Site icon Vistara News

ನಿಮ್ಮ ಟ್ವೀಟ್‌ ಈಗ ನಿಮ್ಮವರು ಮಾತ್ರ ನೋಡಬಹುದು!

Twitter Removed option to send direct message Says some reports

ಬೆಂಗಳೂರು: ಟ್ವಿಟರ್‌ನಲ್ಲಿ ಒಂದು ಹೊಸ ಫೀಚರ್‌ ಟೆಸ್ಟ್‌ ಮಾಡಲಾಗುತ್ತಿದೆ ಎಂದು ಟ್ವಿಟರ್‌ ಸಂಸ್ಥೆ ತಿಳಿಸಿದೆ. ಈ ಫೀಚರ್‌ನಲ್ಲಿ ನಿಮ್ಮ ಟ್ವೀಟ್‌ ನೀವು ಆಯ್ಕೆ ಮಾಡಿದ ಕೆಲವು ಜನಗಳಿಗೆ ಮಾತ್ರ ಕಾಣಿಸುತ್ತದೆ. ಈ ಹೊಸ ಫೀಚರ್‌ನ ಟೆಸ್ಟಿಂಗ್‌ ನಡೆಸಲಾಗುತ್ತಿದೆ. ಇದನ್ನು ʼಟ್ವಿಟರ್‌ ಸರ್ಕಲ್‌ʼ ಎಂದು ಕರೆಯಲಾಗುತ್ತದೆ.

ಟ್ವಿಟರ್‌ನ ಈ ಫೀಚರ್‌ ಇನ್ಸ್‌ಟಾಗ್ರಾಮ್‌ ಮಾದರಿಯಲ್ಲಿ ಮೂಡಿಬರುವಂತೆ ಕಾಣುತ್ತಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ಈಗಾಗಲೇ ʼಕ್ಲೋಸ್‌ ಫ್ರೆಂಡ್ಸ್‌ʼ ಎಂಬ ಫೀಚರ್‌ ಇದೆ. ಈ ಫೀಚರ್‌ನಲ್ಲಿ ಒಬ್ಬರು ತಮ್ಮ ಆಪ್ತ ಬಳಗವನ್ನು ಮಾತ್ರ ಒಗ್ಗೂಡಿಸಬಹುದು. ನಂತರ ಯಾವುದಾದರೂ ಸ್ಟೋರಿ(ಸ್ಟೇಟಸ್)‌ ಹಾಕಿದರೆ ಅದನ್ನು ಆ ಆಪ್ತ ಬಳಗ ಮಾತ್ರ ನೋಡುವಂತೆ ಮಾಡಬಹುದು. ಇದರಲ್ಲಿ ನೀವು ಎಷ್ಟು ಜನರನ್ನು ನಿಮ್ಮ ಆಪ್ತ ಬಳಗಕ್ಕೆ ಸೇರಿಸಲು ಇಚ್ಛಿಸುತ್ತೀರೋ ಅಷ್ಟು ಜನರನ್ನು ಸೇರಿಸಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ. ಇದೇ ಪ್ರಯೋಗವನ್ನು ಈಗ ಟ್ವಿಟರ್‌ ಮಾಡುತ್ತಿದೆ.

ಈವರೆಗೆ ಟ್ವಿಟರ್‌ನಲ್ಲಿ ಈ ರೀತಿಯ ಫೀಚರ್‌ ಇರಲಿಲ್ಲ. ನೀವು ಮಾಡಿದ ಟ್ವೀಟ್‌ ನಿಮ್ಮನ್ನು ಯಾರು ಫಾಲೋ ಮಾಡುತ್ತಿದ್ದಾರೋ ಅವರೆಲ್ಲರೂ ನೋಡಬಹುದಿತ್ತು. ಆದರೆ ಎಲ್ಲಾ ಟ್ವೀಟ್‌ಗಳನ್ನೂ ಎಲ್ಲರೂ ನೋಡಬೇಕು ಎಂಬ ಅವಶ್ಯಕತೆ ಇರುವುದಿಲ್ಲ. ನಿಮ್ಮ ಆಪ್ತ ಬಳಗ ಮಾತ್ರ ನೋಡಿದರೆ ಸಾಕಾಗುತ್ತದೆ. ಹಾಗಾಗಿ ಟ್ವಿಟರ್‌ ಈ ಹೊಸ ಫೀಚರ್‌ ಬಿಡುಗಡೆಗೊಳಿಸುತ್ತಿದೆ. ʼಟ್ವಿಟರ್‌ ಸರ್ಕಲ್‌ʼ ಫೀಚರ್‌ನಲ್ಲಿ ನಿಮ್ಮ ಆಪ್ತರ ಬಳಗವನ್ನು ಮಾಡಬಹುದು. ನಂತರ ನೀವು ಮಾಡಿದ ಟ್ವೀಟ್‌ ಎಲ್ಲರೂ ನೋಡಬೇಕಾ? ಅಥವಾ ನಿಮ್ಮ ಆಪ್ತ ಬಳಗ (ಟ್ವಿಟರ್‌ ಸರ್ಕಲ್)‌ ಮಾತ್ರ ನೋಡಿದರೆ ಸಾಕಾ? ಎಂದು ನೀವೇ ತೀರ್ಮಾನಿಸಿ ಟ್ವೀಟ್‌ ಮಾಡಬಹುದು.

ಎಷ್ಟು ಜನರ ಸರ್ಕಲ್?‌

ಇನ್ಸ್‌ಟಾಗ್ರಾಂನಲ್ಲಿ ʼಕ್ಲೋಸ್‌ ಫ್ರೆಂಡ್ಸ್‌ʼ ಗುಂಪಿಗೆ ಸೇರಿಸಲು ಸಂಖ್ಯೆಯ ಮಿತಿಯಿಲ್ಲ. ಆದರೆ ಟ್ವಿಟರ್‌ ನಿಮ್ಮ ಸರ್ಕಲ್‌ ಎಷ್ಟು ದೊಡ್ಡದಿರಬೇಕೆಂದು ನಿರ್ದಿಷ್ಟ ಸಂಖ್ಯೆಯನ್ನು ಸೂಚಿಸಿದೆ. ನಿಮ್ಮ ಟ್ವಿಟರ್‌ ಸರ್ಕಲ್‌ನಲ್ಲಿ 150 ಜನರನ್ನು ಮಾತ್ರ ಸೇರಿಸಬಹುದು. ಅದಕ್ಕಿಂತ ಹೆಚ್ಚಿನ ಜನರನ್ನು ಸೇರಿಸಲು ಆಗುವುದಿಲ್ಲ. 150ಕ್ಕೂ ಕಡಿಮೆ ಜನರನ್ನು ಸೇರಿಸಬಹುದು.

ಈ ಫೀಚರ್‌ ಇನ್ನೂ ಟೆಸ್ಟಿಂಗ್‌ ಹಂತದಲ್ಲಿದ್ದು, ಕೆಲವರಿಗೆ ಮಾತ್ರ ಇದನ್ನು ಬಳಸುವ ಅವಕಾಶ ಇರುತ್ತದೆ. ಕೆಲ ದಿನಗಳು ಟೆಸ್ಟಿಂಗ್‌ ಆದ ನಂತರ, ಅಲ್ಲಿ ಎದುರಾಗುವ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಎಲ್ಲರಿಗೂ ಅವಕಾಶ ನೀಡಲಾಗುತ್ತದೆ.

ನಿಮಗೆ ಈ ಫಿಚರ್‌ ಕಾಣಿಸಿದರೆ ನೀವು ಇದನ್ನು ಹೀಗೆ ಉಪಯೋಗಿಸಬಹುದು:

ಮೊದಲಿಗೆ ನಿಮ್ಮ ಒಂದು ಸರ್ಕಲ್ ಮಾಡಬೇಕು. ನಿಮ್ಮ ಸರ್ಕಲ್‌ಗೆ ಯಾರನ್ನೂ ಬೇಕಾದರೂ ಸೇರಿಸಬಹುದು. ನೀವು ಅವರನ್ನು ಫಾಲೋ ಮಾಡಲೇಬೇಕು ಎಂಬ ಯಾವುದೇ ನಿಯಮವಿಲ್ಲ. ನಂತರ ನೀವು ಟ್ವೀಟ್‌ ಮಾಡುವಾಗ ʼಟ್ವಿಟರ್‌ ಸರ್ಕಲ್‌ʼ ಮಾತ್ರ ನೋಡುವಂತೆ ಆಪ್ಷನ್‌ ಆಯ್ಕೆ ಮಾಡಿದರೆ ಅದು ಅವರಿಗೆ ಮಾತ್ರ ಕಾಣುತ್ತದೆ.

ನೀವು ನಿಮ್ಮ ಅನುಕೂಲದಂತೆ ನಿಮ್ಮ ಬಳಗದ ಪಟ್ಟಿಯನ್ನು ಬದಲಾಯಿಸಬಹುದು. ಹೊಸದಾಗಿ ಯಾರನ್ನೂ ಸೇರಿಸಬಹುದು ಅಥವಾ ಹಳಬರನ್ನು ಗುಂಪಿನಿಂದ ತೆಗೆಯಬಹುದು. ನಿಮ್ಮ ಸರ್ಕಲ್‌ನಿಂದ ಯಾರನ್ನಾದರೂ ಹೊರ ಹಾಕಿದರೆ ಅವರಿಗೆ ಗೊತ್ತಾಗಬಹುದು ಎಂಬ ಆತಂಕಬೇಡ. ಅವರಿಗೆ ಯಾವುದೇ ನೋಟಿಫಿಕೇಶನ್‌ ಹೋಗುವುದಿಲ್ಲ.

ಎಲಾನ್‌ ಮಸ್ಕ್‌ ಟ್ವಿಟರ್‌ ಖರೀದಿಸಿದ ನಂತರದಲ್ಲಿ ಹೊಸದಾಗಿ ನೀಡುತ್ತಿರುವ ಮೊದಲ ಫೀಚರ್‌ ಇದು. ʼಟ್ವಿಟರ್‌ ಸರ್ಕಲ್‌ʼ ಫೀಚರನ್ನು ಈಗಾಗಲೇ ಕೆಲವರು ಉಪಯೋಗಿಸಿದ್ದು ʼನಮ್ಮ ಟ್ವೀಟ್‌ಗಳನ್ನು ಯಾರು ನೋಡಬೇಕು ಎಂದು ನಿಯಂತ್ರಿಸಲು ಇದು ಉತ್ತಮ ಫೀಚರ್‌ʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಗೂಗಲ್‌ನಿಂದ ನಿಮ್ಮ ಪರ್ಸನಲ್‌ ಮಾಹಿತಿ ತೆಗೆದುಹಾಕುವುದು ಹೇಗೆ?

Exit mobile version