ಬೆಂಗಳೂರು: ಚಾಟ್‌ಜಿಪಿಟಿ (ChatGPT) ಬಗ್ಗೆ ಇತ್ತೀಚಿನ ದಿನಗಳಲ್ಲಿ ನೀವು ಕೇಳಿರುತ್ತೀರಿ. ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ(ಎಐ) ಬಗ್ಗೆ ಎಲ್ಲೆಲ್ಲೂ ಸುದ್ದಿಯಾಗುತ್ತಿದೆ. ತಾಂತ್ರಿಕ ಕ್ಷೇತ್ರದಲ್ಲಿ ಸಮಸ್ಯೆ ಉಂಟು ಮಾಡಬಹುದು ಎನ್ನಲಾಗಿದ್ದ ಈ ಎಐ ಇದೀಗ ಯುವಕನೊಬ್ಬನಿಗೆ ಬದುಕನ್ನೂ ಕಟ್ಟಿಕೊಟ್ಟಿದೆ. ಈ ಎಐ ಅನ್ನೇ ನಂಬಿಕೊಂಡು ಯುವಕನೊಬ್ಬ ಕೇವಲ ಮೂರು ತಿಂಗಳುಗಳಲ್ಲಿ ಬರೋಬ್ಬರಿ 28 ಲಕ್ಷ ರೂ. ಲಾಭ (Viral News) ಗಳಿಸಿಕೊಂಡಿದ್ದಾನೆ.
ಇದನ್ನೂ ಓದಿ: Viral News: ಮಥುರಾ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತ ಕುಳಿತಿದ್ದವನ ಕೊಲೆ
ಲ್ಯಾನ್ಸ್ ಜಂಕ್(23) ಹೆಸರಿನ ವ್ಯಕ್ತಿ ಚಾಟ್‌ಜಿಪಿಟಿಯನ್ನೇ ತನ್ನ ಆದಾಯ ಮೂಲವಾಗಿಸಿಕೊಂಡಿದ್ದಾರೆ. ಚಾಟ್‌ಜಿಪಿಟಿಯನ್ನು ಹಲವರು ಸರಾಗವಾಗಿ ಬಳಕೆ ಮಾಡುತ್ತಿದ್ದರೆ, ಇನ್ನೂ ಹಲವರು ಬಳಸಲಾಗದೆ ಒದ್ದಾಡುತ್ತಿದ್ದದ್ದನ್ನು ಲ್ಯಾನ್ಸ್ ಗಮನಿಸಿದ್ದಾರೆ. ಅದಕ್ಕಾಗಿ ಜನರಿಗೆ ಚಾಟ್‌ಜಿಪಿಟಿ ಬಗ್ಗೆ ತಿಳಿಸುವುದಕ್ಕೆಂದೇ ಉಡೆಮಿ ಆಪ್‌ನಲ್ಲಿ ಕೋರ್ಸ್ ಒಂದನ್ನು ಆರಂಭಿಸಿದ್ದಾರೆ. “ಚಾಟ್‌ಜಿಪಿಟಿ ಮಾಸ್ಟರ್‌ಕ್ಲಾಸ್: ಎ ಕಂಪ್ಲೀಟ್ ಚಾಟ್‌ಜಿಪಿಟಿ ಗೈಡ್ ಫಾರ್ ಬಿಗಿನರ್ಸ್” ಹೆಸರಿನಲ್ಲಿ ಕೋರ್ಸ್ ಆರಂಭಿಸಿದ್ದು, ಕೋರ್ಸ್ ಆರಂಭವಾದ ಕೆಲವೇ ದಿನಗಳಲ್ಲಿ ಬರೋಬ್ಬರಿ 15,000 ಮಂದಿ ಕೋರ್ಸ್ ಸೇರಿಕೊಂಡಿದ್ದಾರೆ. ಅದರಿಂದಾಗಿ ಒಟ್ಟಾರೆಯಾಗಿ 35,000 ಡಾಲರ್ ಅಂದರೆ 28 ಲಕ್ಷ ರೂ. ಲಾಭವನ್ನೂ ಗಳಿಸಿದ್ದಾರೆ.
“ಜನರು ಚಾಟ್‌ಜಿಪಿಟಿ ಬಗ್ಗೆ ಭಯ ಪಟ್ಟಿರುವುದು ನನಗೆ ಗೊತ್ತಾಯಿತು. ಆ ಭಯವನ್ನು ಹೋಗಲಾಡಿಸುವ ಪ್ರಯತ್ನವನ್ನು ನಾನು ಮಾಡಿದೆ. ನಾನೇನು ಚಾಟ್‌ಜಿಪಿಟಿ ಬಗ್ಗೆ ಬೇರೆ ಕಡೆ ತರಬೇತಿ ಪಡೆದಿಲ್ಲ. ನಾನಾಗೇ ನಾನು ಪ್ರಯತ್ನಗಳನ್ನು ಮಾಡಿ ಅನುಭವ ಪಡೆದೆ” ಎಂದು ಹೇಳಿದ್ದಾರೆ ಲ್ಯಾನ್ಸ್.
ಇದನ್ನೂ ಓದಿ: Viral Video: ಹುಡುಗನ ಕೈಯಲ್ಲಿದ್ದ ತಿಂಡಿ ತಿನ್ನಲು ಬಾಯಿ ಹಾಕಿದ ನಾಯಿ; ನಾಲಿಗೆಗೆ ಸಿಕ್ಕ ಟಿವಿ ಪರದೆ ನೆಕ್ಕಿ, ವಾಪಸ್ ಬಂತು!
ಜಂಕ್ ಒಟ್ಟಾರೆಯಾಗಿ ಏಳು ಗಂಟೆಗಳ ಕೋರ್ಸ್ ಅನ್ನು ಕೊಡುತ್ತಿದ್ದಾರೆ. ಅದಕ್ಕೆಂದೇ ಒಟ್ಟು 50 ತಜ್ಞರಿಂದ ವಿಡಿಯೊಗಳನ್ನು ಮಾಡಿಸಿಕೊಂಡಿದ್ದಾರೆ. ಆ ವಿಡಿಯೊಗಳನ್ನು ಮಾಡುವುದಕ್ಕೆಂದೇ ಜಂಕ್ ಅವರಿಗೆ ಮೂರು ವಾರಗಳು ತಗುಲಿವೆ. ಒಬ್ಬ ವಿದ್ಯಾರ್ಥಿಗೆ 20 ಡಾಲರ್‌ನಂತೆ ಶುಲ್ಕ ವಿಧಿಸಲಾಗುತ್ತಿದೆ. ಅಮೆರಿಕ, ಭಾರತ, ಜಪಾನ್, ಕೆನಡಾ ಸೇರಿ ಹಲವಾರು ರಾಷ್ಟ್ರಗಳಿಂದ ವಿದ್ಯಾರ್ಥಿಗಳು ಈ ಕೋರ್ಸ್ ಸೇರಿಕೊಂಡಿರುವುದಾಗಿ ಹೇಳಲಾಗಿದೆ.