ಬೆಂಗಳೂರು: ಸಾಮಾಜಿಕ ಸೂಕ್ಷ್ಮ ಜಾಲತಾಣ ಟ್ವಿಟ್ಟರ್(Twitter) ಪಾಲುದಾರಿಕೆಗೆ ಜಗತ್ತಿನ ಅತಿ ಶ್ರೀಮಂತ ಉದ್ಯಮಿ, Tesla ಕಂಪನಿ ಮಾಲೀಕ ಎಲಾನ್ ಮಸ್ಕ್(Elon Musk) ಕಾಲಿಟ್ಟ ನಂತರ ನಡೆಯುತ್ತಿರುವ ಅನಿರೀಕ್ಷಿತ ಬೆಳವಣಿಗೆಗೆ ಮತ್ತೊಂದು ಸೇರ್ಪಡೆ ಆಗಿದೆ. ಈಗ ತಮಗಿರುವ 9.2% ಪಾಲುದಾರಿಕೆ ಬದಲಿಗೆ ತಲಾ ಷೇರು ಖರೀದಿಗೆ $54.20 ನೀಡಿ ಸಂಪೂರ್ಣ ಟ್ವಿಟ್ಟರ್ ಸಂಸ್ಥೆಯನ್ನೇ ಖರೀದಿಸುತ್ತೇನೆ ಎಂಬ ʼಆಫರ್ʼ ಅನ್ನು ಸೌದಿಯ ಕೋಟ್ಯಧೀಶ ಉದ್ಯಮಿ, ಹೂಡಿಕೆದಾರ, ಸೌದಿ ರಾಜಕುಮಾರ ಅಲ್‌ವಲೀದ್ ಬಿನ್ ತಲಾಲ್ Reject ಮಾಡಿದ್ದಾರೆ.
ವಿಶ್ವದ ಅತಿ ದೊಡ್ಡ ಹೂಡಿಕೆ ಸಂಸ್ಥೆಗಳಲ್ಲೊಂದಾದ ಕಿಂಗ್‌ಡಮ್ ಹೋಲ್ಡಿಂಗ್ ಕಂಪನಿ( KHC) ಮಾಲೀಕ ಅಲ್‌ವಲೀದ್, ಟ್ವಿಟ್ಟರ್ ಸಂಸ್ಥೆಯಲ್ಲಿ ಅತ್ಯಂತ ಹೆಚ್ಚಿನ ಹಾಗೂ ಸುದೀರ್ಘ ಸಮಯದಿಂದ ಹೂಡಿಕೆ ಮಾಡಿದವರಾಗಿದ್ದರು. ಅವರು ಸಂಸ್ಥೆಯಲ್ಲಿ 5.2% ಪಾಲು ಹೊಂದಿದ್ದಾರೆ. ಈ ಹೆಗ್ಗಳಿಕೆ ಕಳೆದ ವಾರ ಕಳಚಿ ಬಿದ್ದಿತ್ತು. ಸಾಮಾನ್ಯವಾಗಿ ಟ್ವಿಟ್ಟರ್‌ನಲ್ಲಿ ಒಂದಿಲ್ಲೊಂದು ವಿವಾದಾತ್ಮಕ, ಅಚ್ಚರಿಯ ಟ್ವೀಟ್ ಮಾಡುವ ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್, 9.2% ಷೇರನ್ನು ಖರೀದಿಸಿದರು.
ಈ ಮೂಲಕ ಟ್ವಿಟ್ಟರ್‌ನ ಅತಿ ದೊಡ್ಡ ಪಾಲುದಾರ ಎಂಬ ಸ್ಥಾನ ಪಡೆದರು. ಅವರ ಲೆಕ್ಕಾಚಾರದಂತೆ, ದೊಡ್ಡ ಪಾಲುದಾರನಾಗಿರುವುದರಿಂದ ತಮಗೆ ಟ್ವಿಟ್ಟರ್‌ನ ಆಡಳಿತ ಮಂಡಳಿಯಲ್ಲಿ ಸ್ಥಾನ ನೀಡಬೇಕಿತ್ತು. ಆದರೆ ಕಳೆದ ವಾರ ಸಭೆ ಸೇರಿದ ಟ್ವಿಟ್ಟರ್ ಆಡಳಿತ ಮಂಡಳಿ ಎಲಾನ್ ಮಸ್ಕ್‌ರನ್ನು ಆಡಳಿತ ಮಂಡಳಿಗೆ ಸೇರ್ಪಡೆ ಮಾಡಿಕೊಳ್ಳಲು ನಿರಾಕರಿಸಿದೆ.
ಇದು ಜಗತ್ತಿನ ಅತಿ ಶ್ರೀಮಂತ ಎಲಾನ್ ಮಸ್ಕ್ ಕಣ್ಣು ಕೆಂಪಾಗಿಸಿದೆ. ತಮ್ಮ ಪಾಲನ್ನು ಹೆಚ್ಚಿಸಿಕೊಂಡಾಗಿನಿಂದಲೇ ಟ್ವಿಟ್ಟರ್‌ನಲ್ಲಿ ಗಣನೀಯ ಬದಲಾವಣೆಯ ಮಾತುಗಳನ್ನು ಆಡಿದ್ದರು. ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ನಂತರ ಎಡಿಟ್ ಆಯ್ಕೆ ನೀಡಬೇಕೆ? Twitterನಿಂದ w ಕೈಬಿಟ್ಟರೆ ಹೇಗೆ? ಟ್ವಿಟ್ಟರ್‌ನ ಅತಿ ದೊಡ್ಡ ಆದಾಯದ ಮೂಲವಾದ ಜಾಹೀರಾತನ್ನೇ ನೀಡದಿದ್ದರೆ ಹೇಗೆ? ಎಂಬಂತಹ ಪ್ರಶ್ನೆಗಳನ್ನು ತಮ್ಮ ಖಾತೆ ಮೂಲಕ ಕೇಳಿದ್ದರು.
ಆದರೆ ಆಡಳಿತ ಮಂಡಳಿಗೆ ಸೇರ್ಪಡೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಮಸ್ಕ್ ಕೆರಳಿದ್ದಾರೆ. ಈಗಿನ ಟ್ವಿಟ್ಟರ್ ಷೇರು ಮೌಲ್ಯಕ್ಕೆ 54% ಹೆಚ್ಚು ಅಂದರೆ ತಲಾ ಷೇರಿಗೆ $54.20 ಡಾಲರ್ ನೀಡಿ ಸಂಪೂರ್ಣ ಟ್ವಿಟ್ಟರ್ ಅನ್ನೇ ಖರೀದಿಸುತ್ತೇನೆ ಎಂದರು. ಒಟ್ಟು $43 ಸಾವಿರ ಕೋಟಿ (ಅಂದಾಜು ₹3.2 ಲಕ್ಷ ಕೋಟಿ) ಹಣವನ್ನು ನಗದು ಮೂಲಕವೇ ನೀಡಿ ($43 billion in cash) ಖರೀದಿಸುತ್ತೇನೆ ಎಂದು ಹೇಳಿದ್ದು ಸೂಕ್ಷ್ಮ ಜಾಲತಾಣ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿತು.
ಆಫರ್ ರಿಜೆಕ್ಟ್ ಎಂದ ರಾಜಕುಮಾರ
ಎಲಾನ್ ಮಸ್ಕ್ ಇದೀಗ ಅತಿ ದೊಡ್ಡ ಪಾಲುದಾರನಾಗಿರುವುದರಿಂದ ಅವರ ಮಾತೇ ನಡೆಯುತ್ತದೆ ಎನ್ನುವಂತಾಗಿದೆ. ಇಡೀ ಟ್ವಿಟ್ಟರ್ ಸಂಸ್ಥೆಯನ್ನು ಖಾಸಗಿ ಕಂಪನಿಯಾಗಿ ರೂಪುಗೊಳಿಸುವ ಅವಶ್ಯಕತೆ ಇದೆ. ನನ್ನಿಂದ ಮಾತ್ರವೇ ಟ್ವಿಟ್ಟರ್‌ನ ಸಾಮರ್ಥ್ಯದ ಸಂಪೂರ್ಣ ಲಾಭವನ್ನು ಹೊರತೆಗೆಯಲು ಸಾಧ್ಯ ಎಂದಿದ್ದರು. ಅಮೆರಿಕದ ಸೆಕ್ಯುರಿಟೀಸ್ & ಎಕ್ಸ್‌ಚೇಂಜ್ ಕಮಿಷನ್‌ಗೆ ಎರಡು ದಿನದ ಹಿಂದೆ ಪ್ರಸ್ತಾವನೆಯನ್ನೂ ಸಲ್ಲಿಸಿಬಿಟ್ಟರು.
ಈ ಆಫರ್ ಅನ್ನು ಅಲ್‌ವಲೀದ್ ತಿರಸ್ಕರಿಸಿ ಟ್ವೀಟ್ ಮಾಡಿದ್ದಾರೆ. ತಾವು ಟ್ವಿಟ್ಟರ್‌ನಲ್ಲಿ 5.2% ಪಾಲು ಹೊಂದಿರುವ ಟ್ವೀಟ್‌ನ ಸ್ಕ್ರೀನ್‌ಷಾಟ್‌ನೊಂದಿಗೆ ಟ್ವೀಟ್ ಮಾಡಿರುವ ಅಲ್‌ವಲೀದ್, ಎಲಾನ್ ಮಾಸ್ಕ್ ಮುಂದಿಟ್ಟಿರುವ ಪ್ರಸ್ತಾವನೆಯು ಟ್ವಿಟ್ಟರ್‌ನ ವಾಸ್ತವಿಕ ಮೌಲ್ಯ ಹಾಗೂ ಬೆಳವಣಿಗೆ ಅವಕಾಶಗಳಿಗೆ ಅನುಗುಣವಾಗಿಲ್ಲ. ಟ್ವಿಟ್ಟರ್‌ನ ಅತಿ ದೊಡ್ಡ ಹಾಗೂ ದೀರ್ಘಕಾಲಿಕ ಹೂಡಿಕೆದಾರನಾಗಿ ಈ ಆಫರ್ ಅನ್ನು ನಾನು ತಿರಸ್ಕರಿಸುತ್ತೇನೆ ಎಂದು ಕಡ್ಡಿ ತುಂಡು ಮಾಡಿದಂತೆ ಬರೆದಿದ್ದಾರೆ. ಈ ಜಗಳ ಇಲ್ಲಿಗೇ ಮುಗಿದಿಲ್ಲ…
ಹೆಚ್ಚಿನ ಓದಿಗಾಗಿ: ಭಾರತೀಯರಿಗೆ ಎಸ್‌ಯುವಿಗಳ ಮೇಲೆ ಏಕೆ ಇಷ್ಟೊಂದು ಮೋಹ?
ಎರಡು ಪ್ರಶ್ನೆ ಕೇಳಿದ ಮಸ್ಕ್
ಅಲ್‌ವಲೀದ್ ತಮ್ಮ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದನ್ನು ಒಪ್ಪಿ ಕೂರುವ ಆಸಾಮಿ ಅಲ್ಲ ಮಸ್ಕ್. ಈ ಟ್ವೀಟ್ ಬೆನ್ನಿಗೇ ಅಲ್‌ವಲೀದ್‌ಗೆ ಎರಡು ಪ್ರಶ್ನೆ ಕೇಳಿದ್ದಾರೆ. ನೇರವಾಗಿ ಹಾಗೂ ಪರೋಕ್ಷವಾಗಿ ಟ್ವಿಟ್ಟರ್‌ನಲ್ಲಿ ಕಿಂಗ್‌ಡಮ್ ಎಷ್ಟು ಪಾಲು ಹೊಂದಿದೆ? ಪತ್ರಿಕೋದ್ಯಮ ವಾಕ್‌ಸ್ವಾತಂತ್ರ್ಯದ ಕುರಿತು ರಾಜಮನೆತನದ ದೃಷ್ಟಿಕೋನ ಏನು? ಎಂದಿದ್ದಾರೆ. ಅಂದರೆ ಟ್ವಿಟ್ಟರ್‌ನಲ್ಲಿ ಅಲ್‌ವಲೀದ್ ಹೊಂದಿರುವ ಪಾಲಿನ ಮೊತ್ತವನ್ನೇ ಅನುಮಾನಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗಿಲ್ಲ ಮಸ್ಕ್…
ಎರಡು ಪ್ರಶ್ನೆಯನ್ನು ಕೇಳಿ ಸುಮ್ಮನಾಗದ ಮಸ್ಕ್, ಶುಕ್ರವಾರ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಜಗಳವನ್ನು ಕೊಂಡೊಯ್ದಿದ್ದಾರೆ. ಶುಕ್ರವಾರ ಬೆಳಗ್ಗೆ, ಎಂದು 8.19 ಕೋಟಿ ಫಾಲೊಯರ್‌ಗಳನ್ನು ಹೊಂದಿರುವ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಕೇಳಿ, ಮತದಾನದ ಆಯ್ಕೆಯನ್ನು ನೀಡಿದ್ದಾರೆ. ಪ್ರತಿ ಷೇರಿಗೆ $54.20 ನೀಡಿ ಖರೀದಿ ಮಾಡುವ ನಿರ್ಧಾರವನ್ನು ಟ್ವಿಟ್ಟರ್ ಪಾಲುದಾರರು (ಅಂದರೆ ಬಳಕೆದಾರರು) ನಿರ್ಧರಿಸಲಿ, ಆಡಳಿತ ಮಂಡಳಿ ಅಲ್ಲ ಎಂದಿದ್ದಾರೆ. ಈ ಪ್ರಶ್ನೆ ಕೇಳಿದ ಕೇವಲ 15 ಗಂಟೆ ಅವಧಿಯಲ್ಲಿ 23.74 ಲಕ್ಷ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಮತದಾನ ಮುಕ್ತಾಯವಾಗಲು ಇನ್ನೂ 9 ಗಂಟೆ ಸಮಯಾವಕಾಶ ಇದೆ. ಇಲ್ಲಿಯವರೆಗೆ 83.8% ಬಳಕೆದಾರರು ಮಸ್ಕ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅಂದರೆ $54.20 ಡಾಲರ್ ಪ್ರತಿ ಷೇರಿಗೆ ನೀಡಿ ಖರೀದಿಸುವುದು ಒಳ್ಳೆಯದು ಎಂದಿದ್ದಾರೆ. 16.2% ಜನರು ವಿರೋಧಿಸಿದ್ದಾರೆ. ಈ ಪ್ರಮಾಣದಲ್ಲಿ ತಮ್ಮನ್ನು ಬೆಂಬಲಿಸಿರುವ ಬಳಕೆದಾರರಿಗೆ ಧನ್ಯವಾದವನ್ನೂ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಟ್ವಿಟ್ಟರ್‌ನ ಈ ಜಗಳವನ್ನು ಇಲ್ಲಿಗೇ ಬಿಡುವಂತೆ ಕಾಣುತ್ತಿಲ್ಲ ಮಸ್ಕ್.