ನವ ದೆಹಲಿ: ಟಾಟಾ ಮೋಟಾರ್ಸ್ ತನ್ನ ನೂತನ ಎಲೆಕ್ಟ್ರಿಕ್ ಕಾರು ಟಾಟಾ ಟಿಯಾಗೊ ಅನ್ನು ಇಂದು ಬಿಡುಗಡೆಗೊಳಿಸಿದೆ. ಇದು ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಇದರ ದರ 8.49 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದು ಟಾಟಾ ಮೋಟಾರ್ಸ್‌ನ ಮೂರನೇ ಪ್ಯಾಸೆಂಜರ್ ಎಲೆಕ್ಟ್ರಿಕ್ ವೆಹಿಕಲ್ ಆಗಿದೆ. 10 ಲಕ್ಷ ರೂ. ಒಳಗಿನ ಎಲೆಕ್ಟ್ರಿಕ್ ಕಾರುಗಳ ಪೈಕಿ ಇದು ಹೊಸ ಕಾರಾಗಿದೆ. (TaTa Tiago EV) ಟಾಟಾ ಟಿಯಾಗೊದ ಗರಿಷ್ಠ ದರ 11.79 ಲಕ್ಷ ರೂ.ಗಳಾಗಿದೆ.
ಟಾಟಾ ಮೋಟಾರ್‌ನ ಟಾಟಾ ನೆಕ್ಸಾನ್ ಇವಿ ಮತ್ತು ಟಾಟಾ ಟೈಗರ್ ಇವಿ ಜತೆ ಟಾಟಾ ಟಿಯಾಗೊ ಸೇರ್ಪಡೆಯಾದಂತಾಗಿದೆ.
ವಿಶೇಷತೆ ಏನು? ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರನ್ನು ಒಂದು ಸಲ ರಿಚಾರ್ಜ್ ಮಾಡಿದರೆ, 315 ಕಿ.ಮೀ ಚಲಾಯಿಸಬಹುದು. ಶೂನ್ಯದಿಂದ 60 ಕಿ.ಮೀ ವೇಗವನ್ನು ಕೇವಲ 5.7 ಸೆಕೆಂಡ್‌ಗಳಲ್ಲಿ ಪಡೆಯಬಲ್ಲುದು. ಟಾಟಾ ಟಿಯಾಗೊ XE, XT, XZ+ ಮತ್ತು XZ+ ಟೆಕ್ ಮಾದರಿಯಲ್ಲಿ ಲಭ್ಯವಿದೆ. ಅಕ್ಟೋಬರ್ 10ರಿಂದ ಬುಕಿಂಗ್ ಆರಂಭವಾಗಲಿದೆ. 2023 ಜನವರಿಯಿಂದ ಕಾರುಗಳು ಗ್ರಾಹಕರ ಕೈ ಸೇರಲಿದೆ.
ಟಾಟಾ ಟಿಯಾಗೊ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಬಂದಿದೆ. ಒಂದು ಆಯ್ಕೆಯಲ್ಲಿ 24kWh ಬ್ಯಾಟರಿ ಪ್ಯಾಕ್ ಇದ್ದು, 315 ಕಿ.ಮೀ ಶ್ರೇಣಿಯದ್ದಾಗಿದೆ. ಮತ್ತೊಂದು ಆಯ್ಕೆಯಲ್ಲಿ 19.2 kWh ಬ್ಯಾಟರಿ ಪ್ಯಾಕ್ ಇದ್ದು, 250 ಕಿ.ಮೀ ಶ್ರೇಣಿಯದ್ದಾಗಿದೆ.
ಟಾಟಾ ಟಿಯಾಗೊದಲ್ಲಿ 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೊ, ಝಿಪ್‌ಟ್ರೋನ್ ಟೆಕ್ನಾಲಜಿಯನ್ನು ಒಳಗೊಂಡಿದೆ. 8 ಸ್ಪೀಕರ್ ಹರ್ಮನ್ ಆಡಿಯೊ ಸಿಸ್ಟಮ್ ಇದೆ. ಎಬಿಎಸ್ ಸೇಫ್ಟಿ ಫೀಚರ್, ಪಾರ್ಕಿಂಗ್ ಸೆನ್ಸರ್ ಇದೆ. 1,60,000 ಕಿ.ಮೀ ಬ್ಯಾಟರಿ ಮತ್ತು ಮೋಟಾರ್ ವಾರಂಟಿಯನ್ನು ನೀಡಲಿದೆ.