಬಿಡುಗಡೆಯ ಮೊದಲಿನ ಡೇಟಾ ದರಗಳು ಅಂದರೆ ಪ್ರತಿ ಜಿಬಿಗೆ ರೂ 255 ಇದ್ದಿದ್ದರೆ ಆಗ ಏನಾಗುತ್ತಿತ್ತು ಎಂದು ಊಹಿಸಿ.

4.ಡಿಜಿಟಲ್ ಪಾವತಿ

ಎಲ್ಲ ಕಡೆಗೆ ಹಣ ಹಿಡಿದುಕೊಂಡೇ ಹೋಗಬೇಕು, ನಗದು ಇರದಿದ್ದರೆ ಆಗಲ್ಲ ಎಂಬ ಸ್ಥಿತಿ ಈಗಿಲ್ಲ. ಭಾರತ ಸರ್ಕಾರದ ಯುಪಿಐ ಓಪನ್ ಡಿಜಿಟಲ್ ಪಾವತಿ ವ್ಯವಸ್ಥೆಯು ಎಲ್ಲವನ್ನೂ ಬದಲಾಯಿಸಿದೆ. ದೊಡ್ಡ ಮತ್ತು ಸಣ್ಣ ಬ್ಯಾಂಕ್‌ಗಳು, ಪೇಟಿಎಂ (Paytm) ಮತ್ತು PhonePe (ಫೋನ್ ಪೇ) ನಂತಹ ವ್ಯಾಲೆಟ್ ಕಂಪನಿಗಳು ಸೇರಿದಂತೆ ಹಣಕಾಸು ದೈತ್ಯ ಕಂಪನಿಗಳು ಈ ಉಪಕ್ರಮದಲ್ಲಿ ಸೇರಿಕೊಂಡವು. ಪ್ರತಿ ಮೊಬೈಲ್‌ನಲ್ಲಿ ಪಾವತಿ ವ್ಯವಸ್ಥೆಯ ಮೂಲಕ ಹಣದ ವಹಿವಾಟು ನಡೆಸುವುದು ಇದರ ಉದ್ದೇಶವಾಗಿತ್ತು. ಇಂದು ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್‌ಗಳವರೆಗೆ ಇದನ್ನು ಬಳಸಲಾಗುತ್ತಿದೆ. ಜಿಯೋ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳ ಡಿಜಿಟಲ್ ಮೂಲಸೌಕರ್ಯಗಳು ಇದರ ನೆರವಿಗೆ ಬಂದವು. ಆದರೆ ಯುಪಿಐ ಯಶಸ್ಸಿನ ಶ್ರೇಯವು, ಹೆಚ್ಚಿನ ಪ್ರಮಾಣದಲ್ಲಿ ಡೇಟಾದ ದರ ಕಡಿಮೆ ಆಗಿರುವುದಕ್ಕೇ ಹೋಗುತ್ತದೆ. ಇದು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಲು ಸಾಮಾನ್ಯ ಭಾರತೀಯರನ್ನು ಉತ್ತೇಜಿಸಿತು. ಜಿಯೋ ಪ್ರಾರಂಭದೊಂದಿಗೆ ಡೇಟಾ ದರಗಳು 25 ಪಟ್ಟು ಕಡಿಮೆಯಾಗಿದೆ.

5.ಟೂಜಿ ಯಿಂದ 4ಜಿಗೆ

ಜಿಯೋ ಆರಂಭವಾದ ಮರು ವರ್ಷದಲ್ಲಿ, ಅಂದರೆ 2017ರಲ್ಲಿ, ಕಂಪನಿಯು ಮಾರುಕಟ್ಟೆಯಲ್ಲಿ ಜಿಯೋ ಫೋನ್ ಅನ್ನು ಬಿಡುಗಡೆ ಮಾಡಿತು. 2ಜಿ ಗ್ರಾಹಕರನ್ನು 4ಜಿಗೆ ಬದಲಾಯಿಸುವುದು ಇದರ ಉದ್ದೇಶವಾಗಿತ್ತು. ಇದರಿಂದ ಅವರೂ ಡಿಜಿಟಲ್ ಆರ್ಥಿಕತೆಯ ಭಾಗವಾಗಬಲ್ಲರು. 13 ಕೋಟಿಗೂ ಹೆಚ್ಚು ಜಿಯೋಫೋನ್ ಮೊಬೈಲ್‌ಗಳು ಮಾರಾಟವಾಗಿವೆ. ಇದು ಯಾವುದೇ ಒಂದೇ ದೇಶದಲ್ಲಿ ಯಾವುದೇ ಒಂದೇ ಮಾದರಿಗಿಂತ ಹೆಚ್ಚು ಮಾರಾಟವಾದ ಮೊಬೈಲ್ ಆಗಿತ್ತು. ಅದರ ಮುಂದುವರಿದ ಭಾಗವಾಗಿ, ಕಂಪನಿಯು 2ಜಿ ಗ್ರಾಹಕರನ್ನು 4ಜಿ ಗೆ ಕರೆತರಲು ಜಿಯೋಭಾರತ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ. ಜಿಯೋ ಜೊತೆಗೆ ಕಾರ್ಬನ್ ಎಂಬ ಕಂಪನಿಯು ‘ಭಾರತ್’ ಎಂಬ 4ಜಿ ಫೀಚರ್ ಫೋನ್ ಅನ್ನು ತಯಾರಿಸುತ್ತಿದೆ. ಶೀಘ್ರದಲ್ಲೇ ಇನ್ನೂ ಕೆಲವು ಕಂಪನಿಗಳು ಈ ಅಭಿಯಾನಕ್ಕೆ ಸೇರುವ ನಿರೀಕ್ಷೆಯಿದೆ.

ಈ ಸುದ್ದಿಯನ್ನೂ ಓದಿ: Reliance Jio: ರಿಲಯನ್ಸ್ ಜಿಯೋದಿಂದ ಮೊಬೈಲ್ ಪ್ರಿಪೇಯ್ಡ್ ಪ್ಲ್ಯಾನ್‌ ಜತೆಗೆ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್!

6.ಡಿಜಿಟಲ್ ವಿಭಜನೆ ಕಡಿಮೆಯಾಗಿದೆ

ಮೊದಲು ಶ್ರೀಮಂತರು ಮಾತ್ರ ಡೇಟಾವನ್ನು ಬಳಸಬಹುದಾಗಿತ್ತು, ಅದಕ್ಕೆ ಕಾರಣ ಏನೆಂದರೆ ದುಬಾರಿ ಡೇಟಾ ಬೆಲೆಗಳು. ಶ್ರೀಮಂತ ಮತ್ತು ಬಡವರ ನಡುವಿನ ಈ ಅಂತರವನ್ನು ಜಿಯೋ ಕಡಿಮೆ ಮಾಡಿದೆ. ಈಗ ಪ್ರತಿಯೊಬ್ಬರೂ ಸುಲಭವಾಗಿ ಡೇಟಾವನ್ನು ಬಳಸಬಹುದು. 4ಜಿ ತಂತ್ರಜ್ಞಾನವು ನಗರಗಳನ್ನು ಮೀರಿ ಹಳ್ಳಿಗಳನ್ನು ತಲುಪಿತು. ಅದರ ಪರಿಣಾಮ ಈಗ ನಗರವಾಸಿಗಳಂತೆ ಹಳ್ಳಿಗರಿಗೂ ಪ್ರತಿಯೊಂದು ಡಿಜಿಟಲ್ ಸೌಲಭ್ಯ ಲಭ್ಯವಾಗಿದೆ. ಜನ್-ಧನ್ ಖಾತೆಗಳನ್ನು ನಿರ್ವಹಿಸುವುದು, ಸರ್ಕಾರಿ ಯೋಜನೆಗಳಲ್ಲಿ ನೋಂದಾಯಿಸುವುದು ಅಥವಾ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಶಾಪಿಂಗ್ ಮಾಡುವುದು, ಈಗ ಪ್ರತಿಯೊಂದು ರೀತಿಯ ಡಿಜಿಟಲ್ ಕೆಲಸಗಳನ್ನು ಹಳ್ಳಿಯಲ್ಲಿ ಕುಳಿತು ಸಹ ಸುಲಭವಾಗಿ ಮಾಡಬಹುದು.

7.ಯುನಿಕಾರ್ನ್ ಮಹಾಪೂರ

$1 ಶತಕೋಟಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಸ್ಟಾರ್ಟ್ಅಪ್ ಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಜಿಯೋ ಮಾರುಕಟ್ಟೆಗೆ ಲಗ್ಗೆ ಇಡುವ ಮೊದಲು ದೇಶದಲ್ಲಿ ಕೇವಲ 4-5 ಯುನಿಕಾರ್ನ್‌ಗಳು ಇದ್ದವು ಈಗ 108 ಯುನಿಕಾರ್ನ್‌ಗಳಿಗೆ ಏರಿಕೆಯಾಗಿದೆ.

ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version