ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕಂಪನಿಯು (Tata Group) ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳ (electric vehicle) ಬಳಕೆಯನ್ನು ಹೆಚ್ಚಿಸಲು ಮತ್ತು ಮೂಲ ಸೌಕರ್ಯವನ್ನು ಕಲ್ಪಿಸುವುದಕ್ಕಾಗಿ ಟಾಟಾ ಕಂಪನಿಯು ಗುಜರಾತ್‌ನಲ್ಲಿ (Gujarat) 13000 ಕೋಟಿ ರೂ.ವೆಚ್ಚದ ಬೃಹತ್ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕಾ ಘಟಕವನ್ನು (EV Battery Plant) ಆರಂಭಿಸಲಿದೆ. ಈ ಸಂಬಂಧ ಟಾಟಾ ಕಂಪನಿಯು ಗುಜರಾತ್ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟಾಟಾ ಅಗರತಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್ (Agaratas Energy Storage Solutions Pvt) ಶುಕ್ರವಾರ 20 ಗಿಗಾವ್ಯಾಟ್ ಗಂಟೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ವಿದ್ಯುತ್-ವಾಹನ ಬ್ಯಾಟರಿ ಘಟಕವನ್ನು ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಇದು 13,000 ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಕಂಪನಿಯ ಜಾಲತಾಣದಲ್ಲಿ ತಿಳಿಸಲಾಗಿದೆ.
2070ರ ಹೊತ್ತಿಗೆ ಭಾರತವನ್ನು ಶೂನ್ಯ ಕಾರ್ಬನ್ ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ಹಾಕಿಕೊಂಡಿದೆ. ಈ ವಿಷಯದಲ್ಲಿ ಭಾರತವು ಈಗಲೂ ಚೀನಾ, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳ ಹಿಂದೆಯೇ ಇದೆ. ಟಾಟಾ ಘಟಕವು ಗುಜರಾತ್ ಅನ್ನು ಲಿಥಿಯಂ-ಬ್ಯಾಟರಿ ಉತ್ಪಾದನೆಯಲ್ಲಿ ಮುಂಚೂಣಿಗೆ ತರಲಿದೆ. ರಾಜ್ಯದಲ್ಲಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಗುಂಪು ಸಹಾಯವನ್ನು ಪಡೆಯುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು, ಟಾಟಾ ಸಮೂಹದ ಪ್ರತಿನಿಧಿಯೊಬ್ಬರು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಟಾಟಾ ಗ್ರೂಪ್‌ನ ಈ ನಿರ್ಧಾರವು ಅದರ ಜಾಗ್ವಾರ್ ಲ್ಯಾಂಡ್ ರೋವರ್ ಘಟಕವು ಬ್ರಿಟನ್‌ನಲ್ಲಿ ಪ್ರಮುಖ ಇವಿ ಬ್ಯಾಟರಿ ಸ್ಥಾವರವನ್ನು ಸ್ಥಾಪಿಸಲು ಪರಿಗಣಿಸುತ್ತಿರುವ ಸಮಯದಲ್ಲಿ ಬಂದಿದೆ. ಬ್ರಿಟನ್ ಸರ್ಕಾರವು ಬೆಂಬಲ ಪ್ಯಾಕೇಜ್ ಅನ್ನು ನೀಡಿದ ನಂತರ ಟಾಟಾ ಸ್ಪೇನ್‌ಗಿಂತ ಇಂಗ್ಲೆಂಡ್‌ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಮುಂದಾಗಿದೆ ಎಂದು ಬ್ಲೂಮ್‌ಬರ್ಗ್ ಮೇನಲ್ಲಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Subsidy on E-Vehicle : ಎಲೆಕ್ಟ್ರಿಕ್ ವಾಹನಗಳಿಗೆ ಸಿಗಲಿದೆ 2.5 ಲಕ್ಷ ರೂ. ತನಕ ಸಬ್ಸಿಡಿ, ಇಲ್ಲಿದೆ ಡಿಟೇಲ್ಸ್
ಭಾರತದಲ್ಲೂ ಸಾಂಪ್ರದಾಯಿಕ ಇಂಧನ ಆಧಾರಿತ ವಾಹನಗಳ ಬದಲಿಗೆ ಬ್ಯಾಟರಿ ಆಧರಿತ ವಾಹನಗಳ ಬಳಕೆಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿದೆ. ಉತ್ಪಾದನಾ ಕಂಪನಿಗಳಿಗೂ, ಬಳಕೆದಾರರಿಗೂ ಸಾಕಷ್ಟು ಲಾಭಗಳನ್ನು ಮಾಡಿಕೊಡಲಾಗುತ್ತಿದೆ. ಆದರೆ, ದೇಶದಲ್ಲಿ ಇನ್ನೂ ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯದ ಕೊರತೆಗಳು ಎದ್ದು ಕಾಣುತ್ತಿದೆ.
ಆಟೋಮೊಬೈಲ್‌ನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.