ಹೊಸ ಕಾಲದ ಮಾಧ್ಯಮಗಳಾದ ಸೋಷಿಯಲ್ ಮೀಡಿಯಾಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ(Information Technology-IT) ನಿಯಮಗಳಿಗೆ ತಿದ್ದುಪಡಿ ತಂದಿದೆ. ನಿತ್ಯದ ಬದುಕಿನ ಮೇಲೆ, ಸಾರ್ವಜನಿಕ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಈ ವೇದಿಕೆಗಳನ್ನು ಸ್ವಚ್ಛವಾಗಿಡುವುದು ಈ ಕ್ಷಣದ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಲವು ತಿದ್ದುಪಡಿಗಳ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಟ್ವಿಟರ್, ಫೇಸ್‌ಬುಕ್, ಯುಟ್ಯೂಬ್, ಇನ್‌ಸ್ಟಾಗ್ರಾಮ್, ವಾಟ್ಸ್ಆ್ಯಪ್, ಯುಟ್ಯೂಬ್ ಸೇರಿದಂತೆ ಎಲ್ಲ ರೀತಿಯ ಸೋಷಿಯಲ್ ಮೀಡಿಯಾಗಳನ್ನು ಈ ನಿಯಂತ್ರಣ ವ್ಯವಸ್ಥೆಯೊಳಗೆ ತರಲಾಗುತ್ತಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವ ಐಟಿ ನಿಯಮಗಳ ತಿದ್ದುಪಡಿ ಕುರಿತು ವಿಸ್ತಾರ ಎಕ್ಸ್‌ಪ್ಲೇನರ್(ವಿಸ್ತಾರ Explainer)ನಲ್ಲಿ ಚರ್ಚಿಸಲಾಗಿದೆ, ಓದಿ.
ಏನಿದು ಐಟಿ ರೂಲ್ಸ್?
ಇಂಟರ್‌ಮೀಡಿಯರಿ ಗೈಡ್‌ಲೈನ್ಸ್ ಆ್ಯಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್‌ಗಳನ್ನೇ ಭಾರತೀಯ ಸಂದರ್ಭದಲ್ಲಿ ಇನ್ಫಾರ್ಮೇಷನ್ ಟೆಕ್ನಾಲಜಿ ರೂಲ್ಸ್ ಎಂದು ವ್ಯಾಖ್ಯಾನಿಸಲಾಗುತ್ತದೆ. ಅಂದರೆ ಮಾಹಿತಿ ತಂತ್ರಜ್ಞಾನ ನಿಯಮಗಳು. ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾ ಬಳಕೆಗೆ ಒಂದು ಚೌಕಟ್ಟು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2021ರಲ್ಲಿ ನಿರ್ದಿಷ್ಟ ನಿಯಮಗಳನ್ನು ಜಾರಿಗೆ ತಂದಿತು. 2000 ಮಾಹಿತಿ ತಂತ್ರಜ್ಞಾನ ಕಾಯಿದೆಯ ಭಾಗವಾಗಿಯೇ 2021 ಐಟಿ ರೂಲ್ಸ್‌ಗಳನ್ನು ಜಾರಿಗೆ ತರಲಾಗಿದೆ. 2018ರ ಇಂಟರ್‌ಮೀಡಿಯರಿ ರೂಲ್ಸ್ ಮತ್ತು ಒಟಿಟಿ ರೆಗ್ಯುಲೇಷನ್ ಆ್ಯಂಡ್ ಕೋಡ್ ಆಫ್ ಎಥಿಕ್ಸ್ ಫಾರ್ ಡಿಜಿಟಲ್ ಮೀಡಿಯಾ ನಿಯಮಗಳನ್ನು ಇದು ಹೊಂದಿದೆ. 2021ರಲ್ಲಿ ಜಾರಿಗೆ ಬಂದಿದ್ದ ಐಟಿ ನಿಯಮಗಳಿಗೆ ಈಗ ಮತ್ತೆ ಕೇಂದ್ರ ಸರ್ಕಾರವು ತಿದ್ದುಪಡಿ ತಂದು ನೋಟಿಫಿಕೇಷನ್ ಹೊರಡಿಸಿದೆ. ವಿಶೇಷವಾಗಿ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಹೆಚ್ಚಿನ ಶಾಸನಾತ್ಮಕ ಬಲವನ್ನು ನೀಡಲಾಗಿದೆ.
3 ತಿಂಗಳಲ್ಲಿ ಸಮಿತಿ ರಚನೆ
ಐಟಿ ರೂಲ್ಸ್‌ಗಳಿಗೆ ತರಲಾಗಿರುವ ತಿದ್ದುಪಡಿಗಳ ಪ್ರಕಾರ, ಮೂರು ತಿಂಗಳಲ್ಲಿ ನೂತನ ಐಟಿ ನಿಯಮಗಳ ಪ್ರಕಾರ ಮೂವರು ಸದಸ್ಯರ ಕುಂದುಕೊರತೆ ಮೇಲ್ಮನವಿ ಸಮಿತಿ ರಚಿಸಲಾಗುತ್ತದೆ. ಸಮಿತಿಯಲ್ಲಿ ಒಬ್ಬ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರು ಇರಲಿದ್ದಾರೆ. ಜಾಲತಾಣಗಳನ್ನು ಬಳಸುವ ಗ್ರಾಹಕರು ದೂರು ನೀಡಿದ 30 ದಿನಗಳ ಒಳಗಾಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಫೇಸ್‌ಬುಕ್, ಟ್ವಿಟರ್, ಯುಟ್ಯೂಬ್, ಇನ್‌ಸ್ಟಾಗ್ರಾಂ ಸೇರಿ ಎಲ್ಲ ಜಾಲತಾಣಗಳು ಬಳಕೆದಾರರು ಕಂಟೆಂಟ್ ಸೇರಿ ಯಾವುದೇ ವಿಷಯದ ಕುರಿತು ಕುಂದುಕೊರತೆಗಳ ಸಮಿತಿಗಳಿಗೆ ದೂರು ನೀಡಬಹುದಾಗಿದೆ. ಕೇಂದ್ರ ಸರ್ಕಾರವೇ ಸಮಿತಿ ರಚಿಸುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಅಂಶಗಳನ್ನು ನಿರ್ಬಂಧಿಸಬಹುದಾಗಿದೆ.
ಏನೆಲ್ಲ ಬದಲಾವಣೆ, ತಿದ್ದುಪಡಿ?
- ಸೋಷಿಯಲ್ ಮೀಡಿಯಾಗಳ ನಿಯಂತ್ರಣಕ್ಕೆ ಕಂದುಕೊರತೆ ಮೇಲ್ಮನವಿ ಸಮಿತಿ ರಚನೆ.
- ಸೋಷಿಯಲ್ ಮೀಡಿಯಾಗಳಿಗೆ ಸಂಬಂಧಿಸಿದಂತೆ ಯಾವುದೇ ತಮ್ಮ ದೂರುಗಳನ್ನು ಬಳಕೆದಾರರು ಈ ಸಮಿತಿಗೆ ಸಲ್ಲಿಸಬಹುದು.
- ಸೋಷಿಯಲ್ ಮೀಡಿಯಾಗಳ ಕಂಟೆಂಟ್ ಮಾಡರೇಷನ್ ಅನ್ನು ಈ ಸಮಿತಿಯು ವಿಮರ್ಶಿಸಬಹುದಾಗಿದೆ.
- ಸರ್ಕಾರವೇ ಈ ಸಮಿತಿಯನ್ನು ರಚಿಸುತ್ತಿರುವುದರಿಂದ ಬಳಕೆದಾರರಿಗೆ ಹೆಚ್ಚಿನ ನ್ಯಾಯವನ್ನು ನಿರೀಕ್ಷಿಸಬಹುದಾಗಿದೆ.
- ಪ್ರೈವೇಸಿ ಪಾಲಿಸಿ ಮತ್ತು ಬಳಕೆದಾರರ ಒಪ್ಪಂದಗಳು ಇನ್ನು ಮುಂದೆ ಕನ್ನಡವೂ ಸೇರಿದಂತೆ ಭಾರತೀಯ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿದೆ.
-ಶುಕ್ರವಾರ ಈ ಬಗ್ಗೆ ನೋಟಿಫಿಕೇಷನ್ ಹೊರಡಿಸಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಕುಂದುಕೊರತೆ ಮೇಲ್ಮನವಿ ಸಮಿತಿಯು ಅಸ್ತಿತ್ವಕ್ಕೆ ಬರಲಿದೆ.
ಡಿಜಿಟಲ್ ನಾಗರಿಕರ ರಕ್ಷಣೆ
ಐಟಿ ನಿಯಮಗಳ ತಿದ್ದುಪಡಿ ಸಂಬಂಧ ಖುಷಿಯನ್ನು ಹಂಚಿಕೊಂಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು, ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಉತ್ತರದಾಯಿತ್ವ ಇಂಟರ್ನೆಟ್ ಬಳಕೆಯನ್ನು ನಮ್ಮ ಡಿಜಿಟಲ್ ನಾಗರಿಕರಿಗೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಅಲ್ಲದೇ, ಇಂಟರ್ನೆಟ್ ಅನ್ನು ಸುರಕ್ಷಿತವಾಗಿಡುವುದಕ್ಕೆ ಸರ್ಕಾರ ಮತ್ತು ಮಧ್ಯಸ್ಥಗಾರರ ನಡುವೆ ಉತ್ತಮ ಸಹಭಾಗಿತ್ವವದ ಅಗತ್ಯವನ್ನು ಇದು ಹೆಚ್ಚಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಡಿಜಿಟಲ್ ವೇದಿಕೆಗಳು ನಿರಂಕುಶ ರೀತಿಯಲ್ಲಿ ವರ್ತಿಸುವ ಬಗ್ಗೆ ಬಳಕೆದಾರರು ದೂರುತ್ತಿದ್ದಂತೆ ಈ ನಿಯಮಗಳಿಗೆ ತಿದ್ದುಪಡಿ ತರಲು ತಿಂಗಳಾನುಗಟ್ಟಲೇ ಸಮಯವನ್ನು ತೆಗೆದುಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಬಳಕೆದಾರರಿಗೆ ಬಲ
ಐಟಿ ನಿಯಮಗಳಿಗೆ ಕೇಂದ್ರ ಸರ್ಕಾರವು ಈಗ ತಿದ್ದುಪಡಿ ತಂದಿರುವುದು, ಬಳಕೆದಾರರ ಬಲವನ್ನು ಹೆಚ್ಚಿಸಿದೆ. ಅವರು ಕುಂದುಕೊರತೆಗಳನ್ನು ತಕ್ಷಣಕ್ಕೆ ಪರಿಹಾರ ಮಾಡುವ ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದೆ. ಸೋಷಿಯಲ್ ಮೀಡಿಯಾಗಳನ್ನು ಬಳಕೆಯ ಲಾಭ ನಷ್ಟಗಳು ಅದರ ಬಳಕೆದಾರರನ್ನು ಅವಲಂಬಿಸಿದೆ. ಹಾಗಿದ್ದೂ, ಕೆಲವೊಂದು ಬಾರಿ ಈ ವೇದಿಕೆಗಳು ಬಳಕೆದಾರರ ಹಿತವನ್ನು ಕಡೆಗಣಿಸುತ್ತವೆ. ಆಗ ಅವುಗಳನ್ನು ಕಿವಿ ಹಿಂಡುವ ಅಗತ್ಯವಾಗುತ್ತದೆ. ಆ ಕೆಲಸವನ್ನು ಈಗ ಕೇಂದ್ರ ಸರ್ಕಾರವು ಮಾಡುತ್ತದೆ. ಇಲ್ಲದಿದ್ದರೆ, ಈ ಡಿಜಿಟಲ್ ವೇದಿಕೆಗಳು ಆಡಿದ್ದೇ ಆಟ, ಹೇಳಿದ್ದೇ ನಿಯಮವಾಗುತ್ತದೆ.
ಪ್ರಧಾನಿ ಮನವಿ
ಶುಕ್ರವಾರ ಹರ್ಯಾಣದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಒಂದು ಫೇಕ್ ಸುದ್ದಿ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರಬಹುದು. ಹಾಗಾಗಿ, ಯಾವುದೇ ಮಾಹಿತಿಯನ್ನು ಇತರರಿಗೆ ಫಾರ್ವರ್ಡ್ ಮಾಡುವ ಮುಂಚೆ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಜಾಗೃತಿಯನ್ನು ಬಳಕೆದಾರರಲ್ಲಿ ಮೂಡಿಸಬೇಕಿದೆ ಎಂದು ಹೇಳಿದ್ದಾರೆ. ಎಲ್ಲ ರಾಜ್ಯಗಳ ಗೃಹ ಸಚಿವರು ಪಾಲ್ಗೊಂಡಿರುವ ಚಿಂತನಾ ಶಿಬಿರದಲ್ಲಿ ಮಾತನಾಡಿದ ಅವರು, ಯಾವುದೇ ಸಂದೇಶವನ್ನು ಫಾರ್ವರ್ಡ್ ಮಾಡುವ ಮೊದಲು ಹತ್ತು ಸಲ ಯೋಚಿಸಬೇಕು. ಅದರ ನೈಜತೆಯನ್ನು ತಿಳಿದುಕೊಳ್ಳಬೇಕು. ಪ್ರತಿ ವೇದಿಕೆಯಲ್ಲೂ ಮಾಹಿತಿಯನ್ನು ದೃಢೀಕರಿಸುವ ಟೂಲ್ಸ್‌ಗಳಿವೆ. ಮಾಹಿತಿಯ ನೈಜತೆಯನ್ನು ತಿಳಿಯುವುದು ತೀರಾ ಕಷ್ಟವಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | IT rules for Social Media | ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಮೂಗುದಾರ, ಕುಂದುಕೊರತೆ ಸಮಿತಿ ರಚನೆಗೆ ಅಧಿಸೂಚನೆ