ತಂತ್ರಜ್ಞಾನ
Karnataka High court: ಟ್ವಿಟರ್ ವಿದೇಶಿ ಕಂಪನಿಯಾಗಿದ್ದು ಸಂವಿಧಾನದ 19ನೇ ವಿಧಿಯಡಿ ರಕ್ಷಣೆ ಇಲ್ಲ ಎಂದ ಕೇಂದ್ರ
Karnataka High court: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೂಲ್ಸ್‌ಗಳನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಟ್ವಿಟರ್ (Twitter) ಪ್ರಶ್ನಿಸಿದೆ. ಈ ಕುರಿತು ಕೇಂದ್ರ ಸರ್ಕಾರವು ತನ್ನ ವಾದವನ್ನು ಮಂಡಿಸಿದ್ದು, ಮುಂದಿನ ವಿಚಾರಣೆ ಏಪ್ರಿಲ್ 10ಕ್ಕೆ ನಿಗದಿಯಾಗಿದೆ
ಬೆಂಗಳೂರು, ಕರ್ನಾಟಕ: ಸಂವಿಧಾನದ 19ನೇ ವಿಧಿ ಕೇವಲ ಭಾರತೀಯ ಪ್ರಜೆಗಳು, ಸಂಘಟನೆಗಳಿಗೆ ಮಾತ್ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತ್ಯಂತ್ರವನ್ನು ಕಲ್ಪಿಸುತ್ತದೆ ಹೊರತು ವಿದೇಶಿಗರಿಗಲ್ಲ. ಹಾಗಾಗಿ, ಅಮೆರಿಕ ಮೂಲದ ಮೈಕ್ರೋಬ್ಲಾಗಿಂಗ್ ವೇದಿಕೆಯಾಗಿರುವ ಟ್ವಿಟರ್ (Twitter) ಕಂಪನಿ ಸಂವಿಧಾನದ 19ನೇ ವಿಧಿಯಡಿ ಯಾವುದೇ ರಕ್ಷಣೆಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್ (Karnataka High court) ಮುಂದೆ ತನ್ನ ವಾದವನ್ನು ಮಂಡಿಸಿದೆ.
2021 ಫೆಬ್ರವರಿ 2 ಮತ್ತು 2022ರ ಫೆಬ್ರವರಿ 28ರ ನಡುವೆ ಕೇಂದ್ರ ಸರ್ಕಾರವು ಹೊರಡಿಸಿರುವ ಹಲವು ನಿರ್ಬಂಧಗಳನ್ನು ಪ್ರಶ್ನಿಸಿ ಟ್ವಿಟರ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿತ್ತು. ಈ ಕುರಿತು ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಕೇವಲ ಕಂಟೆಂಟ್ ಕ್ರಿಯೇಟರ್ಸ್‌ಗೆ ಮುನ್ನೆಚ್ಚರಿಕೆ ನೀಡದ ಕಾರಣ ನಿಯಮಗಳು ನಿರಂಕುಶ ಅಥವಾ ಅನಿಯಂತ್ರಿತವಾಗಿವೆ ಎಂದು ತಿಳಿಸಲಾಗಿದೆ. ಆದರೆ, ಟ್ವಿಟರ್ ವಿದೇಶಿ ಕಂಪನಿಯಾಗಿರುವ ಕಾರಣ ಸಂವಿಧಾನದ 19ನೇ ವಿಧಿಯ ಅನುಸಾರ ರಕ್ಷಣೆ ದೊರೆಯುವುದಿಲ್ಲ ಎಂದು ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರ್(ದಕ್ಷಿಣ) ಆರ್ ಶಂಕರನಾರಾಯಣನ್ ಅವರು ವಾದ ಮಂಡಿಸಿದರು.
ಇದನ್ನೂ ಓದಿ: ಮತ್ತೆ ಟ್ವಿಟರ್-ಕೇಂದ್ರ ವಾರ್, ಕೆಲವು ವಿಷಯ ಡಿಲೀಟ್ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ
ಆರ್ಟಿಕಲ್ 14 ರ ಅನುಸಾರವಾಗಿ ಯಾವುದೂ ಅನಿಯಂತ್ರಿತವಾಗಿಲ್ಲ. ಅಲ್ಲದೇ, ಸೆಕ್ಷನ್ 69(ಎ) ಅನ್ನು ಸರಿಯಾಗಿ ಅನುಸರಿಸಲಾಗಿದೆ. ಇದರ ಪರಿಣಾಮವಾಗಿ, ಅವರು(ಟ್ವಿಟರ್) ಯಾವುದೇ ಸಹಾಯಕ್ಕೆ ಅರ್ಹರಾಗಿರುವುದಿಲ್ಲ ಎಂದು ಸರ್ಕಾರ ವಾದ ಮಂಡಿಸಿದೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ನಿಗದಿಪಡಿಸಿದೆ. ಕೇಂದ್ರ ಸರ್ಕಾರವು ನಿರ್ದಿಷ್ಟ ಖಾತೆಗಳನ್ನು ಡಿಲಿಟ್ ಮಾಡಲು ಕೇಂದ್ರ ಸರ್ಕಾರವು ಸೂಚಿಸಿತ್ತು. ಇದನ್ನು ಟ್ವಿಟರ್ ಪ್ರಶ್ನಿಸಿದೆ.
ಆಟೋಮೊಬೈಲ್
Renault Kwid : ಈ ಕಾರುಗಳು ಏಪ್ರಿಲ್ 1ರಿಂದ ಭಾರತದ ಮಾರುಕಟ್ಟೆಯಲ್ಲಿ ಇರುವುದಿಲ್ಲ
ಬಿಎಸ್6 ಮಾನದಂಡಗಳು ಕಠಿಣಗೊಂಡಿರುವ ಕಾರಣ ಕೆಲವೊಂದು ಕಾರುಗಳ ಉತ್ಪಾದನೆ ನಿಲ್ಲಲಿದೆ.
ಮುಂಬಯಿ: ಭಾರತ ಸರಕಾರ ವಾಹನಗಳು ಪಾಲಿಸಬೇಕಾದ ಪರಿಸರ ಮಾಲಿನ್ಯ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿವೆ. ಬಿಎಸ್6 ಎರಡನೇಹಂತದ ಮಾನದಂಡದ ಮೂಲಕ ವಾಹನಗಳು ಉಗುಳುವ ಹೊಗೆಯ ನಿಯಂತ್ರಣಕ್ಕೆ ಮುಂದಾಗಿದೆ. ಇದಕ್ಕಾಗಿ ಭಾರತದ ಕಾರುಗಳ ಉತ್ಪಾದಕರು ಎಂಜಿನ್ನಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಿದ್ದಾರೆ. ಆದಾಗ್ಯೂ ಕೆಲವೊಂದು ಮಾಡೆಲ್ಗಳನ್ನು ಹೊಸ ಮಾನದಂಡಕ್ಕೆ ಪೂರಕವಾಗಿ ಅಪ್ಗ್ರೇಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಇಂಥ ಕಾರುಗಳು ಏಪ್ರಿಲ್ 1ರಿಂದ ಭಾರತದ ಮಾರುಕಟ್ಟೆಯಿಂದ ಕಣ್ಮರೆಯಾಗಲಿವೆ. ಅಂಥ ಕೆಲವು ಕಾರುಗಳ ವಿವರ ಇಲ್ಲಿದೆ.
ಟಾಟಾ ಆಲ್ಟ್ರೊಜ್ (ಡೀಸೆಲ್) – Tata Alatroz
ಟಾಟಾ ಮೋಟಾರ್ಸ್ನ ಆಲ್ಟ್ರೊಜ್ ಪ್ರೀಮಿಯಮ್ ಹ್ಯಾಚ್ಬ್ಯಾಕ್. ಆದರೆ, ಇದರ 1497 ಸಿಸಿಯ ಡೀಸೆಲ್ ಎಂಜಿನ್ ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಪೂರೈಸುತ್ತಿಲ್ಲ. ಹೀಗಾಗಿ ಏಪ್ರಿಲ್ ಒಂದರಿಂದ ಮಾರುಕಟ್ಟೆಗೆ ಇಳಿಯುವ ಸಾಧ್ಯತೆಗಳು ಇಲ್ಲ. ಈ ಕಾರಿನ ಎಂಜಿನ್ 88.77 ಬಿಎಚ್ಪಿ ಪವರ್ ಹಾಗೂ 200 ಎನ್ಎಮ್ ಟಾರ್ಕ್ ಬಿಡಗಡೆ ಮಾಡುತ್ತಿತ್ತು.
ರಿನೋ ಕ್ವಿಡ್ – Renault Kwid
ರಿನೋ ಕಂಪನಿ ತನ್ನೆಲ್ಲ ಕಾರುಗಳನ್ನು ಬಿಎಸ್6 ಎರಡನೇ ಹಂತದ ಮಾನದಂಡಗಳಿಗೆ ಪೂರಕವಾಗಿ ಮೊದಲಾಗಿ ಅಪ್ಗ್ರೇಡ್ ಮಾಡಿದೆ. ಆದರೆ, ರಿನೋ ಕ್ವಿಡ್ ಕುರಿತು ಮಾಹಿತಿ ಇಲ್ಲ. ಕ್ವಿಡ್ನಲ್ಲಿ 1 ಲೀಟರ್ನ 3 ಸಿಲಿಂಡರ್ ಎಂಜಿನ್ ಇದ್ದು, ಇದು 68 ಬಿಎಚ್ಪಿ ಪವರ್ ಹಾಗೂ 91 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಕಾರು ಮುಂದುವರಿಯುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ.
ಹೋಂಡಾ ಅಮೇಜ್ (ಡೀಸೆಲ್)- Honda Amaze
ಹೋಂಡಾ ಕಂಪನಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅಮೇಜ್ ಕಾರಿನ ಡೀಸೆಲ್ ಮಾಡೆಲ್ ತೆಗೆದು ಹಾಕಿದೆ. ಕಂಪನಿ ಪ್ರಕಾರ ಅದರ 1.5 ಲೀಟರ್ ಡೀಸೆಲ್ ಎಂಜಿನ್ ಬಿಎಸ್6 ಮಾನದಂಡಗಳನ್ನು ಪೂರೈಸಲು ಪೂರಕವಾಗಿಲ್ಲ. ಅದೇ ರೀತಿ ಡೀಸೆಲ್ ವೇರಿಯೆಂಟ್ಗೆ ಡಿಮ್ಯಾಂಡ್ ಕೂಡ ಕಡಿಮೆಯಾಗಿದೆ ಎಂದು ಹೇಳಿದೆ. ಹೀಗಾಗಿ ಈ ಮಾಡೆಲ್ ಏಪ್ರಿಲ್ 1ರಿಂದ ಇರುವುದಿಲ್ಲ.
ಹೋಂಡಾ ಡಬ್ಲ್ಯುಆರ್ವಿ- Honda WRV
ಹೋಂಡಾ ಕಂಪನಿಯು ತನ್ನ ಕ್ರಾಸ್ ಓವರ್ ಹ್ಯಾಚ್ಬ್ಯಾಕ್ ಡಬ್ಲ್ಯುಆರ್ವಿ ಉತ್ಪಾದನೆ ಕೂಡ ನಿಲ್ಲಿಸಲಿದೆ. ಇದು 1.2 ಲೀಟರ್ನ ಪೆಟ್ರೋಲ್ ಹಾಗೂ 1.5 ಲೀಟರ್ನ ಡೀಸೆಲ್ ಎಂಜಿನ್ ಹೊಂದಿತ್ತು. ಈ ಕಾರು ಇನ್ನು ಮುಂದೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯ ಇರುವುದಿಲ್ಲ.
ಹೋಂಡಾ ಜಾಜ್- Honda Jazz
ಹೋಂಡಾ ಜಾಜ್ ಕಾರು ಕೂಡ ಏಪ್ರಿಲ್ 2023ರಿಂದ ಸಿಗುವುದಿಲ್ಲ. ಇದು 1.2 ಲೀಟರ್ ಐವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರು 88.7 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ.
ಮಹೀಂದ್ರಾ ಮೊರಾಜೊ- Mahindra Marazzo
ಮಹೀಂದ್ರಾ ಕಂಪನಿಯು ತನ್ನ ಮೊರೊಜಾ ಎಮ್ಪಿವಿ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಏಪ್ರಿಲ್ 2023ರಿಂದ ಮಾರುವ ಸಾಧ್ಯತೆಗಳಿಲ್ಲ. ಈ ಕಾರು 1.5 ಲೀಟರ್ನ ಡೀಸೆಲ್ ಎಂಜಿನ್ ಹೊಂದಿದ್ದು 121 ಬಿಎಚ್ಪಿ ಪವರ್ ಹಾಗೂ 300 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ.
ಅಂಕಣ
ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!
ವಿಶ್ವದಾದ್ಯಂತ ಸೈಬರ್ ವಂಚಕರು ನಮ್ಮ ಎರಡು ದುರ್ಬಲತೆಯನ್ನು ಬಳಸಿಕೊಳ್ಳಲು ನೋಡುತ್ತಿರುತ್ತಾರೆ. ಮೊದಲನೆಯದು ಭಯ, ಎರಡನೆಯದು ದುರಾಸೆ. ಹಾಗಾಗಿ, ಇಂದಿನ ಈ ಸೈಬರ್ ಬ್ರಹ್ಮಾಂಡದಲ್ಲಿ ವ್ಯವಹರಿಸುವಾಗ ಜಾಣರಾಗಿ, ಜಾಗರೂಕರಾಗಿರಿ. ಸುಖವಾದ ಸೈಬರ್ ಸರ್ಫ್‌ಗೆ ಹನ್ನೆರಡು ಸೂತ್ರಗಳು ಇಲ್ಲಿವೆ.
ಅಗರ್ತಲಾದ ಇಕ್ಫಾಯಿ (ICAFI) ಯೂನಿವರ್ಸಿಟಿಯಿಂದ ಹೊರಡ್ತಾ ಇದ್ದೆ. ಆಗ ನನ್ನ ಫೇಸ್‌ಬುಕ್ ಗೆಳೆಯರೊಬ್ಬರು ಕರೆ ಮಾಡಿ ಅವರ ಪರಿಚಿತರೊಬ್ಬರು ಸೈಬರ್ ವಂಚನೆಗೀಡಾಗಿದ್ದಾರೆ. ಅವರಿಗೆ ನಿಮ್ಮ ಸಲಹೆ, ಮಾರ್ಗದರ್ಶನ ಬೇಕು, ನಿಮ್ಮ ನಂಬರ್ ಕೊಡಬಹುದಾ ಎಂದರು. ಅವರಿಗೆ ಒಪ್ಪಿಗೆ ಕೊಟ್ಟು ಏರ್‌ಪೋರ್ಟ್ ತಲುಪಿದೆ. ಅಲ್ಲಿ ಲಗೇಜ್ ಚೆಕ್ಇನ್, ಸೆಕ್ಯೂರಿಟಿ ಚೆಕ್ಇನ್ ಮುಗಿಸುವಷ್ಟರಲ್ಲಿ ಒಂದು ಅಪರಿಚಿತ ನಂಬರ್‌ನಿಂದ ಪೋನ್ ರಿಂಗಣಿಸಿತು. ನನ್ನ ಸ್ನೇಹಿತರ ಪರಿಚಿತರಿರಬಹುದೆಂದು ಉತ್ತರಿಸಿದೆ. ಅವರೇ ಕರೆ ಮಾಡಿದ್ದರು.
ʼನಾನು ಚಕ್ರಪಾಣಿ (ಹೆಸರು ಬದಲಾಯಿಸಿದ್ದೇನೆ), ನಿಮ್ಮ ಫೇಸ್‌ಬುಕ್ ಸ್ನೇಹಿತರು ಹೇಳಿದ್ರಲ್ಲ, ನಾನೇʼ ಅಂದರು. ಅವರು ಯಾವುದೋ ಕೆಲಸದಲ್ಲಿದ್ದಾಗ ಅವರ ಬ್ಯಾಂಕಿನಿಂದ ಒಂದು SMS ಬಂತಂತೆ. ಅದರಲ್ಲಿ ಅವರ KYC ನವೀಕರಿಸದಿದ್ದರೆ ಅಕೌಂಟ್ ಬ್ಲಾಕ್ ಆಗುತ್ತೆ ಅಂತ ಇತ್ತಂತೆ. ತಕ್ಷಣ ನವೀಕರಿಸುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ ಎಂದು ಒಂದು ಲಿಂಕ್ ಕೊಟ್ಟಿದ್ರಂತೆ. ಕೆಲಸದ ನಡುವೆ ಬಂದ ಈ SMSಗೆ ಗಾಬರಿಯಿಂದ ಗಡಿಬಿಡಿಯಲ್ಲಿ ಕ್ಲಿಕ್ ಮಾಡಿ ತಮ್ಮ ಮಾಹಿತಿಯನ್ನು ಕೊಟ್ಟರಂತೆ. ಸ್ವಲ್ಪ ಹೊತ್ತಿನಲ್ಲೇ ಅವರ ಅಕೌಂಟಿನಿಂದ ತೊಂಬತ್ತು ಸಾವಿರ ರೂಪಾಯಿ ಡೆಬಿಟ್ ಆಗಿದೆ ಎಂದು ಇನ್ನೊಂದು ಮೆಸೇಜ್ ಬಂತಂತೆ. OTP ಕೂಡ ಬರದೇ ಅಕೌಂಟಿನಿಂದ ಹಣ ಹೋಗಿದೆ, ಏನು ಮಾಡೋದು ಅಂತ ಅಲವತ್ತುಕೊಂಡರು. ಅವರಿಗೆ ಧೈರ್ಯ ಹೇಳಿ ಮೊಟ್ಟಮೊದಲು ಕೈಗೊಳ್ಳಬೇಕಾದ ಕಾರ್ಯಗಳನ್ನು ತಿಳಿಸಿ, ನಾನು ಬೆಂಗಳೂರಿನ ವಿಮಾನ ಹತ್ತಿದೆ.
ಬೆಂಗಳೂರಿಗೆ ಬಂದು ಒಂದೆರಡು ದಿನಗಳ ನಂತರ ಮತ್ತೆ ಚಕ್ರಪಾಣಿಯವರಿಗೆ ಕರೆ ಮಾಡಿ ಮಾತನಾಡಿದೆ. ಅವರೂ ಕೂಡ ಅವರ ಊರಿನ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದರು. ಭಾರತ ಸರ್ಕಾರದ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (https://www.cybercrime.gov.in/) ನಲ್ಲೂ ಅವರ ದೂರು ದಾಖಲಿಸಲು ಸಲಹೆ ನೀಡಿದೆ. ಮತ್ತು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರೊ. ಅನಂತ ಪ್ರಭು ಅವರ ನೆರವನ್ನೂ ಪಡೆದುಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದೆ. ಅದೇ ರೀತಿ ಅನಂತ ಪ್ರಭುಗಳಿಗೂ ಮೆಸೇಜ್ ಮಾಡಿ ಚಕ್ರಪಾಣಿಯವರಿಗೆ ಬೇಕಾದ ಸಹಾಯ ಮಾಡಲು ಕೇಳಿಕೊಂಡೆ.
ಕಳೆದ ವಾರ, ಚಕ್ರಪಾಣಿಯವರು ಕರೆ ಮಾಡಿ ಹಣ ಪುನಃ ಅಕೌಂಟಿನಲ್ಲಿ ಬಂದಿದೆ ಎಂದು ಬಹಳ ಸಂತೋಷದಿಂದ ಹೇಳಿದರು. ಆದರೆ ಸದ್ಯಕ್ಕೆ ಬ್ಲಾಕ್ ಆಗಿದೆ. ಕೆಲವು ದಿನಗಳಲ್ಲಿ ವ್ಯವಹಾರಕ್ಕೆ ಸಿಗಬಹುದು ಅಂತ ಹೇಳಿದರು. ಸಕಾಲಿಕ ಸಲಹೆಗಳಿಗೆ ಧನ್ಯವಾದಗಳನ್ನೂ ಹೇಳಿದರು. ನಾನು ಅವರಿಗೆ ರಿಸರ್ವ್ ಬ್ಯಾಂಕಿನ ಸೈಬರ್ ಸೆಕ್ಯೂರಿಟಿಯ ಧ್ಯೇಯ ವಾಕ್ಯದಿಂದ “ಜಾಣರಾಗಿ, ಜಾಗರೂಕರಾಗಿರಿ” ಎಂದು ಹಾರೈಸಿದೆ.
ಕೋವಿಡ್ ಮಹಾಮಾರಿಯ ಸಮಯದಿಂದ ನಮ್ಮೆಲ್ಲರ ಆನ್ಲೈನ್ ವಹಿವಾಟು ಜಾಸ್ತಿ ಆಗಿದೆ. ಈ ಸಂದರ್ಭದಲ್ಲಿ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಕೋವಿಡ್ ಕಾಲದಲ್ಲಿ ರೋಗ ಬಾರದಂತೆ ಹೇಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೆವೋ ಹಾಗೆ ಸೈಬರ್ ಲೋಕದಲ್ಲಿ ವ್ಯವಹರಿಸುವಾಗಲೂ ಕೆಲವು ಅತಿ ಮುಖ್ಯವಾದ ಸುರಕ್ಷತಾ ಸಲಹೆಗಳನ್ನು ಪಾಲಿಸಿದರೆ ನಮ್ಮ ಆನ್ಲೈನ್ ಜೀವನವೂ ನಿರಾತಂಕವಾಗಿರುತ್ತದೆ.
ದೇವರು ನಾವಿರುವ ಭೂಮಿಯನ್ನು ಮತ್ತು ಜೀವ ವೈವಿಧ್ಯವನ್ನು ಸೃಷ್ಟಿಸಿದಂತೆ, ನಾವು ಸೈಬರ್‌ಸ್ಪೇಸ್ ಎಂಬ ಹೊಸ ಬ್ರಹ್ಮಾಂಡವನ್ನು ರಚಿಸಿದ್ದೇವೆ. ಎಲ್ಲದರಂತೆ ಅದರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇದೆ. ಈ ಹೊಸ ಆಯಾಮಗಳು ಅದ್ಭುತಗಳಿಗಿಂತ ಹೆಚ್ಚು ಅನಾಹುತಗಳನ್ನು ಹುಟ್ಟುಹಾಕುವುದೇ ಎಂದು ನಮಗೆ ಇನ್ನೂ ತಿಳಿದಿಲ್ಲ, ಆದರೆ ಹಿಂತಿರುಗಲು ತುಂಬಾ ತಡವಾಗಿದೆ.
ಇದನ್ನೂ ಓದಿ: ವಾಕಿಂಗ್ ಚಿತ್ರಗಳು: ಚಾಟ್ ಜಿಪಿಟಿ- ರೋಬಾಟ್ ಪರ್‌ಫೆಕ್ಟು, ಹಲವು ಎಡವಟ್ಟು
ನಾವು ತಂತ್ರಜ್ಞಾನ ಮತ್ತು ಇಂಟರ್ನೆಟ್ಟಿನ ಮೇಲೆ ಎಷ್ಟು ಅವಲಂಬಿತರಾಗಿದ್ದೇವಲ್ವಾ? ಬೆಳಿಗ್ಗೆ ಎದ್ದೊಡನೆ ಕಣ್ಮುಂದೆ ಬರೋದು ಮೊಬೈಲ್ ಮತ್ತು ಅದರಲ್ಲಿ ಬಂದ ಮೆಸೇಜುಗಳ ಅವಲೋಕನ. ಹೀಗಿರುವಾಗ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಲ್ವೇ? ಅದಕ್ಕಾಗಿ ಈ ಕೆಳಗಿನ ಕೆಲವು ಸಲಹೆಗಳನ್ನು ಪಾಲಿಸಬಹುದು. ಸುಖವಾದ ಸೈಬರ್ ಸರ್ಫ್‌ಗೆ ಹನ್ನೆರಡು ಸೂತ್ರಗಳು.
- ಕ್ಲಿಕ್ಕಿಸುವ ಮೊದಲು ಯೋಚಿಸಿ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಅಂತ ಗಾದೆನೇ ಇದೆ ಅಲ್ವಾ?
- ಸುಭದ್ರವಾದ ಮತ್ತು ವಿಭಿನ್ನವಾದ ಪಾಸ್‌ವರ್ಡ್‌ಗಳನ್ನು ಬಳಸಿ.
- ನಿಮ್ಮ ಎಲ್ಲಾ ಆನ್‌ಲೈನ್ ಅಕೌಂಟುಗಳಿಗೂ ಮಲ್ಟಿ-ಫ್ಯಾಕ್ಟರ್ ಅಥೆಂಟಿಫಿಕೇಷನ್ (MFA) ಅಥವಾ ಎರಡು ಫ್ಯಾಕ್ಟರ್ ಸೆಕ್ಯೂರಿಟಿ ಅಳವಡಿಸಿಕೊಳ್ಳಿ.
- ನಿಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್/ಡೆಸ್ಕ್‌ಟಾಪ್‌ಗಳ ಸಾಫ್ಟವೇರನ್ನು ನಿಯಮಿತವಾಗಿ ಅಪ್‌ಡೇಟ್ ಮಾಡ್ಕೊಳ್ತಿರಿ.
- ಫೈರ್ ವಾಲ್ ಮತ್ತು anti-ವೈರಸ್ ಬಳಸಿ.
- ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡನ್ನು ಆದಷ್ಟೂ ಕಡಿಮೆ ಬಳಸಿ.
- ಸೈಬರ್ ಜಗತ್ತಿನ ಸುರಕ್ಷತೆಯ ಬಗ್ಗೆ ಜಾಣರಾಗಿರಿ.
- ಅಪರಿಚಿತ ಮತ್ತು ಅಸುರಕ್ಷಿತ ಜಾಲತಾಣಗಳಿಗೆ ಭೇಟಿ ಮಾಡಬೇಡಿ.
- ಅನವಶ್ಯಕ ಡೌನ್‌ಲೋಡ್ ಮಾಡಬೇಡಿ.
- ನಿಮ್ಮ ಮುಖ್ಯವಾದ ದತ್ತಾಂಶ (data)ವನ್ನು ಬ್ಯಾಕಪ್ ಮಾಡ್ಕೊಳಿ.
- ಉಚಿತವಾಗಿ ಸಿಗುತ್ತೆ ಅಂತ ಸಾರ್ವಜನಿಕ ವೈಫೈ(WiFi) ಬಳಸಬೇಡಿ.
- ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಏರ್ಪೋರ್ಟ್‌ಗಳಲ್ಲಿ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಚಾರ್ಜ್‌ಗೆ ಹಾಕುವಾಗ ಡೇಟಾ ಅಥವಾ ವೈಫೈ ಆಫ್ ಮಾಡಿಕೊಳ್ಳಿ. ನಿಮ್ಮ ಡಿವೈಸನ್ನು ಪೂರ್ತಿ ಆಫ್ ಮಾಡಿ ಚಾರ್ಜ್ ಮಾಡೋದು ಬಹಳ ಒಳ್ಳೆಯದು.
ವಿಶ್ವದಾದ್ಯಂತ ಸೈಬರ್ ವಂಚಕರು ನಮ್ಮ ಎರಡು ದುರ್ಬಲತೆಯನ್ನು ಬಳಸಿಕೊಳ್ಳಲು ನೋಡುತ್ತಿರುತ್ತಾರೆ. ಮೊದಲನೆಯದು ಭಯ, ಎರಡನೆಯದು ಆಸೆ (ದುರಾಸೆ). ಮೇಲಿನ ಘಟನೆಯಲ್ಲಿ ಬಳಕೆಯಾಗಿದ್ದು ಭಯ. ಎಲ್ಲಿ ತಮ್ಮ ಅಕೌಂಟ್ ಬ್ಲಾಕ್ ಆಗಿಬಿಡುವುದೋ ಎನ್ನುವ ಭಯದಲ್ಲಿ ಚಕ್ರಪಾಣಿಯವರು smsನಲ್ಲಿದ್ದ ಲಿಂಕ್ ಒತ್ತಿಬಿಟ್ಟರು. ಇನ್ನೊಂದು ರೀತಿಯ ವಂಚನೆಯಲ್ಲಿ ನಮ್ಮಲ್ಲಿ ಆಸೆ (ದುರಾಸೆ) ಹುಟ್ಟಿಸಿ ನಮ್ಮಿಂದ ಅವರಿಗೆ ಬೇಕಾದ ಮಾಹಿತಿ ಪಡೆಯುತ್ತಾರೆ.
ಹಾಗಾಗಿ, ಇಂದಿನ ಈ ಸೈಬರ್ ಬ್ರಹ್ಮಾಂಡದಲ್ಲಿ ವ್ಯವಹರಿಸುವಾಗ ಜಾಣರಾಗಿ, ಜಾಗರೂಕರಾಗಿರಿ.
(ಸೈಬರ್ ಸುರಕ್ಷತೆಯ ಬಗ್ಗೆ ಮನದಟ್ಟು ಮಾಡಿಕೊಡುವ ಈ ನೂತನ ಅಂಕಣ ಪ್ರತಿವಾರ ಪ್ರಕಟವಾಗಲಿದೆ)
ಇದನ್ನೂ ಓದಿ: ಗ್ಲೋಕಲ್ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು
ಗ್ಯಾಜೆಟ್ಸ್
Redmi Note 12 4G ಫೋನ್ ಲಾಂಚ್, ವಿಶೇಷತೆಗಳೇನು? ಭಾರತಕ್ಕೆ ಯಾವಾಗ ಎಂಟ್ರಿ?
ಜಾಗತಿಕ ಮಾರುಕಟ್ಟೆಗೆ ರೆಡ್‌ಮಿ ಕಂಪನಿಯು Redmi Note 12 4G ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ತನ್ನ ಫೀಚರ್ಸ್, ಕ್ಯಾಮೆರಾ ಕ್ವಾಲಿಟಿ, ಪ್ರೊಸೆಸರ್‌ಗಳಿಂದಾಗಿ ಈ ಫೋನ್ ಗಮನ ಸೆಳೆಯುತ್ತಿದೆ.
ನವದೆಹಲಿ: ರೆಡ್‌ಮಿ(Redmi) ಕಂಪನಿಯು ಜಾಗತಿಕವಾಗಿ ರೆಡ್‌ಮಿ ನೋಟ್ 12 ಸಿರೀಸ್ ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ರೆಡ್‌ಮಿ ನೋಟ್ 12 5ಜಿ, ನೋಟ್ 12 ಪ್ರೋ 5ಜಿ, ನೋಟ್ 12 ಪ್ರೋ ಪ್ಲಸ್ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈಗ ಕಂಪನಿಯು ರೆಡ್‌ಮಿ ನೋಟ್ 12 4ಜಿ(Redmi Note 12 4G) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಜಾಗತಿಕ ಮಾರುಕಟ್ಟೆಗೆ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್ ಮಾರ್ಚ್ 30ಕ್ಕೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಸದ್ಯ ಐರೋಪ್ಯ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್ ಬೆಲೆ 229 ಯುರೋದಿಂದ ಆರಂಭವಾಗಲಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಇದು ಅಂದಾಜು 20,400 ರೂ. ಆಗಲಿದೆ. ಹೈ ಎಂಡ್ ಫೋನ್ ಬೆಲೆ ಅಂದಾಜು 22 ಸಾವಿರ ರೂ.ವರೆಗೂ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತೀಯ ಮಾರುಕಟ್ಟೆಗೆ ಲಾಂಚ್ ಆದಾಗ ಈ ಫೋನ್ ಬೆಲೆಯಲ್ಲಿ ವ್ಯತ್ಯಾಸವಾಗಬಹುದು.
ಈ ಸ್ಮಾರ್ಟ್‌ಫೋನ್ ಐಸ್ ಬ್ಲ್ಯೂ, ಮಿಂಟ್ ಬ್ಲ್ಯೂ ಮತ್ತು ಓನಿಕ್ಸ್ ಗ್ರೇ ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಎಲ್ಲ ಮಾರುಕಟ್ಟೆಗಳಲ್ಲಿ ಈ ಮೂರು ಬಣ್ಣದ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್ ದೊರೆಯಲಿದೆ. ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್ ಡುಯಲ್ ಸಿಮ್‍ಗೆ ಸಪೋರ್ಟ್ ಮಾಡುತ್ತದೆ. 6.67 ಇಂಚ್ ಫುಲ್ ಎಚ್‌ಡಿ ಅಮೋಎಲ್ಇಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ರಿಫ್ರೇಶ್ ರೇಟ್ 120Hz ಇದೆ. ಪ್ರದರ್ಶನವು 1200 ನಿಟ್‌ಗಳ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ.
ಆಂಡ್ರಾಯ್ಡ್ 13 ಹಾಗೂ MIUI 14 ಜೊತೆಗೆ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ. ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್ Adreno 610 GPU ಜೊತೆಗೆ 6nm ಆಕ್ಟಾ-ಕೋರ್ Qualcomm Snapdragon 685 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಫೋನ್ 8 ಜಿಬಿಯವರೆಗೆ LPDDR4X RAM ಮತ್ತು 128GB UFS2.2 ಸಂಗ್ರಹಣೆಯನ್ನು ಹೊಂದಿದೆ. ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೂಲಕ 1 ಟಿಬಿವರೆಗೂ ವಿಸ್ತರಿಸಬಹುದಾಗಿದೆ.
ಇದನ್ನೂ ಓದಿ: Smartphone Export : ಭಾರತದಿಂದ 2 ತಿಂಗಳಲ್ಲಿ ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್ ರಫ್ತು
ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇದೆ. ಈ ಪೈಕಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಈ ಕ್ಯಾಮೆರಾದಲ್ಲಿ ಜೆಎನ್1 ಪ್ರೈಮರಿ ಸೆನ್ಸರ್ ಒಳಗೊಂಡಿದೆ. 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಹಾಗೂ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಕ್ಯಾಮೆರಾಗಳಿವೆ. ಇನ್ನೂ ಫೋನ್ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಚಾಟ್‌ಗಳಿಗಾಗಿ 13 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ರೆಡ್‌ಮಿ ನೋಡ್ 12 4ಜಿ ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯನ್ನು ಒಳಗೊಂಡಿದೆ. ಈ ಬ್ಯಾಟರಿಯು 33W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.
ಆಟೋಮೊಬೈಲ್
BMW Bike : ಬಿಎಮ್ಡಬ್ಲ್ಯು ಕಂಪನಿಯ ಈ ಬೈಕ್ಗೆ 35 ಲಕ್ಷ ರೂಪಾಯಿ; ಯಾಕೆ ಅಷ್ಟು ಬೆಲೆ?
ಆರ್18 ಬೈಕ್ 1800 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಹಲವಾರು ಸೇಫ್ಟಿ ಫೀಚರ್ಗಳೂ ಇವೆ.
ಮುಂಬಯಿ: ಐಷಾರಾಮಿ ಕಾರುಗಳನ್ನು ತಯಾರಿಸುವ ಜರ್ಮನಿ ಮೂಲದ ಕಂಪನಿ ಬಿಎಮ್ಡಬ್ಲ್ಯು ದುಬಾರಿ ಬೆಲೆಯ ಬೈಕ್ಗಳನ್ನೂ (BMW Bike) ಉತ್ಪಾದಿಸುತ್ತದೆ. ಈ ಕಂಪನಿ ತಯಾರಿಸಿರುವ ಆರ್ 18 ಟ್ರಾನ್ಸ್ಕಾಂಟಿನೆಂಟ್ನ ಬೈಕ್ 35 ಲಕ್ಷ ರೂಪಾಯಿ ಬೆಲೆಯೊಂದಿಗೆ ಭಾರತದಲ್ಲೂ ಬಿಡುಗಡೆಯಾಗಿದೆ. ಬೈಕ್ ಸಂಪೂರ್ಣವಾಗಿ ವಿದೇಶದಲ್ಲಿಯೇ ತಯಾರಾಗಿ ಭಾರತದಲ್ಲಿ ಮಾರಾಟವಾಗಲಿದೆ. ಇದರ ಎಕ್ಸ್ಶೋ ರೂಮ್ ಬೆಲೆ 31.50 ಲಕ್ಷ ರೂಪಾಯಿ. ತೆರಿಗೆ ಹಾಗೂ ಇನ್ಸ್ಯುರೆನ್ಸ್ ಸೇರಿಕೊಂಡು 35 ಲಕ್ಷ ರೂಪಾಯಿ ದಾಟುತ್ತದೆ. ಹಲವಾರು ವಿಶೇಷ ಫೀಚರ್ಗಳನ್ನು ಹೊಂದಿರುವ ಈ ಬೈಕ್ಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಇದು ಆರ್18 ಸೆಗ್ಮೆಂಟ್ನ ಮೂರನೇ ಬೈಕ್. ಈ ಹಿಂದೆ ಆರ್18, ಆರ್18 ಕ್ಲಾಸಿಕ್ ಎಂಬ ಬೈಕ್ಗಳನ್ನು ಬಿಎಂಡಬ್ಲ್ಯು ಬಿಡುಗಡೆ ಮಾಡಿತ್ತು.
ಬಿಎಂಡಬ್ಲ್ಯು ಆರ್18 ಟ್ರಾನ್ಕಾಂಟಿನೆಂಟನ್ 1802 ಸಿಸಿಯ ಎಂಜಿನ್ನಲ್ಲಿ ಎರಡು ಸಿಲಿಂಡರ್ಗಳಿವೆ ಹಾಗೂ ಏರ್ಕೂಲ್ಡ್ ತಾಂತ್ರಿಕತೆ ಹೊಂದಿದೆ. ಇದು 4750 ಆರ್ಪಿಎಮ್ನಲ್ಲಿ 89 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ. ಅದೇ ರೀತಿ 2000ರಿಂದ 4000 ಆರ್ಪಿಎಮ್ ಒಳಗೆ 150 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಆರು ಸ್ಪೀಡ್ನ ಗೇರ್ಬಾಕ್ಸ್ ಇದು ಹೊಂದಿದ್ದು, ಆ್ಯಂಟಿ ಹೋಪಿಂಗ್ ಕ್ಲಚ್ ಕೂಡ ಇದೆ. ಹೆಚ್ಚುವರಿಯಾಗಿ ರಿವರ್ಸ್ ಗೇರ್ ಆಯ್ಕೆಯನ್ನೂ ನೀಡಲಾಗಿದೆ. ಇದು 427 ಕೆ.ಜಿ ಭಾರವಿದ್ದು, 24 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ನೀಡಲಾಗಿದೆ. ನಾಲ್ಕು ಲೀಟರ್ ಪೆಟ್ರೊಲ್ನ ರಿಸರ್ವ್ ಕೆಪಾಸಿಟಿಯೂ ಇದೆ.
ಇದನ್ನೂ ಓದಿ : Hero MotoCorp : ಹೀರೋ ಸೂಪರ್ ಸ್ಪ್ಲೆಂಡರ್ XTEC ಭಾರತದಲ್ಲಿ ಬಿಡುಗಡೆ, ಏನಿವೆ ವಿಶೇಷತೆಗಳು?
ರೇನ್, ರೋಲ್ ಆ್ಯಂಡ್ ರಾಕ್ ಎಂಬ ಮೂರು ರೈಡಿಂಗ್ ಮೋಡ್ಗಳಿವೆ. ರೋಲ್ ಮೋಡ್ನಲ್ಲಿ ಸೆಫ್ಟಿ ಫೀಚರ್ಗಳು ಹೆಚ್ಚು ಕೆಲಸ ಮಾಡುತ್ತವೆ. ರಾಕ್ ಮೋಡ್ನಲ್ಲಿ ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್ ವ್ಯವಸ್ಥೆಯಿದೆ. ಕ್ರೂಸ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಡೈನಾಮಿಕ್ ಎಂಜಿನ್ ಬ್ರೇಕ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಕಂಟ್ರೋಲ್, ಕೀ ಲೆಸ್ ರೈಡ್ ಮತ್ತಿತರ ಫೀಚರ್ಗಳಿವೆ. ಮುಂಭಾಗದಲ್ಲಿ ಟ್ವಿನ್ ಡಿಸ್ಕ್ ಬ್ರೇಕ್ ಇದ್ದರೆ, ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಇದೆ.
ಆರ್18 ಟ್ರಾನ್ಸ್ಕಾಂಟಿನೆಂಟಲ್ ಬೈಕ್ ಅನ್ನು ರಸ್ತೆಗೆ ಇಳಿಸುವ ಮೂಲಕ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ಐಷಾರಾಮಿ ಬೈಕ್ಗಳ ಹೊಸ ಯುಗವನ್ನು ಆರಂಭಿಸಿದೆ. ಹೊಸ ತಾಂತ್ರಿಕತೆ, ಆಕರ್ಷಕ ವಿನ್ಯಾಸ ಹಾಗೂ ಅನುಕೂಲಕರ ಸವಾರಿ ಅನುಭವ ನೀಡುವ ಈ ಬೈಕ್ಗಳು ಭಾರತದ ಬೈಕ್ ಪ್ರಿಯರನ್ನು ಸೆಳೆಯಲಿದೆ ಎಂದು ಬಿಎಂಡಬ್ಲ್ಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಲೆ ಏಕೆ ಜಾಸ್ತಿ?
ಈ ಬೈಕ್ಗಳು ಜಾಗತಿಕ ಮಟ್ಟದಲ್ಲಿ ಹೊಂದಿರುವ ಅತ್ಯಂತ ದಕ್ಷ ಸೇಫ್ಟಿ ಫೀಚರ್ಗಳನ್ನು ಹೊಂದಿದೆ. ಅದೇ ರೀತಿ ಬಿಎಂಡಬ್ಲ್ಯು ಬೈಕ್ಗಳು ಕಾರುಗಳಂತೆಯೇ ದುಬಾರಿ. ಅದಕ್ಕಿಂತ ಹೆಚ್ಚಾಗಿ ವಿದೇಶದಲ್ಲಿಯೇ ತಯಾರಾಗಿ ಭಾರತದಲ್ಲಿ ಮಾರಾಟವಾಗುವ ಬೈಕ್ಗಳಿಗೆ ಅದರ ಮೂಲ ಬೆಲೆಯಷ್ಟೇ ತೆರಿಗೆಯನ್ನೂ ಕಟ್ಟಬೇಕಾಗುತ್ತದೆ. ಹೀಗಾಗಿ ಬೆಲೆ ದುಬಾರಿಯಾಗುತ್ತದೆ.
-
ಸುವಚನ60 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಅಂಕಣ22 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ22 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ22 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ23 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ20 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ16 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಕರ್ನಾಟಕ20 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ