ಅಹಮದಾಬಾದ್: ಜಪಾನ್ ಮೂಲದ ಜಾಗತಿಕ ಆಟೊಮೊಬೈಲ್ ದಿಗ್ಗಜ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki) ತನ್ನ ೪೦ನೇ ವರ್ಷಾಚರಣೆಯ ನಡುವೆ ಭಾರತದಲ್ಲಿ ಹೂಡಿಕೆಯನ್ನು ಗಣನೀಯವಾಗಿ ವೃದ್ಧಿಸಲಿದೆ. ಸುಜುಕಿ ಗ್ರೂಪ್‌ನ ಎರಡು ಹೊಸ ಉತ್ಪಾದನಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಂಕು ಸ್ಥಾಪನೆ ನೆರವೇರಿಸಿದರು.
ಹರಿಯಾಣದ ಖಾರ್‌ಖೋಡಾದಲ್ಲಿ ೧೧,೦೦೦ ಕೋಟಿ ರೂ. ವೆಚ್ಚದ ಪ್ಯಾಸೆಂಜರ್ ವಾಹನ ಉತ್ಪಾದನೆ ಘಟಕ ಮತ್ತು ಗುಜರಾತ್‌ನ ಹನ್‌ಸಾಲ್ಪುರ್‌ನಲ್ಲಿ ೭,೩೦೦ ಕೋಟಿ ರೂ. ವೆಚ್ಚದ ಲಿಥಿಯಂ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಲಿಥಿಯಂ ಬ್ಯಾಟರಿ ಉತ್ಪಾದನೆಯಿಂದ ಎಲೆಕ್ಟ್ರಿಕ್ ವಾಹನ ಉದ್ದಿಮೆಗೆ ಸಹಕಾರಿಯಾಗಲಿದೆ. ಈ ಸಂದರ್ಭ ಮಾತನಾಡಿದ ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಅಧ್ಯಕ್ಷ ತೋಷಿಹಿರೊ ಸುಜುಕಿ, ಸಮೂಹವು ಭಾರತದಲ್ಲಿ ಗಣನೀಯ ಹೂಡಿಕೆಯನ್ನು ಮುಂದುವರಿಸಲಿದೆ ಎಂದರು.
ಜಪಾನಿನ ಕಾರು ಉತ್ಪಾದಕ ಸುಜುಕಿ ಭಾರತದಲ್ಲಿ ಆರ್ &ಡಿ ಸೆಂಟರ್ ಅನ್ನು ಹೊಂದಿದೆ. ಇದರಿಂದ ಭಾರತ ಮತ್ತು ಜಾಗತಿಕ ಆಟೊಮೊಬೈಲ್ ಮಾರುಕಟ್ಟೆಗೆ ಸಹಾಯಕವಾಗಲಿದೆ. ಕಂಪನಿಯು ಹಲವಾರು ಸಂಸ್ಥೆ ಮತ್ತು ಸ್ಟಾರ್ಟಪ್‌ಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಿದೆ ಎಂದರು.
ಕಂಪ್ರೆಸ್ಡ್ ಬಯೊ ಮಿಥೇನ್ ಗ್ಯಾಸ್ ಪ್ರಾಜೆಕ್ಟ್ ಬಗ್ಗೆಯೂ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸುವಂತೆ ಪ್ರಧಾನಿ ಮೋದಿ ಅವರು ಸುಜುಕಿ ಕಂಪನಿಗೆ ಸಲಹೆ ನೀಡಿದರು. ಮಾರುತಿ ಸುಜುಕಿ ಗುಜರಾತ್‌ನಲ್ಲಿ ೨೦೩೫ರಿದ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ. ಜಪಾನ್‌ನ ಸುಜುಕಿಯು ಭಾರತದಲ್ಲಿ ಮಾರುತಿ ಸುಜುಕಿ ಜತೆ ಪಾಲುದಾರಿಕೆಯನ್ನು ಹೊಂದಿದೆ.