ಬೆಂಗಳೂರು, ಕರ್ನಾಟಕ: ಸಂವಿಧಾನದ 19ನೇ ವಿಧಿ ಕೇವಲ ಭಾರತೀಯ ಪ್ರಜೆಗಳು, ಸಂಘಟನೆಗಳಿಗೆ ಮಾತ್ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತ್ಯಂತ್ರವನ್ನು ಕಲ್ಪಿಸುತ್ತದೆ ಹೊರತು ವಿದೇಶಿಗರಿಗಲ್ಲ. ಹಾಗಾಗಿ, ಅಮೆರಿಕ ಮೂಲದ ಮೈಕ್ರೋಬ್ಲಾಗಿಂಗ್ ವೇದಿಕೆಯಾಗಿರುವ ಟ್ವಿಟರ್ (Twitter) ಕಂಪನಿ ಸಂವಿಧಾನದ 19ನೇ ವಿಧಿಯಡಿ ಯಾವುದೇ ರಕ್ಷಣೆಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್ (Karnataka High court) ಮುಂದೆ ತನ್ನ ವಾದವನ್ನು ಮಂಡಿಸಿದೆ.
2021 ಫೆಬ್ರವರಿ 2 ಮತ್ತು 2022ರ ಫೆಬ್ರವರಿ 28ರ ನಡುವೆ ಕೇಂದ್ರ ಸರ್ಕಾರವು ಹೊರಡಿಸಿರುವ ಹಲವು ನಿರ್ಬಂಧಗಳನ್ನು ಪ್ರಶ್ನಿಸಿ ಟ್ವಿಟರ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿತ್ತು. ಈ ಕುರಿತು ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಕೇವಲ ಕಂಟೆಂಟ್ ಕ್ರಿಯೇಟರ್ಸ್‌ಗೆ ಮುನ್ನೆಚ್ಚರಿಕೆ ನೀಡದ ಕಾರಣ ನಿಯಮಗಳು ನಿರಂಕುಶ ಅಥವಾ ಅನಿಯಂತ್ರಿತವಾಗಿವೆ ಎಂದು ತಿಳಿಸಲಾಗಿದೆ. ಆದರೆ, ಟ್ವಿಟರ್ ವಿದೇಶಿ ಕಂಪನಿಯಾಗಿರುವ ಕಾರಣ ಸಂವಿಧಾನದ 19ನೇ ವಿಧಿಯ ಅನುಸಾರ ರಕ್ಷಣೆ ದೊರೆಯುವುದಿಲ್ಲ ಎಂದು ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರ್(ದಕ್ಷಿಣ) ಆರ್ ಶಂಕರನಾರಾಯಣನ್ ಅವರು ವಾದ ಮಂಡಿಸಿದರು.
ಇದನ್ನೂ ಓದಿ: ಮತ್ತೆ ಟ್ವಿಟರ್-ಕೇಂದ್ರ ವಾರ್, ಕೆಲವು ವಿಷಯ ಡಿಲೀಟ್ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ
ಆರ್ಟಿಕಲ್ 14 ರ ಅನುಸಾರವಾಗಿ ಯಾವುದೂ ಅನಿಯಂತ್ರಿತವಾಗಿಲ್ಲ. ಅಲ್ಲದೇ, ಸೆಕ್ಷನ್ 69(ಎ) ಅನ್ನು ಸರಿಯಾಗಿ ಅನುಸರಿಸಲಾಗಿದೆ. ಇದರ ಪರಿಣಾಮವಾಗಿ, ಅವರು(ಟ್ವಿಟರ್) ಯಾವುದೇ ಸಹಾಯಕ್ಕೆ ಅರ್ಹರಾಗಿರುವುದಿಲ್ಲ ಎಂದು ಸರ್ಕಾರ ವಾದ ಮಂಡಿಸಿದೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ನಿಗದಿಪಡಿಸಿದೆ. ಕೇಂದ್ರ ಸರ್ಕಾರವು ನಿರ್ದಿಷ್ಟ ಖಾತೆಗಳನ್ನು ಡಿಲಿಟ್ ಮಾಡಲು ಕೇಂದ್ರ ಸರ್ಕಾರವು ಸೂಚಿಸಿತ್ತು. ಇದನ್ನು ಟ್ವಿಟರ್ ಪ್ರಶ್ನಿಸಿದೆ.