ಬೆಂಗಳೂರು: ಭಾರತದಲ್ಲಿ ಈಗ ಆನ್ಲೈನ್ ಹಣ ಪಾವತಿ ಗರಿಷ್ಠ ಮಟ್ಟದಲ್ಲಿ ಬಳಕೆಯಾಗುತ್ತಿದೆ. ಈ ಎಲೆಕ್ಟ್ರಾನಿಕ್ ಪೇಮೆಂಟ್ ಸಿಸ್ಟಮ್ಗೆ ಯುಪಿಐ ಜೀವಾಳ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI)ನಿಂದಾಗಿ ದೇಶದಲ್ಲಿ ಡಿಜಿಟಲ್ ವ್ಯವಾಹಾರ ಸರಾಗವಾಗಿದೆ. ಇದರಿಂದ ಪೇಮೆಂಟ್ಸ್ ತುಂಬ ಸುಲಭವಾಗಿದೆ ಮತ್ತು ಎಲ್ಲರೂ ಅಂದರೆ ಡಿಜಿಟಲ್ ಅನಕ್ಷರಸ್ಥರೂ ಬಳಸುವಂತಾಗಲು ಸಾಧ್ಯವಾಗಿದೆ. ಬ್ಯಾಂಕ್ ಮತ್ತು ಬಳಕೆದಾರ ನಡುವೆ ಯುಪಿಐ ಕೊಂಡಿಯಾಗಿ ಕಾರ್ಯನಿರ್ವಹಿಸತ್ತದೆ. ಇದರಿಂದಾಗಿಯೇ ಬಳಕೆದಾರರು ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು. ಇದನ್ನು ಸಾಧ್ಯವಾಗಿಸಲು ಆ್ಯಪ್ಗಳು ನೆರವು ನೀಡುತ್ತವೆ. ಈಗಾಗಲೇ ನಿಮಗೆ ಗೊತ್ತಿರುವ ಹಾಗೆ, ಯುಪಿಐ ಆಧರಿತ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸೇರಿದಂತೆ ಇನ್ನಿತರ ಆ್ಯಪ್ಗಳನ್ನು ಸೇವೆಯನ್ನು ಒದಗಿಸುತ್ತವೆ. ಈ ಯುಪಿಐ ಪೇಮೆಂಟ್ಸ್ (UPI Payment) ನಿಂದ ಸಾಕಷ್ಟು ಲಾಭವಾಗಿದೆ.
ತಂತ್ರಜ್ಞಾನದಿಂದ ನಮ್ಮ ಬದುಕು ತುಂಬ ಸುಲಭವಾಗಿದೆ. ಆದರೆ, ಹಾಗೆಯೇ ಒಂದಿಷ್ಟು ಸವಾಲುಗಳೂ, ಅಪಾಯಗಳೂ ಇವೆ. ಒಂಚೂರು ಯಾಮಾರಿದರೂ ನಾವು ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ಯಾವುದೇ ತಂತ್ರಜ್ಞಾನವೇ ಆಗಲಿ ಅದನ್ನು ಮುನ್ನೆಚ್ಚರಿಕೆ ಮತ್ತು ಜವಾಬ್ದಾರಿಯಿಂದ ಬಳಸಬೇಕಾಗುತ್ತದೆ. ಇದಕ್ಕೆ ಯುಪಿಐ ಆಧರಿತ ಆ್ಯಪ್ಗಳ ಬಳಕೆಯೂ ಹೊರತಾಗಿಲ್ಲ. ಖಂಡಿತವಾಗಿಯೂ ಯುಪಿಐ, ಹಣ ವಿನಿಮಯ ವ್ಯವಸ್ಥೆಯನ್ನು ಬಹಳ ಸರಳೀಕರಿಸಿದೆ. ಹಾಗೆಯೇ, ಇದು ಸಾಕಷ್ಟು ಸೈಬರ್ ಕ್ರೈಮ್ ಹೆಚ್ಚಳಕ್ಕೂ ಅವಕಾಶ ಕಲ್ಪಿಸಿದೆ. ಯುಪಿಐ ಖಾತೆಗೆ ಕನ್ನ ಹಾಕುವಂಥ ಸಾಕಷ್ಟು ಘಟನೆಗಳನ್ನುನಾವು ಕೇಳುತ್ತಿದ್ದೇವೆ. ಇದರಿಂದ ಸಾಕಷ್ಟು ಜನರು ತಮ್ಮ ಹಣವನ್ನು ಕಳೆದುಕೊಂಡಿರುವ ಉದಾಹರಣೆಗಳಿವೆ. ಹಾಗಾಗಿ, ಯುಪಿಐ ಐಡಿ ಆಧರಿತ ಆ್ಯಪ್ಗಳನ್ನು ಬಳಸುವಾಗ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯ.
- ಯಾರೊಂದಿಗೂ ಯುಪಿಐ ಪಿನ್ ಷೇರ್ ಮಾಡ್ಬೇಡಿ
ಡಿಜಿಟಲ್ ಆಗಿ ಹಣ ರವಾನಿಸುವಾಗ ತಪ್ಪದೇ ನೆನಪಿಡಬೇಕಾದ ಸಂಗತಿ ಏನೆಂದರೆ ಯಾರೊಂದಿಗೂ ಯುಪಿಐ ಪಿನ್ ಅನ್ನುಷೇರ್ ಮಾಡಿಕೊಳ್ಳಲು ಹೋಗಬಾರದು. 4 ಅಥವಾ 6 ಡಿಜಿಟ್ಗಳ ಅಂಕಿಯು ಆನ್ಲೈನ್ ಹಣ ಪಾವತಿಯಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ. ಹಾಗಾಗಿ, ಈ ಯುಪಿಐ ಪಿನ್ ಅನ್ನು ಯಾವುದೇ ಕಾರಣಕ್ಕೂ, ಯಾರೊಂದಿಗೂ ಹಂಚಿಕೊಳ್ಳಲು ಹೋಗಲೇಬಾರದು. ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದು ನಿಯಮದ ವಿರುದ್ಧವೂ ಹೌದು. ಯುಪಿಐ ಆಧರಿತ ಯಾವುದೇ ಹಣ ಪಾವತಿ ವೇಳೆ, ಪ್ರತಿ ವ್ಯವಹಾರ ಮಾಡಬೇಕಾದಗಲೂ ಯುಪಿಐ ಪಿನ್ ಬೇಕೇ ಬೇಕಾಗುತ್ತದೆ. ಹಾಗಾಗಿ, ನಿಮ್ಮ ಯುಪಿಐ ಐಡಿ ಜತೆ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡುವಾಗ ವಿಶಿಷ್ಟವಾಗಿರುವ ಪಿಎನ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕು. ಒಂದು ರೀತಿಯಲ್ಲಿ ಇದು ಎಟಿಎಂ ಪಿನ್ ರೀತಿಯಲ್ಲೇ ಇರುತ್ತದೆ. ಹಾಗಾಗಿ, ಈ ಪಿನ್ ನಿಮಗಷ್ಟೇ ಗೊತ್ತಿದ್ದರೆ ಉತ್ತಮ. - ಫೋನ್ ಸ್ಕ್ರೀನ್ ಲಾಕ್ ಮಾಡಿಕೊಳ್ಳಿ
ಎಲ್ಲ ಫೋನುಗಳಲ್ಲಿ ಸ್ಕ್ರೀನ್ ಲಾಕ್ ಆಪ್ಷನ್ ಇದ್ದೇ ಇರುತ್ತದೆ. ನಿಮ್ಮ ಫೋನಿನಲ್ಲಿರುವ ಖಾಸಗಿ ಮಾಹಿತಿಯನ್ನು ಕಾಪಾಡಿಕೊಳ್ಳುವಲ್ಲಿ ಈ ಆಪ್ಷನ್ ಮಹತ್ವದ ಪಾತ್ರ ನಿರ್ವಹಿಸುತ್ತದೆ. ನೀವು ಆ್ಯಪ್ಗಳನ್ನು ಸುರಕ್ಷಿತವಾಗಿಡಲು ಸ್ಕ್ರೀನ್ ಲಾಕ್ ಸಹಾಯ ಮಾಡುತ್ತದೆ. ಯುಪಿಐ ಆಧರಿತ ಆ್ಯಪ್ ಕೂಡ ನಿಮ್ಮ ಫೋನ್ ಸ್ಕ್ರೀನ್ ಲಾಕ್ ಪಾಸ್ವರ್ಡ್ ಕೇಳುತ್ತದೆ. ಇದರಿಂದ ಆ್ಯಪ್ ಸುರಕ್ಷಿತವಾಗಿರುತ್ತದೆ. ನೀವಲ್ಲದೇ ಇನ್ನಾರೋ ಬೇರೆಯವರು ಆ್ಯಪ್ ಬಳಸಿ ಹಣ ಪಾವತಿಗೆ ಮುಂದಾದರೆ, ಆಗ ಸ್ಕ್ರೀನ್ ಲಾಕ್ ತೆಗೆಯಬೇಕಾಗುತ್ತದೆ. ನಿಮ್ಮ ಫೋನ್ ಕಳುವಾದಾಗ ಇಲ್ಲವೇ, ಮಿಸ್ ಆದಾಗ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ನಿಮ್ಮ ಫೋನ್ ಸ್ಕ್ರೀನ್ ಲಾಕ್ ಹೊಂದಿದ್ದರೆ ಸುರಕ್ಷಿತವಾಗಿರುತ್ತದೆ.
- ಪಾವತಿ ಮುನ್ನ ಯುಪಿಐ ಐಡಿ ಪರಿಶೀಲಿಸಿ
ಯುಪಿಐ ಆಧರಿತ ಆ್ಯಪ್ ಮೂಲಕ ಹಣ ಪಾವತಿ ಮಾಡುವಾಗ ನಾವು ಬಹಳ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ನಾವು ಯಾರಿಗೆ ಹಣ ಪಾವತಿಸಬೇಕಾಗಿದೆಯೋ ಸ್ವೀಕರಿಸಲಿರುವ ಯುಪಿಐ ಐಡಿ ಅವರದ್ದೇನಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಸರಿಯಾದ ಯುಪಿಐ ಐಡಿ ಇರುವುದನ್ನು ಖಚಿತಪಡಿಸಿಕೊಳ್ಳಿ. ಹಣ ಕಳುಹಿಸುವಾಗ ಮತ್ತು ಸ್ವೀಕರಿಸುವಾಗ ಈ ಸಂಗತಿಯನ್ನು ನೆನಪಿಟ್ಟುಕೊಳ್ಳಬೇಕು.
- ಹಣಪಾವತಿ ಬಹು ಆ್ಯಪ್ ಬೇಡ
ಸಾಮಾನ್ಯವಾಗಿ ಎಲ್ಲರ ಫೋನುಗಳಲ್ಲಿ ಒಂದಕ್ಕಿಂತ ಹೆಚ್ಚು ಹಣ ಪಾವತಿ ಅಂದರೆ ಯುಪಿಐ ಆಧರಿತ ಆ್ಯಪ್ಗಳು ಇದ್ದೇ ಇರುತ್ತವೆ. ಆದರೆ, ಬಹು ಆ್ಯಪ್ ಇನ್ಸ್ಟಾಲ್ ಮಾಡುವುದು ಬೇಡ ಎನ್ನುವುದು ತಜ್ಞರ ಅಭಿಪ್ರಾಯ. ಆ್ಯಪ್ಗಳನ್ನು ಬಳಸುವಾಗ ಇದು ಗೊಂದಲಕ್ಕೆ ಕಾರಣವಾಗುತ್ತದೆ. ಇದರಿಂದ ಸಹಜವಾಗಿಯೇ ಹಣ ಕಳೆದುಕೊಳ್ಳುವ ಅಪಾಯವೂ ಇದ್ದೇ ಇರುತ್ತದೆ ಅಥವಾ ತಪ್ಪಾಗಿ ಬೇರೆಯವರ ಯುಪಿಐ ಐಡಿಗೆ ಹಣ ಕಳುಹಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ, ಕರಾರುವಕ್ಕಾಗಿ ಕೆಲಸ ಮಾಡುವ ಅಥವಾ ನಿಮಗೆ ಸೂಕ್ತ ಎನಿಸುವ ಒಂದೇ ಆ್ಯಪ್ ಬಳಸುವುದು ಹೆಚ್ಚು ಸೂಕ್ತ. - ಸಂಶಾಯಸ್ಪದ ಲಿಂಕ್ ಮೇಲೆ ಕ್ಲಿಕ್ ಮಾಡಲು ಹೋಗಬೇಡಿ
ಬಹುಶಃ ಈ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಆನ್ಲೈನ್ನಲ್ಲಿ ಸಕ್ರಿಯವಾಗಿರುವವರು ತಿಳಿದುಕೊಳ್ಳಬೇಕಾದ ಮೊದಲ ಸಂಗತಿ ಇದು. ಆದರೂ, ಬಹಳಷ್ಟು ಜನರು ಆಮಿಷ ಒಡ್ಡುವ ಲಿಂಕ್ಗಳನ್ನು ಕ್ಲಿಕ್ ಮಾಡುವ ಮೂಲಕ ತೊಂದರೆಗೆ ಸಿಲುಕಿಕೊಳ್ಳುತ್ತಿರುವುದು ಹೊಸದೇನಲ್ಲ. ಕೆಲವು ವರದಿಗಳ ಪ್ರಕಾರ, ಬಹಳಷ್ಟು ಜನರು ಈ ರೀತಿಯ ಲಿಂಕ್ಗಳಿಗೆ ಬಲಿಯಾಗಿದ್ದಾರೆ. ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಬರುವ ಖಚಿತವಲ್ಲದ ಅಥವಾ ಸಂಶಾಯಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಲು ಹೋಗಲೇಬಾರದು. ನೀವೇನಾದರೂ ಲಿಂಕ್ಸ್ ಕ್ಲಿಕ್ ಮಾಡಿದರೆ ನಿಮ್ಮ ಫೋನಿನಲ್ಲಿರುವ ಎಲ್ಲ ಮಾಹಿತಿಯನ್ನು ಕದಿಯುತ್ತವೆ. ವಿಶೇಷವಾಗಿ ನಿಮ್ಮ ಬ್ಯಾಂಕ್ ಖಾತೆಗಳ ಪಾಸ್ವರ್ಡ್, ಪಿಎನ್ ಇತ್ಯಾದಿ ಮಾಹಿತಿಯನ್ನು ಎಗರಿಸಬಹುದು. ಬಹಳ ಎಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯ. - ಬ್ಯಾಂಕ್ ಹೆಸರಲ್ಲಿ ಡಿಟೇಲ್ಸ್ ಕೇಳುವ ಕರೆಗಳಿಗೆ ಮಾಹಿತಿ ನೀಡಬೇಡಿ
ವಂಚಕರು ಕೆಲವೊಮ್ಮೆ ಫೋನುಗಳಿಗೆ ಕರೆ ಮಾಡಿ, ನಿಮ್ಮಿಂದಲೇ ಪಿನ್ ಅಥವಾ ಬ್ಯಾಂಕ್ ಖಾತೆ ಮಾಹಿತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಒಂದು ಸಂಗತಿ ನೆನಪಿಡಬೇಕು. ಏನೆಂದರೆ, ಯಾವುದೇ ಬ್ಯಾಂಕಿನವರು ಕಾಲ್ ಮಾಡಿ ಪಾಸ್ವರ್ಡ್ ಅಥವಾ ಪಿನ್ ಕೇಳುವುದಿಲ್ಲ. ಒಂದೊಮ್ಮೆ ಬ್ಯಾಂಕಿನವರ ಹೆಸರಿನಲ್ಲಿ ಪಿನ್ ಅಥವಾ ಪಾಸ್ವರ್ಡ್ ಕೇಳಿದರೆ ಖಂಡಿತವಾಗಿಯೂ ಅವರು ವಂಚಕರಾಗಿರುತ್ತಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ಇಂಥ ಕರೆಗಳಿಗೆ ಉತ್ತರಿಸಲು ಹೋಗಬಾರದು.
ಇದನ್ನೂ ಓದಿ | UPI Payment | ಯುಪಿಐ ಪಾವತಿಗೆ ಶುಲ್ಕ ವಿಧಿಸುವುದಿಲ್ಲ, ಕೇಂದ್ರ ಹಣಕಾಸು ಸಚಿವಾಲಯದ ಸ್ಪಷ್ಟನೆ